ನನ್ನ ಭಾವನೆಗಳನ್ನು ಬರವಣಿಗೆ ರೂಪಕ್ಕೆ ತರುವ ಒ೦ದು ಪುಟ್ಟ ಪ್ರಯತ್ನ.. ನಿಮ್ಮ ಅನಿಸಿಕೆಗೆ, ಅಭಿಪ್ರಾಯಕ್ಕಾಗಿ ಕಾಯುತ್ತಿರುವೆ..
Monday, 20 February 2017
Wednesday, 11 January 2017
ಹಿಮಾಲಯ ಕೈ ಬೀಸಿ ಕರೆದಾಗ...
೨೦೧೨ರಲ್ಲಿ ಗೆಳೆಯ ನೇಪಾಳಕ್ಕೆ ಹೋಗುವಾಗ ಬಾನೋಡ (ವಿಮಾನ)ದಲ್ಲಿ ಕೂತು ಹಿಮಾಲಯದ ಚಿತ್ರ ತೆಗೆದಿದ್ದ. ಆ ಅಂದವನ್ನು ನೋಡಿ ನಿಬ್ಬೆರಗಾಗಿ, ಮುಂದೆ ಒಮ್ಮೆಯಾದರೂ ಹಿಮಾಲಯವನ್ನು ನೋಡಲೇಬೇಕೆಂಬ ಹೆಬ್ಬಯಕೆಯೊಂದನ್ನು ಮನದ ತಿಜೋರಿಯಲ್ಲಿ ಗುಪ್ತವಾಗಿ ಬಚ್ಚಿಟ್ಟಿದ್ದೆ.
೨೦೧೬ ಅಕ್ಟೋಬರ್ ವೇಳೆಯಲ್ಲಿ ಗೆಳೆಯರು, ಡಿಸೆಂಬರ್ ಕೊನೆಯಲ್ಲಿ ಹಿಮಾಲಯಕ್ಕೆ ಚಾರಣಕ್ಕೆ ಹೋಗೋಣ ಎಂದಾಗ ಮರುಯೋಚನೆ ಮಾಡದೆ ಖಡಾಖಂಡಿತವಾಗಿ ಇಲ್ಲವೆಂದಿದ್ದೆ. ರಜೆ ಕೇಳಿದರೆ ಕಿಡ್ನಿ ಕೇಳಿದ ಹಾಗೆ ಮುಖ ಮಾಡುವ ಮ್ಯಾನೇಜರ್; ಬ್ಯಾಂಕ್ ಖಾತೆಯಲ್ಲಿದ್ದ ಅತ್ಯಲ್ಪ ಮೊತ್ತ, ಇವುಗಳು ನೆನಪಿಗೆ ಬಂದದ್ದೇ ಆ ನಿರಾಕರಣೆಗೆ ಮುಖ್ಯ ಕಾರಣವಾಗಿತ್ತು!
ನನ್ನ ಮಾತಿಗೆ ತಲೆಕೆಡಿಸಿಕೊಳ್ಳದೆ, ನನ್ನನ್ನೂ ಲೆಕ್ಕಕ್ಕೆ ಹಿಡಿದು; ಗೆಳೆಯರು ಅವರ ಪಾಡಿಗೆ ಯೋಜನೆ ಮಾಡಲು ಶುರು ಮಾಡಿದರು. ಟ್ರೆಕ್ ದ ಹಿಮಾಲಯಾಸ್ (ಟಿ.ಟಿ.ಎಚ್) ಸಂಸ್ಥೆಯ ಜೊತೆ "ಚೋಪ್ತಾ-ಚಂದ್ರಶಿಲಾ" ಬೆಟ್ಟ (೧೩,೧೦೦ ಅಡಿ ಎತ್ತರ)ವ ಚಾರಣ ಮಾಡೋಣ ಎಂದರು. ಹೇಗೂ ಹೋಗುವುದಿಲ್ಲ ಎಂದು ನಿರ್ಧರಿಸಿದ್ದರಿಂದ ನಾನೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಮ್ಯಾಂಡೇಟರಿ ಅನ್ನೋ ಹಾಗೆ ವಾಟ್ಸಾಪ್ನಲ್ಲಿ ಗುಂಪು ಕೂಡಾ ರಚನೆ ಆಯ್ತು! ಅಲ್ಲಿ ಯಾವ ದಿನ ಹೋಗುವುದು, ಯಾವ ಬ್ಯಾಚಲ್ಲಿ ಜಾಗವಿದೆ, ಯಾವಾಗ ಹೋದರೆ ಬಾನೋಡದಲ್ಲಿ ಕಡಿಮೆ ವೆಚ್ಚದಲ್ಲಿ ಹೋಗಬಹುದು ಇತ್ಯಾದಿ ವಿವರಗಳನ್ನು ಚರ್ಚಿಸಿ, ಬುಕ್ ಮಾಡಿಯೇ ಬಿಟ್ಟರು! ದಿನಾಂಕ ತಿಳಿಸಿ ನನಗೆ ರಜೆ ಹಾಕಲು ಸೂಚಿಸಿದರು. ನಾನು ರಜೆ ಕೇಳಲೇ ಬೇಕಾಯ್ತು! ಲಂಡನಲ್ಲಿದ್ದ ಮ್ಯಾನೇಜರ್ಗೆ ಮಿಂಚೆಯಲ್ಲಿ ರಜೆಗಾಗಿ ಕೋರಿದೆ, ೪ನೇ ಈಯತ್ತಿನಲ್ಲಿದ್ದಾಗ ಕ್ಲಾಸ್ ಟೀಚರ್ಗೆ ರಜೆ ಅರ್ಜಿ ಕೊಡುತ್ತಿದ್ದ ಹಾಗೆ! ಗೆಳೆಯರು ಚಂದ್ರಶಿಲಾ ಶಿಖರದ ಚಿತ್ರಗಳನ್ನು ಕಳುಹಿಸ್ತಾ ಇದ್ದರು. ಚಿತ್ರಗಳನ್ನು ನೋಡಿದರೆ ಅಲ್ಲಿ ಹೋದ ಮೇಲೆ ಸರ್ಪ್ರೈಸ್ ಇರುವುದಿಲ್ಲ ಎಂದು ನೋಡುವುದರಿಂದ ಹಿಂದೆ ಸರಿದಿದ್ದೆ. ಅತ್ತ ಟಿ.ಟಿ.ಎಚ್ ಅವರು ಚಾರಣಕ್ಕೆ ಯಾವ ರೀತಿ ಸಿದ್ಧತೆ ನಡೆಸಬೇಕು, ಏನೇನನ್ನು ತರಬೇಕು ಎಂಬಿತ್ಯಾದಿ ಮಾಹಿತಿ ಇರುವ ಮಿಂಚೆಯನ್ನು ಒಂದರ ಹಿಂದೆ ಒಂದನ್ನು ಕಳುಹಿಸುತ್ತಿದ್ದರು. ಇತ್ತ ಪುಣ್ಯಾತ್ಮ ನಮ್ಮ ಮ್ಯಾನೇಜರ್ ರಜೆಗೆ ಒಪ್ಪಿಗೆ ಸೂಚಿಸಿದ . ಅಲ್ಲಿಗೆ ನಾನು ಚಾರಣಕ್ಕೆ ಹೋಗುವುದು ಖಾತ್ರಿಯಾಗಿತ್ತು. ಹಣದ ಸಮಸ್ಯೆಗೆ ಗೆಳೆಯರು ಅಭಯಹಸ್ತ ಸೂಚಿಸಿದ್ದರು!
ಚಾರಣಕ್ಕೆ ಬೇಕಾಗುವ ಸಾಮಗ್ರಿಗಳನ್ನ ಹಿಂದಿನ ಬಾರಿ ಚಾರಣಕ್ಕೆ ಹೋದ ಗೆಳೆಯರಿಂದ, ಡೆಕತ್ಲಾನಿಂದ ತಂದು, ಹೇಗೆ ಪ್ಯಾಕ್ ಮಾಡಬೇಕು ಎಂಬ ವೀಡಿಯೋ ನೋಡಿ, ಎಲ್ಲಾ ಸಾಮಗ್ರಿ, ಬಟ್ಟೆ ಬರೆಗಳನ್ನ ಚೀಲಕ್ಕೆ ತುರುಕಿಸಿದ್ದು ಆಯ್ತು. ೨೨ನೇ ತಾರೀಕು ಬಾನೋಡದಲ್ಲಿ ಹೊರಡುವವರಿದ್ದೆವು.
ನಾನು, ಗೆಳೆಯರಾದ ಸುಖೇಶ್, ಸಂಕೇತ್ ಮತ್ತು ಪರೀಕ್ಷಿತ್ ಬಾನೋಡದಲ್ಲಿ ಕೂತು ದೆಹಲಿ ತಲುಪಿ, ಮರುದಿನ ಹೃಶಿಕೇಷಕ್ಕೆ ತಲುಪಿದೆವು. ಅಲ್ಲಿ ಒಂದು ದಿನ ಯೂತ್ ಹಾಸ್ಟೇಲ್ನಲ್ಲಿ ತಂಗಿ, ಹೃಶಿಕೇಷ ಸುತ್ತಿ, ೨೫ನೇ ತಾರೀಕು ಬೆಳಿಗ್ಗೆ ಟಿ.ಟಿ.ಎಚ್ ಅವರ ಗಾಡಿಯಲ್ಲಿ ಉಳಿದ ೧೪ ಚಾರಣಿಗರ ಪರಿಚಯ ಮಾಡಿಕೊಂಡು ಸಂಜೆ ೭ರ ಸುಮಾರಿಗೆ ಚಾರಣದ ಬೇಸ್ ಕ್ಯಾಂಪ್ 'ಸಾರಿ' ಯನ್ನು ತಲುಪಿದೆವು. ಮಧ್ಯಾಹ್ನ ಊಟಕ್ಕೆ ನಿಲ್ಲಿಸಿದಾಗ ಮಳೆರಾಯ ಸಿಕ್ಕಿದ್ದರಿಂದ, ಚಂದ್ರಶಿಲಾದಲ್ಲಿ ಹಿಮ ಬಿದ್ದರಬಹುದೆಂದು ಊಹಿಸಿದರು. ಗೂಗಲ್ನಲ್ಲಿ ಇನ್ನು ಒಂದು ವಾರ ಹಿಮ ಬೀಳದು ಎಂದು ಓದಿದ ನಾವು ಎಲ್ಲಿಲ್ಲದ ಖುಷಿಯಲ್ಲಿ ಕುಣಿದಾಡುತ್ತಿದ್ದಾಗ ನೆನಪಾದದ್ದು ಗಾಡಿ ಮೇಲಿದ್ದ ಮಳೆಯಲ್ಲಿ ನೆನೆಯುತ್ತಿದ್ದ ನಮ್ಮ ಬ್ಯಾಗುಗಳು! ಓಡಿ ಹೋಗಿ ಬ್ಯಾಗುಗಳನ್ನು ಗಾಡಿ ಒಳಗೆ ಇಟ್ಟೆವು. ದಾರಿಯಲ್ಲಿ ಸಿಕ್ಕ ಒಂದೆರಡು ಸುಂದರ ತಾಣಗಳಲ್ಲಿ ನಿಲ್ಲಿಸಿ ತನ್ನಿ (ಸೆಲ್ಫಿ) ತೆಗೆದುಕೊಂಡೆವು.
ಸಾರಿ ಗೆ ತಲುಪಿದಾಗ ಚಳಿ ವಿಪರೀತವಾಗಿತ್ತು. ಊಟ ಮಾಡುವಾಗ ಚಳಿಗೆ ಚಪಾತಿ ಕತ್ತರಿಸಲಾಗದಷ್ಟು ಕೈ ಮಂಜುಗಟ್ಟಿತ್ತು! ಬೇಸ್ ಕ್ಯಾಂಪ್ ಅಲ್ಲೇ ಹೀಗಿದ್ದರೆ ಬೆಟ್ಟದ ತುದಿಯಲ್ಲಿ ಚಳಿ ಹೇಗಿರಬಹುದು ಎಂಬ ಯೋಚನೆಯೇ ಚಳಿಯನ್ನು ಇಮ್ಮಡಿಗೊಳಿಸಿತು. ಊಟ ರುಚಿ ರುಚಿಯಾಗಿದ್ದರಿಂದ ಬ್ಯಾಟಿಂಗ್ ಭರ್ಜರಿಯಾಗೇ ನಡೆಯಿತು. ಊಟ ಮುಗಿಯುತ್ತಿದ್ದ ಹಾಗೆಯೆ ಚಾರಣದ ಲೀಡ್ ರವಿ ಮತ್ತು ಆಪರೇಶನಲ್ ಹೆಡ್ ಗೋಪಾಲ್ ಒಟ್ಟು ಚಾರಣದ ಬಗ್ಗೆ, ಮರುದಿನ ನಾವು ಎಷ್ಟು ಕಿ.ಮೀ ನಡೆಯಬೇಕೆಂಬ ವಿವರಗಳನ್ನ ನೀಡಲಾರಂಭಿಸಿದರು. ಆ ವಾತಾವರಣಕ್ಕೆ ಮೈ ಹೊಂದಿಕೊಳ್ಳಲಿ ಎಂದು ನಾನು ಜಾಕೇಟ್ ಹಾಕಿಕೊಳ್ಳದೆ ಬರೀ ಒಂದು ಸ್ವೆಟರ್ ಧರಿಸಿದ್ದೆ. ಅದನ್ನು ನೋಡಿ ಗೋಪಾಲ್, "ಜಾಕೇಟ್ ಎಲ್ಲಿ?" ಎಂದು ಕೇಳಿದ. "ಜಾಕೇಟ್ ರೂಮಲ್ಲಿದೆ.. ಹೀಗೆ ಆರಾಮಾಗಿದೆ!" ಎಂದೆ. ಈ ಸನ್ನಿವೇಶ ನನಗೆ 'ಜಾಕೇಟ್ ಮ್ಯಾನ್' ಎಂಬ ಹೊಸ ಬಿರುದು ತಂದು ಕೊಟ್ಟಿತು! ಬೆಳಿಗ್ಗೆ ೭ಕ್ಕೆ ಚಹಾ, ೮ಕ್ಕೆ ತಿಂಡಿ ಹಾಗೂ ೯ಕ್ಕೆ ಹೊರಡುವುದು ಎಂದು ಹೇಳಿದರು. ಚಳಿಯ ನಡುಕದಿಂದ ಹೊರಬರಲು ಕ್ಯಾಂಪ್ ಫೈರ್ ಮುಂದೆ ಕೂತು ಚಳಿ ಕಾಯಿಸಿ, ಚಹಾ ಹೀರಿ ಕೋಣೆಗೆ ಹೋಗಿ ದಪ್ಪನೆಯ ರಗ್ಗಿನ ಕೆಳಗೆ ಬೆಚ್ಚನೆ ಮಲಗಿದೆವು. ಮುಂದಿನ ೩-೪ ದಿನ ಟೆಂಟಲ್ಲಿ ಮಲಗಬೇಕೆಂಬ ಯೋಚನೆಯೇ ಹಾಸಿಗೆಯನ್ನು ಇನ್ನೂ ಮೆತ್ತಗೆ ಮಾಡಿದವು.
ಮೊದಲನೇ ದಿನ ನಾವು ಬೇಸ್ ಕ್ಯಾಂಪ್ನಿಂದ ೩ ಕಿ.ಮೀ ಚಾರಣ ಮಾಡಿ ದೇವರಿಯಾತಾಲ್ ಕ್ಯಾಂಪನ್ನು ತಲುಪಬೇಕಿತ್ತು. ಬೆಳಿಗ್ಗೆ ಗೆಳೆಯ ಪರೀಕ್ಷಿತ್ ನಮ್ಮನ್ನು ಎಬ್ಬಿಸಿದ. ಮುಖ ತೊಳೆಯಲು ನೀರಿಗೆ ಕೈ ಇಟ್ಟರೆ ತಂಪೆಟ್ಟಿಗೆಯಿಂದ ಹೊರ ತೆಗೆದ ನೀರನ್ನು ಮುಟ್ಟಿದಂತಾದಾಗ "ಮುಂದಿನ ನಾಲ್ಕು ದಿನ ಕಷ್ಟ ಇದೆ ಗುರು" ಎಂದು ಮನಸ್ಸು ಪಿಸುಗುಟ್ಟಿತು. ತಿಂಡಿ ತಿನ್ನಲು ಹೋದರೆ ಅಲ್ಲಿ ಬ್ರೆಡ್ ಜಾಮ್ ಮತ್ತು ಬ್ರೆಡ್ ಆಮ್ಲೇಟ್ ಇಟ್ಟಿದ್ರು. ದೋಸೆ, ಇಡ್ಲಿ, ಬೇಳೆ ಬಾತ್ ತಿಂದು ಬೆಳೆದ ಜೀವ "ಅಯ್ಯೋ ಶಿವನೆ! ಈ ಒಣಕಲು ಬ್ರೆಡ್ಡಿಗೆ ಜಾಮ್ ಸವರಿ ತಿಂದು ನಾನು ಬೆಟ್ಟ ಹತ್ತೋದ್ ಹೌದಾ?" ಎಂದು ಪ್ರಶ್ನಿಸಿತು. ಬೇರೆ ಆಯ್ಕೆ ಇರಲಿಲ್ಲ. ದೋಸೆ ಜೊತೆ ಚಟ್ನಿ ತಿಂದ ಹಾಗೆ ಬ್ರೆಡ್ ಜೊತೆ ಜಾಮ್ ಹಾಕಿಕೊಂಡು ತಿಂದು ದಾರಿಯಲ್ಲಿ ಹಸಿವಾದರೆ ಎಂದು ಟಿ.ಟಿ.ಎಚ್ ಅವರು ಕೊಟ್ಟ ಬಿಸ್ಕತ್ತು, ಚಾಕಲೇಟುಗಳನ್ನು ಚೀಲದಲ್ಲಿ ತುಂಬಿ ಚಾರಣ ಶುರು ಮಾಡುವ ಜಾಗಕ್ಕೆ ಬಂದೆವು. "ಹೊರಡುವ ಮೊದಲು ಒಂದು ಚಿತ್ರ ಬೇಕಲ್ವ" ಎಂದು ಯಾರೋ ಹೇಳಿದ್ದರಿಂದ ಅಲ್ಲಿ ನಿಂತು ಸಶಸ್ತ್ರ ಸಮೇತರಾಗಿದ್ದ ಇಡೀ ಗುಂಪಿನ ಚಿತ್ರ ತೆಗೆದೆವು.
ಆಶ್ಚರ್ಯಕರ ಸಂಗತಿಯೆಂದರೆ ಚಾರಣದ ಗುಂಪಿನ ೧೮ ಜನರಲ್ಲಿ ೧೦ ಜನ ಬೆಂಗಳೂರಿನವರೇ! ಉಳಿದ ೮ ಜನರಲ್ಲಿ ೪ ಜನ ಮುಂಬಯಿ ಹಾಗೂ ಇನ್ನು ೪ ಜನ ದೆಹಲಿಯವರು. ನಮ್ಮ ನಾಲ್ವರ ಗುಂಪಿಗೆ 'ಬೆಂಗಳೂರು ಬಾಯ್ಸ್' ಎಂಬ ನಾಮಕರಣವಾಯಿತು!
ಚಳಿ ಇರುತ್ತೆ ಅಂತ ಸ್ವೆಟರು, ಜಾಕೆಟು ಹಾಕ್ಕೊಂಡಿದ್ವಿ, ಆದ್ರೆ, ಸಿಕ್ಕಾಪಟ್ಟೆ ಬಿಸಿಲು ಬಂದು ಬೆವ್ರು ಜಲಪಾತದ ತರಹ ಇಳಿಯೋಕೆ ಶುರು ಆಯ್ತು. ಹೋಗೋ ದಾರಿ ಬೇರೆ ಸಿಕ್ಕಾಪಟ್ಟೆ ಏರುಮಟ್ಟದಲ್ಲಿತ್ತು. ಇನ್ನು ಈ ಜಾಕೇಟ್, ಥರ್ಮಲ್ಸ್ ಹಾಕಿಕೊಂಡರೆ ಬೆವರಲ್ಲಿ ತೋಯ್ದು ಹೋಗುವುದು ನಿಶ್ಚಿತ ಎಂದು ಅವುಗಳನ್ನು ತೆಗೆದು ಚೀಲದಲ್ಲಿ ತುರುಕಿ ನಡಿಯೋಕೆ ಶುರು ಮಾಡಿದ್ವಿ. ಚೀಲದಲ್ಲಿ ಕಿವಿಯುಲಿ ಇದ್ದಿದ್ದು ನೆನಪಾಗಿ ಕಿರಿಕ್ ಪಾರ್ಟಿದು, ಎಸ್.ಪಿ.ಬಿ ಸರ್ ದು ಹಾಡುಗಳನ್ನು ಕೇಳ್ತಾ ಬೆಟ್ಟ ಹತ್ತತಾ ಇದ್ವಿ. ಚಾರಣದ ಗೈಡ್ ಯುಗಲ್ ನಮ್ಮೊಡನೆ ಬರುತ್ತಿದ್ದ. ದಾರೀಲಿ ಒಂದೆರ್ಡು ಒಳ್ಳೆಯ ವ್ಯೂ ಪಾಯಿಂಟ್ಗಳು ಇದ್ವು. ಬರೀ ೩ ಕಿ.ಮೀ ಚಾರಣ ಇದ್ದಿದ್ದರಿಂದ ಊಟದ ಸಮಯಕ್ಕೆ ನಾವು ದೇವರಿಯಾತಲ್ ಕ್ಯಾಂಪನ್ನು ತಲುಪಿದೆವು. ಮಹಾಭಾರತದ 'ಯಕ್ಷ ಪ್ರಶ್ನೆ' ನಡೆದದ್ದು ಇದೇ ದೇವರಿಯಾತಾಲ್ ಕೆರೆಯ ಬಳಿ ಅಂತೆ! ಕೇಳಿ ಬೆರಗುಗೊಂಡೆವು. ಟೆಂಟ್ಗಳನ್ನ ಇನ್ನೂ ಹಾಕಿರದಿದ್ದರಿಂದ ಚೀಲಗಳನ್ನು ಪಕ್ಕದಲ್ಲಿಟ್ಟು ವಾಚ್ ಟವರ್, ಕೆರೆಯಲ್ಲಿ ಕಾಣುತ್ತಿದ್ದ ದೈತ್ಯ 'ಚೌಕಂಬ' ಪರ್ವತದ ಬಿಂಬ, ಎಲ್ಲಿಡೆ ಹರಡಿದ ಹಿಮವನ್ನು ನೋಡುತ್ತ ಕೂತು ಬಿಟ್ಟೆವು.
ಬಿಸಿ ಬಿಸಿ ಅನ್ನ, ಬೇಳೆ ಸಾರು, ನೆಂಚಿಕೊಳ್ಳಲು ಉಪ್ಪಿನಕಾಯಿ ಕಣ್ಣ ಮುಂದೆ ಬೃಹತ್ ಬೆಟ್ಟಗಳ ಸಾಲು! ಆಹಾ! ಎಂತಹ ರಮಣೀಯ ನೋಟ! ಆ ಅಂದ ಊಟದ ರುಚಿಯನ್ನು ಹೆಚ್ಚಿಸಿತ್ತು. ಊಟ ಮುಗಿಯುತ್ತಿದ್ದಂತೆ ಟಿ.ಟಿ.ಎಚ್ ಅವರು ಟೆಂಟ್ ಹಾಕಲು ಶುರು ಮಾಡಿದರು. ಟೆಂಟ್ ಹಾಕಲು ಕಲಿತಂತಾಗುತ್ತದೆ ಎಂದು ನಾವೂ ಕೈ ಜೋಡಿಸಿ ಒಂದಿಷ್ಟು ಟೆಂಟ್ ಹಾಕಿದೆವು. ಸಂಜೆ ಅತ್ತಿತ್ತ ಅಲೆಯುತ್ತಿದ್ದಾಗ ಆಪರೇಶನಲ್ ಹೆಡ್ ಗೋಪಾಲ್ ಸಿಕ್ಕ. ಹಾಗೇ ಮಾತಾಡುತ್ತ ಪ್ರಪಂಚ ಎಷ್ಟು ಚಿಕ್ಕದು ಎಂಬುದು ಮತ್ತೊಮ್ಮೆ ಅರಿವಾಯಿತು! ಅವನಿಗೂ ನನಗೂ ಹಲವಾರು ಪರಸ್ಪರ ಗೆಳೆಯರಿದ್ದರು. ಅವನು ಮತ್ತು ನನ್ನ ಹಲವಾರು ಗೆಳೆಯರು ಮನಾಲಿಯಲ್ಲಿ 'ಬೇಸಿಕ್ ಮೌಂಟೇನಿರಿಂಗ್ ಕೋರ್ಸ್' ಅನ್ನು ಜೊತೆಗೆ ಮುಗಿಸಿದ್ದರು. ಅಷ್ಟು ತಿಳಿಯುತ್ತಿದ್ದಂತೆ ನನ್ನನ್ನು 'ಮಚ್ಚಾ' ಎಂದು ಕರೆಯಲಾರಂಭಿಸಿದ! ಸಂಜೆ ಬಿಸಿ ಬಿಸಿ ಸೂಪ್ ಕುಡಿದು, ರಾತಿ ಊಟ ಮಾಡಿ ಡಿನ್ನರ್ ಟೆಂಟ್ ಇಂದ ಹೊರಬಂದು ಆಗಸ ನೋಡಿ ದಂಗಾದೆ! ಬೆಂಗಳೂರಿನಲ್ಲಿ ಕಣ್ಮರೆಯಾಗಿದ್ದ ಎಲ್ಲಾ ಚುಕ್ಕಿ ತಾರೆಗಳು ಅಲ್ಲಿ ಪ್ರತ್ಯಕ್ಷವಾಗಿದ್ದವು. ನಾವು ಆಡುತ್ತಿದ್ದ ಮಾತುಗಳನ್ನು ಆ ತಾರೆಗಳು ಪಿಳಿ ಪಿಳಿ ನೋಡುತ್ತ ಕೇಳಿಸಿಕೊಳ್ಳುತ್ತಿವೆ ಎಂಬಂತೆ ಭಾಸವಾಯಿತು. ಆ ತಾರೆ ತುಂಬಿದ ಆಗಸದ ಕೆಳಗೆ ಮಾತು ಮುಗಿಸಿ ಮಲಗಲು ಹೋದೆವು. ಮಲಗಲು ಸ್ಲೀಪಿಂಗ್ ಬ್ಯಾಗ್ ಕೊಟ್ಟಿದ್ದರು. ಅದನ್ನು ನೋಡಿದ್ದೇ ಮೊದಲ ಬಾರಿ! ಅದನ್ನು ಬಳಸುವುದು ಹೇಗೆ ಅಂತೆಲ್ಲ ಅರಿತು ಅದನ್ನು ಕೆಳಗೆ ಹಾಕಿಕೊಂಡು ಮಲಗಿದ್ದಾಯ್ತು. ಚಳಿಗೆ ಅದೆಷ್ಟು ಬಾರಿ ಎಚ್ಚರವಾಯಿತೋ! ಅದೆಷ್ಟು ಬಾರಿ ತಾರೆಗಳೊಡನೆ ಮಾತಾಡುತ್ತ ನಿಂತೆನೋ! ಆ ದೇವರೆ ಬಲ್ಲ.
ಅಲ್ಲಿ ಶೌಚಾಲಯವೋ, ಗುಂಡಿ ತೋಡಿ ಟೆಂಟ್ ಹಾಕಿದಂತಹ ಶೌಚಾಲಯ! ಅದನ್ನು ಬಳಸುವುದು ಹೇಗೆಂದು ಕೇಳಿಕೊಂಡು ಜೀವನದಲ್ಲಿ ಮೊದಲ್ನೇ ಬಾರಿ ಟಿಶ್ಯು ಪೇಪರ್ ಬಳಸಿ ಕೆಲಸ ಮುಗಿಸಿ ಬಂದದ್ದಾಯ್ತು! ಫ್ರೆಶ್ ಆಗಿ ಮತ್ತೆ ಒಣಕಲು ಬ್ರೆಡ್ ತಿನ್ನಬೇಕಲ್ಲ ಎಂಬ ಬೇಜಾರಿನಲ್ಲಿ ಡಿನರ್ ಟೆಂಟ್ಗೆ ಹೋದರೆ ಬಿಸಿ ಬಿಸಿ ಮ್ಯಾಗಿ ಮತ್ತು ಪಾಸ್ತಾ ಇತ್ತು. ತಿಂದು ತಯಾರಾಗಿ ಹೊರಟೆವು. ಟಿ.ಟಿ.ಎಚ್ ಅವರು ನಮಗೆ ಎರಡು ಆಯ್ಕೆ ಕೊಟ್ಟಿದ್ದರು. ಎರಡನೇ ದಿನ ಒಂದೇ ಸಾರಿ ಬೇಸ್ ಕ್ಯಾಂಪ್ ತನಕ ಮರಳಿ ಹೋಗಿ ಅಲ್ಲಿಂದ ಗಾಡಿಯಲ್ಲಿ 'ಚೋಪ್ತಾ' ಕ್ಯಾಂಪ್ ತನಕ ತಲುಪುವುದು. ಇಲ್ಲವೇ ದೇವರಿಯಾತಾಲ್ ಇಂದ ಚೋಪ್ತಾ ವರೆಗೆ ೧೬ ಕಿ.ಮೀ ಚಾರಣ ಮಾಡುವುದು. ಚಾರಣಕ್ಕಾಗಿ ಬಂದಿದ್ದೇವೆ ಆದ್ದರಿಂದ ಚಾರಣವೇ ಮಾಡೋಣ ಎಂದು ನಿರ್ಧರಿಸಿ ಅದೇ ಯಾದಿಯಾಗಿ ಹೊರಟಿದ್ದೆವು. ಅದೆಷ್ಟು ಲೀಟರ್ ನೀರು, ಅದೆಷ್ಟು ಗ್ಲೂಕೋಸ್ ಹೋಗಿದೆಯೋ ಲೆಕ್ಕ ಇಟ್ಟವರಿಲ್ಲ! 'ರೋಹಿಣಿ ಭುಗಿಯಾಲ್' ಎಂಬ ಸುಂದರ ಜಾಗದಲ್ಲಿ ಊಟಕ್ಕೆ ನಿಲ್ಲುವ ನಿರ್ಧಾರವಾಗಿತ್ತು. ಹೆಣ ಭಾರದ ಚೀಲವನ್ನು ಹೊತ್ತು ಅಲ್ಲಿ ತನಕ ತಲುಪುವುದರೊಳಗೆ ಅರೆಜೀವವಾಗಿದ್ದೆವು. ಊಟ ಮಾಡಿ ಸ್ವಲ್ಪ ಹೊತ್ತು ಒರಗಿ ಮತ್ತೆ ಆ ಭಾರದ ಚೀಲವನ್ನು ಹೆಗಲಿಗೇರಿಸಿ ಹೊರಟೆವು.
ದಾರಿಯಲ್ಲಿ ಹಿಮ ಬಿದ್ದ ಕಾರಣಕ್ಕೆ ಸುತ್ತಮುತ್ತಲಿನ ಜಾಗಗಳು ಸೊಗಸಾಗಿ ಕಾಣಿಸುತ್ತಿದ್ದವು. ನಡೆದು ನಡೆದು, ಇನ್ನು ಒಂದೇ ಒಂದು ಹೆಜ್ಜೆ ಇಡಲಾಗುವುದಿಲ್ಲ ಎಂಬ ಸ್ಥಿತಿ ತಲುಪಿ ಕೂತು ಬಿಟ್ಟೆ. ಚೋಪ್ತಾ ತಲುಪಲು ಮತ್ತೂ ೩ ಕಿ.ಮೀ ನಡೆಯಬೇಕಿತ್ತು. ಕತ್ತಲಾದರೆ ಪರದಾಡಬೇಕು ಎಂದು ಇದ್ದ ಬದ್ದ ಶಕ್ತಿಯೆಲ್ಲ ಹಾಕಿ ನಡೆಯ ಹತ್ತಿದೆ. ವಿರಾಮ ತೆಗೆದುಕೊಳ್ಳುತ್ತ, ಸುಧಾರಿಸಿಕೊಳ್ಳುತ್ತ ಸೂರ್ಯ ಮುಳುಗುವಷ್ಟರಲ್ಲಿ ಚೋಪ್ತಾ ಕ್ಯಾಂಪ್ ತಲುಪಿದೆವು. ಟೆಂಟ್ ಒಳಗೆ ಚೀಲ ಎಸೆದು ಊಟ ಮಾಡಿ ಮಲಗಿದವರಿಗೆ ನಿದ್ದೆ ಹತ್ತಿದ್ದು, ಬೆಳಗಾದದ್ದು ಗೊತ್ತೇ ಆಗಲಿಲ್ಲ! ನಿದ್ದೆ ದಣಿವನ್ನು ತಕ್ಕ ಮಟ್ಟಿಗೆ ಆರಿಸಿತ್ತು.
ಯಥಾಪ್ರಕಾರ ಇಲ್ಲೂ ಪರೀಕ್ಷಿತ್ ನಮ್ಮನ್ನು ಎಬ್ಬಿಸಿದ. ತಯಾರಾಗಿ ತಿಂಡಿ ಅಂತ ಕೊಟ್ಟ ಅವಲಕ್ಕಿ ಒಗ್ಗರಣೆ ಮತ್ತು ಓಟ್ಸನ್ನು ತಿಂದು ಕೊನೆಯ ದಿನದ ಚಾರಣಕ್ಕೆ ಅಣಿಯಾದೆವು. ಚಾರಣದ ಕೊನೆ, ಚಂದ್ರಶಿಲಾ ಬೆಟ್ಟದ ತುದೆಯೆಡೆಗೆ ಹೆಜ್ಜೆ ಇಡಲಾರಂಭಿಸಿದೆವು. ಚೋಪ್ತಾ ಕ್ಯಾಂಪಿನಲ್ಲೇ ಕೊನೆಯ ದಿನವೂ ತಂಗಬೇಕಾಗಿದ್ದರಿಂದ ಚೀಲವನ್ನು ಹೊತ್ತೊಯ್ಯುವ ಬಾಧೆಯಿರಲಿಲ್ಲ. ಅದೇ ನಮಗೆ ದೊಡ್ಡ ಸಮಾಧಾನದ ವಿಷಯವಾಗಿತ್ತು. ಚಂದ್ರಶಿಲಾಕ್ಕೂ ಮೊದಲು ತೃತೀಯ ಕೇದಾರ ಎಂಬ ಖ್ಯಾತಿಯ 'ತುಂಗನಾಥ' ದೇವಸ್ಥಾನ ಸಿಗುವುದೆಂದು ಹೇಳಿದರು. ತುಂಗನಾಥ ದೇವಸ್ಥಾನದವರೆಗೆ ಬರೀ ಮೆಟ್ಟಿಲುಗಳಿದ್ದ ಹಾದಿ.
ನಾನು ಪರೀಕ್ಷಿತ್ ಕಷ್ಟಪಟ್ಟು ಸುಧಾರಿಸಿಕೊಳ್ಳುತ್ತ ಮೆಟ್ಟಿಲೇರುತ್ತಿದ್ದರೆ ಗೆಳೆಯ ಸುಖೇಶ್ ಮನೆಯಲ್ಲಿ ನಡೆದಾಡುವ ಹಾಗೆ ಆರಾಮವಾಗಿ ಹೋಗುತ್ತಿದ್ದ. ಸಂಕೇತ್ ಕೂಡ ಕೊಂಚ ಸಲೀಸಾಗೇ ಬೆಟ್ಟವೇರತೊಡಗಿದ. ತುಂಗನಾಥ ದೇವಸ್ಥಾನ ತಲುಪಿ ಕೈ ಮುಗಿದು, ದಣಿವಾರಿಸಿಕೊಂಡು ಮುಂದೆ ಹೊರಟೆವು.
ಅಲ್ಲಿಂದ ಚಂದ್ರಶಿಲಾ ತುದಿ ಕಾಣಿಸುತ್ತಿತ್ತು. ಆ ಎತ್ತರ ಒಮ್ಮೆ ದಂಗುಬಡಿಸಿತು. ಮುಂದೆ ನಡೆಯುವ ಹಾದಿ ದುರ್ಗಮವಾಗಿಯೂ, ಕಷ್ಟಕರವಾಗಿಯೂ, ಬಲ ಭಾಗದಲ್ಲಿದ್ದ ಭಾರೀ ಪ್ರಪಾತಗಳು ಭಯ ಹುಟ್ಟಿಸುವಂತೆಯೂ ಇತ್ತು. ಪುರಂದರದಾಸರ ಗೀತೆಯಲ್ಲಿ ಬರುವ ಸಾಲು "ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಕ್ಕುತ" ಎಂಬಂತೆ ಬಸವನಹುಳುವಿನ ಹಾಗೆ ಹೆಜ್ಜೆ ಹಾಕುತ್ತಿದ್ದೆವು. ತುದಿಯನ್ನು ನೋಡಿದರೆ ಸುಖೇಶ್ ಮತ್ತು ಸಂಕೇತ್ ಮೊದಲಿಗರಾಗಿ ತಲುಪಿ, ಬೇಗ ಬನ್ನಿ ಎಂದು ನಮ್ಮೆಡೆಗೆ ಕೈ ಬೀಸುತ್ತಿದ್ದರು. ಉಳಿದವರಿಗೂ ಪ್ರೇರೇಪಿಸುತ್ತಾ, ನಾವೂ ಅವರಿಂದ ಶಕ್ತಿ ತುಂಬಿಸಿಕೊಳ್ಳುತ್ತಾ, ಏದುಸಿರು ಬಿಡುತ್ತಾ ತುದಿಯನ್ನು ತಲುಪಿಯೇ ಬಿಟ್ಟೆವು!
ಏನೋ ಸಂತಸ! ಒಲಂಪಿಕ್ಸ್ನಲ್ಲಿ ಪದಕ ಗೆದ್ದೆವೆಂಬಂತ ಉಲ್ಲಾಸ! ಸ್ವಲ್ಪ ಸುಧಾರಿಸಿಕೊಂಡು ಸುತ್ತಲೂ ಕಣ್ಣಾಡಿಸಿದೆ. ಎಂತಹ ನೋಟ! ದೇವರು ಸ್ವಲ್ಪ ಜಾಸ್ತಿ ಸಮಯ ಇಟ್ಟುಕೊಂಡು ಸೃಷ್ಟಿಸಿದ ಸುಂದರ ಚಿತ್ರದಂತಿತ್ತು! ಬರೀ ಚಿತ್ರಗಳಲ್ಲಿ ನೋಡಿ ಆನಂದಿಸಿದ ಹಿಮಾಲಯದ ಅಂದ ಕಣ್ಣ ಮುಂದಿತ್ತು. ನಂಬಲಾಗಲಿಲ್ಲ. ಅತ್ತ ಇತ್ತ ಎತ್ತ ನೋಡಿದರೂ ಭವ್ಯ ಬೆಟ್ಟಗಳ ಸಾಲು! ಅವುಗಳ ಮುಂದೆ ನಾವೆಷ್ಟು ಚಿಕ್ಕವರು ಎಂಬ ಯೋಚನೆ ಬರತೊಡಗಿತು.
ಅಲ್ಲಿದ್ದ ಪಂಚಮುಖಿ ಶಿವನಿಗೆ ಕೈ ಮುಗಿದು "Successfully completed" ಬ್ಯಾನರ್ ಮುಂದೆ ಎಲ್ಲರು ನಿಂತು ಕಿರಚಾಡುತ್ತ ಚಿತ್ರ ತೆಗೆಸಿಕೊಂಡೆವು. ಮುಂದೆ ಯಾರದರೂ ಕೇಳಿದರೆ ತೋರಿಸಲು ಬೇಕಲ್ಲವೇ!
ನೆನಪಿಗೆ ಮತ್ತೊಂದಿಷ್ಟು ಚಿತ್ರಗಳನ್ನು ತೆಗೆದುಕೊಂಡು ಬೆಟ್ಟಗಳ ಸಾಲಿಗೆ ನಮಸ್ಕರಿಸಿ, ಹಿಮದೊಂದಿಗೆ ಆಡುತ್ತ ಚೋಪ್ತಾ ಕ್ಯಾಂಪಿನತ್ತ ಹೊರಟೆವು.
ಚಾರಣ ಮುಗಿಸಿದ ಖುಷಿಗೆ ಊಟಕ್ಕೆ ತುಪ್ಪ ಸವರಿದ ಚಪಾತಿ, ಪನ್ನೀರ್ ಪಲ್ಯ, ಗುಲಾಬ್ ಜಾಮೂನ್ ಎಲ್ಲ ಮಾಡಿದ್ದರು! ಚೆನ್ನಾಗಿ ತಿಂದು ಡಿನ್ನರ್ ಟೆಂಟ್ನಲ್ಲಿ ಎಲ್ಲರೂ ಅಂತ್ಯಾಕ್ಷರಿ ಆಡಿ, ಹೋಗಿ ಮಲಗಿದೆವು. ಇಷ್ಟು ದಿನ ಕಾಡುತ್ತಿದ್ದ ಸ್ಲೀಪಿಂಗ್ ಬ್ಯಾಗ್, ಟೆಂಟ್ ಎಲ್ಲ ಅಂದೇ ಕೊನೆ ಎಂದಾಗ ನೋವು ನಿಧಾನಕ್ಕೆ ಕಾಡತೊಡಗಿತು. ಹಿಮಾಲಯದ ತಪ್ಪಲಿನಲ್ಲಿನ ಕೊನೆಯ ನಿದ್ದೆಯದು!
ಬೆಳೆಗೆದ್ದಾಗ ಚಾರಣ ಮುಗಿಸಿದ್ದಕ್ಕೆ ಟಿ.ಟಿ.ಎಚ್ ಅವರು ನಮಗೆಲ್ಲ ಪ್ರಶಂಸಾ ಪತ್ರಗಳನ್ನು ನೀಡಿದರು. ಎಲ್ಲರೂ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು ಕೊನೆಗೊಂದು ಇಡೀ ಗುಂಪಿನ ತನ್ನಿ ತೆಗೆದುಕೊಂಡು ಗಾಡಿ ಹತ್ತಿ ಹೃಶಿಕೇಷದತ್ತ ಹೊರಟೆವು.
೩೧ಕ್ಕೆ ದೆಹಲಿಯಿಂದ ಬಾನೋಡದಲ್ಲಿ ಬೆಂಗಳೂರಿಗೆ ಹಿಂದಿರುಗಿ ಬರುವವರಿದ್ದೆವು. ಹೃಶಿಕೇಷದಲ್ಲಿ ಒಂದು ದಿನ ತಂಗಿ ಮರುದಿನ ಕಾರಿನಲ್ಲಿ ದೆಹಲಿಯತ್ತ ಹೊರಟೆವು. ಪ್ರತೀ ಬಾರಿ ಪ್ರವಾಸ ಮುಗಿಯುವಾಗ ಆಗುವ ಸಂಕಟ ಹೇಳತೀರದು. ವಾಪಾಸ್ ಹೋದ ಮೇಲೆ ಮತ್ತೆ ಅದೇ ಟ್ರಾಫಿಕ್ಕು, ಅದೇ ಆಫೀಸು, ಅದೇ ತಲೆನೋವು ಎಲ್ಲ ನೆನಪಾಗಿ ಹಿಂದಿರುಗಿ ಬರಲು ಮನಸ್ಸಾಗುವುದೇ ಇಲ್ಲ! ಆದರೆ ಇದೇ ಮೊದಲ ಬಾರಿಗೆ ಪ್ರವಾಸ ಮುಗಿದ ಬೇಸರದ ಭಾವವಿರಲಿಲ್ಲ! ಮರಳಿ ಬೆಂಗಳೂರಿಗೆ ಬರಲು ಮನಸ್ಸು ತುಡಿಯುತ್ತಿತ್ತು. ಕಾರಣ ಒಂದೇ, ಬಂದ ತಕ್ಷಣ ನೋಡಬೇಕೆಂದು ಉತ್ತರ ಪ್ರದೇಶದಲ್ಲಿದ್ದಾಗಲೇ ಬುಕ್ ಮೈ ಶೋನಲ್ಲಿ ಬುಕ್ ಮಾಡಿದ ನಾನು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಸಿನೆಮಾ 'ಕಿರಿಕ್ ಪಾರ್ಟಿ'! :) ಪ್ರವಾಸದ ಗುಂಗಿಂದ ಸುಲಭವಾಗಿ ಹೊರಬರುವಂತೆ ಮಾಡಿದ ಕಿರಿಕ್ ಪಾರ್ಟಿಗೆ ನಾನು ಋಣಿ.
ನನ್ನ ಪ್ರಕಾರ ಪ್ರತಿಯೊಬ್ಬರು ಒಮ್ಮೆಯಾದರೂ ಹಿಮಾಲಯ ಚಾರಣಕ್ಕೆ ಹೋಗಲೇಬೇಕು! ಅದು, ಜೀವನದಲ್ಲಿ ನಾವು 'ಟೇಕನ್ ಫಾರ್ ಗ್ರಾಂಟೆಡ್' ನಿಲುವು ತೋರಿಸುವ ಹಲವಾರು ವಿಷಯಗಳನ್ನು ಮನವರಿಕೆ ಮಾಡಿಕೊಡುತ್ತೆ. ಅಲ್ಲಿ ಚಳಿಗೆ ೪-೫ ಲೇಯರ್ ಬಟ್ಟೆ ಹಾಕಿಕೊಂಡೇ ದಿನ ಕಳೆಯುವಾಗ, ಇಲ್ಲಿ ಅಂಗಿ - ಚಡ್ಡಿ ಹಾಕಿಕೊಂಡು ಅಡ್ಡಾಡುವುದೂ ಒಂದು ಭಾಗ್ಯ ಎಂಬ ಅರಿವು! ಸ್ಲೀಪಿಂಗ್ ಬ್ಯಾಗಿನಲ್ಲಿ ಹೊಡಕಲು ಆಗದೆ ಮುದುರಿಕೊಂಡು ಮಲಗುವಾಗ, ಮೆತ್ತನೆ ಹಾಸಿಗೆಯ ಮೇಲೆ ಕಾಲು ಚಾಚಿ ಮಲಗುವುದೂ ಒಂದು ಭಾಗ್ಯ ಎಂಬ ಅರಿವು! ಆ ಚಳಿಗೆ ಸ್ನಾನ ಮಾಡಲು ಆಗದಿದ್ದಾಗ, ಬಿಸಿ ನೀರಲ್ಲಿ ಪ್ರತಿ ನಿತ್ಯ ಸ್ನಾನ ಮಾಡುವುದೂ ಒಂದು ಭಾಗ್ಯ ಎಂಬ ಅರಿವು! ಮೊಬೈಲ್ ನೆಟ್ವರ್ಕ್ ಇಲ್ಲದ ಜಾಗದಲ್ಲಿದ್ದದ್ದರಿಂದ, ನಮಗೆ ಬೇಕಾದವರ ಬಳಿ ಬೇಕಾದಾಗ ಕರೆ ಮಾಡಿ ಮಾತನಾಡುವುದೂ ಒಂದು ಭಾಗ್ಯ ಎಂಬ ಅರಿವು! ನಾವಿಲ್ಲಿ ಗಣನೆಗೆ ತೆಗೆದುಕೊಳ್ಳದ ಹಲವಾರು ಚಿಕ್ಕ ಚಿಕ್ಕ ಸಂಗತಿಗಳೂ ಅಲ್ಲಿ ಭಾಗ್ಯಗಳಂತೆ ಗೋಚರಿಸುತ್ತಿದ್ದವು!
ನೀವು ಚೋಪ್ತಾ - ಚಂದ್ರಶಿಲಾ ಚಾರಣಕ್ಕೆ ಹೋಗುವುದಾದರೆ ದಯವಿಟ್ಟು ಅವರು ಸೂಚಿಸಿದಂತೆ ವ್ಯಾಯಾಮ ಮಾಡಿ ದೇಹವನ್ನು ಪಳಗಿಸಿಕೊಂಡು ಹೋಗಿ. ಇಲ್ಲವಾದಲ್ಲಿ ಸುಂದರ ನೋಟವನ್ನು ಅನುಭವಿಸುವ ಬದಲು ನರಳಿ, ಹೆಣಗಾಡಿ ಬೆಟ್ಟವೇರುವ ಸ್ಥಿತಿ ಎದುರಾಗಬಹುದು!
https://www.trekthehimalayas.com/fitness-for-trekking/exercise-charts/easy/
ಚಾರಣಕ್ಕೆ ಯಾವ ಯಾವ ಸಾಮಗ್ರಿಗಳು ಬೇಕೆಂಬ ಪಟ್ಟಿಯನ್ನು ಇಲ್ಲಿ ಕೊಟ್ಟಿದ್ದಾರೆ. ಅದು ಬೇಡ ಇದು ಬೇಡ ಎಂದು ಅಸಡ್ಡೆ ಮಾಡದೆ ಸೂಚಿಸಿದ ಎಲ್ಲವನ್ನೂ ತೆಗೆದುಕೊಂಡು ಹೋಗಿ.
https://www.trekthehimalayas.com/tth-treks/Chopta-Chandrashila-Deoria-Tal-Trek/#essential
ಚೋಪ್ತಾ - ಚಂದ್ರಶಿಲಾ ೫ ದಿನದ ಚಾರಣವಾಗಿದ್ದು; ಹೋಗುವುದಾದರೆ, ನೀವು ದೆಹಲಿ ತಲುಪಿ ಅಲ್ಲಿಂದ ಬಸ್ ಅಥವಾ ಮಸ್ಸೂರಿ ಎಕ್ಸ್ಪ್ರೆಸ್ ಅಲ್ಲಿ ಹರಿದ್ವಾರ/ಹೃಶಿಕೇಷವನ್ನು ತಲುಪಬೇಕು. ಅಲ್ಲಿಂದ ಟಿ.ಟಿ.ಎಚ್ ಅವರ ಗಾಡಿಯಲ್ಲಿ ಸಾರಿ ಬೇಸ್ ಕ್ಯಾಂಪನ್ನು ತಲುಪಬಹುದು. ವಾಪಾಸ್ ಬರುವಾಗಲೂ ಹರಿದ್ವಾರ/ಹೃಶಿಕೇಷದವರೆಗೆ ಅವರು ನಿಮ್ಮನ್ನು ತಲುಪಿಸುತ್ತಾರೆ.
ಹೆಚ್ಚಿನ ದಿನಗಳಿದ್ದರೆ ನೀವು, ಹೃಶಿಕೇಷದಲ್ಲಿ ಬಂಜಿ ಜಂಪ್, ರಿವರ್ ರಾಫ್ಟಿಂಗ್, ಝಿಪ್ ಲೈನಿಂಗ್ ಕೂಡಾ ಮಾಡಬಹುದು. ಇದರ ಬಗ್ಗೆ ಮುಂದಿನ ಬಾರಿ ಬರೆಯುವೆ. ೨೫ ರಿಂದ ೩೦ ಸಾವಿರದಲ್ಲಿ ಜೀವನುದ್ದಕ್ಕೂ ನೆನೆಯುವಂತಹ ಪ್ರವಾಸ ಮಾಡಲಿಚ್ಚಿಸಿದರೆ, ಈ ಪ್ರವಾಸ ಹೇಳಿ ಮಾಡಿಸಿದ್ದು!
ಹಿಮಾಲಯ, ಮನುಷ್ಯ ಜೀವನವನ್ನು ನೋಡುವ ರೀತಿಯನ್ನು ಬದಲಾಯಿಸುವುದರಲ್ಲಿ ಅನುಮಾನವಿಲ್ಲ! ಒಮ್ಮೆ ಹೋಗಿ ಬನ್ನಿ! ಅನುಭವವ ಪಡೆದು ಬನ್ನಿ! ಹೋದದ್ದೇ ಆದರೆ, ಆ ದೈತ್ಯ ಬೆಟ್ಟಗಳಿಗೆ ನನ್ನ ಅನಂತಾನಂತ ನಮಸ್ಕಾರಗಳನ್ನು ತಿಳಿಸಿ ಬನ್ನಿ!
೨೦೧೬ ಅಕ್ಟೋಬರ್ ವೇಳೆಯಲ್ಲಿ ಗೆಳೆಯರು, ಡಿಸೆಂಬರ್ ಕೊನೆಯಲ್ಲಿ ಹಿಮಾಲಯಕ್ಕೆ ಚಾರಣಕ್ಕೆ ಹೋಗೋಣ ಎಂದಾಗ ಮರುಯೋಚನೆ ಮಾಡದೆ ಖಡಾಖಂಡಿತವಾಗಿ ಇಲ್ಲವೆಂದಿದ್ದೆ. ರಜೆ ಕೇಳಿದರೆ ಕಿಡ್ನಿ ಕೇಳಿದ ಹಾಗೆ ಮುಖ ಮಾಡುವ ಮ್ಯಾನೇಜರ್; ಬ್ಯಾಂಕ್ ಖಾತೆಯಲ್ಲಿದ್ದ ಅತ್ಯಲ್ಪ ಮೊತ್ತ, ಇವುಗಳು ನೆನಪಿಗೆ ಬಂದದ್ದೇ ಆ ನಿರಾಕರಣೆಗೆ ಮುಖ್ಯ ಕಾರಣವಾಗಿತ್ತು!
ನನ್ನ ಮಾತಿಗೆ ತಲೆಕೆಡಿಸಿಕೊಳ್ಳದೆ, ನನ್ನನ್ನೂ ಲೆಕ್ಕಕ್ಕೆ ಹಿಡಿದು; ಗೆಳೆಯರು ಅವರ ಪಾಡಿಗೆ ಯೋಜನೆ ಮಾಡಲು ಶುರು ಮಾಡಿದರು. ಟ್ರೆಕ್ ದ ಹಿಮಾಲಯಾಸ್ (ಟಿ.ಟಿ.ಎಚ್) ಸಂಸ್ಥೆಯ ಜೊತೆ "ಚೋಪ್ತಾ-ಚಂದ್ರಶಿಲಾ" ಬೆಟ್ಟ (೧೩,೧೦೦ ಅಡಿ ಎತ್ತರ)ವ ಚಾರಣ ಮಾಡೋಣ ಎಂದರು. ಹೇಗೂ ಹೋಗುವುದಿಲ್ಲ ಎಂದು ನಿರ್ಧರಿಸಿದ್ದರಿಂದ ನಾನೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಮ್ಯಾಂಡೇಟರಿ ಅನ್ನೋ ಹಾಗೆ ವಾಟ್ಸಾಪ್ನಲ್ಲಿ ಗುಂಪು ಕೂಡಾ ರಚನೆ ಆಯ್ತು! ಅಲ್ಲಿ ಯಾವ ದಿನ ಹೋಗುವುದು, ಯಾವ ಬ್ಯಾಚಲ್ಲಿ ಜಾಗವಿದೆ, ಯಾವಾಗ ಹೋದರೆ ಬಾನೋಡದಲ್ಲಿ ಕಡಿಮೆ ವೆಚ್ಚದಲ್ಲಿ ಹೋಗಬಹುದು ಇತ್ಯಾದಿ ವಿವರಗಳನ್ನು ಚರ್ಚಿಸಿ, ಬುಕ್ ಮಾಡಿಯೇ ಬಿಟ್ಟರು! ದಿನಾಂಕ ತಿಳಿಸಿ ನನಗೆ ರಜೆ ಹಾಕಲು ಸೂಚಿಸಿದರು. ನಾನು ರಜೆ ಕೇಳಲೇ ಬೇಕಾಯ್ತು! ಲಂಡನಲ್ಲಿದ್ದ ಮ್ಯಾನೇಜರ್ಗೆ ಮಿಂಚೆಯಲ್ಲಿ ರಜೆಗಾಗಿ ಕೋರಿದೆ, ೪ನೇ ಈಯತ್ತಿನಲ್ಲಿದ್ದಾಗ ಕ್ಲಾಸ್ ಟೀಚರ್ಗೆ ರಜೆ ಅರ್ಜಿ ಕೊಡುತ್ತಿದ್ದ ಹಾಗೆ! ಗೆಳೆಯರು ಚಂದ್ರಶಿಲಾ ಶಿಖರದ ಚಿತ್ರಗಳನ್ನು ಕಳುಹಿಸ್ತಾ ಇದ್ದರು. ಚಿತ್ರಗಳನ್ನು ನೋಡಿದರೆ ಅಲ್ಲಿ ಹೋದ ಮೇಲೆ ಸರ್ಪ್ರೈಸ್ ಇರುವುದಿಲ್ಲ ಎಂದು ನೋಡುವುದರಿಂದ ಹಿಂದೆ ಸರಿದಿದ್ದೆ. ಅತ್ತ ಟಿ.ಟಿ.ಎಚ್ ಅವರು ಚಾರಣಕ್ಕೆ ಯಾವ ರೀತಿ ಸಿದ್ಧತೆ ನಡೆಸಬೇಕು, ಏನೇನನ್ನು ತರಬೇಕು ಎಂಬಿತ್ಯಾದಿ ಮಾಹಿತಿ ಇರುವ ಮಿಂಚೆಯನ್ನು ಒಂದರ ಹಿಂದೆ ಒಂದನ್ನು ಕಳುಹಿಸುತ್ತಿದ್ದರು. ಇತ್ತ ಪುಣ್ಯಾತ್ಮ ನಮ್ಮ ಮ್ಯಾನೇಜರ್ ರಜೆಗೆ ಒಪ್ಪಿಗೆ ಸೂಚಿಸಿದ . ಅಲ್ಲಿಗೆ ನಾನು ಚಾರಣಕ್ಕೆ ಹೋಗುವುದು ಖಾತ್ರಿಯಾಗಿತ್ತು. ಹಣದ ಸಮಸ್ಯೆಗೆ ಗೆಳೆಯರು ಅಭಯಹಸ್ತ ಸೂಚಿಸಿದ್ದರು!
ಚಾರಣಕ್ಕೆ ಬೇಕಾಗುವ ಸಾಮಗ್ರಿಗಳನ್ನ ಹಿಂದಿನ ಬಾರಿ ಚಾರಣಕ್ಕೆ ಹೋದ ಗೆಳೆಯರಿಂದ, ಡೆಕತ್ಲಾನಿಂದ ತಂದು, ಹೇಗೆ ಪ್ಯಾಕ್ ಮಾಡಬೇಕು ಎಂಬ ವೀಡಿಯೋ ನೋಡಿ, ಎಲ್ಲಾ ಸಾಮಗ್ರಿ, ಬಟ್ಟೆ ಬರೆಗಳನ್ನ ಚೀಲಕ್ಕೆ ತುರುಕಿಸಿದ್ದು ಆಯ್ತು. ೨೨ನೇ ತಾರೀಕು ಬಾನೋಡದಲ್ಲಿ ಹೊರಡುವವರಿದ್ದೆವು.
![]() |
| ನಾನು, ಸಂಕೇತ್, ಪರೀಕ್ಷಿತ್ ಮತ್ತು ಸುಖೇಶ್ |
ನಾನು, ಗೆಳೆಯರಾದ ಸುಖೇಶ್, ಸಂಕೇತ್ ಮತ್ತು ಪರೀಕ್ಷಿತ್ ಬಾನೋಡದಲ್ಲಿ ಕೂತು ದೆಹಲಿ ತಲುಪಿ, ಮರುದಿನ ಹೃಶಿಕೇಷಕ್ಕೆ ತಲುಪಿದೆವು. ಅಲ್ಲಿ ಒಂದು ದಿನ ಯೂತ್ ಹಾಸ್ಟೇಲ್ನಲ್ಲಿ ತಂಗಿ, ಹೃಶಿಕೇಷ ಸುತ್ತಿ, ೨೫ನೇ ತಾರೀಕು ಬೆಳಿಗ್ಗೆ ಟಿ.ಟಿ.ಎಚ್ ಅವರ ಗಾಡಿಯಲ್ಲಿ ಉಳಿದ ೧೪ ಚಾರಣಿಗರ ಪರಿಚಯ ಮಾಡಿಕೊಂಡು ಸಂಜೆ ೭ರ ಸುಮಾರಿಗೆ ಚಾರಣದ ಬೇಸ್ ಕ್ಯಾಂಪ್ 'ಸಾರಿ' ಯನ್ನು ತಲುಪಿದೆವು. ಮಧ್ಯಾಹ್ನ ಊಟಕ್ಕೆ ನಿಲ್ಲಿಸಿದಾಗ ಮಳೆರಾಯ ಸಿಕ್ಕಿದ್ದರಿಂದ, ಚಂದ್ರಶಿಲಾದಲ್ಲಿ ಹಿಮ ಬಿದ್ದರಬಹುದೆಂದು ಊಹಿಸಿದರು. ಗೂಗಲ್ನಲ್ಲಿ ಇನ್ನು ಒಂದು ವಾರ ಹಿಮ ಬೀಳದು ಎಂದು ಓದಿದ ನಾವು ಎಲ್ಲಿಲ್ಲದ ಖುಷಿಯಲ್ಲಿ ಕುಣಿದಾಡುತ್ತಿದ್ದಾಗ ನೆನಪಾದದ್ದು ಗಾಡಿ ಮೇಲಿದ್ದ ಮಳೆಯಲ್ಲಿ ನೆನೆಯುತ್ತಿದ್ದ ನಮ್ಮ ಬ್ಯಾಗುಗಳು! ಓಡಿ ಹೋಗಿ ಬ್ಯಾಗುಗಳನ್ನು ಗಾಡಿ ಒಳಗೆ ಇಟ್ಟೆವು. ದಾರಿಯಲ್ಲಿ ಸಿಕ್ಕ ಒಂದೆರಡು ಸುಂದರ ತಾಣಗಳಲ್ಲಿ ನಿಲ್ಲಿಸಿ ತನ್ನಿ (ಸೆಲ್ಫಿ) ತೆಗೆದುಕೊಂಡೆವು.
![]() |
| ರುದ್ರಪ್ರಯಾಗ |
ಸಾರಿ ಗೆ ತಲುಪಿದಾಗ ಚಳಿ ವಿಪರೀತವಾಗಿತ್ತು. ಊಟ ಮಾಡುವಾಗ ಚಳಿಗೆ ಚಪಾತಿ ಕತ್ತರಿಸಲಾಗದಷ್ಟು ಕೈ ಮಂಜುಗಟ್ಟಿತ್ತು! ಬೇಸ್ ಕ್ಯಾಂಪ್ ಅಲ್ಲೇ ಹೀಗಿದ್ದರೆ ಬೆಟ್ಟದ ತುದಿಯಲ್ಲಿ ಚಳಿ ಹೇಗಿರಬಹುದು ಎಂಬ ಯೋಚನೆಯೇ ಚಳಿಯನ್ನು ಇಮ್ಮಡಿಗೊಳಿಸಿತು. ಊಟ ರುಚಿ ರುಚಿಯಾಗಿದ್ದರಿಂದ ಬ್ಯಾಟಿಂಗ್ ಭರ್ಜರಿಯಾಗೇ ನಡೆಯಿತು. ಊಟ ಮುಗಿಯುತ್ತಿದ್ದ ಹಾಗೆಯೆ ಚಾರಣದ ಲೀಡ್ ರವಿ ಮತ್ತು ಆಪರೇಶನಲ್ ಹೆಡ್ ಗೋಪಾಲ್ ಒಟ್ಟು ಚಾರಣದ ಬಗ್ಗೆ, ಮರುದಿನ ನಾವು ಎಷ್ಟು ಕಿ.ಮೀ ನಡೆಯಬೇಕೆಂಬ ವಿವರಗಳನ್ನ ನೀಡಲಾರಂಭಿಸಿದರು. ಆ ವಾತಾವರಣಕ್ಕೆ ಮೈ ಹೊಂದಿಕೊಳ್ಳಲಿ ಎಂದು ನಾನು ಜಾಕೇಟ್ ಹಾಕಿಕೊಳ್ಳದೆ ಬರೀ ಒಂದು ಸ್ವೆಟರ್ ಧರಿಸಿದ್ದೆ. ಅದನ್ನು ನೋಡಿ ಗೋಪಾಲ್, "ಜಾಕೇಟ್ ಎಲ್ಲಿ?" ಎಂದು ಕೇಳಿದ. "ಜಾಕೇಟ್ ರೂಮಲ್ಲಿದೆ.. ಹೀಗೆ ಆರಾಮಾಗಿದೆ!" ಎಂದೆ. ಈ ಸನ್ನಿವೇಶ ನನಗೆ 'ಜಾಕೇಟ್ ಮ್ಯಾನ್' ಎಂಬ ಹೊಸ ಬಿರುದು ತಂದು ಕೊಟ್ಟಿತು! ಬೆಳಿಗ್ಗೆ ೭ಕ್ಕೆ ಚಹಾ, ೮ಕ್ಕೆ ತಿಂಡಿ ಹಾಗೂ ೯ಕ್ಕೆ ಹೊರಡುವುದು ಎಂದು ಹೇಳಿದರು. ಚಳಿಯ ನಡುಕದಿಂದ ಹೊರಬರಲು ಕ್ಯಾಂಪ್ ಫೈರ್ ಮುಂದೆ ಕೂತು ಚಳಿ ಕಾಯಿಸಿ, ಚಹಾ ಹೀರಿ ಕೋಣೆಗೆ ಹೋಗಿ ದಪ್ಪನೆಯ ರಗ್ಗಿನ ಕೆಳಗೆ ಬೆಚ್ಚನೆ ಮಲಗಿದೆವು. ಮುಂದಿನ ೩-೪ ದಿನ ಟೆಂಟಲ್ಲಿ ಮಲಗಬೇಕೆಂಬ ಯೋಚನೆಯೇ ಹಾಸಿಗೆಯನ್ನು ಇನ್ನೂ ಮೆತ್ತಗೆ ಮಾಡಿದವು.
![]() |
| ಸಾರಿ |
ಮೊದಲನೇ ದಿನ ನಾವು ಬೇಸ್ ಕ್ಯಾಂಪ್ನಿಂದ ೩ ಕಿ.ಮೀ ಚಾರಣ ಮಾಡಿ ದೇವರಿಯಾತಾಲ್ ಕ್ಯಾಂಪನ್ನು ತಲುಪಬೇಕಿತ್ತು. ಬೆಳಿಗ್ಗೆ ಗೆಳೆಯ ಪರೀಕ್ಷಿತ್ ನಮ್ಮನ್ನು ಎಬ್ಬಿಸಿದ. ಮುಖ ತೊಳೆಯಲು ನೀರಿಗೆ ಕೈ ಇಟ್ಟರೆ ತಂಪೆಟ್ಟಿಗೆಯಿಂದ ಹೊರ ತೆಗೆದ ನೀರನ್ನು ಮುಟ್ಟಿದಂತಾದಾಗ "ಮುಂದಿನ ನಾಲ್ಕು ದಿನ ಕಷ್ಟ ಇದೆ ಗುರು" ಎಂದು ಮನಸ್ಸು ಪಿಸುಗುಟ್ಟಿತು. ತಿಂಡಿ ತಿನ್ನಲು ಹೋದರೆ ಅಲ್ಲಿ ಬ್ರೆಡ್ ಜಾಮ್ ಮತ್ತು ಬ್ರೆಡ್ ಆಮ್ಲೇಟ್ ಇಟ್ಟಿದ್ರು. ದೋಸೆ, ಇಡ್ಲಿ, ಬೇಳೆ ಬಾತ್ ತಿಂದು ಬೆಳೆದ ಜೀವ "ಅಯ್ಯೋ ಶಿವನೆ! ಈ ಒಣಕಲು ಬ್ರೆಡ್ಡಿಗೆ ಜಾಮ್ ಸವರಿ ತಿಂದು ನಾನು ಬೆಟ್ಟ ಹತ್ತೋದ್ ಹೌದಾ?" ಎಂದು ಪ್ರಶ್ನಿಸಿತು. ಬೇರೆ ಆಯ್ಕೆ ಇರಲಿಲ್ಲ. ದೋಸೆ ಜೊತೆ ಚಟ್ನಿ ತಿಂದ ಹಾಗೆ ಬ್ರೆಡ್ ಜೊತೆ ಜಾಮ್ ಹಾಕಿಕೊಂಡು ತಿಂದು ದಾರಿಯಲ್ಲಿ ಹಸಿವಾದರೆ ಎಂದು ಟಿ.ಟಿ.ಎಚ್ ಅವರು ಕೊಟ್ಟ ಬಿಸ್ಕತ್ತು, ಚಾಕಲೇಟುಗಳನ್ನು ಚೀಲದಲ್ಲಿ ತುಂಬಿ ಚಾರಣ ಶುರು ಮಾಡುವ ಜಾಗಕ್ಕೆ ಬಂದೆವು. "ಹೊರಡುವ ಮೊದಲು ಒಂದು ಚಿತ್ರ ಬೇಕಲ್ವ" ಎಂದು ಯಾರೋ ಹೇಳಿದ್ದರಿಂದ ಅಲ್ಲಿ ನಿಂತು ಸಶಸ್ತ್ರ ಸಮೇತರಾಗಿದ್ದ ಇಡೀ ಗುಂಪಿನ ಚಿತ್ರ ತೆಗೆದೆವು.
ಆಶ್ಚರ್ಯಕರ ಸಂಗತಿಯೆಂದರೆ ಚಾರಣದ ಗುಂಪಿನ ೧೮ ಜನರಲ್ಲಿ ೧೦ ಜನ ಬೆಂಗಳೂರಿನವರೇ! ಉಳಿದ ೮ ಜನರಲ್ಲಿ ೪ ಜನ ಮುಂಬಯಿ ಹಾಗೂ ಇನ್ನು ೪ ಜನ ದೆಹಲಿಯವರು. ನಮ್ಮ ನಾಲ್ವರ ಗುಂಪಿಗೆ 'ಬೆಂಗಳೂರು ಬಾಯ್ಸ್' ಎಂಬ ನಾಮಕರಣವಾಯಿತು!
ಚಳಿ ಇರುತ್ತೆ ಅಂತ ಸ್ವೆಟರು, ಜಾಕೆಟು ಹಾಕ್ಕೊಂಡಿದ್ವಿ, ಆದ್ರೆ, ಸಿಕ್ಕಾಪಟ್ಟೆ ಬಿಸಿಲು ಬಂದು ಬೆವ್ರು ಜಲಪಾತದ ತರಹ ಇಳಿಯೋಕೆ ಶುರು ಆಯ್ತು. ಹೋಗೋ ದಾರಿ ಬೇರೆ ಸಿಕ್ಕಾಪಟ್ಟೆ ಏರುಮಟ್ಟದಲ್ಲಿತ್ತು. ಇನ್ನು ಈ ಜಾಕೇಟ್, ಥರ್ಮಲ್ಸ್ ಹಾಕಿಕೊಂಡರೆ ಬೆವರಲ್ಲಿ ತೋಯ್ದು ಹೋಗುವುದು ನಿಶ್ಚಿತ ಎಂದು ಅವುಗಳನ್ನು ತೆಗೆದು ಚೀಲದಲ್ಲಿ ತುರುಕಿ ನಡಿಯೋಕೆ ಶುರು ಮಾಡಿದ್ವಿ. ಚೀಲದಲ್ಲಿ ಕಿವಿಯುಲಿ ಇದ್ದಿದ್ದು ನೆನಪಾಗಿ ಕಿರಿಕ್ ಪಾರ್ಟಿದು, ಎಸ್.ಪಿ.ಬಿ ಸರ್ ದು ಹಾಡುಗಳನ್ನು ಕೇಳ್ತಾ ಬೆಟ್ಟ ಹತ್ತತಾ ಇದ್ವಿ. ಚಾರಣದ ಗೈಡ್ ಯುಗಲ್ ನಮ್ಮೊಡನೆ ಬರುತ್ತಿದ್ದ. ದಾರೀಲಿ ಒಂದೆರ್ಡು ಒಳ್ಳೆಯ ವ್ಯೂ ಪಾಯಿಂಟ್ಗಳು ಇದ್ವು. ಬರೀ ೩ ಕಿ.ಮೀ ಚಾರಣ ಇದ್ದಿದ್ದರಿಂದ ಊಟದ ಸಮಯಕ್ಕೆ ನಾವು ದೇವರಿಯಾತಲ್ ಕ್ಯಾಂಪನ್ನು ತಲುಪಿದೆವು. ಮಹಾಭಾರತದ 'ಯಕ್ಷ ಪ್ರಶ್ನೆ' ನಡೆದದ್ದು ಇದೇ ದೇವರಿಯಾತಾಲ್ ಕೆರೆಯ ಬಳಿ ಅಂತೆ! ಕೇಳಿ ಬೆರಗುಗೊಂಡೆವು. ಟೆಂಟ್ಗಳನ್ನ ಇನ್ನೂ ಹಾಕಿರದಿದ್ದರಿಂದ ಚೀಲಗಳನ್ನು ಪಕ್ಕದಲ್ಲಿಟ್ಟು ವಾಚ್ ಟವರ್, ಕೆರೆಯಲ್ಲಿ ಕಾಣುತ್ತಿದ್ದ ದೈತ್ಯ 'ಚೌಕಂಬ' ಪರ್ವತದ ಬಿಂಬ, ಎಲ್ಲಿಡೆ ಹರಡಿದ ಹಿಮವನ್ನು ನೋಡುತ್ತ ಕೂತು ಬಿಟ್ಟೆವು.
| ದೈತ್ಯ ಚೌಕಂಬ |
![]() |
| ದೈತ್ಯ ಚೌಕಂಬದ ಬಿಂಬ |
ಬಿಸಿ ಬಿಸಿ ಅನ್ನ, ಬೇಳೆ ಸಾರು, ನೆಂಚಿಕೊಳ್ಳಲು ಉಪ್ಪಿನಕಾಯಿ ಕಣ್ಣ ಮುಂದೆ ಬೃಹತ್ ಬೆಟ್ಟಗಳ ಸಾಲು! ಆಹಾ! ಎಂತಹ ರಮಣೀಯ ನೋಟ! ಆ ಅಂದ ಊಟದ ರುಚಿಯನ್ನು ಹೆಚ್ಚಿಸಿತ್ತು. ಊಟ ಮುಗಿಯುತ್ತಿದ್ದಂತೆ ಟಿ.ಟಿ.ಎಚ್ ಅವರು ಟೆಂಟ್ ಹಾಕಲು ಶುರು ಮಾಡಿದರು. ಟೆಂಟ್ ಹಾಕಲು ಕಲಿತಂತಾಗುತ್ತದೆ ಎಂದು ನಾವೂ ಕೈ ಜೋಡಿಸಿ ಒಂದಿಷ್ಟು ಟೆಂಟ್ ಹಾಕಿದೆವು. ಸಂಜೆ ಅತ್ತಿತ್ತ ಅಲೆಯುತ್ತಿದ್ದಾಗ ಆಪರೇಶನಲ್ ಹೆಡ್ ಗೋಪಾಲ್ ಸಿಕ್ಕ. ಹಾಗೇ ಮಾತಾಡುತ್ತ ಪ್ರಪಂಚ ಎಷ್ಟು ಚಿಕ್ಕದು ಎಂಬುದು ಮತ್ತೊಮ್ಮೆ ಅರಿವಾಯಿತು! ಅವನಿಗೂ ನನಗೂ ಹಲವಾರು ಪರಸ್ಪರ ಗೆಳೆಯರಿದ್ದರು. ಅವನು ಮತ್ತು ನನ್ನ ಹಲವಾರು ಗೆಳೆಯರು ಮನಾಲಿಯಲ್ಲಿ 'ಬೇಸಿಕ್ ಮೌಂಟೇನಿರಿಂಗ್ ಕೋರ್ಸ್' ಅನ್ನು ಜೊತೆಗೆ ಮುಗಿಸಿದ್ದರು. ಅಷ್ಟು ತಿಳಿಯುತ್ತಿದ್ದಂತೆ ನನ್ನನ್ನು 'ಮಚ್ಚಾ' ಎಂದು ಕರೆಯಲಾರಂಭಿಸಿದ! ಸಂಜೆ ಬಿಸಿ ಬಿಸಿ ಸೂಪ್ ಕುಡಿದು, ರಾತಿ ಊಟ ಮಾಡಿ ಡಿನ್ನರ್ ಟೆಂಟ್ ಇಂದ ಹೊರಬಂದು ಆಗಸ ನೋಡಿ ದಂಗಾದೆ! ಬೆಂಗಳೂರಿನಲ್ಲಿ ಕಣ್ಮರೆಯಾಗಿದ್ದ ಎಲ್ಲಾ ಚುಕ್ಕಿ ತಾರೆಗಳು ಅಲ್ಲಿ ಪ್ರತ್ಯಕ್ಷವಾಗಿದ್ದವು. ನಾವು ಆಡುತ್ತಿದ್ದ ಮಾತುಗಳನ್ನು ಆ ತಾರೆಗಳು ಪಿಳಿ ಪಿಳಿ ನೋಡುತ್ತ ಕೇಳಿಸಿಕೊಳ್ಳುತ್ತಿವೆ ಎಂಬಂತೆ ಭಾಸವಾಯಿತು. ಆ ತಾರೆ ತುಂಬಿದ ಆಗಸದ ಕೆಳಗೆ ಮಾತು ಮುಗಿಸಿ ಮಲಗಲು ಹೋದೆವು. ಮಲಗಲು ಸ್ಲೀಪಿಂಗ್ ಬ್ಯಾಗ್ ಕೊಟ್ಟಿದ್ದರು. ಅದನ್ನು ನೋಡಿದ್ದೇ ಮೊದಲ ಬಾರಿ! ಅದನ್ನು ಬಳಸುವುದು ಹೇಗೆ ಅಂತೆಲ್ಲ ಅರಿತು ಅದನ್ನು ಕೆಳಗೆ ಹಾಕಿಕೊಂಡು ಮಲಗಿದ್ದಾಯ್ತು. ಚಳಿಗೆ ಅದೆಷ್ಟು ಬಾರಿ ಎಚ್ಚರವಾಯಿತೋ! ಅದೆಷ್ಟು ಬಾರಿ ತಾರೆಗಳೊಡನೆ ಮಾತಾಡುತ್ತ ನಿಂತೆನೋ! ಆ ದೇವರೆ ಬಲ್ಲ.
![]() |
| ದೇವರಿಯಾತಾಲ್ ಕ್ಯಾಂಪ್ |
ಅಲ್ಲಿ ಶೌಚಾಲಯವೋ, ಗುಂಡಿ ತೋಡಿ ಟೆಂಟ್ ಹಾಕಿದಂತಹ ಶೌಚಾಲಯ! ಅದನ್ನು ಬಳಸುವುದು ಹೇಗೆಂದು ಕೇಳಿಕೊಂಡು ಜೀವನದಲ್ಲಿ ಮೊದಲ್ನೇ ಬಾರಿ ಟಿಶ್ಯು ಪೇಪರ್ ಬಳಸಿ ಕೆಲಸ ಮುಗಿಸಿ ಬಂದದ್ದಾಯ್ತು! ಫ್ರೆಶ್ ಆಗಿ ಮತ್ತೆ ಒಣಕಲು ಬ್ರೆಡ್ ತಿನ್ನಬೇಕಲ್ಲ ಎಂಬ ಬೇಜಾರಿನಲ್ಲಿ ಡಿನರ್ ಟೆಂಟ್ಗೆ ಹೋದರೆ ಬಿಸಿ ಬಿಸಿ ಮ್ಯಾಗಿ ಮತ್ತು ಪಾಸ್ತಾ ಇತ್ತು. ತಿಂದು ತಯಾರಾಗಿ ಹೊರಟೆವು. ಟಿ.ಟಿ.ಎಚ್ ಅವರು ನಮಗೆ ಎರಡು ಆಯ್ಕೆ ಕೊಟ್ಟಿದ್ದರು. ಎರಡನೇ ದಿನ ಒಂದೇ ಸಾರಿ ಬೇಸ್ ಕ್ಯಾಂಪ್ ತನಕ ಮರಳಿ ಹೋಗಿ ಅಲ್ಲಿಂದ ಗಾಡಿಯಲ್ಲಿ 'ಚೋಪ್ತಾ' ಕ್ಯಾಂಪ್ ತನಕ ತಲುಪುವುದು. ಇಲ್ಲವೇ ದೇವರಿಯಾತಾಲ್ ಇಂದ ಚೋಪ್ತಾ ವರೆಗೆ ೧೬ ಕಿ.ಮೀ ಚಾರಣ ಮಾಡುವುದು. ಚಾರಣಕ್ಕಾಗಿ ಬಂದಿದ್ದೇವೆ ಆದ್ದರಿಂದ ಚಾರಣವೇ ಮಾಡೋಣ ಎಂದು ನಿರ್ಧರಿಸಿ ಅದೇ ಯಾದಿಯಾಗಿ ಹೊರಟಿದ್ದೆವು. ಅದೆಷ್ಟು ಲೀಟರ್ ನೀರು, ಅದೆಷ್ಟು ಗ್ಲೂಕೋಸ್ ಹೋಗಿದೆಯೋ ಲೆಕ್ಕ ಇಟ್ಟವರಿಲ್ಲ! 'ರೋಹಿಣಿ ಭುಗಿಯಾಲ್' ಎಂಬ ಸುಂದರ ಜಾಗದಲ್ಲಿ ಊಟಕ್ಕೆ ನಿಲ್ಲುವ ನಿರ್ಧಾರವಾಗಿತ್ತು. ಹೆಣ ಭಾರದ ಚೀಲವನ್ನು ಹೊತ್ತು ಅಲ್ಲಿ ತನಕ ತಲುಪುವುದರೊಳಗೆ ಅರೆಜೀವವಾಗಿದ್ದೆವು. ಊಟ ಮಾಡಿ ಸ್ವಲ್ಪ ಹೊತ್ತು ಒರಗಿ ಮತ್ತೆ ಆ ಭಾರದ ಚೀಲವನ್ನು ಹೆಗಲಿಗೇರಿಸಿ ಹೊರಟೆವು.
![]() |
| ಟ್ರೆಕ್ ಲೀಡ್ ರವಿಯ ಜೊತೆ ಬೆಂಗಳೂರು ಬಾಯ್ಸ್ |
ದಾರಿಯಲ್ಲಿ ಹಿಮ ಬಿದ್ದ ಕಾರಣಕ್ಕೆ ಸುತ್ತಮುತ್ತಲಿನ ಜಾಗಗಳು ಸೊಗಸಾಗಿ ಕಾಣಿಸುತ್ತಿದ್ದವು. ನಡೆದು ನಡೆದು, ಇನ್ನು ಒಂದೇ ಒಂದು ಹೆಜ್ಜೆ ಇಡಲಾಗುವುದಿಲ್ಲ ಎಂಬ ಸ್ಥಿತಿ ತಲುಪಿ ಕೂತು ಬಿಟ್ಟೆ. ಚೋಪ್ತಾ ತಲುಪಲು ಮತ್ತೂ ೩ ಕಿ.ಮೀ ನಡೆಯಬೇಕಿತ್ತು. ಕತ್ತಲಾದರೆ ಪರದಾಡಬೇಕು ಎಂದು ಇದ್ದ ಬದ್ದ ಶಕ್ತಿಯೆಲ್ಲ ಹಾಕಿ ನಡೆಯ ಹತ್ತಿದೆ. ವಿರಾಮ ತೆಗೆದುಕೊಳ್ಳುತ್ತ, ಸುಧಾರಿಸಿಕೊಳ್ಳುತ್ತ ಸೂರ್ಯ ಮುಳುಗುವಷ್ಟರಲ್ಲಿ ಚೋಪ್ತಾ ಕ್ಯಾಂಪ್ ತಲುಪಿದೆವು. ಟೆಂಟ್ ಒಳಗೆ ಚೀಲ ಎಸೆದು ಊಟ ಮಾಡಿ ಮಲಗಿದವರಿಗೆ ನಿದ್ದೆ ಹತ್ತಿದ್ದು, ಬೆಳಗಾದದ್ದು ಗೊತ್ತೇ ಆಗಲಿಲ್ಲ! ನಿದ್ದೆ ದಣಿವನ್ನು ತಕ್ಕ ಮಟ್ಟಿಗೆ ಆರಿಸಿತ್ತು.
![]() |
| ಚೋಪ್ತಾದ ತಾರೆಭರಿತ ಆಗಸವನ್ನು ಸೆರೆ ಹಿಡಿದ ಗೆಳೆಯ ಸುಧೀರ್ |
ಯಥಾಪ್ರಕಾರ ಇಲ್ಲೂ ಪರೀಕ್ಷಿತ್ ನಮ್ಮನ್ನು ಎಬ್ಬಿಸಿದ. ತಯಾರಾಗಿ ತಿಂಡಿ ಅಂತ ಕೊಟ್ಟ ಅವಲಕ್ಕಿ ಒಗ್ಗರಣೆ ಮತ್ತು ಓಟ್ಸನ್ನು ತಿಂದು ಕೊನೆಯ ದಿನದ ಚಾರಣಕ್ಕೆ ಅಣಿಯಾದೆವು. ಚಾರಣದ ಕೊನೆ, ಚಂದ್ರಶಿಲಾ ಬೆಟ್ಟದ ತುದೆಯೆಡೆಗೆ ಹೆಜ್ಜೆ ಇಡಲಾರಂಭಿಸಿದೆವು. ಚೋಪ್ತಾ ಕ್ಯಾಂಪಿನಲ್ಲೇ ಕೊನೆಯ ದಿನವೂ ತಂಗಬೇಕಾಗಿದ್ದರಿಂದ ಚೀಲವನ್ನು ಹೊತ್ತೊಯ್ಯುವ ಬಾಧೆಯಿರಲಿಲ್ಲ. ಅದೇ ನಮಗೆ ದೊಡ್ಡ ಸಮಾಧಾನದ ವಿಷಯವಾಗಿತ್ತು. ಚಂದ್ರಶಿಲಾಕ್ಕೂ ಮೊದಲು ತೃತೀಯ ಕೇದಾರ ಎಂಬ ಖ್ಯಾತಿಯ 'ತುಂಗನಾಥ' ದೇವಸ್ಥಾನ ಸಿಗುವುದೆಂದು ಹೇಳಿದರು. ತುಂಗನಾಥ ದೇವಸ್ಥಾನದವರೆಗೆ ಬರೀ ಮೆಟ್ಟಿಲುಗಳಿದ್ದ ಹಾದಿ.
ನಾನು ಪರೀಕ್ಷಿತ್ ಕಷ್ಟಪಟ್ಟು ಸುಧಾರಿಸಿಕೊಳ್ಳುತ್ತ ಮೆಟ್ಟಿಲೇರುತ್ತಿದ್ದರೆ ಗೆಳೆಯ ಸುಖೇಶ್ ಮನೆಯಲ್ಲಿ ನಡೆದಾಡುವ ಹಾಗೆ ಆರಾಮವಾಗಿ ಹೋಗುತ್ತಿದ್ದ. ಸಂಕೇತ್ ಕೂಡ ಕೊಂಚ ಸಲೀಸಾಗೇ ಬೆಟ್ಟವೇರತೊಡಗಿದ. ತುಂಗನಾಥ ದೇವಸ್ಥಾನ ತಲುಪಿ ಕೈ ಮುಗಿದು, ದಣಿವಾರಿಸಿಕೊಂಡು ಮುಂದೆ ಹೊರಟೆವು.
![]() |
| ತುಂಗನಾಥ ದೇವಸ್ಥಾನ |
ಏನೋ ಸಂತಸ! ಒಲಂಪಿಕ್ಸ್ನಲ್ಲಿ ಪದಕ ಗೆದ್ದೆವೆಂಬಂತ ಉಲ್ಲಾಸ! ಸ್ವಲ್ಪ ಸುಧಾರಿಸಿಕೊಂಡು ಸುತ್ತಲೂ ಕಣ್ಣಾಡಿಸಿದೆ. ಎಂತಹ ನೋಟ! ದೇವರು ಸ್ವಲ್ಪ ಜಾಸ್ತಿ ಸಮಯ ಇಟ್ಟುಕೊಂಡು ಸೃಷ್ಟಿಸಿದ ಸುಂದರ ಚಿತ್ರದಂತಿತ್ತು! ಬರೀ ಚಿತ್ರಗಳಲ್ಲಿ ನೋಡಿ ಆನಂದಿಸಿದ ಹಿಮಾಲಯದ ಅಂದ ಕಣ್ಣ ಮುಂದಿತ್ತು. ನಂಬಲಾಗಲಿಲ್ಲ. ಅತ್ತ ಇತ್ತ ಎತ್ತ ನೋಡಿದರೂ ಭವ್ಯ ಬೆಟ್ಟಗಳ ಸಾಲು! ಅವುಗಳ ಮುಂದೆ ನಾವೆಷ್ಟು ಚಿಕ್ಕವರು ಎಂಬ ಯೋಚನೆ ಬರತೊಡಗಿತು.
![]() |
| ಕಳ್ದ್ ಹೋದೆ ಗುರು! |
ಅಲ್ಲಿದ್ದ ಪಂಚಮುಖಿ ಶಿವನಿಗೆ ಕೈ ಮುಗಿದು "Successfully completed" ಬ್ಯಾನರ್ ಮುಂದೆ ಎಲ್ಲರು ನಿಂತು ಕಿರಚಾಡುತ್ತ ಚಿತ್ರ ತೆಗೆಸಿಕೊಂಡೆವು. ಮುಂದೆ ಯಾರದರೂ ಕೇಳಿದರೆ ತೋರಿಸಲು ಬೇಕಲ್ಲವೇ!
ನೆನಪಿಗೆ ಮತ್ತೊಂದಿಷ್ಟು ಚಿತ್ರಗಳನ್ನು ತೆಗೆದುಕೊಂಡು ಬೆಟ್ಟಗಳ ಸಾಲಿಗೆ ನಮಸ್ಕರಿಸಿ, ಹಿಮದೊಂದಿಗೆ ಆಡುತ್ತ ಚೋಪ್ತಾ ಕ್ಯಾಂಪಿನತ್ತ ಹೊರಟೆವು.
ಚಾರಣ ಮುಗಿಸಿದ ಖುಷಿಗೆ ಊಟಕ್ಕೆ ತುಪ್ಪ ಸವರಿದ ಚಪಾತಿ, ಪನ್ನೀರ್ ಪಲ್ಯ, ಗುಲಾಬ್ ಜಾಮೂನ್ ಎಲ್ಲ ಮಾಡಿದ್ದರು! ಚೆನ್ನಾಗಿ ತಿಂದು ಡಿನ್ನರ್ ಟೆಂಟ್ನಲ್ಲಿ ಎಲ್ಲರೂ ಅಂತ್ಯಾಕ್ಷರಿ ಆಡಿ, ಹೋಗಿ ಮಲಗಿದೆವು. ಇಷ್ಟು ದಿನ ಕಾಡುತ್ತಿದ್ದ ಸ್ಲೀಪಿಂಗ್ ಬ್ಯಾಗ್, ಟೆಂಟ್ ಎಲ್ಲ ಅಂದೇ ಕೊನೆ ಎಂದಾಗ ನೋವು ನಿಧಾನಕ್ಕೆ ಕಾಡತೊಡಗಿತು. ಹಿಮಾಲಯದ ತಪ್ಪಲಿನಲ್ಲಿನ ಕೊನೆಯ ನಿದ್ದೆಯದು!
ಬೆಳೆಗೆದ್ದಾಗ ಚಾರಣ ಮುಗಿಸಿದ್ದಕ್ಕೆ ಟಿ.ಟಿ.ಎಚ್ ಅವರು ನಮಗೆಲ್ಲ ಪ್ರಶಂಸಾ ಪತ್ರಗಳನ್ನು ನೀಡಿದರು. ಎಲ್ಲರೂ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು ಕೊನೆಗೊಂದು ಇಡೀ ಗುಂಪಿನ ತನ್ನಿ ತೆಗೆದುಕೊಂಡು ಗಾಡಿ ಹತ್ತಿ ಹೃಶಿಕೇಷದತ್ತ ಹೊರಟೆವು.
೩೧ಕ್ಕೆ ದೆಹಲಿಯಿಂದ ಬಾನೋಡದಲ್ಲಿ ಬೆಂಗಳೂರಿಗೆ ಹಿಂದಿರುಗಿ ಬರುವವರಿದ್ದೆವು. ಹೃಶಿಕೇಷದಲ್ಲಿ ಒಂದು ದಿನ ತಂಗಿ ಮರುದಿನ ಕಾರಿನಲ್ಲಿ ದೆಹಲಿಯತ್ತ ಹೊರಟೆವು. ಪ್ರತೀ ಬಾರಿ ಪ್ರವಾಸ ಮುಗಿಯುವಾಗ ಆಗುವ ಸಂಕಟ ಹೇಳತೀರದು. ವಾಪಾಸ್ ಹೋದ ಮೇಲೆ ಮತ್ತೆ ಅದೇ ಟ್ರಾಫಿಕ್ಕು, ಅದೇ ಆಫೀಸು, ಅದೇ ತಲೆನೋವು ಎಲ್ಲ ನೆನಪಾಗಿ ಹಿಂದಿರುಗಿ ಬರಲು ಮನಸ್ಸಾಗುವುದೇ ಇಲ್ಲ! ಆದರೆ ಇದೇ ಮೊದಲ ಬಾರಿಗೆ ಪ್ರವಾಸ ಮುಗಿದ ಬೇಸರದ ಭಾವವಿರಲಿಲ್ಲ! ಮರಳಿ ಬೆಂಗಳೂರಿಗೆ ಬರಲು ಮನಸ್ಸು ತುಡಿಯುತ್ತಿತ್ತು. ಕಾರಣ ಒಂದೇ, ಬಂದ ತಕ್ಷಣ ನೋಡಬೇಕೆಂದು ಉತ್ತರ ಪ್ರದೇಶದಲ್ಲಿದ್ದಾಗಲೇ ಬುಕ್ ಮೈ ಶೋನಲ್ಲಿ ಬುಕ್ ಮಾಡಿದ ನಾನು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಸಿನೆಮಾ 'ಕಿರಿಕ್ ಪಾರ್ಟಿ'! :) ಪ್ರವಾಸದ ಗುಂಗಿಂದ ಸುಲಭವಾಗಿ ಹೊರಬರುವಂತೆ ಮಾಡಿದ ಕಿರಿಕ್ ಪಾರ್ಟಿಗೆ ನಾನು ಋಣಿ.
ನನ್ನ ಪ್ರಕಾರ ಪ್ರತಿಯೊಬ್ಬರು ಒಮ್ಮೆಯಾದರೂ ಹಿಮಾಲಯ ಚಾರಣಕ್ಕೆ ಹೋಗಲೇಬೇಕು! ಅದು, ಜೀವನದಲ್ಲಿ ನಾವು 'ಟೇಕನ್ ಫಾರ್ ಗ್ರಾಂಟೆಡ್' ನಿಲುವು ತೋರಿಸುವ ಹಲವಾರು ವಿಷಯಗಳನ್ನು ಮನವರಿಕೆ ಮಾಡಿಕೊಡುತ್ತೆ. ಅಲ್ಲಿ ಚಳಿಗೆ ೪-೫ ಲೇಯರ್ ಬಟ್ಟೆ ಹಾಕಿಕೊಂಡೇ ದಿನ ಕಳೆಯುವಾಗ, ಇಲ್ಲಿ ಅಂಗಿ - ಚಡ್ಡಿ ಹಾಕಿಕೊಂಡು ಅಡ್ಡಾಡುವುದೂ ಒಂದು ಭಾಗ್ಯ ಎಂಬ ಅರಿವು! ಸ್ಲೀಪಿಂಗ್ ಬ್ಯಾಗಿನಲ್ಲಿ ಹೊಡಕಲು ಆಗದೆ ಮುದುರಿಕೊಂಡು ಮಲಗುವಾಗ, ಮೆತ್ತನೆ ಹಾಸಿಗೆಯ ಮೇಲೆ ಕಾಲು ಚಾಚಿ ಮಲಗುವುದೂ ಒಂದು ಭಾಗ್ಯ ಎಂಬ ಅರಿವು! ಆ ಚಳಿಗೆ ಸ್ನಾನ ಮಾಡಲು ಆಗದಿದ್ದಾಗ, ಬಿಸಿ ನೀರಲ್ಲಿ ಪ್ರತಿ ನಿತ್ಯ ಸ್ನಾನ ಮಾಡುವುದೂ ಒಂದು ಭಾಗ್ಯ ಎಂಬ ಅರಿವು! ಮೊಬೈಲ್ ನೆಟ್ವರ್ಕ್ ಇಲ್ಲದ ಜಾಗದಲ್ಲಿದ್ದದ್ದರಿಂದ, ನಮಗೆ ಬೇಕಾದವರ ಬಳಿ ಬೇಕಾದಾಗ ಕರೆ ಮಾಡಿ ಮಾತನಾಡುವುದೂ ಒಂದು ಭಾಗ್ಯ ಎಂಬ ಅರಿವು! ನಾವಿಲ್ಲಿ ಗಣನೆಗೆ ತೆಗೆದುಕೊಳ್ಳದ ಹಲವಾರು ಚಿಕ್ಕ ಚಿಕ್ಕ ಸಂಗತಿಗಳೂ ಅಲ್ಲಿ ಭಾಗ್ಯಗಳಂತೆ ಗೋಚರಿಸುತ್ತಿದ್ದವು!
ನೀವು ಚೋಪ್ತಾ - ಚಂದ್ರಶಿಲಾ ಚಾರಣಕ್ಕೆ ಹೋಗುವುದಾದರೆ ದಯವಿಟ್ಟು ಅವರು ಸೂಚಿಸಿದಂತೆ ವ್ಯಾಯಾಮ ಮಾಡಿ ದೇಹವನ್ನು ಪಳಗಿಸಿಕೊಂಡು ಹೋಗಿ. ಇಲ್ಲವಾದಲ್ಲಿ ಸುಂದರ ನೋಟವನ್ನು ಅನುಭವಿಸುವ ಬದಲು ನರಳಿ, ಹೆಣಗಾಡಿ ಬೆಟ್ಟವೇರುವ ಸ್ಥಿತಿ ಎದುರಾಗಬಹುದು!
https://www.trekthehimalayas.com/fitness-for-trekking/exercise-charts/easy/
ಚಾರಣಕ್ಕೆ ಯಾವ ಯಾವ ಸಾಮಗ್ರಿಗಳು ಬೇಕೆಂಬ ಪಟ್ಟಿಯನ್ನು ಇಲ್ಲಿ ಕೊಟ್ಟಿದ್ದಾರೆ. ಅದು ಬೇಡ ಇದು ಬೇಡ ಎಂದು ಅಸಡ್ಡೆ ಮಾಡದೆ ಸೂಚಿಸಿದ ಎಲ್ಲವನ್ನೂ ತೆಗೆದುಕೊಂಡು ಹೋಗಿ.
https://www.trekthehimalayas.com/tth-treks/Chopta-Chandrashila-Deoria-Tal-Trek/#essential
ಚೋಪ್ತಾ - ಚಂದ್ರಶಿಲಾ ೫ ದಿನದ ಚಾರಣವಾಗಿದ್ದು; ಹೋಗುವುದಾದರೆ, ನೀವು ದೆಹಲಿ ತಲುಪಿ ಅಲ್ಲಿಂದ ಬಸ್ ಅಥವಾ ಮಸ್ಸೂರಿ ಎಕ್ಸ್ಪ್ರೆಸ್ ಅಲ್ಲಿ ಹರಿದ್ವಾರ/ಹೃಶಿಕೇಷವನ್ನು ತಲುಪಬೇಕು. ಅಲ್ಲಿಂದ ಟಿ.ಟಿ.ಎಚ್ ಅವರ ಗಾಡಿಯಲ್ಲಿ ಸಾರಿ ಬೇಸ್ ಕ್ಯಾಂಪನ್ನು ತಲುಪಬಹುದು. ವಾಪಾಸ್ ಬರುವಾಗಲೂ ಹರಿದ್ವಾರ/ಹೃಶಿಕೇಷದವರೆಗೆ ಅವರು ನಿಮ್ಮನ್ನು ತಲುಪಿಸುತ್ತಾರೆ.
ಹೆಚ್ಚಿನ ದಿನಗಳಿದ್ದರೆ ನೀವು, ಹೃಶಿಕೇಷದಲ್ಲಿ ಬಂಜಿ ಜಂಪ್, ರಿವರ್ ರಾಫ್ಟಿಂಗ್, ಝಿಪ್ ಲೈನಿಂಗ್ ಕೂಡಾ ಮಾಡಬಹುದು. ಇದರ ಬಗ್ಗೆ ಮುಂದಿನ ಬಾರಿ ಬರೆಯುವೆ. ೨೫ ರಿಂದ ೩೦ ಸಾವಿರದಲ್ಲಿ ಜೀವನುದ್ದಕ್ಕೂ ನೆನೆಯುವಂತಹ ಪ್ರವಾಸ ಮಾಡಲಿಚ್ಚಿಸಿದರೆ, ಈ ಪ್ರವಾಸ ಹೇಳಿ ಮಾಡಿಸಿದ್ದು!
| ನೆನಪಲ್ಲುಳಿಯುವ ಚಿತ್ರ! |
ಹಿಮಾಲಯ, ಮನುಷ್ಯ ಜೀವನವನ್ನು ನೋಡುವ ರೀತಿಯನ್ನು ಬದಲಾಯಿಸುವುದರಲ್ಲಿ ಅನುಮಾನವಿಲ್ಲ! ಒಮ್ಮೆ ಹೋಗಿ ಬನ್ನಿ! ಅನುಭವವ ಪಡೆದು ಬನ್ನಿ! ಹೋದದ್ದೇ ಆದರೆ, ಆ ದೈತ್ಯ ಬೆಟ್ಟಗಳಿಗೆ ನನ್ನ ಅನಂತಾನಂತ ನಮಸ್ಕಾರಗಳನ್ನು ತಿಳಿಸಿ ಬನ್ನಿ!
Tuesday, 29 November 2016
ನಾ ಕವಿಯಾದೆ
![]() |
| ಗೆಳತಿ ಹೇಮಾ ಬಿದ್ರೆ ಬಿಡ್ಸಿದ್ದು |
ಅವಳು ಸಿಕ್ಕಳು
ನಾ ಕವಿತೆ ಬರೆದೆ
ನೋಡಿ ನಕ್ಕಳು
ನಾ ಕವಿತೆ ಬರೆದೆ
ಹೃದಯವ ಕದ್ದಳು
ನಾ ಕವಿತೆ ಬರೆದೆ
ನನಗೆ ದಕ್ಕಳು
ನಾ ಕವಿತೆ ಬರೆದೆ
ನಗುವಿಗೂ ಅಳುವಿಗೂ ಜೊತೆಯಾದಳು
ನಾ ಕವಿತೆ ಬರೆದೆ
ಜಗಳದ ಮೇಲೆ ಜಗಳವಾಡಿದಳು
ನಾ ಕವಿತೆ ಬರೆದೆ
ಇಂದು ನನ್ನ ಬಿಟ್ಟು ಹೋದಳು
ನಾ ಕವಿತೆ ಬರೆದೆ
ನನ್ನ ಮರೆತೇ ಬಿಟ್ಟಳು
ನಾ ಕವಿತೆ ಬರೆದೆ
ನನ್ನಿಂದ ಅವಳು ಕವಿತೆಯಾದಳು
ಅವಳಿಂದ ನಾ ಕವಿಯಾದೆ
Wednesday, 24 August 2016
ಬಳಸಿದರೆ; ಕಲಿಸಿದರೆ, ಉಳಿದೀತು; ಬೆಳೆದೀತು - ಕನ್ನಡ
![]() |
| ಕೃಪೆ: ಗೂಗಲ್ |
'ಚಹಾ' - ಈ ಒಂದ್ ಪದ ಸಾಕು, ನನ್ನ ಎಂತಹ ನಿದ್ದೆ ಇಂದನೂ ಎಬ್ಬಿಸೋಕೆ! ಎಷ್ಟೋ ದಿನ, ಅಮ್ಮ ಬೆಳಿಗ್ಗೆ 5 ಗಂಟೆಗೆ ಚಹಾ ಮಾಡ್ತಾರೆ ಅಂತ ಎದ್ದು, ಚಹಾ ಕುಡ್ದು ಮಲಗಿದ್ದಿದೆ. ಚಹಾ ಅಂದ್ರೆ ಅದೇನೋ ಒಂತರ ಪ್ರೀತಿ, ಒಂತರ ಹುಚ್ಚು. ಬೆಳಿಗ್ಗೆ ತಿಂಡಿ ಇಲ್ಲದಿದ್ರೂ ನಡಿಯತ್ತೆ ಆದ್ರೆ ಚಹಾ ಕುಡಿಲಿಲ್ಲ ಅಂದ್ರೆ, ಜೊಶೇ ಇರಲ್ಲ. ಚಹಾದ ಹುಚ್ಚು ಎಲ್ಲಿವರೆಗೆ ಅಂದ್ರೆ ಒಮ್ಮೆ ರಾತ್ರಿ 2.30 ಸುಮಾರಿಗೆ ಚಹಾ ಕುಡಿಬೇಕು ಅನ್ಸಿ, ಗೆಳೆಯನ ಜೊತೆ ಬೈಕ್ ಅಲ್ಲಿ ಚಹಾ ಹುಡ್ಕೊಂಡು ಕೆಲವ್ ಏರಿಯಾ ಸುತ್ತಿದ್ದೂ ಇದೆ! ನನ್ನ ಒಡನಾಡಿಗಳಿಗೆ ಗೊತ್ತಿರತ್ತೆ, ಏನೇ ಕೆಲಸ ಇರ್ಲಿ, ಶಾರ್ಟ್ ಫಿಲಂ ಶೂಟಿಂಗ್ ಇರ್ಲಿ, ನಾಟಕದ್ ತಾಲೀಮ್ ಇರ್ಲಿ, ನಂದೊಂದ್ ಸಾಮಾನ್ಯ ಮಾತ್ ಇರತ್ತೆ "ಬಾ ಮಗ ಟೀ ಕುಡ್ಕೊಂಡ್ ಶುರು ಮಾಡೋಣ.." ಅಂತ! ಅಮ್ಮ ಯಾವಾಗ್ಲೂ ಉಗಿತಾರೆ, ಯಾರಿಂದ ಬಂತೋ ನಿಂಗೆ ಈ ಚಹಾದ ಹುಚ್ಚು ಅನ್ಕೊಂಡು.
ನನ್ ಪಿ.ಜಿ ಪಕ್ಕ ಒಂದು ಬೇಕರಿ ಇದೆ. ಅದರ ಮಾಲೀಕ ಕೇರಳದವನು. ಭಾರಿ ರುಚಿಯಾಗಿ ಚಹಾ ಮಾಡ್ತಾನೆ. ಅಲ್ದೆ, ಎಲ್ಲರ ಹತ್ರ ನಗ್ ನಗ್ತಾ ಮಾತಾಡೋ ಮನುಷ್ಯ ಅವನು. ಅದ್ಕೆ ಅಲ್ಲಿ ಚಹಾ ಕುಡಿಯೋದಕ್ಕೆ ಏನೋ ಒಂತರ ಖುಷಿ. ಅವನು ಕೇರಳದವನಾದ್ರಿಂದ ಸುಮಾರು ಜನ ಅವ್ನನ್ನ "ಚೇಟಾ" ಅಂತಾ ಕರೀತಾರೆ. ನನಗೆ ಅವನನ್ನ "ಅಣ್ಣ" ಅಂತಾನೇ ಕರ್ದು ಅಭ್ಯಾಸ.
ವೈಟ್ ಫೀಲ್ಡ್ ಕಡೆ ತೆಲುಗು ಕನ್ನಡಕ್ಕಿಂತ ಹೆಚ್ಚು ಹಬ್ಬಿರೋದ್ರಿಂದಲೋ ಏನೋ; ಅವನಿಗೆ ತೆಲುಗು, ಬಡಗಣ ಭಾರತದವ್ರು ಜಾಸ್ತಿ ಇರೋದ್ರಿಂದ ಹಿಂದಿ, ಮೂಲತಃ ಕೇರಳದವನಾದ್ದರಿಂದ ಮಲಯಾಳಂ ಬರುತ್ತೆ. ನಾನ್ ಅವನ ಹತ್ರ ಕನ್ನಡದಲ್ಲೇ ಮಾತಾಡೋದು. ಅವನು ಸ್ಪಷ್ಟವಾಗಿ ಕನ್ನಡ ಮಾತಾಡ್ತಾನೆ.
ಒಂದ್ ದಿನ ನಾ ಚಹಾ ಕುಡಿತಾ ಇರ್ಬೇಕಾದ್ರೆ ಒಬ್ರು ಅವ್ನನ್ನ ಕೇಳಿದ್ರು, "ಚೇಟಾ.. ನೀನು ಕೇರಳದವ್ನಲ್ವಾ.. ಹೇಗ್ ಇಷ್ಟ್ ಚೆನ್ನಾಗ್ ಕನ್ನಡ ಮಾತಾಡ್ತ್ಯಾ" ಅಂತ. ಏನ್ ಉತ್ತರ ಕೊಡ್ತಾನೆ ಅಂತ ನಾನು ಕಾತುರದಿಂದ ಕೇಳ್ತಾ ಇದ್ದೆ. "ಸಾರ್.. ನೀವು ಕೇರಳಕ್ ಬಂದ್ ನೋಡಿ.. ಮಲಯಾಳಂ ಬರಲ್ಲ ಅಂದ್ರೆ ಅಂಗ್ಡಿ ಇಟ್ಕೊಂಡು ವ್ಯಾಪಾರ ಮಾಡೋಕ್ ಆಗಲ್ಲ.. ನಾನು ಕರ್ನಾಟಕದಲ್ ವ್ಯಾಪಾರ ಮಾಡ್ತಾ ಇದೀನಿ.. ಅದ್ಕೆ ಕನ್ನಡ ಕಲ್ತಿದೀನಿ" ಅಂತ ಹೇಳಿ ಮುಗುಳ್ನಕ್ಕು ಮತ್ತೆ ಚಹಾ ಮಾಡೋಕ್ ಹೋದ.
ಅವ್ನ್ ಮೇಲೆ ಅವತ್ತಿಂದ ಗೌರವ ಜಾಸ್ತಿ ಆಯ್ತು! ಬೇರೆ ದೇಶಕ್ಕೆ ಓದೋಕ್ ಹೋಗ್ಬೇಕಾದ್ರೆ, ಆ ದೇಶದ್ ಭಾಷೆ ಕಲ್ತು, ಅಲ್ಲಿನ್ ಸಂಸ್ಕೃತಿಗೆ ಒಗ್ಗಿಕೊಳ್ಳೋ ನಮ್ಮವ್ರು, ಕರ್ನಾಟಕದಲ್ಲಿ ಕನ್ನಡ ಕಲಿ ಅಂತ ಕೇಳ್ಕೊಂಡ್ರೆ "ನಾವು ಭಾರತೀಯರು" "ಹಿಂದಿ ನಮ್ಮ ರಾಷ್ಟ್ರಭಾಷೆ" "ನಾನ್ ಯಾಕ್ ಕನ್ನಡ ಕಲೀಬೇಕು" ಇತ್ಯಾದಿ ಇತ್ಯಾದಿ ಪೋಳ್ಳುವಾದ ಮಂಡಿಸ್ತಾರೆ. ಕೆಲವ್ರು ಇನ್ನೂ ಒಂದೆರ್ಡ್ ಹೆಜ್ಜೆ ಮುಂದ್ ಹೋಗಿ ಕಲಿ ಅಂದವ್ರಿಗೆ ಯಾವ್ ಯಾವ್ದೋ ಪಟ್ಟಾನೂ ಕಟ್ತಾರೆ! ಹೀಗೆಲ್ಲಾ ಇರ್ಬೇಕಾದ್ರೆ, ನಾವ್ ಸುಮ್ನೆ "ಗಾಂಚಾಲಿ ಬಿಡಿ ಕನ್ನಡ ಮಾತಾಡಿ" ಅಂತ ಹೇಳ್ಕೊಂಡ್ ಓಡಾಡೋದ್ ಬಿಟ್ಟು, ಯಾರಿಗ್ ಕನ್ನಡ ಬರಲ್ವೋ ಅವ್ರಿಗ್ ಕನ್ನಡ ಹೇಳ್ಕೊಡೋದು, ಯಾವ್ಯಾವ್ ಬಳಕಗಳು (apps) ಕನ್ನಡದಲ್ಲಿದ್ಯೋ ಅದನ್ನ ಕನ್ನಡದಲ್ಲೇ ಬಳ್ಸೋದು, ಎಲ್ ಎಲ್ಲಿ ಕನ್ನಡದಲ್ಲಿ ಸೇವೆ ಸಿಗ್ತಾ ಇಲ್ವೋ ಅಲ್ಲಿ ಕನ್ನಡದಲ್ಲಿ ಸೇವೆ ಕೊಡೋಕೆ ಒತ್ತಡ ಹಾಕೋದು, ಹೆಚ್ಚೆಚ್ಚು ಅರಿಮೆ(ವಿಜ್ಞಾನ), ಮನರಂಜನೆ contents ಗಳನ್ನ ಕನ್ನಡದಲ್ಲಿ ತಯಾರ್ ಮಾಡೋದು ಮಾಡ್ಬೇಕು. ಆಗ ಮಾತ್ರ ಕನ್ನಡ ಉಳಿಯುತ್ತೆ ಬೆಳೆಯುತ್ತೆ. ಅಲ್ವಾ?
Tuesday, 5 July 2016
ಮಾನವನಾಗಿ ಹುಟ್ಟಿದ್ ಮೇಲೆ : ಕಂತು ೧ : ನಮ್ಮ ಶಾಲೆ
![]() |
| ಕೃಪೆ : ಗೂಗಲ್ |
ನಮಗೆ "ಅ ಆ ಇ ಈ" "A B C D" ಇಂದ ಹಿಡಿದು ದೊಡ್ಡ ವೈಜ್ಞಾನಿಕ ಸಂಗತಿಗಳನ್ನೂ, ಗಣಿತದ ಪ್ರಮೇಯಗಳನ್ನೂ ಕಲಿಸಿ ಕೊಡುವುದು ನಮ್ಮ ಶಾಲೆ. ಒಳ್ಳೆಯ ಭವಿಷ್ಯಕ್ಕಾಗಿ ಭದ್ರ ಬುನಾದಿಯನ್ನು ಹಾಕಿ ಕೊಡುವಲ್ಲಿ ಶಾಲೆಗಳ ಪಾತ್ರ ಮಹತ್ವದ್ದು. ಶಾಲೆಯಲ್ಲಿ ಓದುವಾಗ ಎಷ್ಟೇ ಸಂಭ್ರಮಿಸಿದರೂ, ಬೀಳ್ಕೊಡುಗೆ ಸಮಾರಂಭದಲ್ಲಿ ಗೊಳೋ ಎಂದು ಅತ್ತರೂ, ಕಾಲ ಉರುಳಿದಂತೆ ನಾವು ಕಲಿತ ಶಾಲೆಯನ್ನು ಮರೆತು ಬಿಡುತ್ತೇವೆ. ಅದು ನೆನಪಾಗುವುದು ಗೆಳೆಯರೆಲ್ಲಾ ಸೇರಿ ಶಾಲೆಯ ಯಾವುದೋ ಒಂದು ನೆನಪನ್ನು ಮೆಲುಕು ಹಾಕಿದಾಗ ಮಾತ್ರ!
ಆದರೆ ನಮ್ಮಲ್ಲಿ ಕೆಲವರು ಎಷ್ಟೇ ವರ್ಷ ಕಳೆದರೂ, ಕಲಿತ ಶಾಲೆಯನ್ನು ಮರೆಯುವುದಿಲ್ಲ. ಅಂತವರಲ್ಲಿ ಒಬ್ಬ ನನ್ನ ಗೆಳೆಯ ಸೂರ್ಯ (ಒತ್ತಾಯದ ಮೇರೆಗೆ ಹೆಸರು ಬದಲಾಯಿಸಿದ್ದೇನೆ). ಅವನು ಕಲಿತಿದ್ದು ಮಹಾಲಕ್ಷ್ಮೀಪುರದ ಬಸವೇಶ್ವರ ಶಾಲೆಯಲ್ಲಿ. ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ, ಇಂದಿಗೂ ತಾನು ಓದಿದ ಶಾಲೆಯೊಂದಿಗೆ ನಂಟು ಹೊಂದಿದ್ದಾನೆ. ಅದರಲ್ಲೂ ವಿಶೇಷ ಎಂದರೆ, ಈ ಆಸಾಮಿ ಕಳೆದೆರಡು ವರ್ಷಗಳಿಂದ, ಶಾಲೆಯ ಪುನರಾರಂಭದ ಹೊತ್ತಿನಲ್ಲಿ ಶಾಲೆಯ ಪ್ರಾಂಶುಪಾಲರನ್ನು ಭೇಟಿ ಮಾಡಿ, ಗೆಳೆಯರ, ಶಾಲೆಯ ಹಳೆ ವಿದ್ಯಾರ್ಥಿಗಳ, ಸಹೋದ್ಯೋಗಿಗಳ ನೆರವಿನಿಂದ, ಶಾಲೆಗೆ ಮೊದಲನೇ; ಎರಡನೇ; ಮೂರನೇ ಸ್ಥಾನ ಬಂದವರಿಗೆ ಬಹುಮಾನ ನೀಡುವುದು, ವಿದ್ಯಾರ್ಥಿಗಳಿಗೆ ಪುಸ್ತಕ ಹಂಚುವುದು ಅಷ್ಟೇ ಅಲ್ಲದೆ ಆ ಮಕ್ಕಳಲ್ಲಿ ಯಾರಿಗೆ ಶಾಲೆಯ ಶುಲ್ಕ ಕಟ್ಟುವುದಕ್ಕೆ ಸಾಧ್ಯವಿಲ್ಲವೊ ಅಂತಹ ಮಕ್ಕಳ ಶಾಲಾ ಶುಲ್ಕ ಕಟ್ಟುವ ಮಾನವೀಯ ಕೆಲಸವನ್ನೂ ಮಾಡುತ್ತಿದ್ದಾನೆ!
ನಾವಾಯ್ತು ನಮ್ಮ ಕೆಲಸವಾಯ್ತು ಎನ್ನುವವರ, ಚಿಕ್ಕಪುಟ್ಟ ದಾನ ಮಾಡಿ ಬ್ಯಾನರ್ ಕಟ್ ಔಟ್ ಹಾಕಿಸಿಕೊಳ್ಳುವವರ ನಡುವೆ ಸೂರ್ಯನಂತವರು ಬಹಳ ದೊಡ್ಡ ವ್ಯಕ್ತಿಗಳಾಗಿ ಕಾಣಿಸಿಕೊಳ್ಳುತ್ತಾರೆ! ಸಹಾಯ ಮಾಡಲು ಹೋದಾಗ ಮಕ್ಕಳಿಗೆ ಸೂರ್ಯ ಹೇಳುವ ಕಿವಿಮಾತು ಎರಡು.
ಒಂದು: "ಕನ್ನಡ ಮೀಡಿಯಂ ಅಲ್ಲಿ ಓದಿದ್ರೆ ಮುಂದೆ ಭವಿಷ್ಯ ಇಲ್ಲ ಅನ್ಕೋಬೇಡಿ, ನಾನು ಕನ್ನಡ ಮೀಡಿಯಂ ಅಲ್ಲೇ ಓದಿದೋನು"
ಎರಡು "ನಾವು ಓದುವಾಗ, ಕಷ್ಟದಲ್ಲಿದ್ದಾಗ, ನಮಗೆ ಯಾರೋ ಬಂದು ಸಹಾಯ ಮಾಡಿದ್ರು.. ನಾವ್ ಈಗ ನಿಮಗ್ ಸಹಾಯ ಮಾಡ್ತಾ ಇದೀವಿ.. ನೀವ್ ಮುಂದೆ ಬೇರೆಯವ್ರಿಗ್ ಸಹಾಯ ಮಾಡಿದ್ರೆ ನಾವ್ ಮಾಡಿದ್ದು ಸಾರ್ಥಕ"
ಮಾಡಿದ ಸಹಾಯಕ್ಕೆ, ದಾನಕ್ಕೆ ಯಾವುದೇ ಹೆಸರನ್ನು; ಲಾಭವನ್ನು ಆಪೇಕ್ಷಿಸದೇ, ಹಲವು ವಿದ್ಯಾರ್ಥಿಗಳಿಗೆ ನೆರವಾಗುತ್ತಾ, ಅವರಿಗೆ ಮಾದರಿಯಾಗುತ್ತಾ ಇರುವ ಸೂರ್ಯನ ತರದವರು ಕಾಣಸಿಗುವುದು ಅಪರೂಪ. ಅವನು ನನ್ನ ಗೆಳೆಯ ಅಂತ ಹೇಳೋಕೆ ಒಳಗೊಳಗೇ ಏನೋ ಒಂತರ ಹೆಮ್ಮೆ! ಮೊನ್ನೆ ಜುಲೈ 3 ಅವನ ಹುಟ್ಟುಹಬ್ಬ. ಆ ದಿನ ಬರೀಬೇಕು ಅನ್ಕೊಂಡಿದ್ದು ಇವಾಗ ಬರೀತಾ ಇದೀನಿ. "ಹುಟ್ಟು ಹಬ್ಬದ ಸಿಹಿ ಹಾರಯ್ಕೆಗಳು ಸೂರ್ಯ. ನೀನ್ ಮಾಡೊ ಈ ಕೆಲಸಗಳು ನಾವ್ ಕಲ್ತಿದ್ ಶಾಲೆನ ನೆನ್ಪ್ ಮಾಡ್ಕೊಳ್ಳೋಕೆ, ನಮ್ ಪರಿಮಿತಿಲಿ ಆಗೋ ಕೆಲ್ಸಗಳ್ನ ಶಾಲೆಗಾಗಿ ಮಾಡೋಕೆ ಪ್ರೇರೇಪಿಸುತ್ವೆ. ನಿನ್ನಂತವರು ನೂರಾರು, ಸಾವಿರಾರು ಜನ ಮುಂದೆ ಬಂದು ಇಂತ ಸ್ಪೂರ್ತಿ ಕೊಡೋ ಕೆಲಸ ಮಾಡ್ಲಿ, ಇಂತಹ ಕೆಲಸಗಳು ಇನ್ನೂ ದೊಡ್ಡ ಮಟ್ಟದಲ್ಲಿ ನೀನು ಮಾಡುವಂತಾಗ್ಲಿ ಅಂತ ಹಾರೈಸ್ತೀನಿ."
Friday, 17 June 2016
ನಿದ್ರಾದೇವಿಯ ಮೀರಿ!
"ಮುಂಗಾರು ಮಳೆಯೆ.. ಏನು ನಿನ್ನ ಹನಿಗಳ ಲೀಲೆ.." ಶನಿವಾರ ರಾತ್ರಿ ಸುಮಾರು ೮ ಗಂಟೆಯ ಸಮಯ, ತುಂತುರು ಮಳೆ ಬರ್ತಾ ಇತ್ತು. ಅದೇ ಮೂಡಲ್ಲಿ ಹಾಡ್ ಕೇಳ್ತಾ, ಬಹುಶಃ ನಾಳೆ 'ಹನೂರಿಗೆ' ಹೋಗುವ ಕಾರ್ಯಕ್ರಮ ರದ್ದಾಗಿದೆ ಎಂದು ಏನನ್ನೋ ಬ್ರೌಸ್ ಮಾಡುತ್ತಾ ಕುಳಿತಿದ್ದಾಗ ಗೆಳೆಯ ವಿನಯನ ಕರೆ ಬಂತು. "ಮಗ ನಾಳೆ ನಾವಿಬ್ರೆ ಹನೂರಿಗೆ ಹೋಗ್ ಬರೋಣ. ಕಾಂತು ಆದ್ರೆ ಅಲ್ಲೇ ಜಾಯ್ನ್ ಆಗ್ತೀನಿ ಅಂದಿದಾನೆ" ಅಂದ. "ಲೋ! ನಾವಿಬ್ರೆ ಹೋಗಿ ಏನೋ ಮಾಡೊದ್ ಅಲ್ಲಿ?" ಎಂದು ಕೇಳಿದೆ. "ಬೇರೆಯವ್ರ್ ಇದ್ದಿದ್ದ್ರೆ ಏನ್ ಮಾಡ್ತಿದ್ವೋ ಅದೇ ಮಾಡೋಣ!" ಎಂದ. ನನಗೂ ಸರಿ ಎನಿಸಿ ಬೆಳಿಗ್ಗೆ ೫ ಕ್ಕೆ ಕರೆ ಮಾಡಿ ಎಬ್ಬಿಸು ಎಂದು ಹೇಳಿ ಮಾತು ಮುಗಿಸಿದೆ.
ಬಸ್ಸು ಇದ್ದಿದ್ದು ಬೆಳಿಗ್ಗೆ ೬ಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ; ಹಾಗಾಗಿ ಅಲ್ಲೆ ಪಕ್ಕದಲ್ಲಿದ್ದ ಗೆಳೆಯ ದರ್ಶನ್ ಮನೆಯಲ್ಲಿ ಉಳಿಯುವುದು ಲೇಸೆಂದು ಅಲ್ಲಿಗೆ ಹೊರಟೆ. ಮಳೆ ತನ್ನ ಕಣ್ಣಾ ಮುಚ್ಚಾಲೆ ಆಟ ನಿಲ್ಲಿಸಿರಲಿಲ್ಲ. ಮಳೆ ಬಂದಾಗ ಬೈಕ್ ಓಡಿಸುವುದೆಂದರೆ ನನಗೆ ಕೊಂಚ ದಿಗಿಲು! ಎಲ್ಲಿ ಸ್ಕಿಡ್ ಆಗಿ ದಬಾಕೊತಿನೊ ಅನ್ನೊ ಭಯ! ನಿಧಾನವಾಗಿ ಓಡಿಸಿ ಅವನ ಮನೆ ತಲುಪಿದೆ. ಅವರಮ್ಮ ಬಿಸಿಬಿಸಿ ಮುದ್ದೆ ಮತ್ತು ಸಾಂಬರ್ ಮಾಡಿದ್ರು. ಇವತ್ತು ಈ ಹೋಟೆಲು, ನಾಳೆ ಆ ಕ್ಯಾಂಟೀನು ಅಂತ ಊಟಕ್ಕೆ ಓಡಾಡುವ ಅಲೆಮಾರಿ ನಾನು. ಮುದ್ದೆ ನೋಡಿದ್ದು ಮಳೆಯಿಲ್ಲದ ನಾಡಿಗೆ ತುಂತುರು ಮಳೆ ಸುರಿದ ಹಾಗಾಯ್ತು! ಮುದ್ದೆ ತಿಂದು ಮಾಳಿಗೆಯಲ್ಲಿ ಅದು- ಇದು ಹರಟುತ್ತಾ ಕೂತವರಿಗೆ ಸಮಯ ಹೋಗಿದ್ದೆ ತಿಳಿಯಲಿಲ್ಲ. ಗಮನಿಸಿದಾಗ ಆಗಲೇ ೩.೩೦ ಆಗಿತ್ತು! ಅದನ್ನು ಬೆಳಗಿನ ಜಾವ ಎನ್ನಲೋ ಇಲ್ಲಾ ತಡರಾತ್ರಿ ಎನ್ನಲೋ ಇನ್ನೂ ಅರ್ಥ ಆಗಿಲ್ಲ! ಜೈ ಎಂದು ೫.೩೦ ಕ್ಕೆ ಅಲಾರ್ಮ್ ಇಟ್ಟು ನಿದ್ರಾದೇವಿಯ ಪಾದಕ್ಕೆ ಶರಣಾದೆ.
ಬೆಳಿಗ್ಗೆ ಎದ್ದು ತಯಾರಾಗಿ ಸ್ಯಾಟಲೈಟ್ ಬಸ್ ನಿಲ್ದಾಣ ತಲುಪಿದ ಐದೇ ನಿಮಿಷಕ್ಕೆ ವಿನಯ ಬಂದ. ನಾಲ್ಕನೇ ನಂಬರ್ ಪ್ಲಾಟ್ ಫಾರ್ಮನಲ್ಲಿ ಹನೂರಿನೆಡೆಗೆ ಹೋಗುವ ಬಸ್ಸು ಇನ್ನೂ ಬಾರದ್ದರಿಂದ, "ಬಾರೊ, ಬಾದಾಮಿ ಹಾಲು ಕುಡಿದು ಹೊರಡೋಣ" ಎಂದೆ. ನಂದಿನಿ ಕೇಂದ್ರದಲ್ಲಿ ಬಿಸ್ಕತ್ತು ಬಾದಾಮಿ ಹಾಲನ್ನು ಸವಿದು ಮುಗಿಸುತ್ತಿದ್ದಂತೆ ಹನೂರಿಗೆ ಹೋಗುವ ಬಸ್ ಬಂದಿತು. ವಿನಯ ಬೇಗ ಬಸ್ ಹತ್ತಿ ಮುಂದಿನ ಸೀಟನ್ನು ಕಾದಿರಿಸಿದ. ನಾನು ಹೋಗಿ ಆಸೀನನಾದೆ! ನಿರ್ವಾಹಕ "ರೈಯ್ಯಾ ರೈಯ್ಯಾ.." ಎನ್ನುತ್ತಿದ್ದಂತೆ ಚಾಲಕ ಪಯಣ ಆರಂಭಿಸಿದ. ಈ ಮೊದಲೇ ಮೂರು ಬಾರಿ ಹನೂರಿಗೆ ಇದೇ ವೇಳೆಯ ಬಸ್ಸಿನಲ್ಲಿ ಹೋಗಿದ್ದರಿಂದ, ಹಿಂದಿನ ಬಾರಿಯ ಪ್ರಯಾಣದ ಬಗ್ಗೆ ವಿನಯ ಅನುಭವವನ್ನು ಹಂಚಿಕೊಳ್ಳುತ್ತಾ ಕೂತಿದ್ದ. ನನಗೋ, ಅವನಾಡುತ್ತಿದ್ದ ವಿಷಯದ ಬಗ್ಗೆ ಆಸಕ್ತಿ; ಆದರೆ ಹಿಂದಿನ ದಿನ ಮಲಗಿದ್ದೆ ಬರಿ ಎರಡು ಗಂಟೆ, ಒಳ್ಳೆ ಬಿಸಿ ತುಪ್ಪದ ಸ್ಥಿತಿ ಆಯಿತು. ಕಾಣದ ನಿದ್ದೆಗೆ ಹಂಬಲಿಸುತ್ತಿದ್ದ ನನ್ನ ಕಣ್ಣುಗಳನ್ನು ನೋಡಿ, "ನೀನ್ ಸ್ವಲ್ಪ ಹೊತ್ತು ಮಲ್ಕೊಳ್ಳೊ, ಅಲ್ಲಿ ಹೋಗಿ ಏನ್ ಮಾಡೋದು ಅಂತ ಎದ್ ಮೇಲೆ ಮಾತಾಡೋಣ" ಎಂದ. ಮಕ್ಕಳಿಗೆ ಬೇಕಿದ್ದದ್ದು ಗೋಳಿಬಜೆ - ಅಮ್ಮ ಮಾಡಿದ್ದು ಗೋಳಿಬಜೆ ಅಂದುಕೊಳ್ಳುತ್ತ ಮಲಗಿದೆ.
ಬಸ್ಸು ಮದ್ದೂರು ತಲುಪಿದಾಗ, ವಿನಯ ತಿಂಡಿಗಾಗಿ ಎಬ್ಬಿಸಿದ. ಇಬ್ಬರೂ ದಕ್ಷಿಣ ಭಾರತದ ರಾಷ್ಟ್ರೀಯ ತಿಂಡಿಯಾದ ಇಡ್ಲಿ ವಡೆಯನ್ನು ತಿಂದು, ಮದ್ದೂರಿನಲ್ಲಿ ಮದ್ದೂರು ವಡೆ ತಿನ್ನದೇ ಇದ್ರೆ ಹೇಗೆ ಎನ್ನುತ್ತಾ ನಾಲ್ಕು ವಡೆಯನ್ನು ಕಟ್ಟಿಸಿಕೊಂಡು ಬಸ್ ಹತ್ತಿದೆವು. ಪಯಣ ಮುಂದುವರೆಯಿತು. ನಮ್ಮ ಡ್ರೈವರೊ, ಐದ್ ಐದು ನಿಮಿಷಕ್ಕೊಮ್ಮೆ ಎಂಬಂತೆ "ಪೊಂ ಪೊಂ.. ಪೊಂ ಪೊಂ.." ಎಂದು ಜೋರಾಗಿ ಮುಂದೆ ಹೋಗುತ್ತಿದ್ದ ಗಾಡಿಗಳಿಗೆ ಗದರಿಸುತ್ತಾ ಸಾಗುತ್ತಿದ್ದ. ೬.೩೦ ಗೆ ಹೊರಟ ನಾವು ಸುಮಾರು ೧೦.೩೦ ಕ್ಕೆ ಹನೂರು ತಲುಪಿದೆವು.
ಹನೂರು ಬಸ್ ನಿಲ್ದಾಣದಲ್ಲಿ, ಮಾರ್ಗದರ್ಶಿ ಸಂಸ್ಥೆಯ ಮಹದೇವ ಪ್ರಸಾದ್ ಅವರು ನಮ್ಮನ್ನು ಬರಮಾಡಿಕೊಳ್ಳಲು ಕಾಯುತ್ತಾ ಕುಳಿತಿದ್ದರು. ಅವರೊಡನೆ ಅಲ್ಲೇ ಪಕ್ಕದಲ್ಲಿದ್ದ ಹೊಟೆಲ್ ನಲ್ಲಿ ಚಹಾ ಆರ್ಡರ್ ಮಾಡಿ ಕುಳಿತೆವು. ನಮಗೆ ನೀರು ತಂದು ಕೊಟ್ಟ ಆ ಪುಣ್ಯಾತ್ಮ, ಒಂದೇ ಬಾರಿ ಮೂರು ಲೋಟವನ್ನು ತರಬೇಕು ಎಂದು ತನ್ನ ಬೆರಳುಗಳನ್ನು ಲೋಟಗಳಲ್ಲಿ ಮುಳುಗಿಸಿ ತಂದ. "ಏನಯ್ಯ, ಕುಡಿಯೋ ನೀರಲ್ಲಿ ಬೆರಳು ಮುಳುಗಿಸಿ ತಂದಿದ್ಯಲ್ಲ?!" ಎಂದು ಪ್ರಸಾದ್ ಅವರು ಕೇಳಿದರೆ ಆ ಮಹಾಶಯ "ಹೇಗೆ ತಂದುಕೊಡಬೇಕು ಅಂತ ನಿಮ್ಮಿಂದ ನಾನು ಕಲಿಬೇಕಾಗಿಲ್ಲ" ಎಂದು ಗೊಣಗುತ್ತ ಚಹಾ ತರಲು ಹೋದ. ಪುಣ್ಯಕ್ಕೆ, ಚಹಾದಲ್ಲಿ ಬೆರಳು ಮುಳುಗಿಸದೆ ಸರಿಯಾಗೆಯೆ ತಂದ! ಹರಹರ ಎಂದು ಹೊರಬರುತ್ತಿದ್ದಂತೆ ನಾಗರಾಜ್ ಅವರು ಬಂದರು. ಇವರೂ ಕೂಡ ಮಾರ್ಗದರ್ಶಿ ಸಂಸ್ಥೆಯ ಉದ್ಯೋಗಿ. ಬಹಳ ಮೃದು ಸ್ವಭಾವದ ಸಜ್ಜನ. ಅವರ ಗಾಡಿಯಲ್ಲಿ ವಿನಯ ಕೂತ. ನಾನು ಪ್ರಸಾದ್ ಅವರ ಗಾಡಿಯಲ್ಲಿ ಕೂತೆ. ಪ್ರಸಾದರದ್ದು ಮಾಜಿ ಸಚಿವರಾದ ಸೋಮಣ್ಣನವರ ಅನುದಾನದಿಂದ ಬಂದ ಗಾಡಿ. ಮೊದಲ ಬಾರಿಗೆ ತ್ರಿಚಕ್ರದ ಹೋಂಡಾ ಆಕ್ಟಿವ (ಅಂಗವಿಕಲರಿಗೆ ನೀಡುವಂಥದ್ದು) ಮೇಲೆ ಕೂತ ಅನುಭವ. ಹೋಗಿ ರಾಜಣ್ಣ ಸರ್ ಮನೆ ತಲುಪಿದೆವು.
ಅಲ್ಲಿ ರಾಜಣ್ಣ ಸರ್ ಮಕ್ಕಳು ವಿನಯನನ್ನು ನೋಡುತ್ತಿದ್ದಂತೆ ಅವನೊಡನೆ ಆಡಲು ಆರಂಭಿಸಿದ್ದು ನೋಡಿಯೇ ತಿಳಿಯಿತು, ಹಿಂದಿನ ಬಾರಿ ಬಂದಾಗ ಇವನು ಮಾಡಿದ ಮೋಡಿಯ ಪರಿ! ಚಹಾ ಕುಡಿದೇ ಬಂದಿದ್ದೇವೆ ಎಂದರೂ, ರಾಜಣ್ಣ ಸರ್ ಪತ್ನಿ ಬೆಲ್ಲದಲ್ಲಿ ಮಾಡಿದ್ದ ಚಹಾ ಕೊಟ್ಟರು. ರಾಜಣ್ಣ ಸರ್ ದು ಮುಗುಳ್ನಗುವಿನೊಂದಿಗೆ ಅದಕ್ಕೊಂದು ಸಮಜಾಯಿಷಿ ಬೇರೆ! "ಕುಡಿರಿ ಕುಡಿರಿ.. ಫೀಲ್ಡ್ ವಿಸಿಟ್ ಗೆ ಶಕ್ತಿ ಬೇಕಲ್ವ" ಎಂದು. ಮಾರ್ಗದರ್ಶಿಯ ಇನ್ನೋರ್ವ ಉದ್ಯೋಗಿ, ಸೃಜನಶೀಲರಾದ ಕಿರಣ್ ಕೂಡ ನಮ್ಮ ಜೊತೆ ಚಹಾ ಹೀರುತ್ತ ರಾಜಣ್ಣನ ಮಗಳು ಪೂನಮ್ ಳ ಚೇಷ್ಟೆ ನೋಡುತ್ತಾ ಕೂತರು. ರಾಜಣ್ಣ ಸರ್ ಹನೂರಿನ ನೈರ್ಮಲ್ಯದ ಮುಖ್ಯ ಸಮಸ್ಯೆಗಳನ್ನು ವಿವರಿಸುತ್ತಾ ಹೋದರು. ನಾವು ಆಲಿಸುತ್ತಾ ಪಟ್ಟಿ ಮಾಡುತ್ತಾ ಕೂತೆವು.
ಈ ಭೇಟಿಯ ಮುಖ್ಯ ಉದ್ದೇಶ, ಹನೂರಿನ ಬೇರೆ ಬೇರೆ ಮನೆಗಳಿಗೆ ಹೋಗಿ ನೈರ್ಮಲ್ಯದ ಬಗ್ಗೆ ಶೌಚಾಲಯದ ಬಗ್ಗೆ ಅವರ ಅರಿವು, ಅಭಿಪ್ರಾಯಗಳನ್ನು ಕಲೆಹಾಕಿ ಅದಕ್ಕೆ ತಕ್ಕನಾಗಿ ಅವಾರ್ನೆಸ್ಸ್ - ಅರಿವು ಮೂಡಿಸುವ ಕಾರ್ಯಕ್ರಮವನ್ನು ಯೋಜಿಸುವುದಾಗಿತ್ತು. ರಾಜಣ್ಣ ಸರ್; ಆರ್ಥಿಕವಾಗಿ ಬೇರೆ ಬೇರೆ ಸ್ಥರದಲ್ಲಿರುವ, ಶೈಕ್ಷಣಿಕವಾಗಿ ಬೇರೆ ಬೇರೆ ಸ್ಥರದಲ್ಲಿರುವ ವಿಕಲಾಂಗರು ಹಾಗೂ ವಿಶಿಷ್ಟವಾದ ಮಾಂದ್ಯತೆ (ಸ್ಪೆಷಲ್ಲಿ ಚಾಲೆಂಜಡ್) ಇರುವವರ ಮನೆಗಳಿಗೆ ಭೇಟಿ ನೀಡಿ ವಿವರ ಸಂಗ್ರಹಿಸಿದರೆ, ಸಮಸ್ಯೆಯನ್ನು ಕೂಲಂಕುಷವಾಗಿ ಗಮನಿಸಬಹುದು ಎಂದು ಸಲಹೆಯಿತ್ತರು. ಅವರ ಸಲಹೆಯಂತೆ ಪ್ರಸಾದ್ ಹಾಗೂ ನಾಗರಾಜ್ ಅವರು ಯಾವ ಯಾವ ಮನೆಗಳನ್ನು ಭೇಟಿ ಮಾಡುವುದು ಎಂದು ಪಟ್ಟಿ ಮಾಡಿದರು. ಆ ಪಟ್ಟಿಯಂತೆ ನಾವು ಹೊರಟೆವು.
ಫೀಲ್ಡ್ ವಿಸಿಟ್ ನ ಭಾಗವಾಗಿ ನಾವು ಮೊದಲು ಹೋಗಿದ್ದು ಎ.ಜೆ ಕಾಲೋನಿಗೆ. ಅಲ್ಲಿನ ಮನೆಗಳಲ್ಲಿ, ಏಕೆ ಶೌಚಾಲಯವಿಲ್ಲ? ಅದರ ಇರುವಿಕೆಯ ಪ್ರಾಮುಖ್ಯತೆಯ ಅರಿವು ಇದೆಯೇ? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತ, ಅವರ ಉತ್ತರವನ್ನು ಬರೆದುಕೊಳ್ಳುತ್ತಾ ಹೋದೆ. ವಿನಯ ಫೋಟೋ, ವೀಡಿಯೊ ತೆಗೆಯುವುದು; ಅವರಿಗೆ ಪ್ರಶ್ನೆ ಕೇಳುವುದರಲ್ಲಿ ನಿರತನಾದ. ಪ್ರಸಾದ್, ಕಿರಣ್ ಹಾಗೂ ನಾಗರಾಜ್ ಅವರು ಕೂಡ ಪ್ರಶ್ನೆ ಕೇಳುವುದರಲ್ಲಿ, ಉತ್ತರ ಆಲಿಸುವುದರಲ್ಲಿ ತಲ್ಲೀನರಾದರು. ಆ ಕಾಲೋನಿಯವರು ಕೂಡ ಬಂದು ನಿಂತರು. ಶೌಚಾಲಯಕ್ಕಾಗಿ ಅವರು ತಾಲೂಕು ಪಂಚಾಯಿತಿಗೆ, ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಪತ್ರವನ್ನು ತಂದು ತೋರಿಸಿದರು. ಅಲ್ಲಿನ ಪುಟ್ನಂಜಮ್ಮನಿಗೆ ಕಾಲು ಸ್ವಾಧೀನ ಕಳೆದುಕೊಂಡಿದೆ. ತಾಯಿಯೇ ಪ್ರತಿನಿತ್ಯ ಬಯಲಿನೆಡೆಗೆ ಕರೆದೊಯ್ಯಬೇಕಾದ ಸ್ಥಿತಿ. ನಾವು ಭೇಟಿ ನೀಡಿದ ಬಹಳಷ್ಟು ಮನೆಗಳಲ್ಲಿ ನಮಗೆ ಸಂವಾದಿಸಲು ಸಿಕ್ಕಿದ್ದು ಮನೆಯ ಮಹಿಳೆಯರೇ!
ಶೌಚಾಲಯ ಬೇಕು ಎಂದು ಅವರಿಗೆ ಗೊತ್ತಿದ್ದರೂ, ಹಣವಿಲ್ಲದೆ, ಜಾಗವಿಲ್ಲದೆ ಶೌಚಾಲಯ ಕಟ್ಟಿಸಲಾಗುತ್ತಿಲ್ಲ ಎಂದರು. "ಎಷ್ಟು ದಿನಕ್ಕೊಮ್ಮೆ ನೀರು ಬರುತ್ತದೆ? ನೀರಿನ ಸಮಸ್ಯೆ ಇದೆಯೇ?" ಎಂಬಿತ್ಯಾದಿ ಪ್ರಶ್ನೆ ಕೇಳುತ್ತ ಹೋದೆವು.ಸುಮಾರು ಮನೆಗಳ ಭೇಟಿ ಮುಗಿದಾಗ ಗೆಳೆಯ ಕಾಂತು ಬಂದ! ನಮಗೆ ಹೊಳೆಯದ, ನಾವು ಯೋಚಿಸದ ಹಲವು ಪ್ರಶ್ನೆಗಳು ಅವನ ಬತ್ತಳಿಕೆಯಲ್ಲಿದ್ದವು. "ಬನ್ನಿ, ಊಟ ಮಾಡಿ ಆಮೇಲೆ ಮುಂದುವರಿಸೋಣ" ಎಂದು ನಾಗರಾಜ್ ಅವರು ಹೇಳಿದರು. ನಮಗೂ ಹೊಟ್ಟೆ ಹಸಿದಿತ್ತು. ಅಲ್ಲೇ ಒಂದು ಹೋಟೆಲ್ನಲ್ಲಿ ಊಟ ಮಾಡಿ ಮತ್ತೆ ಭೇಟಿ ಮುಂದುವರೆಸಿದೆವು. ಸುಮರು ಹದಿನೈದು ಮನೆಗಳ ಭೇಟಿ ಮಾಡಿ, ಅವಾರ್ನೆಸ್ಸ್ ಕಾರ್ಯಕ್ರಮಕ್ಕೆ ಬೇಕಾದ ಮಾಹಿತಿಗಳೆಲ್ಲ ಸಿಕ್ಕವು ಎಂದು ದೃಢ ಪಟ್ಟ ಮೇಲೆ, ಇಷ್ಟು ಸಾಕು; ರಾಜಣ್ಣ ಸರ್ ಮನೆಗೆ ಹೋಗೋಣ ಎಂದು ನಡೆಯತೊಡಗಿದೆವು.
ರಾಜಣ್ಣ ಸರ್ ಮನೆಯಲ್ಲಿ ಎಲ್ಲರೂ ಕೂತು, ಸಂಗ್ರಹಿಸಿದ ಅಂಶಗಳ ಬಗ್ಗೆ ಚರ್ಚಿಸಿ ಮುಂದಿನ ಹೆಜ್ಜೆಯ ಬಗ್ಗೆ ಮಾತನಾಡುತ್ತಿದ್ದಂತೆ ಅವರ ಪತ್ನಿ ಮತ್ತೆ ಚಹಾದೊಂದಿಗೆ ಪ್ರತ್ಯಕ್ಷರಾದರು! ಮಾತುಕತೆ ಮುಗಿಯುತ್ತಿದ್ದಂತೆ ನಾಗರಾಜ್ ಅವರು "ನಮ್ಮ ಹನೂರ್ ನ ಮಾದರಿ ಊರಾಗಿ ಮಾಡಬೇಕು ಅಂತಿದೀರ, ದೇವರು ನಿಮಗೆ ಹೆಚ್ಚಿನ ಶಕ್ತಿ ಕೊಡಲಿ" ಎಂದು ಹಾರೈಸಿ ಹೊರಟರು. ಪ್ರಸಾದ್ ಅವರು ಕೂಡ ನಮಗೆ ಶುಭ ವಿದಾಯ ಹೇಳಿ ನಾಗರಾಜ್ ಅವರನ್ನು ಹಿಂಬಾಲಿಸಿದರು. ನಾವು ಮೂವರು ಕೂಡ ಖಾಲಿ ಬಾಟಲಿಯಲ್ಲಿ ನೀರು ತುಂಬಿಸಿಕೊಂಡು ಹೊರಡಲು ಸನ್ನದ್ಧರಾದೆವು. ಕಿರಣ್ ಅವರು ಕೂಡ ನಮ್ಮೊಡನೆ ಹೊರಟರು.
ತಮ್ಮ ಕಾರಿನಲ್ಲಿ, ರಾಜಣ್ಣ ಸರ್ ನಮ್ಮನ್ನು ಬಸ್ ನಿಲ್ದಾಣದ ತನಕ ಬೀಳ್ಕೊಟ್ಟರು. ಕಾರು ನಮ್ಮ ನೋಟದಿಂದ ಮರೆಯಾಗುವವರೆಗೂ, ಪೂನಮ್ ಮತ್ತು ಭಾನು ನಮ್ಮೆಡೆಗೆ ಕೈ ಬಿಸಿ "ಟಾಟಾ.. ಬೈಬೈ" ಹೇಳುತ್ತಲಿದ್ದರು. ನಾವೂ ಅವರೆಡೆಗೆ ಕೈ ಬೀಸುತ್ತಾ ನಿಂತೆವು. ಹಾಗೆಯೆ ಸ್ವಲ್ಪ ಹೊತ್ತಿನಲ್ಲಿ ಕೊಳ್ಳೆಗಾಲದ ಕಡೆ ಹೋಗುವ ಬಸ್ಸು ಬಂದಿತು. ದರ್ಶನ ಅಭಿನಯದ ಕಲಾಸಿಪಾಳ್ಯ ಚಿತ್ರ ಬೇರೆ ಹಾಕಿದ್ರು ಬಸ್ಸಲ್ಲಿ. ಅಲ್ಲಿ "ಸುಂಟರಗಾಳಿ ಸುಂಟರಗಾಳಿ" ಅಂತ ಹಾಡು ಬರ್ತಾ ಇದ್ರೆ, ಬಸ್ಸಲ್ಲಿ ಒಳ್ಳೆ ತಂಗಾಳಿ ಬೀಸ್ತಾ ಇತ್ತು. ನಮ್ ಬಸ್ಸಿನ ನಿರ್ವಾಹಕ "ಕೊಳ್ಳೆಗಾಲದಲ್ಲಿ ನಮ್ದೆ ಬಸ್ಸಿದೆ. ಅವ್ರಿಗ್ ನಿಲ್ಸಕ್ ಹೇಳಿದೀನಿ, ಅದರಲ್ಲೇ ಹೋಗಿ" ಅಂದ. ಸರಿ ಅಂದ್ಕೊಂಡು ಕೊಳ್ಳೆಗಾಲದಲ್ಲಿ ಈ ಬಸ್ಸಿಂದ ಇಳ್ಕೊಂಡು ಓಡಿ ಹೋಗಿ ಆ ಬಸ್ ಹತ್ತಿದ್ವಿ. ಹತ್ತಿದ ಮೇಲೆ ಗೊತ್ತಾಗಿದ್ದು; ಸೀಟ್ ಇಲ್ಲ ಅಂತ! ನಾನು, ಕಾಂತು ಬಸ್ ಇಂಜಿನ್ ಇರತ್ತಲ್ವಾ ಅದರ್ ಮೇಲೆ ಕೂತ್ವಿ. ಪುಣ್ಯಕ್ಕೆ ಅದಕ್ಕೆ ಕುಶನ್ ಹಾಕ್ಸಿದ್ರು! ವಿನಯ ಫುಟ್ ಬೋರ್ಡ್ ಪಕ್ಕ ಕೂತ.
ಈ ಬಸ್ಸು ಕೊಳ್ಳೆಗಾಲ ಟು ಬೆಂಗಳೂರು ತಡೆರಹಿತ! ಕಾಂತು ಕಿವಿಯುಲಿ ಹಾಕ್ಕೊಂಡು ಹಾಡು ಕೇಳ್ತಾ ಕೂತ. ನಾನು ವಾಟ್ಸ್ ಆಪ್ಪ್, ಫೆಸ್ಬೂಕ್ ಅಲ್ಲಿ ಸಮಯ ಕೊಲ್ಲ ಹತ್ತಿದೆ. ಒಳ್ಳೆ ಮಳೆ ಬೇರೆ ಬರೋದಕ್ ಶುರು ಆಯಿತು. ಸೀಟ್ ಸಿಕ್ಕಿದವ್ರ್ ಎಲ್ಲ ಗಡದ್ ಆಗಿ ನಿದ್ದೆ ಮಾಡ್ತಾ ಇದ್ರು. ಮೊಬೈಲ್ನಲ್ಲಿ ಉಳಿದವರು ಕಂಡಂತೆ ಚಿತ್ರದ "ಗಾಟಿಯ ಇಳಿದು" ಹಾಡು ಗುನುಗ್ತಾ ಇತ್ತು. "ಸಮಯ ಸಾಗೊ ಗತಿಯ ತಡೆಯುವ ಪರಿಯ ನಾ ಕಾಣೆನು.." ಅಂತ ಬಂದಾಗ ನನಗಂತೂ ಸಮಯ ಬೇಗ ಸಾಗಿ ಬೆಂಗಳೂರು ಬೇಗ ತಲುಪಿದರೆ ಸಾಕಪ್ಪ! ಇಲ್ಲಾ ಅಂದ್ರೆ ಎರಡ್ ಇದ್ದಿದ್ ನಾಲಕ್ ಆಗ್ ಹೋಗತ್ತೆ ಅನ್ನೋ ಭಯ ಕಾಡ್ತಾ ಇತ್ತು! ಅಂತೂ ಇಂತೂ ಬೆಂಗಳೂರು ತಲುಪಿದ್ವಿ. ವಿನಯ ಆರ್.ವಿ ಕಾಲೇಜ್ ಹತ್ರ ಇಳ್ಕೊಂಡ್ರೆ ನಾನು ಕಾಂತು ಸ್ಯಾಟ್ ಲೈಟ್ ಬಸ್ ನಿಲ್ದಾಣದಲ್ಲಿ ಇಳ್ಕೊಂಡ್ವಿ.
ನಾನು, ಕಾಂತು ಇಬ್ಬರೂ ಕಾಫಿ ಪ್ರಿಯರು; ಅದರಲ್ಲೂ ಸ್ಟ್ರಾಂಗ್ ಫಿಲ್ಟರ್ ಕಾಫಿ ಸಿಕ್ಕಿತೆಂದರೆ ಸ್ವರ್ಗಕ್ಕೆ ಮೂರೇ ಗೇಣು! ಬೆಳಿಗ್ಗೆ ವಿನಯನ ಜೊತೆ ಬಾದಾಮಿ ಹಾಲು ಕುಡಿದ ನಂದಿನಿ ಕೇಂದ್ರದಲ್ಲೇ ಎರಡು ಕಾಫಿ, ನಾಲ್ಕು ಬಿಸ್ಕತ್ತು ತಗೊಂಡು ಕೂತ್ವಿ. ಅವ್ನೂ ಕೂಡಾ ಹಿಂದಿನ ದಿನ ಬರಿ ಎರಡ್ ಗಂಟೆ ಮಲಗಿದ್ದ. ಬಾಡಿ ಪಾರ್ಟ್ಸ್ ಎಲ್ಲ ನೋಯ್ತಾ ಇತ್ತು. ನಿದ್ರಾದೇವಿ ಕೈ ಬೀಸಿ ಕರಿತಾ ಇದ್ಲು! ಕಾಫಿ ಹೀರ್ತಾ ಹೇಳ್ದೆ.. "ಮಗ.. ಲೈಫ್ ಟೈಮ್ ಎಕ್ಸಪಿರಿಯೆನ್ಸ್ ಲೋ" ಎಂದು. ಇಬ್ಬರೂ ಮುಗುಳ್ನಗುವನ್ನು ವಿನಿಮಯ ಮಾಡಿಕೊಂಡು, ನೆನಪಿನ ಹೊತ್ತಿಗೆಗೆ ಇನ್ನೊಂದು ಪುಟ ಸೇರ್ಪಡೆಯಾಯಿತು ಎಂದು ಯೋಚಿಸುತ್ತಾ, ಉಳಿದರ್ಧ ಕಾಫಿಯ ಹೀರುತ್ತ ಕೂತೆವು.
*ಕಲೈಡೊ ಸ್ಟಾಂಡ್ ಪಾಯಿಂಟ್ ಬ್ಲಾಗ್ ಗೆ ಬರೆದದ್ದು*

Location:
Bengaluru, Karnataka 560001, India
Subscribe to:
Posts (Atom)