Showing posts with label Whitefield. Show all posts
Showing posts with label Whitefield. Show all posts

Thursday, 4 February 2016

ರಿಕ್ಕಿ - ನಾ ಕಂಡಂತೆ

       

          "ಸೋಮ್ವಾರ ಕನ್ನಡ ಮೂವಿಗೆ ಟಿಕೆಟ್ ಆರಾಮಗ್ ಸಿಗುತ್ತೆ ಗುರು. ಅದ್ರಲ್ಲೂ ವೈಟ್ ಫೀಲ್ಡಲ್ಲಂತೂ ಇನ್ನೂ ಆರಾಮು!" ಈ ಆಲೋಚ್ನೆ ಇಟ್ಕೊಂಡು, 6.30 ಶೋಗೆ 6.15 ಅಷ್ಟ್ ಹೊತ್ಗೆ ವೈಟ್ ಫೀಲ್ಡಲ್ಲಿರೋ ಐನೋಕ್ಸ್ ಗೆ ಹೋದೆ. ಹೋಗಿ ಕೇಳಿದ್ರೆ 'ಹೌಸ್ ಫುಲ್' ಅನ್ಬೇಕಾ ಆ ಆಸಾಮಿ! ಕನ್ನಡ ಮೂವಿ ವೀಕ್ ಡೇನಲ್ಲಿ, ಅದೂ ವೈಟ್ ಫೀಲ್ಡಲ್ಲಿ ಹೌಸ್ ಫುಲ್ ಅಂತ ಖುಶಿ ಪಡೋದೋ ದುಃಖ ಪಡೋದೋ ಗೊತ್ತಾಗ್ಲಿಲ್ಲ! 1st ಡೇ 1st ಶೋ ನೋಡ್ಬೇಕು ಅಂದ್ಕೊಂಡಿದ್ ಮೂವಿನಾ ಅದ್ ರಿಲೀಸ್ ಆಗಿ ಒಂದ್ ವಾರ ಬಿಟ್ಟು ನೋಡ್ದೆ! ಯಾವ್ ಮೂವಿ ಅಂತ ಗೊತ್ತಾಯ್ತಲ್ವ? ಓಹ್! ಟೈಟಲಲ್ಲೇ ಹೇಳ್ಬಿಟ್ಟಿದೀನಲ್ಲ! ಛೇ! ಹಾ.. ಅದೇ.. "ರಿಕ್ಕಿ".

          ನಾವು ಎಕ್ಸ್ಪೆಕ್ಟೇಶನ್ ಇಟ್ಕೊಂಡು, ಕಾಯ್ಕೊಂಡ್ ಕೂತಿರೋ ಮೂವಿನಾ ಬೇಗ ನೋಡ್ಬೇಕು! ತಡ ಮಾಡ್ದಷ್ಟೂ ಈ ರಿವ್ಯೂಗಳ್ದು ತಲೆ ನೋವು! ಅದ್ಕೆ ಯಾವ್ ರಿವ್ಯೂನೂ ನೊಡ್ದೆ, ಕೆಲವ್ರು ಬಾಯ್ಮಾತಲ್ಲಿ "ಚೆನ್ನಾಗಿದೆ" "ಚೆನ್ನಾಗಿಲ್ಲ" "ಒಕೆಒಕೆ" "ಸಕ್ಕತ್ತಾಗಿದೆ" ಅಂದವ್ರಿಗೆಲ್ಲಾ, "ಮೂವಿ ಬಗ್ಗೆ ಏನೂ ಹೇಳ್ಬೇಡಾ, ನೋಡ್ಕೊಂಡ್ ಬಂದ್ ಮೇಲ್ ಮಾತಾಡ್ತೀನಿ" ಅಂತ ಹೇಳಿ ಫ್ರೆಂಡ್ ಜೊತೆ ಮೂವಿಗ್ ಹೋದೆ. ಥಿಯೇಟರ್ ಹೌಸ್ ಫುಲ್! ಆದ್ರೆ ನಾವು ಮೊದ್ಲೆ ಬುಕ್ ಮಾಡಿದ್ವಿ, ಹಾಗಾಗಿ ಬಚಾವ್!

          ಅರ್ಜುನ್ ಜನ್ಯಾ ಅವ್ರ ಸಂಗೀತ ಮತ್ತು ಹಿನ್ನೆಲೆ ಸಂಗೀತ, ವೆಂಕಟೇಶ್ ಅವ್ರ ಸಿನೆಮಾಟೋಗ್ರಫಿ, ರಕ್ಷಿತ್ ಶೆಟ್ಟಿ - ಹರಿಪ್ರಿಯಾ ಅವ್ರ ರಸಾಯನ ಶಾಸ್ತ್ರ ಅರ್ಥಾತ್ ಕೆಮಿಸ್ಟ್ರಿ ಒಳ್ಳೆ ಕಚಗುಳಿ ಕೊಡ್ತಾ ಹೋಗುತ್ತೆ. ಹೀರೋಗೂ ಸಿಗ್ದೇ ಇರೋ ಎಂಟ್ರಿ ಸಾಧು ಮಹಾರಾಜ್ ಗೆ ಸಿಕ್ದಾಗ ಥಿಯೇಟರಲ್ಲಿ ಫುಲ್ ಶಿಳ್ಳೆಗಳು ಚಪ್ಪಾಳೆಗಳು! ರಿಷಭ್ ಶೆಟ್ರು ರಕ್ಷಿತ್ ಶೆಟ್ರ ಮನೆ ಹತ್ರ ಬಂದು "Here we meet once again" ಅಂದಾಗ, ಬುಳ್ಳಾ ಪಾತ್ರಧಾರಿ ರಘು ಪಾಂಡೇಶ್ವರ್ ಅವ್ರು ಬೂಟ್ಸ್ ಬಗ್ಗೆ ಮಾತಾಡ್ತಾ "ರತ್ನಕ್ಕನ ಮಗಾ ದುಬಾಯಿ ಇಂದ ಕಳ್ಸಿ ಕೊಟ್ಟಿದ್ದು" ಅಂದಾಗ, ಮನ್ಸು ಟಕ್ ಅಂತ 'ಉಳಿದವರು ಕಂಡಂತೆ'ಗೆ ಒಂದ್ ಸುತ್ ಹಾಕಿ ಬರುತ್ತೆ.

          ಸಾಧು ಮಹಾರಾಜ್ - ರಘು ಪಾಂಡೇಶ್ವರ ಜೋಡಿ ನಮ್ಮನ್ನ ನಗ್ಸಿದ್ರೂ, ರಕ್ಷಿತ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಸರ್, ಪ್ರಮೋದ್ ಶೆಟ್ಟಿ ಹಾಗೂ ಉಳಿದವ್ರು ಒಳ್ಳೆಯ ಅಭಿನಯ ನೀಡಿದ್ರೂ, ರಿಷಭ್ ಶೆಟ್ರು "ಇದೀಗ ಚಲನಚಿತ್ರಗೀತೆಗಳು ಪ್ರಸಾರವಾಗುತ್ತದೆ" ಅಂತಾ ಜಾಣತನದಿಂದ 'ಮಲಗೆ ಮಲಗೆ' ಹಾಡಿಗೆ ಕೋ ಕೊಟ್ರೂ, ಯಾಕೋ ಫಸ್ಟ್ ಹಾಫಲ್ಲಿ ಕಮರ್ಷಿಯಲ್ ಎಲಿಮೆಂಟ್ಸನ್ನ ಹಾಕ್ಬೇಕು ಅಂತ ಕಾಮಿಡಿ ಸೀನ್ ಗಳನ್ನ ಹಾಗೂ ಒಂದೆರ್ಡು ಹಾಡ್ಗಳನ್ನ ತುರುಕ್ಸಿದಾರೆ ಅಂತ ಅನ್ಸ್ತು ನಂಗೆ. ಫಸ್ಟ್ ಹಾಫ್ ಲೈವ್ಲಿ ಆಗಿದ್ರೂ, ಸೆಕೆಂಡ್ ಹಾಫನ್ನೇ ಗ್ರಿಪ್ಪಿಂಗ್ ಆಗಿ ತೆಗೊಂಡ್ ಹೋಗಿದಾರೆ ಅನ್ನೋದು ನನ್ ಅಭಿಪ್ರಾಯ.

          "ಚಿತ್ರದ ಟ್ರೇಲರ್ ಕೊಟ್ಟಂತಹ ಹೆವೀ ಕಿಕ್ಕನ್ನಾ, ಚಿತ್ರದ ಹಾಡುಗಳು ಕೊಟ್ಟಂತಹ ಮುದವನ್ನಾ, ಒಟ್ಟು ಚಿತ್ರ ಕೊಡದೇ ಇದ್ರೂ, ಎಲ್ಲರೂ ನೋಡಬಹುದಾದ ಹಾಗೂ ನೋಡಬೇಕಾದ ಒಳ್ಳೆಯ ಸಂದೇಶವಿರುವ ಕನ್ನಡ ಚಿತ್ರ ರಿಕ್ಕಿ" ಇದು ಥಿಯೇಟರಿಂದ ಹೊರಗ್ ಬಂದಾಗ ನಂಗನ್ಸಿದ್ದು! ಆದ್ರೆ.. ಆದ್ರೆ.. ಮೂವಿ ಸಬ್ಜೆಕ್ಟ್ ನಂಗೆ ಯಾವಾಗ ಸಕ್ಕತ್ ನಾಟ್ತು ಅಂದ್ರೆ, ಮೂವಿ ನೋಡಿ ಎರಡ್ ದಿನದ್ ನಂತ್ರ ಸೈಕಲಲ್ಲಿ ಆಫೀಸಿಗ್ ಬರ್ತಾ ಇರೋವಾಗ, ನನ್ ಆಫೀಸ್ ಇರೋದು SEZ - ಸ್ಪೆಶಲ್ ಎಕನಾಮಿಕ್ ಝೋನಲ್ಲಿ ಅಂತ ಫ್ಲ್ಯಾಶ್ ಆದಾಗ! ಕಂಪೆನಿಯವ್ರಂತೂ SEZ ಅಲ್ಲಿ ಸೌಕರ್ಯ ಸಿಗುತ್ತೆ ಅಂತ ಬಂದ್ ಬಿಡ್ತಾರೆ, ನಾವುಗಳು ಸಂಬಳ ಸಿಗುತ್ತೆ ಅಂತ ಹೋಗ್ಬಿಡ್ತೀವಿ, ಆದ್ರೆ SEZ ಆಗೋ ಸಮಯದಲ್ಲಿ ಅಲ್ಲಿ ಎಷ್ಟು ಸಾವು ನೋವಾಗಿರ್ಬಹುದು? ಎಷ್ಟು ರಾಧಾ- ಕೃಷ್ಣರ ಪ್ರೀತಿ ದಡ ಸೇರ್ದೆ ಮುಳುಗಿರ್ಬಹುದು? ಎಷ್ಟ್ ಜನ ತಾವು ತಮ್ಮ ಹಿರಿಕರು ಹುಟ್ಟಿ ಬೆಳ್ದಿದ್ದ ಮನೆ, ಜಾಗಗಳನ್ನ ಕೆಡವೋದನ್ನ ನೋಡಿ ಮರುಗಿರಬಹುದು? ನನ್ ಆಫೀಸ್ ಕೂಡಾ ಯಾರ್ದೋ ಕನಸಿನ್ ಗೋರಿ ಮೇಲ್ ಇರ್ಬಹುದಾ? ಈ ಎಲ್ಲಾ ಯೋಚ್ನೆಗಳು ಸಾಲು ಸಾಲಾಗಿ ಬಂದಾಗ ಇಂತಹ ಒಂದು ಸಬ್ಜೆಕ್ಟ್ ಬಗ್ಗೆ ಮೂವಿ ಮಾಡಿದ್ದಕ್ಕೆ ರಿಷಭ್ರನ್ನು ಒಂದೆರ್ಡು ಲೆವೆಲ್ ಜಾಸ್ತಿ ಮನಸಾರೆ ಮೆಚ್ಚಿದೆ. ನನ್ ಆಫಿಸ್ ಇರೋ SEZ ಅಲ್ಲಿ ಇಂತಹ ಕಹಿ ಘಟನೆಗಳು ನಡೆದಿದ್ದ್ಯೋ ಇಲ್ವೊ ನಂಗ್ ಗೊತ್ತಲ್ಲ. ಆದ್ರೆ ಉಡುಪಿ ಮಂಗಳೂರಲ್ಲಿ SEZ ವಿರುದ್ಧ ಧ್ವನಿಯನ್ನಂತೂ ನಾನ್ ಕೇಳಿದೀನಿ. ಈ ಎಲ್ಲಾ ಕಾರಣಗಳಿಂದ ಎಸ್ಪೆಶಲಿ ಹಿನ್ನೆಲೆ ಸಂಗೀತದಿಂದ ನನ್ನ ನೆಚ್ಚಿನ ಚಿತ್ರಗಳ ಸಾಲಿಗೆ ರಿಕ್ಕಿಯೂ ಸೇರುತ್ತೆ! ನನ್ನ ನೆಚ್ಚಿನ ಕನ್ನಡದ ಉದಯೋನ್ಮುಖ ನಿರ್ದೇಶಕರ ಸಾಲಿಗೆ ರಿಷಭ್ರೂ ಸೇರ್ಪಡೆ ಆಗ್ತಾರೆ.

PS: ರಕ್ಷಿತ್ ಶೆಟ್ರೆ.. ಇಲ್ ಕೇಳಿ ಮಾರ್ರೆ..  ನೀವ್ ಇಷ್ಟ್ ಚೆಂದ ಮಾಡಿ ಅಳ್ತ್ರಿ ಅಂತ ಗೊತ್ತಿರ್ಲಾ! ಮುಂಗಾರು ಮಳೆ ಗಣೇಶ್ ನಂತ್ರ ಒಂದ್ ಹೀರೋ ಅತ್ತು ನನ್ನ್ ಕಣ್ಣಂಚಲ್ ನೀರ್ ತರ್ಸಿದ್ ಅಂದ್ರೆ ನೀವೇ!

Friday, 4 December 2015

ಅಸಹಾಯಕ ಪ್ರೇಕ್ಷಕ

                                          


            ಕೆಲವೊಮ್ಮೆ ನಮ್ಮ ಸುತ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಮಗೆ ಎಷ್ಟೇ ಬೇಸರ, ನೋವಿದ್ದರೂ ನಮ್ಮಿಂದ ಏನೂ ಬದಲಾಯಿಸಲು ಸಾಧ್ಯವಿಲ್ಲ ಎಂಬ ಸಂಗತಿ ಬಹಳ ಸಂಕಟವನ್ನುಂಟುಮಾಡುತ್ತದೆ. ಡಿಸೆಂಬರ್ ೪ರಂದು ಉಗ್ರಂ ಶ್ರೀಮುರಳಿ ಅಭಿನಯದ ಚಿತ್ರ 'ರಥಾವರ'ದ ಬಿಡುಗಡೆ. ಇದು ಬಹುನಿರೀಕ್ಷಿತ ಚಿತ್ರವಾದ್ದರಿಂದ ಯಾವ ಯಾವ ಚಿತ್ರಮಂದಿರಗಳಲ್ಲಿದೆ? ಎಷ್ಟೆಷ್ಟು ಪ್ರದರ್ಶನಗಳಿವೆ? ಎಂಬ ಕುತೂಹಲದಲ್ಲಿ ಬುಕ್ ಮೈ ಶೋ ನೋಡ ಹತ್ತಿದೆ. ಚಿತ್ರಮಂದಿರಗಳ ಸಂಖ್ಯೆ ಗಮನಾರ್ಹ ಮಟ್ಟದಲ್ಲಿದ್ದರೂ, ಮಲ್ಟಿಪ್ಲೆಕ್ಸಗಳಲ್ಲಿ ಪ್ರದರ್ಶನಗಳ ಸಂಖ್ಯೆ ಕಡಿಮೆಯೇ ಇತ್ತು. ಸರಿ ಯಾವುದೋ ಒಂದು ಚಿತ್ರಮಂದಿರದಲ್ಲಿ ನೋಡಿದರಾಯ್ತು ಅಂದುಕೊಂಡು, ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿರುವ ಕನ್ನಡದ ಚಿತ್ರ 'ದ ಪ್ಲಾನ್' ಅನ್ನು ನಾನು ಇನ್ನೂ ನೋಡಿಲ್ಲವಾದ್ದರಿಂದ ಈ ವಾರದ ಕೊನೆಯಲ್ಲಿ ನೋಡೋಣ ಎಂದು ಯಾವ ಚಿತ್ರಮಂದಿರದಲ್ಲಿದೆ ಎಂದು ಹುಡುಕಿದೆ. ಕೇವಲ ಮೂರು ಚಿತ್ರಮಂದಿರದಲ್ಲಿತ್ತು! ಎಷ್ಟು ಪ್ರದರ್ಶನ ಎಂದರೆ ಬರೇ ಮೂರು!  ೮೩% ಜನರು ಬುಕ್ ಮೈ ಶೋನಲ್ಲಿ ಮೆಚ್ಚುಗೆಯನ್ನು ತೋರಿಸಿದ ಹೊರತಾಗಿಯೂ ಕೇವಲ ಮೂರು ಪ್ರದರ್ಶನ! ಇದು ಯಾವ ನ್ಯಾಯ ಸ್ವಾಮಿ? ಸಿಟ್ಟಿನಲ್ಲಿ ಬೇರೆ ಭಾಷೆಗಳ ಚಿತ್ರಗಳು ಎಷ್ಟು ಚಿತ್ರಮಂದಿರಗಳಲ್ಲಿವೆ? ಎಷ್ಟು ಪ್ರದರ್ಶನಗಳು? ನೋಡತೊಡಗಿದೆ. ಹಿಂದಿಯ 'ತಮಾಷಾ' ಚಿತ್ರಕ್ಕೆ ಅದೆಷ್ಟು ಚಿತ್ರಮಂದಿರಗಳು, ಅದೆಷ್ಟು ಪ್ರದರ್ಶನಗಳು! ಅಬಾಬಾಬಾ! ಚಕಿತವಾಯಿತು. ಕರ್ನಾಟಕದ ರಾಜಧಾನಿ, ಕನ್ನಡ ನುಡಿಯ ಮನೆ ನಮ್ಮ ಬೆಂಗಳೂರಿನಲ್ಲಿ ಕನ್ನಡದ ಒಳ್ಳೆಯ ಚಿತ್ರಗಳಿಗಿಂತ ಬೇರೆ ಭಾಷೆಯ ಚಿತ್ರಗಳಿಗೆ ಹೆಚ್ಚಿನ ಮನ್ನಣೆ, ಮಾನ್ಯತೆ!

ಕೆಲ ತಿಂಗಳ ಹಿಂದೆ 'ರಂಗಿತರಂಗ' ಬಿಡುಗಡೆಯಾದಾಗ ಅದು ನಮ್ಮ ಅಳವೆಡೆಗೆ (ಆಫೀಸ್) ಹತ್ತಿರವಿರುವ 'ಕ್ಯೂ ಸಿನೆಮಾಸ್'ನಲ್ಲಿ ಬಿಡುಗಡೆಯಾಗದಿದ್ದಾಗ, ಸಹೋದ್ಯೋಗಿ ಮಿತ್ರರೊಂದಿಗೆ ಅಲ್ಲಿಗೆ ಹೋಗಿ 'ಕ್ಯೂ ಸಿನೆಮಾಸ್' ಸಿಬ್ಬಂದಿಯ ಬಳಿ ಕನ್ನಡ ಚಿತ್ರಗಳನ್ನು ಇಲ್ಲಿ ಏಕೆ ಪ್ರದರ್ಶಿಸುವುದಿಲ್ಲ ಎಂದು ಪ್ರಶ್ನಿಸಿದ್ದೆವು. "ಕನ್ನಡ ಸಿನೆಮಾಗಳನ್ನ ಜನರು ನೋಡೋದಿಲ್ಲ ಸಾರ್" ಎಂಬುದು ಅವನು ಕೊಟ್ಟ ಉತ್ತರವಾಗಿತ್ತು. "ನೀವು ಕನ್ನಡ ಸಿನೆಮಾಗಳನ್ನು ಹಾಕದೆ, ಜನ ನೋಡೋದಿಲ್ಲ ಅಂತ ಹೇಗ್ರಿ ಹೇಳ್ತೀರ?" ಎಂದು ತಕರಾರು ಎತ್ತಿದ್ದೆವು. ಕೊನೆಗೆ ಅವನು 'ರಂಗಿತರಂಗ'ವನ್ನು ಪ್ರದರ್ಶಿಸಲು ಪ್ರಯತ್ನಿಸುವುದಾಗಿ ಹೇಳಿದ್ದ. ಅದು ಆಗಲಿಲ್ಲ ಎನ್ನುವುದು ಬೇರೆ ಮಾತು. ನಾವು ಹೋಗಿದ್ದಕ್ಕೊ ಎಂಬಂತೆ 'ಬುಲೆಟ್ ಬಸ್ಯಾ' ಅಲ್ಲಿ ಪ್ರದರ್ಶನಗೊಂಡಿತು. ಅದರ ನಂತರ ಬಂದ 'ಉಪ್ಪಿ ೨ ' ಆಗಲಿ, 'ಆಟಗಾರ'ವಾಗಲಿ, 'ಕೆಂಡಸಂಪಿಗೆ' ಆಗಲಿ, 'ಫರ್ಸ್ಟ್ ರಾಂಕ್ ರಾಜು' ಆಗಲಿ ಇಲ್ಲಿ ಬರಲೇ ಇಲ್ಲ. ಕೊನೆಗೆ 'ರಥಾವರ'ವೂ ಬರುತ್ತಿಲ್ಲ! ಎಂತಹ ಪರಿಸ್ಥಿತಿ ಸ್ವಾಮಿ. ಕಳೆದ ವಾರ ಗೆಳತಿಯೊಬ್ಬಳು, ಮರಾಠಿಯ 'ಕತ್ಯಾರ್ ಕಲ್ಜಿತ್ ಘುಸಲಿ' ಎಂಬ ಚಿತ್ರ ಬಹಳ ಸೊಗಸಾಗಿದೆ. ಸಾಧ್ಯವಾದರೆ ನೋಡು ಎಂದಳು. ಅದಕ್ಕುತ್ತರವಾಗಿ ನಾನು, ಬೆಂಗಳೂರಲ್ಲಿ ಮರಾಠಿ ಚಿತ್ರ ನೋಡಲು ಸಿಗುವುದು ನನಗಂತೂ ಅನುಮಾನ, ಆದರೂ ಒಮ್ಮೆ ಹುಡುಕುತ್ತೇನೆ ಎಂದೆ. ಏನು ಹೇಳಲಿ! ಕನ್ನಡ ಚಿತ್ರಗಳ ಬಗ್ಗೆ ತಾತ್ಸಾರ ತೋರುವ ಇದೇ ದರಿದ್ರ 'ಕ್ಯೂ ಸಿನೆಮಾಸ್'ನಲ್ಲಿ ಆ ಚಿತ್ರ ಇರಬೇಕೆ! ಖುಷಿ ಪಡುವುದೋ ದುಃಖ ಪಡುವುದೋ ತಿಳಿಯಲಿಲ್ಲ!

ಬೇರೆ ಭಾಷೆಯ ಪ್ರೇಕ್ಷಕರಿಗೆ ಅಲ್ಲೊಂದು ಇಲ್ಲೊಂದು ಎಂಬಂತೆ ಅವರ ಭಾಷೆಯ ಚಿತ್ರಗಳು ಬೆಂಗಳೂರಿನಲ್ಲಿ ನೋಡಲು ಸಿಗುವಾಗ ನಾವು ಕನ್ನಡಿಗರು ನಮ್ಮ ಭಾಷೆಯ ಚಿತ್ರ ನೋಡಲು ಚಿತ್ರಮಂದಿರಗಳನ್ನು ಹುಡುಕಾಡಿ, ಹಲವಾರು ಕಿ.ಮೀ ಓಡಾಡಬೇಕಾದ ಪರಿಸ್ಥಿತಿ! ಹೀಗೆಯೇ ಮುಂದುವರೆದರೆ ಗತಿ ಏನು? ಚಿತ್ರಮಂದಿರಗಳ ಮುಂದೆ ಕನ್ನಡ ಚಿತ್ರ ಹಾಕಿ ಸ್ವಾಮಿ ಎಂದು ಅಂಗಲಾಚುವ ಸನ್ನಿವೇಶ ಎದುರಾಗಬಹುದು ಎಂಬ ಅಳುಕು ಕಾಡುತ್ತಿದೆ. "What dude there are no theatres for Kannada movie?" ಎಂದು ಬೇರೆ ಭಾಷೆಯ ಗೆಳೆಯರು ಅಣಕಿಸುವಾಗ ಮೈ ಉರಿಯುತ್ತದೆ. ತಪ್ಪು ಯಾರದ್ದು ಸ್ವಾಮಿ? ಕನ್ನಡ ಚಿತ್ರಗಳನ್ನು ನಿರ್ಲಕ್ಷಿಸುವ ಚಿತ್ರಮಂದಿರಗಳದ್ದೆ? ಕನ್ನಡ ಚಿತ್ರಗಳ ಹಂಚಿಕೆದಾರರದ್ದೇ? ಗುಣಮಟ್ಟ ನೋಡದೆ ಸಾಲು ಸಾಲು ರಿಮೇಕ್ ಚಿತ್ರಗಳನ್ನು ಮಾಡಿಕೊಂಡು ಬಂದ ನಿರ್ದೇಶಕ/ನಟರದ್ದೆ? ಅಥವಾ ಇಂತಹ ಬರಿಯ ಪ್ರಶ್ನೆಗಳು, ಉತ್ತರ ಸಿಗದ ಪ್ರಶ್ನೆಗಳ ಹೊತ್ತು ಕೂತಿರುವ ಅಸಹಾಯಕ ಪ್ರೇಕ್ಷಕರದ್ದೆ?! 

ನಾವು ಸದಭಿರುಚಿಯಿರುವ ಒಳ್ಳೆಯ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸದಿದ್ದರೆ, ಚಿತ್ರಮಂದಿರಗಳು ಕನ್ನಡ ಚಿತ್ರ ಪ್ರದರ್ಶಿಸದಿದ್ದಾಗ ದನಿ ಎತ್ತದಿದ್ದರೆ, ನಾವು ಅಸಹಾಯಕ ಪ್ರೇಕ್ಷಕರೆಂಬುದ ಮೊದಲು ತಲೆಯಿಂದ ಕಿತ್ತೊಗೆಯದಿದ್ದರೆ ಬೇರೆ ಭಾಷೆಯ ಚಿತ್ರಗಳನ್ನು ನಮ್ಮ ಭಾಷೆಯ ಚಿತ್ರಗಳೆಂದು ನೋಡಬೇಕಾದ ಕರಾಳ ದಿನಗಳು ಬರುವುದು ನಿಶ್ಚಿತ! ಆಯ್ಕೆ ನಮ್ಮದು!