Friday, 13 October 2017

ನಾನು ದೇವರನ್ನು ಕಂಡಿದ್ದೇನೆ!




ನಾನ್ ಕೆಲಸಕ್ ಸೇರಿ ಕೆಲ ಸಮಯ ಆದಾಗ ನನ್ ಹಲವು ಗೆಳೆಯರು ಅವರಿಗ್ ಬಂದ್ ಸಂಬಳದಲ್ಲಿ ಬೈಕನ್ನ ಕೊಂಡುಕೊಂಡ್ರು. ಕೆಲವರಂತೂ ಕಾರನ್ನೇ ಕೊಂಡ್ರು. ನನ್ ಕೈಯಲ್ಲಿ ಕೊಳ್ಳೋಕ್ ಆಗಿದ್ದು ಸೈಕಲ್ ಮಾತ್ರ. ಚಿಕ್ಕಂದ್ನಲ್ಲಿ ಗೇರ್ ಸೈಕಲ್ ಬೇಕು ಅಂತ ಅಪ್ಪನ್ನ ತುಂಬಾ ಪೀಡ್ಸಿದ್ದೆ. ಕೊಳ್ಳೋಕ್ ಆಗಿರ್ಲಿಲ್ಲ. ಆದ್ರೆ ಕೆಲಸಕ್ ಸೇರ್ದಾಗ ಮುಂದ್ಗಡೆ, ಹಿಂದ್ಗಡೆ ಎರಡೂ ಕಡೆ ಗೇರು, ಶಾಕ್ ಅಬ್ಸಾರ್ಬರು, ಮುಂದ್ಗಡೆ ಡಿಸ್ಕ್ ಬ್ರೇಕ್! ಇದೆಲ್ಲಾ ಇರೋ ಒಂದು ಚೆಂದದ ಸೈಕಲನ್ನ ಡೆಕತ್ಲಾನಲ್ಲಿ ತೆಗೊಂಡೆ. ದಿನಾ ಅಳವೆಡೆಗೆ ಸೈಕಲಲ್ಲೇ ಓಡಾಡೋಕೆ ಶುರು ಮಾಡಿದೆ. 
ನಂಗಂತೂ ಭಾರಿ ಖುಷಿ! ವೈಟ್ ಫೀಲ್ಡ್ ತುಂಬಾ ಟ್ರಾಫಿಕ್ ಇರೋದ್ರಿಂದ ಬೈಕು, ಕಾರು, ಬಸ್ಸಿಗಿಂತ ಸೈಕಲಲ್ಲೇ ಬೇಗ ತಲ್ಪ್ ಬಹುದಿತ್ತು. ದೇಹಕ್ ಸ್ವಲ್ಪ ವ್ಯಾಯಾಮಾನೂ ಆಗೋದು, ದುಡ್ಡೂ ಉಳಿಯೋದು! ಅಷ್ಟೇ ಅಲ್ದೆ, "ಆಫೀಸಿಗ್ ಹೇಗ್ ಓಡಾಡ್ತಿಯಾ?" ಅಂತ ಯಾರದ್ರೂ ಕೇಳ್ದಾಗ, "ಸೈಕಲಲ್ಲಿ" ಅನ್ನೋವಾಗ ಮುಖದಲ್ಲೊಂದು ಮಂದಹಾಸ ಗೊತ್ತಿಲ್ದೆ ಪ್ರತ್ಯಕ್ಷ ಆಗೋದು. ಕೇಳಿಸ್ಕೊಂಡೋರು ಹುಬ್ಬೇರಿಸ್ಕೊಂಡು, "ಕಾರಲ್ಲಿ ಬೈಕಲ್ಲಿ ಓಡಾಡೋಕಿಂತ ಬೆಸ್ಟ್ ಅದು! ತಲೆ ನೋವ್ ಇರಲ್ಲ" ಅನ್ನೋರು. "ಹೌದು! ನೀವೂ ಒಂದ್ ಸೈಕಲ್ ತೆಗೊಂಡು ಸೈಕಲಲ್ಲೇ ಓಡಾಡಿ" ಅಂತ ನಾನ್ ಅಂದ್ರೆ, ನಕ್ಕೊಂಡು ವಿಷ್ಯ ಬದಲಾಯಿಸೋರು!

ಹೀಗೆ ಹೋದ್ ವರ್ಷ ಸೆಪ್ಟೆಂಬರ್ ಸಮಯದಲ್ಲಿ ಅಳವೆಡೆಗ್ ಹೋಗೇ ತಿಂಡಿ ತಿನ್ನೋಣ ಅಂದ್ಕೊಂಡು ಸೈಕಲ್ ತುಳ್ಕೊಂಡು ಹೋಗ್ತಾ ಇದ್ದೆ. ಅಷ್ಟಾಗಿ ಟ್ರಾಫಿಕ್ ಇರ್ಲಿಲ್ಲ. ತಲೆಲಿ ಯಾವ್ದೋ ಹಾಡು ಓಡ್ತಾ ಇತ್ತು. ಹಂಗೆ ಹಾಡ್ ಗುನುಗ್ತಾ ಹೋಗ್ಬೇಕಾದ್ರೆ ಸಡನ್ ಆಗಿ ಒಂದ್ ಆಟೋ ನಂಗ್ ಗುದ್ತು. ನಂಗ್ ಅರಿವಾಗೋ ಮೊದ್ಲೇ ನಾನ್ ಸೈಕಲಿಂದ ಜಿಗ್ದು ರಸ್ತೆಗ್ ಮುಖ ಮಾಡಿ ಬಿದ್ದಿದ್ದೆ. ಟಾರ್ ಕಿತ್ತೋದ್ ರಸ್ತೆ ಅಂತ ಸುಮಾರ್ ಸಲ ಬೈಕೊಂಡಿದ್ದಕ್ಕೊ ಏನೋ, ಎರಡ್ ದಿನದ್ ಹಿಂದೆ ಹೊಸ್ದಾಗಿ ಟಾರ್ ಹಾಕಿ ರಸ್ತೆ ಫಳ ಫಳ ಹೊಳಿತಾ ಇತ್ತು. ಬಿದ್ ಹೊಡೆತಕ್ಕೆ ಗಲ್ಲ ರಸ್ತೆಗೆ ಬಡ್ದು ಗಾಯ ಆಗಿ ಗಲ್ಲದಿಂದ ರಕ್ತ ಸುರಿಯೋಕ್ ಶುರು ಆಯ್ತು. ಆಟೊ ಕಡೆ ಕಷ್ಟಪಟ್ ಕಣ್ ಹಾಯಿಸ್ದೆ. ಅವ್ನು ನಿಲ್ಲಿಸ್ದೆ ಹಂಗೆ ಮುಂದ್ ಹೋಗ್ಬಿಟ್ಟಿದ್ದ. ಸೈಕಲ್ ಒಂದ್ ಕಡೆ, ನಾನ್ ಒಂದ್ ಕಡೆ. ಖಾಲಿ ಹೊಟ್ಟೆಲಿ ಇದ್ದಿದ್ರಿಂದ, ಅದ್ರಲ್ಲೂ ರಕ್ತ ಸುರಿಯೋಕ್ ಶುರು ಆಗಿದ್ರಿಂದ ತಲೆ ಸುತ್ತೋಕ್ ಶುರು ಆಯ್ತು.

ಕಾಲು ತುಂಬಾ ನೋವ್ ಆದ್ ಹಾಗ್ ಆಯ್ತು. ನೋಡಿದ್ರೆ ಜೀನ್ಸ್ ಪ್ಯಾಂಟು ಹರಿದು ಮಂಡಿಗೆ ಗಾಯವಾಗುವಷ್ಟು ಜೋರಾಗಿ ತರ್ಚಿತ್ತು. ರಸ್ತೆಗ್ ಎಡಗೈ ಊರಿ ಮೇಲ್ ಏಳೋಣ ಅಂತ ಪ್ರಯತ್ನ ಪಟ್ಟೆ. ಕೈಗೆ ಬಲವೇ ಇಲ್ಲದ ಹಾಗ್ ಇತ್ತು. ನೋಡಿದ್ರೆ ಬೆರಳುಗಳು ರಸ್ತೆ ಜೊತೆ ತಿಕ್ಕಾಟ ನಡ್ಸಿ, ಚರ್ಮ ಕಿತ್ ಹೋಗಿ, ಮೂರು ಬೆರಳುಗಳಿಂದ ರಕ್ತ ಸುರಿತಾ ಇತ್ತು. 
ಅಷ್ಟರಲ್ಲಿ ಯಾರೋ ಆಟೋದವರು ಬಂದು ಮುಖಕ್ ನೀರ್ ಹಾಕಿ, ಕುಡಿಯೋಕ್ ನೀರ್ ಕೊಟ್ರು. ತಲೆ ಸುತ್ತುತ್ತಾ ಇದ್ದದ್ದರಿಂದ ನಂಗ್ ಎಲ್ಲವೂ ಅಸ್ಪಷ್ಟ ಕಲಾಕೃತಿಗಳ್ ತರ ಕಾಣ್ತಾ ಇದ್ವು. ನನ್ ಸುತ್ತ ೪-೫ ಜನ ಇದ್ದದ್ ಮಾತ್ರ ಗೊತ್ತು. ಗಲ್ಲಕ್ಕೆ, ಮುಖಕ್ಕೆ ಗಾಯ ಆಗಿದ್ರಿಂದ ಅವ್ರು ಕೇಳಿದ್ ಪ್ರಶ್ನೆಗೆ ಬಾಯಿ ಬಿಟ್ಟು ಉತ್ರಾನೂ ಕೊಡೋಕ್ ಆಗ್ತಾ ಇರ್ಲಿಲ್ಲ. 
ಆಗ ಯಾರೋ, "ಬಾ ಗಾಡಿ ಹತ್ತು" ಅಂತ ಅವನ್ ಸ್ಕೂಟಿ ಮೇಲ್ ಕೂರೋಕ್ ಹೇಳ್ದ. ಅಲ್ಲಿದ್ ನಾಲ್ಕೈದ್ ಜನ್ರಲ್ಲಿ ಯಾರೋ ಸೈಕಲ್ಲನ್ನ ರಸ್ತೆಯ ಬದಿಯಲ್ ಇಟ್ಟು ಬೀಗ ಹಾಕಿ, ಓಡಿ ಬಂದು ಬೀಗದ್ ಕೈಯನ್ನ ನನ್ ಬೆನ್ಚೀಲ (bag pack) ದಲ್ಲಿ ಹಾಕಿದ. ನಾ ಕಷ್ಟದಲ್ಲಿ ಸ್ಕೂಟಿ ಹತ್ತಿ ಕೂತೆ. ಸ್ಕೂಟಿಯವ ಗಾಡಿ ಓಡಿಸ್ತಾ, "ಏನಾಯಿತು?" "ಯಾರು ಗುದ್ದಿದ್ದು?" ಅಂತೆಲ್ಲಾ ಕೇಳ್ತಾ ಇದ್ದ. ನಾನು ಉತ್ರಾ ಕೊಡೋಕೆ ಪ್ರಯತ್ನ ಪಡ್ತಾ ಇದ್ದೆ. ಆದ್ರೆ ತಲೆ ಸುತ್ತು ಜೋರಾಗಿ ಗಾಡಿಯಿಂದ ಬೀಳೋ ತರ ಅನ್ಸಿ ಭಯ ಆಗೋಕ್ ಶುರುವಾಗಿ "ನಾನ್ ತಲೆ ಸುತ್ತಿ ಬೀಳ್ತೀನಿ ಅನ್ನಿಸ್ತಾ ಇದೆ" ಅಂತ ಹೇಳ್ದೆ. ಅವ್ನು "ಎರಡೇ ನಿಮಿಷ ಗಟ್ಟಿಯಾಗ್ ಕೂತ್ಕೋ ಇಲ್ಲೇ ಒಂದ್ ಕ್ಲಿನಿಕ್ ಇದೆ" ಅಂದ. ವೇಗವಾಗ್ ಹೋಗಿ ಆ ಕ್ಲಿನಿಕ್ ಮುಂದೆ ನಿಲ್ಲಿಸ್ದ. ಕ್ಲಿನಿಕ್ ತೆರ್ದಿದ್ರೂ ಡಾಕ್ಟರ್ ಕಾಣ್ಲಿಲ್ಲ. ನನಗ್ ಒಳಗ್ ಕೂರೋಕ್ ಹೇಳಿ, ಓಡಿ ಹೋಗಿ ಡಾಕ್ಟರನ್ನ ಕರ್ಕೊಂಡ್ ಬಂದ. 

ಕೈಗೆ ಬಲವೇ ಇಲ್ಲದ್ ಹಾಗ್ ಆಗಿದ್ ನೋಡಿ ನಂಗೆ ಮೂಳೆ ಮುರ್ದ್ ಹೋಗಿದೆ ಅಂತ ಅಳುಕು ಶುರು ಆಯ್ತು. ಡಾಕ್ಟರ್ ಬಂದು ಗಾಯಗಳನ್ನ ನೋಡಿ ಒಂದಿಷ್ಟು ಮಾತ್ರೆ, ಚುಚ್ಚು ಮದ್ದು, ಮುಲಾಮುಗಳನ್ನ ಬರೆದ್ಕೊಟ್ಟು, ತರೋಕ್ ಹೇಳಿದ್ರು. ಅವ್ನು ತರೋಕ್ ಹೊರಡ್ತಾ ಇದ್ ಹಾಗೆ ಅವ್ನಿಗ್ ನನ್ ಪರ್ಸನ್ನ ಕೊಟ್ಟೆ. ಅವನು ನನ್ನ ಪರ್ಸಿನಲ್ಲಿ ೫೦೦ ರೂಪಾಯಿ ಇದ್ದದ್ದನ್ನ ನೋಡಿ, "ಇರಲಿ ಊಟಕ್ಕೆ, ಡಾಕ್ಟರ್ ಫೀಸಿಗೆ ಬಾಕಾಗ್ಬಹುದು, ಇಟ್ಕೊ ನಂಗೆ ಆಮೇಲೆ ಕೊಡೋವಂತೆ" ಅಂತ ಹೇಳಿ ಪರ್ಸ್ ಇಟ್ಟು, ಮೆಡಿಕಲ್ಸ್ ಗೆ ಹೋಗಿ ಅದನ್ನೆಲ್ಲಾ ತಂದುಕೊಟ್ಟು, ವೈದ್ಯರು ಶುಶ್ರೂಷೆ ಮಾಡಲು ಶುರು ಮಾಡ್ತಾ ಇದ್ ಹಾಗೆ "ನಂಗೆ ಒಂದು ಮೀಟಿಂಗ್ ಇದೆ, ಸ್ವಲ್ಪ ತಡ ಆಗ್ತಾ ಇದೆ, ನಾನ್ ಹೋಗಿರ್ತೀನಿ, ನೀನು ಮನೆಗ್ ಹುಶಾರಾಗಿ ತಲ್ಪು, ಆಫೀಸಿಗೆಲ್ಲಾ ಹೋಗ್ಬೇಡ" ಅಂತ ನಕ್ಕು ಹೊರಟ. ನಾನು ನನ್ ಫೊನ್ ಕೊಟ್ಟು "ನಿನ್ ನಂಬರ್ ಸೇವ್ ಮಾಡ್ಕೊಡು" ಅಂದೆ. 'ಆಕಾಶ್' ಅಂತ ಉಳಿಸಿ ಹೋದ. 

ನಾನು ಕ್ಲಿನಿಕ್ ಮುಂದೇನೆ ಇದ್ ಬಸ್ ನಿಲ್ದಾಣಕ್ ಹೋಗಿ ಬಸ್ ಹತ್ತಿ ಮನೆ ಸೇರ್ಕೊಂಡೆ. ಸ್ವಲ್ಪ ಹೊತ್ತು ಸುಧಾರಿಸ್ಕೊಂಡೆ. ಆಗ ಮಾತ್ರೆ ನೆನಪ್ ಆಯ್ತು. ಮಧ್ಯಾಹ್ನ ಮಾತ್ರೆ ತೆಗೊಳ್ಳೋ ಮೊದ್ಲು ಊಟ ಮಾಡ್ಬೇಕಲ್ಲ! ಊಟ ತರೋಕ್ ಹೋಗೋಕೂ ಆಗದ ಸ್ಥಿತಿಯಲ್ಲಿದ್ದೆ. ಗೆಳೆಯ ಭರತನಿಗೆ ಫೋನು ಹಾಯಿಸ್ದೆ. ಅವನು ಪಾಪ ಅಳವೆಡೆಗ್ ಹೋಗೋ ಹಾದಿಯಲ್ಲಿ ಒಂದು ಹೋಟೆಲ್ನಲ್ಲಿ ಮೊಸ್ರನ್ನ ಕಟ್ಟಿಸ್ಕೊಂಡು ನನ್ ಕೋಣೆಗ್ ತಂದು ಕೊಟ್ಟು, ಆರೋಗ್ಯ ವಿಚಾರ್ಸಿ ಹೋದ. ಉಂಡು, ಮಾತ್ರೆ ತೆಗೊಂಡ್ ಮಲಗಿದವ್ನಿಗೆ ಸಂಜೆ ಹೊತ್ತಿಗೆ, ರಸ್ತೆ ಬದಿಯಲ್ಲೇ ನಿಲ್ಲಿಸಿ ಬಂದ ಸೈಕಲ್ಲಿನ್ ನೆನಪಾಯ್ತು. ಗಾಬರಿಯಾಗಿ ಗೆಳೆಯ ಪ್ರಶಾಂತನಿಗ್ ಕರೆ ಮಾಡಿ ನಡೆದ ಸಂಗತಿ ತಿಳಿಸ್ದೆ. ಅವನೂ ನನ್ನ ಥರ ಸೈಕಲ್ ಸವಾರ. ಓಡಿ ಬಂದು, ಆ ಆಟೋದವ್ನಿಗೆ ಶಪಿಸಿ ನನ್ನೊಡನೆ ಸೈಕಲ್ ಇಟ್ಟ ಜಾಗದೆಡೆಗ್ ಹೆಜ್ಜೆ ಹಾಕ್ದ. ಅಲ್ಲಿಗ್ ಹೋಗಿ ನೋಡಿದ್ರೆ ನಾನಿಟ್ ಜಾಗದಲ್ಲಿ ಸೈಕಲ್ ಇರ್ಲಿಲ್ಲ. ತಲೆ ಕೆಟ್ಟ್ ಹೋದಾಗ್ ಆಯ್ತು! ಏನ್ ಮಾಡೋಕೂ ತೋಚ್ಲಿಲ್ಲ. ಪಕ್ಕದಲ್ಲೇ ಒಂದು 'ಕಾಫಿ ಡೇ' ಇತ್ತು. ಅದ್ರ ಸೆಕ್ಯೂರಿಟಿ ಗಾರ್ಡ್ ಹತ್ರ ಹೋಗಿ "ಬೆಳಿಗ್ಗೆ ಇಲ್ಲಿ ಆಕ್ಸಿಡೆಂಟ್ ಆದಾಗ ಸೈಕಲನ್ನ ಇಲ್ಲೇ ಬಿಟ್ ಹೋಗಿದ್ದೆ, ನೀವ್ ನೋಡಿದ್ರಾ?" ಅಂತ ಕೇಳ್ದೆ. ಅವನು "ಹಾ! ರಸ್ತೆಯಲ್ಲೇ ಇದ್ರೆ ಯಾರಾದ್ರೂ ಕದ್ಗೊಂಡು ಹೋಗ್ಬಹುದು ಅಂತ ನಮ್ ಬೇಸ್ಮೆಂಟಲ್ಲಿ ಪಾರ್ಕ್ ಮಾಡಿದೀನಿ. ಬನ್ನಿ ಕೊಡ್ತೀನಿ" ಅಂದ. ಅವ್ನ್ ಕಾಳಜಿ ನೋಡಿ ಅತೀವವಾಗ್ ಖುಷಿ ಆಯ್ತು. ಬೇಸ್ಮೆಂಟಿಗ್ ಹೋಗಿ ಸೈಕಲ್ ತೆಗೊಂಡು,ಸೆಕ್ಯೂರಿಟಿಗೆ ನನ್ನಿ ಹೇಳಿ ಅಲ್ಲಿಂದ ಹೊರಟ್ವಿ. ನಂಗೆ ಕೈ ಏಟಾಗಿದ್ರಿಂದ ಕೋಣೆ ತಂಕ ಪ್ರಶಾಂತನೇ ಸೈಕಲನ್ನ ತಳ್ಕೊಂಡು ಬಂದು ನಿಲ್ಸಿ ಹೋದ. ಕೈ ಸರಿ ಹೋಗೋಕೆ ಡಾಕ್ಟರ್ರು ಕ್ರೇಪ್ ಬ್ಯಾಂಡೇಜ್ ಹಾಕೋಳೋಕ್ ಹೇಳಿದ್ರು. ನಂಗೆ ಒಂದ್ ಕೈಯಲ್ಲಿ ಸರ್ಕಸ್ ಮಾಡಿ ಹಾಕೊಳ್ಳೊಕ್ ಆಗಲ್ಲ ಅಂತ ಗೆಳೆಯ ಸಚಿನ್ ದಿನಾ ಬೆಳಿಗ್ಗೆ ಕ್ರೇಪ್  ಬ್ಯಾಂಡೇಜ್ ಹಾಕಿ ಅಳವೆಡೆಗೆ ಜೊತೆಗ್ ಕರ್ಕೊಂಡು ಹೋಗಿ, ವಾಪಸ್ಸು ಬರ್ತಾ ಬಿಡ್ತಾ ಇದ್ದ. ಇವ್ರೆಲ್ಲರ್ ಸಹಾಯ್ದಿಂದ ಅಂತ ಒಂದ್ ಸಂಕಷ್ಟದ್ ಸ್ಥಿತಿನ ಸುಲಭ್ವಾಗ್ ನಿಭಾಯಿಸೋ ಹಾಗಾಯ್ತು. ತಡ್ಕೊಳಕ್ ಆಗ್ದೇ ಇರೋ ಅಷ್ಟು ನೋವ್ ಇದ್ರೂ, ಎಲ್ರ ಕಾಳಜಿಯಿಂದ, ಅಕ್ಕರೆಯಿಂದ ನಾ ಕಳ್ದ್ ಹೋಗಿದ್ದೆ.

"ದೇವರು ಒಬ್ಬ, ಹೆಸರು ಹಲವು" - ಈ ಮಾತನ್ನ ಚಿಕ್ಕಂದಿನಿಂದ ಕೇಳಿದ್ದೆ. ಆದ್ರೆ ಈ ಘಟನೆಯಿಂದ, ನನ್ ಪರಿಚಯಾನೇ ಇಲ್ಲದಿದ್ದ್ರೂ ಕ್ಲಿನಿಕ್ ಗೆ ಕರ್ಕೊಂಡು ಹೋಗಿ, ಅವನೇ ₹250 ಯ ಮದ್ದು ಕೊಡಿಸಿ, ಹಿಂಪಡೆಯೋಕೆ ಸಿಗ್ತೀನಿ ಅಂತ ಹೇಳಿ ಒಂದ್ ವರ್ಷ ಆದ್ರೂ ಸಿಗದ ಆಕಾಶನಲ್ಲಿ, ಸೈಕಲ್; ರಸ್ತೆ ಬದಿಯಿದ್ದರೆ ಯಾರಾದರೂ ಕದೀಬಹುದು ಅಂತ ಕಾಳಜಿಯಿಂದ ಭದ್ರವಾಗ್ ಇಟ್ಟ ಸೆಕ್ಯೂರಿಟಿಯಲ್ಲಿ, ಮಧ್ಯಾಹ್ನ ಊಟ ತಂದ್ ಕೊಟ್ ಭರತನಲ್ಲಿ, ತನ್ ಕೆಲ್ಸ ಬಿಟ್ಟು ನನ್ ಜೊತೆ ಇದ್ ಪ್ರಶಾಂತನಲ್ಲಿ, ದಿನಾ ಕ್ರೇಪ್ ಬ್ಯಾಂಡೇಜ್ ಹಾಕಿ ಅಳವೆಡೆಗ್ ಕರೆದೊಯ್ದು, ಕರೆ ತರ್ತಾ ಇದ್ ಸಚಿನನಲ್ಲಿ ನಾನ್ ದೇವ್ರನ್ನ ಕಂಡಿದ್ದೇನೆ! ಈ ಹಲವು ಹೆಸರುಗಳಲ್ಲಿ ಕಂಡಿದ್ದೇನೆ. "ಪ್ರತಿಫಲ ಬಯಸದೇ ತೋರಿದ ಕರುಣೆಯು ಮೊದಲು ಮನುಜನೆಂಬ ಸಾರ್ಥಕತೆಯ ನೆಮ್ಮದಿ ತರುವುದು" ಅನ್ನೋ ಸಾಲಿನಂತೆ, ಪ್ರತಿಫಲ ಬಯಸ್ದೇ ತೋರೋ ಮಾನವೀಯತೆನೇ ದೈವತ್ವ, ಅದನ್ನ ತೋರುವವ್ರೇ ದೇವರು! ಅಲ್ವಾ?

Thursday, 24 August 2017

ಕಜ್ಜಾಯ ತಸ್ಮೈ ನಮಃ

ಕೃಪೆ: ಗೂಗಲ್

"ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು? ಇಗೋ ತಿನ್ನು"

ಇದೇನಪ್ಪ ಗಣೇಶ ಹಬ್ಬದ್ ಟೈಮಲ್ಲಿ ಮೋದಕ, ಲಾಡು ಬಗ್ಗೆ ಮಾತಾಡೋದ್ ಬಿಟ್ಟು ಕಜ್ಜಾಯದ್ ಬಗ್ಗೆ ಏನಕ್ ಮಾತಾಡ್ತಾ ಇದಾನೆ ಅಂದ್ಕೋತಾ ಇದಿರಾ? ಆಫೀಸ್ ಪಕ್ಕ ಇರೋ ಪುಲ್ಲಾ ರೆಡ್ಡಿ ಸಿಹಿ ತಿಂಡಿ ಅಂಗ್ಡೀಲಿ ಕಜ್ಜಾಯ ನೋಡ್ದಾಗ ಮನ್ಸಲ್ಲಿ ಈ ಹಾಡು ಪ್ಲೇ ಆಗೋಕ್ ಶುರು ಆಯ್ತು! ಈ ಹಾಡು ಕ್ಯಾಚಿ ಆಗಿ ಇದ್ದಿದ್ದಕ್ಕೋ ಇಲ್ಲ ಅದ್ರಲ್ಲಿ ಕಜ್ಜಾಯ ಮಾಡ್ ಕೊಡ್ತೀನಿ ಅಂತ ಇದ್ದಿದ್ದಕ್ಕೋ, ಚಿಕ್ಕಂದ್ನಲ್ಲಿ ಸಕ್ಕತ್ ಇಷ್ಟ ಆಗಿತ್ತು. ಸಿಹಿ ತಿಂಡಿಗಳ ವಿಚಾರದಲ್ಲಿ ಬೇಧ ಭಾವ ಮಾಡ್ದೆ, ವಿವಿಧತೆಯಲ್ಲಿ ಏಕತೆ ಕಾಣುವ ನನಗೆ ಜಿಲೇಬಿ, ಜಹಾಂಗೀರ್, ಹಲ್ವಾ, ಪಾಯಸ, ಜಾಮೂನು,ಮೈಸೂರ್ ಪಾಕ್.. ಈ ಎಲ್ಲಾ ಸಿಹಿ ತಿಂಡಿಗಳೂ ಮೆಚ್ಚಿನವೇ. ಆದರೆ ಕಜ್ಜಾಯದ ಬಗ್ಗೆ ವಿಶೇಷವಾದ ಮೆಚ್ಚುಗೆ ಮತ್ತೆ ಆಸೆ! ಚಿಕ್ಕವ್ನಿರ್ತಾ ನಮ್ಮೂರಲ್ಲಿ ಸುರೇಶ್ ಭಟ್ರು, ಬಾಯಲ್ ನೀರೂರೋ ಹಾಗಿನ್ ತುಪ್ಪದ ಕಜ್ಜಾಯ ಮಾಡ್ತಾ ಇದ್ರು. ಅವ್ರು ಕಜ್ಜಾಯ ಮಾಡೋದ್ ನಿಲ್ಸಿದ್ ಮೇಲೆ ಅಷ್ಟ್ ರುಚಿಯಾದ್ ಕಜ್ಜಾಯ ಬೇರೆಲ್ಲೂ ಸಿಗ್ಲೇ ಇಲ್ಲ. ಅಂತ ಕಜ್ಜಾಯಾನಾ ಮತ್ತೆ ತಿನ್ನೋಕೆ ನಾಲ್ಗೆ ಕಾಯ್ತಾನೇ ಇತ್ತು.

೨೦೧೪ರಲ್ಲಿ ನಾನು ಟ್ರೈನಿಂಗ್ ಮುಗ್ಸಿ ಬೆಂಗಳೂರು ಶಾಖೆಲಿ ಕೆಲಸ ಮಾಡೋಕ್ ಶುರು ಮಾಡ್ದೆ. ಕಂಪ್ಯೂಟರ್‌ ಜೊತೆ ಗೆಳೆತನ ಮಾಡ್ಕೊಂಡು, ಅದ್ರ್ ಜೊತೆನೇ ವೇಳೆ ಕಳೀತಾ, ನಕ್ರೆ ಎಲ್ಲಿ ಮುತ್ತು ಉದ್ರತ್ತೋ ಅಂತ ಮುಖ ಗಂಟ್ ಹಾಕ್ಕೊಂಡ್ ಇರೋ ಜನ್ರೇ ಪ್ರಾಜೆಕ್ಟ್ ಅಲ್ಲಿ ತುಂಬ್ಕೊಂಡ್ ಇದ್ರು. ಸ್ವಲ್ಪ ತಿಂಗ್ಳ್ ಆದ್ಮೇಲೆ ನಾನು ಅದೇ ಪ್ರಾಜೆಕ್ಟಿನ್ ಇನ್ನೊಂದ್ ತಂಡ ಸೇರ್ಕೊಂಡೆ. ಅಲ್ಲಿ ಇನ್ನೊಂದ್ ತರಹದ ಗೋಳು! ನಾವು ಒಂದ್ ವಾರ ಬೆಳಿಗ್ಗೆ, ಒಂದ್ ವಾರ ಮಧ್ಯಾಹ್ನ, ಒಂದ್ ವಾರ ರಾತ್ರಿ ಅಂದ್ಕೊಂಡು ಒಂದೊಂದ್ ವಾರ ಒಂದೊಂದ್ ಪಾಳಿಯಲ್ಲಿ ಕೆಲ್ಸ ಮಾಡ್ಬೇಕಿತ್ತು. ಪ್ರತೀ ಪಾಳಿಯಲ್ಲಿ ಇಬ್ರು; ಹೆಚ್ಚೆಂದ್ರೆ ಮೂರ್ ಜನ ಇರ್ತಿದ್ರಿಂದ; ಒಬ್ರು ಯಾವಾಗ್ಲೂ ಕಂಪ್ಯೂಟರ್ ಮುಂದೇ ಝಾಂಡಾ ಊರ್ಬೇಕಾಗಿದ್ರಿಂದ, ಊಟಕ್ಕೆ ತಿಂಡಿಗೆ ಒಬ್ನೇ ಹೋಗ್ಬೇಕಾದ್ ಅನಿವಾರ್ಯತೆ ಇತ್ತು. ದೊಡ್ಡ ಗುಂಪಲ್ಲೇ ಹೋಗಿ ಅಭ್ಯಾಸ ಇದ್ದ ನಂಗೆ ಊಟಕ್ಕೆ ಚಹಾಕ್ಕೆ ಅಬ್ಬೇಪಾರಿ ತರ ಒಬ್ಬೊಬ್ನೇ ಹೋಗೋದು ಸಂಕಟದ್ ವಿಷ್ಯ ಆಗಿತ್ತು. ಯಾರ್ ಜೊತೆನೂ ಅಷ್ಟಾಗಿ ಗೆಳೆತನ, ಸಲಿಗೆ ಇರ್ಲಿಲ್ಲ.

ಹೀಗಿದ್ದಾಗ ಒಮ್ಮೆ ರಾತ್ರಿ ಪಾಳಿ ಮಾಡೋವಾಗ ಅನೂಪನ್ ಪರಿಚಯ ಆಯ್ತು. 'ಎಲ್ಲರೊಳಗೊಂದಾಗು ಮಂಕುತಿಮ್ಮ' ಅನ್ನೋ ಕಗ್ಗದ್ ಸಾಲಿಗೆ ಎತ್ತುಗೆ (example) ಅನ್ನೋ ತರಹ ಎಲ್ಲರ್ ಜೊತೆ ನಗ್ ನಗ್ತಾ ಮಾತಾಡ್ತಾ, ಯಾರ್ ಜೊತೆನೂ ಕಿರಿಕ್ ಮಾಡ್ಕೊಳ್ದೆ, ಯಾವ್ದಕ್ಕೂ ಜಾಸ್ತಿ ತಲೆ ಕೆಡ್ಸ್ಕೊಳ್ದೆ, ಯಾವಾಗ್ಲೂ ಮುಗುಳ್ನಗೆ ಬೀರ್ತಿದ್ದ ಅವ್ನನ್ನ ನೋಡಿ ಕೊನೆಗೂ ಒಬ್ಬ ಗೆಳೆಯ ಸಿಕ್ಕ ಅನ್ನಿಸ್ತು. ಜೊತೆಲಿ ಊಟ ಮಾಡ್ತಾ, ಚಹಾ ಹೀರ್ತಾ, ಕಷ್ಟ ಸುಖ ಮಾತಾಡ್ತಾ, ಓತ್ಲಾ ಹೊಡಿತಾ, ಸಿನೆಮಾ ನೋಡ್ತಾ ಅತೀ ಕಡಿಮೆ ಸಮಯದಲ್ಲೇ ತುಂಬಾ ಆಪ್ತ ಆಗ್ಬಿಟ್ಟ ಅನೂಪ!

ಒಂದ್ಸಲ ಅವ್ನು ಮೈಸೂರಿಗ್ ಹೋದಾಗ ಅಲ್ಲಿನ್ ಒಂದ್ ಅಂಗ್ಡಿ ಇಂದ ಕಜ್ಜಾಯ ತಂದಿದ್ದ. ತಿಂತಾ ಇದ್ ಹಾಗೆ ಸುರೇಶ್ ಭಟ್ರ ಕಜ್ಜಾಯ ನೆನ್ಪಿಗ್ ಬಂತು! ಕೊನೆಗೂ ಆ ರುಚಿಗ್ ಸಮನಾದ ಕಜ್ಜಾಯ ಸಿಕ್ಕಿತ್ತು. ನಂಗಂತೂ ಭಯಂಕರ ಖುಷಿ, ಇನ್ಮುಂದೆ ಕಜ್ಜಾಯ ತಿನ್ನೋ ಆಸೆ ಆದ್ರೆ ಅವ್ನಿಗ್ ಊರಿಗ್ ಹೋದಾಗ ತರೋಕ್ ಹೇಳ್ಬಹುದು ಅಂತ! ರಾತ್ರಿ ಪಾಳಿಲಿ ಕೂತು ಇಬ್ರೂ ಕಜ್ಜಾಯ ತಿಂದಿದ್ದೇ ತಿಂದಿದ್ದು. ಏನೋ ಒಂತರಾ ತೃಪ್ತಿಯಾಗಿತ್ತು.

ಒಂದೆರ್ಡ್ ತಿಂಗ್ಳ್ ಆದ್ಮೇಲೆ ಒಂದ್ ಶನಿವಾರ ಅನೂಪ ಮೈಸೂರಿಗ್ ಹೋದಾಗ ನಂಗೆ ಕಜ್ಜಾಯದ್ ಆಸೆ ಆಗಿ ಥಟ್ ಅಂತ ಅವ್ನಿಗೆ "ಮಗಾ.. ಬರ್ತಾ ಕಜ್ಜಾಯ ತಾರೋ.. ತಿನ್ನೋಕ್ ಆಸೆ ಆಗ್ತಾ ಇದೆ.." ಅಂತ ಒಸಗೆ (message) ಕಳ್ಸ್ದೆ. ಅವ್ನು "ಕೆಲ್ಸ ಇದೆ ಮಗಾ.. ತರೋಕ್ ಆಗೋದ್ ಡೌಟು.. ಆದ್ರೆ ತರ್ತೀನಿ" ಅಂತ ಉತ್ರ ಕೊಟ್ಟ. ಅದ್ರ ಮುಂದಿನ್ ವಾರ ನಾನು ಬೆಳಿಗ್ಗೆ ಪಾಳಿಲ್ ಇದ್ದೆ, ಅನೂಪ ರಾತ್ರಿ ಪಾಳಿಲ್ ಇದ್ದ. ಸೋಮ್ವಾರ ನಾನ್ ಅಳವೆಡೆಲ್ (office) ಇದ್ದಾಗ ಅನೂಪನ್ ಒಸಗೆ ಬಂತು "ಸಾರಿ ಮಗಾ.. ಕಜ್ಜಾಯ ತರೋಕ್ ಆಗಿಲ್ಲ" ಅಂತ. ಕಜ್ಜಾಯ ಸಿಗತ್ತೆ ಅಂತ ಆಸೆಲ್ ಇದ್ ನಂಗೆ ಆಶಾಭಂಗ ಆಯ್ತು. ಆದ್ರೂ "ಪರ್ವಾಗಿಲ್ಲ ಮಗಾ.. ಮುಂದಿನ್ ಸಲ ಹೋದಾಗ ತಾ" ಅಂದೆ. ಇದಾದ್ ಎರ್ಡ್ ದಿನಕ್ಕೆ ನನ್ ಹುಟ್ಟುಹಬ್ಬ ಇತ್ತು.

ನನ್ ಹುಟ್ಟುಹಬ್ಬ ಅಂತ ಗೆಳೆಯರೆಲ್ಲ ಕೇಕ್ ತಂದಿದ್ರು. ೧೨ ಗಂಟೆಗೆ ಕೇಕ್ ಕತ್ತರಿಸಿ, ಹುಟ್ದಬ್ಬ ಆಚರ್ಸಿ ತಡವಾಗ್ ಮಲ್ಗಿ, ಬೆಳಿಗ್ಗೆ-ಪಾಳಿ ಇದ್ದದ್ರಿಂದ ಬೇಗ ಎದ್ದು ೬ ಗಂಟೆ ಸುಮಾರಿಗೆ ಅಳವೆಡೆಗೆ ಬಂದೆ. ನಾನ್ ಬರೋ ಮೊದ್ಲೆ ಅನೂಪ ಹೊರಟ್ ಹೋಗಿದ್ದ. ನಾನು ನನ್ ಕಂಪ್ಯೂಟರ್ ಮುಂದೆ ಹೋಗಿ ಕೂತೆ. ಅದ್ರ್ ಪಕ್ಕ ಒಂದ್ ಕವರ್ ಇತ್ತು. ಏನಪ್ಪ ಅಂತ ತೆಗ್ದ್ ನೋಡಿದ್ರೆ ಅದ್ರ್ ಒಳಗೆ ಪುಟ್ಟ ಡಬ್ಬಿ ಇತ್ತು. ಇದೇನಿದು ಅಂತ ಕುತೂಹಲ್ದಿಂದ ತೆಗ್ದ್ ನೋಡಿದ್ರೆ ಅದ್ರಲ್ಲಿ ನನ್ನ ನೆಚ್ಚಿನ ಕಜ್ಜಾಯ ಇತ್ತು! ಉತ್ಸಾಹದಿಂದ ಮತ್ತೆ ಕವರ್ ಕಡೆ ಕಣ್ ಹಾಯಿಸ್ದೆ. ಅದ್ರಲ್ಲಿ ಕನ್ನಡದ್ ಟಿ ಶರ್ಟು ಮತ್ತೆ 'Happy Birthday' ಅನ್ನೋ ಹಾರೈಕೆ ಇತ್ತು! ನಂಗೆ ಕನ್ನಡ ಟಿ ಶರ್ಟ್ ಅಂದ್ರೆ ಇಷ್ಟ ಅಂತ ಅದನ್ನೂ ಮತ್ತೆ ಕಜ್ಜಾಯಾನೂ ಉಡುಗೊರೆ ಆಗಿ ಕೊಟ್ಟಿದ್ದ! 'ಕೆಲ್ಸ ಇತ್ತು ಅದಕ್ಕೆ ಕಜ್ಜಾಯ ತರೋಕ್ ಆಗಿಲ್ಲ' ಅಂತ ಯಾಕ್ ಹೇಳಿದ್ದ ಅಂತ ಆಗ ತಿಳೀತು.

ನಾವು ಬಯಸ್ದೇ, ಎದುರು ನೋಡ್ದೇ ಇದ್ ಘಳಿಗೇಲಿ ನಮಗಿಷ್ಟ ಆದದ್ದು ಏನೋ ಕಣ್ಮುಂದೆ ಬಂದ್ ಬಿಟ್ರೆ ಎಂತಾ ಆನಂದ ಅನ್ನೋದು ಅರ್ಥ ಆಯ್ತು. ಅತೀ ಪ್ರೀತಿಯ ಸಿಹಿ ತಿಂಡಿ ಹುಟ್ಟು ಹಬ್ಬದ್ ಉಡುಗೊರೆಯಾಗ್ ದೊರ್ಕಿತ್ತು. ಅವ್ನ್ ಎಲ್ಲಿನವ್ನೋ, ನಾನ್ ಎಲ್ಲಿನವ್ನೋ.. ಜೊತೆಗಿದ್ ಸ್ವಲ್ಪ ಸಮಯದಲ್ಲೇ ನನ್ ಇಷ್ಟಗಳನ್ನ ಅರಿತ್ಕೊಂಡು ನಂಗ್ ಸರ್ಪ್ರೈಸ್ ಕೊಟ್ಟು ಅವ್ನು ಕಣ್ ತುಂಬೋ ಹಾಗ್ ಮಾಡಿದ್ದ. ಸ್ನೇಹ ಅಂದ್ರೆ ಇದೇ ಅಲ್ವಾ? ಅದೇ ಖುಷಿಲಿ ಅಲೆಯುಲಿ (mobile) ಎತ್ಕೊಂಡೆ. ಕಣ್ ತುಂಬ್ಕೊಂಡಿದ್ರಿಂದ ಅಲೆಯುಲಿ ಪರದೆ ಮಂಜ್ ಮಂಜಾಗ್ ಕಾಣಿಸ್ತಾ ಇತ್ತು. ಒಂದ್ ಕೈಯಲ್ಲಿ ಕಣ್ ಒರೆಸ್ತಾ ಇನ್ನೊಂದ್ ಕೈಯಲ್ಲಿ ಅಲೆಯುಲಿ ಹಿಡ್ಕೊಂಡು "ಥ್ಯಾಂಕ್ಸ್ ಮಗಾ" ಅಂತ ಅವ್ನಿಗೆ ಒಸಗೆ ಕಳುಹಿಸ್ದೆ. ಮುಖದಲ್ಲಿ ಎಲ್ಲಿಲ್ಲದ್ ಮುಗುಳ್ನಗು ಮಿಂಚ್ತಾ ಇತ್ತು. ಕಣ್ಣಲ್ಲಿ ಆನಂದ ಬಾಷ್ಪ ಜಿನುಗ್ತಾ ಇತ್ತು!

Thursday, 10 August 2017

ಕುಣಿದು ಕುಣಿದು ಬಾರೆ..!


"ಅಳುವೊಂದು ಬೇಕು ನನಗೆ
ಅರೆಘಳಿಗೆ ಹೋಗು ಹೊರಗೆ
ಇಷ್ಟೊಳ್ಳೆ ಸ್ನೇಹಿತನಾಗಿ
ಕಾಡಿದರೆ ಹೇಗೆ?

ಮುಗುಳುನಗೆಯೆ ನೀ ಹೇಳು
ಯಾರಿರದ ವೇಳೆಯಲ್ಲಿ ನೀನೇಕೆ
ಜೊತೆಗಿರುವೆ?"

'ಮುಗುಳುನಗೆ' ಸಿನಿಮಾದ ಟೈಟಲ್ ಹಾಡು ಅದ್ರಲ್ಲೂ ಈ ಪ್ಯಾರ ಎಡೆಬಿಡದೆ ನನ್ನ ಕಾಡ್ತಾ ಇತ್ತು. ಆಫೀಸಿಂದ ಮನೆಗ್ ಬಂದವನೇ ಮತ್ತೊಮ್ಮೆ ಕೇಳೋಣ ಎಂದೆಣಿಸಿ ಯೂಟ್ಯೂಬ್ ‍ಅಲ್ಲಿ ಹಾಡನ್ನ ಹುಡುಕಿ ಮತ್ತೆ ಮತ್ತೆ ಕೇಳತೊಡಗ್ದೆ. ಈಗ ಹಾಡುಗಳನ್ನ ಕೇಳ್ಬೇಕು ಅಂದ್ ಕೂಡ್ಲೇ, ಕೇಳೋಕೆ ಎಷ್ಟೊಂದು ಪ್ಲಾಟ್ ಫಾರ್ಮ್ ಗಳಿವೆ. ವಿಂಕ್, ಗಾನ, ಸಾವನ್, ಯೂಟ್ಯೂಬ್ ಇತ್ಯಾದಿ ಇತ್ಯಾದಿ. ಇಂಟರ್ನೆಟ್ ಮತ್ತೆ ಮೊಬೈಲಲ್ಲಿ ಚಾರ್ಜ್ ಒಂದಿದ್ರೆ ನಮಗ್ ಬೇಕಾದ್ ಹಾಡನ್ನ, ಬೇಕಾದ್ ಕಡೆ ಕೂತ್ಕೊಂಡು, ಬೇಕಾದಷ್ಟು ಬಾರಿ ಕೇಳ್ತಾ ಇರಬಹುದಲ್ವಾ ಅನ್ನೋ ಯೋಚನೆ ಬಂದಾಗ; ಜೇಡ ಕಟ್ಟಿರೊ ಮೂಲೆ ಕಾಣಿಸ್ತು. ಟೈಮು ಹತ್ತು ವರ್ಷ ಹಿಂದಕ್ಕೆ, ಫ್ಲ್ಯಾಶ್ ಬ್ಯಾಕ್ ಗೆ ಹೋಯ್ತು.

ನಾನಾಗ ಹತ್ತನೇ ಕ್ಲಾಸಲ್ ಇದ್ದೆ. 'ಮುಂಗಾರು ಮಳೆ' ಸಿನಿಮಾದ್ ಸಮಯ. 'ಅನಿಸುತಿದೆ ಯಾಕೋ ಇಂದು',  'ಕುಣಿದು ಕುಣಿದು ಬಾರೆ' ಹಾಡ್ಗಳು ಚಿಕ್ ಮಕ್ಳಿಂದ ಹಿಡ್ದು ಮನೆ ಮಂದಿಗೆಲ್ಲ ಚಿರಪರಿಚಿತವಾಗಿ ಎಲ್ರೂ ಗುನುಗೋ ಹಾಗ್ ಆಗಿತ್ತು. ಆಗ ಇದ್ದಿದ್ ಒಂದೇ ಒಂದ್ ಮ್ಯೂಸಿಕ್ ಚಾನೆಲ್ ಅಂದ್ರೆ 'ಉದಯ ಮ್ಯೂಸಿಕ್'. ಹೆಚ್ಚಿನ ಜನ ಕರೆಮಾಡುಗರು ಕರೆ ಮಾಡಿ ಮುಂಗಾರು ಮಳೆಯ ಹಾಡನ್ನೇ ಪ್ರಸಾರ ಮಾಡೋಕೆ ಕೋರಿಕೆ ಇಡ್ತಾ ಇದ್ರು. ‌ಆ ತರ ಕರೆ ಮಾಡಿನೋ, ಇಲ್ಲ ಎಸ್.ಎಮ್.ಎಸ್ ಕಳ್ಸಿಯೋ ಕೋರಿಕೆ ಇಡೋಕೆ ನಮ್ಮನೇನಲ್ಲಿ ಅಲೆಯುಲಿ (ಮೊಬೈಲ್) ಇರ್ಲಿಲ್ಲ. ಯಾರಾದ್ರೂ ಕರೆ ಮಾಡಿ ಮುಂಗಾರು ಮಳೆ ಹಾಡನ್ನ ಹಾಕೋಕ್ ಹೇಳಲಿ ಅಥವಾ ಚಾನೆಲ್ ಅವ್ರೆ ದೊಡ್ ಮನ್ಸ್ ಮಾಡಿ ಆ ಹಾಡ್ಗಳನ್ನ ಹಾಕ್ಲಿ ಅಂತ ಕಾಯ್ತಾ ಇರ್ತಿದ್ದೆ.

ಇದೇ ಸಮಯಕ್ಕೆ ನನ್ ಗೆಳೆಯ ಚೇತನ್ ಅಲೆಯುಲಿ ತೆಗೊಂಡ. ಆಗಿನ್ ಕಾಲದ್ ಜನಪ್ರಿಯ ಹ್ಯಾಂಡ್ಸೆಟ್ಟು, ನೋಕಿಯಾ ೧೧೧೦! ಆ ಪುಣ್ಯಾತ್ಮ ಒಂದ್ ಒಳ್ಳೆ ಕೆಲ್ಸ ಮಾಡಿದ್ದ. ಅದೇನ್ ಅಂದ್ರೆ 'ಕುಣಿದು ಕುಣಿದು ಬಾರೆ' ಹಾಡನ್ನ ಅವ್ನ್ ಕಾಲರ್ ಟ್ಯೂನ್ ಆಗ್ ಮಾಡ್ಕೊಂಡಿದ್ದ. ನಂಗ್ ಎಲ್ಲಿಲ್ಲದ್ ಖುಷಿ. ಅವ್ನಿಗ್ ಕರೆ ಮಾಡಿದ್ರೆ, ಪೂರ್ತಿ ಅಲ್ದೇ ಇದ್ರೂ, ಹಾಡಿನ್ ಪಲ್ಲವಿ ಆದ್ರೂ ಬೇಕಾದಾಗ್ ಕೇಳ್ಬೋದು ಅಂತ! ನಾನ್ ಆಗ ದಿನ ಸಂಜೆ ನಮ್ಮ ಅಂಗಡಿಯಲ್ ಇರ್ತಿದ್ದೆ. ಅದಕ್ಕೆ ಚೇತನನ್ ಅಲೆಯುಲಿಯಲ್ಲಿ ನಮ್ಮಂಗಡಿಯ ಗೆಂಟುಲಿ (ಟೆಲೆಫೋನ್) ಅಂಕೆಯನ್ನ ಉಳ್ಸಿ,

"ನಂಗ್ ಹಾಡ್ ಕೇಣಕ್ ಅನ್ಸ್ದಲ್ ಅಂಗಡಿಯಿಂದ ಕರೆ ಮಾಡ್ತೆ. ಕರೆ ಎತ್ಬೇಡ. ಎತ್ರೆ ಬೋಳ್ ಮೇಲ್ ತಟ್ಟತೆ" ಅಂತ ಅಂಗಡಿಯಿಂದ ನಾ ಕರೆ ಮಾಡಿದ್ರೆ ಎತ್ತುವ ಹಾಗಿಲ್ಲ ಅಂತ ಒಪ್ಪಂದ ಮಾಡ್ಕೊಂಡೆ. ನಂಗೆ ಹಾಡ್ ಕೇಳ್ಬೇಕು ಅನ್ಸಿದಾಗೆಲ್ಲ ಅವ್ನಿಗ್ ಕರೆ ಮಾಡಿ ಹಾಡ್ ಕೇಳೋಕ್ ಶುರು ಮಾಡ್ದೆ. ಎನೋ ದೊಡ್ ಪ್ಲ್ಯಾನ್ ಮಾಡಿದ್ ಸಾರ್ಥಕತೆ ನಂಗೆ! ಇದ್ ಹೀಗೆ ಮುಂದುವರ್ದಿತ್ತು. ಅವ್ನೂ ಪಾಪ ಒಪ್ಪಂದದ್ ಪ್ರಕಾರ ಯಾವತ್ ಕರೆ ಮಾಡಿದ್ರೂ ಎತ್ತತಾ ಇರ್ಲಿಲ್ಲ.

ಹೀಗೆ ಒಂದ್ ದಿನ ನಾ ಅಂಗಡಿಯಲ್ ಇದ್ದಾಗ ಅರ್ಜೆಂಟ್ ಆಗಿ ಅವ್ನ್ ಹತ್ರ ಮಾತಾಡ್ಬೇಕಿತ್ತು. ಕರೆ ಮಾಡ್ದೆ. ಅವ್ನು ನಾ ಹಾಡ್ ಕೇಳೋಕ್ ಕರೆ ಮಾಡಿದಿನಿ ಅಂತ ನಾ ಹತ್ತಾರು ಬಾರಿ ಕರೆ ಮಾಡಿದ್ರೂ ಜಪ್ಪಯ್ಯ ಅಂದ್ರೂ ಎತ್ಲಿಲ್ಲ! ನಂಗೆ ಈ 'ಕುಣಿದು ಕುಣಿದು ಬಾರೆ' ಮತ್ತೆ ಹಾಡ್ ಕೇಳೊಕೆ ಮಾಡಿದ್ ಏರ್ಪಾಡಿನ ಬಗ್ಗೆ ಬೇಜಾರ್ ಆಗೋಕ್ ಶುರು ಆಯ್ತು. ಮತ್ತೆ ಮತ್ತೆ ಕರೆ ಮಾಡ್ದೆ. ಅವ್ನು ಭಾರೀ ನಿಷ್ಠಾವಂತ! ಇದನ್ನ ಅಗ್ನಿಪರೀಕ್ಷೆ ಅಂದ್ಕೊಂಡ್ನೋ ಏನೊ! ಕರೆ ಎತ್ಲೇ ಇಲ್ಲ. ಏನ್ ಮಾಡೋದು ಅಂತ ಗೊತ್ತಾಗ್ದೆ ನಾನು ಪಕ್ಕದ್ ಅಂಗ್ಡಿಗ್ ಹೋಗಿ ಅಲ್ಲಿಂದ ಅವ್ನಿಗೆ ಕರೆ ಮಾಡ್ದೆ. ಮೊದಲ್ನೇ ರಿಂಗಿಗೆ ರಪ್ ಅಂತ ಎತ್ತಿದ! 'ಅಯ್ಯೋ ಪುಣ್ಯಾತ್ಮ' ಅಂತ ಹೇಳಿ, ನಕ್ಕು ಮಾತಾಡೋಕ್ ಇದ್ದಿದ್ ವಿಷ್ಯ ಮಾತಾಡಿ ಮುಗ್ಸಿದೆ!

ಈಗ, ಕೇಳ್ಬೇಕು ಅನ್ಸಿದ್ ಹಾಡ್ಗಳು ಬೆರಳ್ ತುದಿಯಲ್ಲೇ ಸಿಗೋವಾಗ, ಆ ಕಾಲ್ದಲ್ಲಿ ಕ್ಯಾಸೆಟ್ ಬಾಡಿಗೆಗ್ ತಂದು ವಾಕ್ ಮ್ಯಾನ್ ಅಲ್ಲಿ ಹಾಡ್ ಕೇಳ್ತಾ ಇದ್ದಿದ್ದು, ಸೈಬರ್ ಸೆಂಟರ್ಗ್ ಹೋಗಿ ಬೇಕಾಗಿದ್ ಹಾಡ್ಗಳನ್ನ ಪಟ್ಟಿ ಮಾಡಿ ಸಿ.ಡಿ ಯಲ್ಲಿ ಬರ್ನ್ ಮಾಡ್ಸಿ ತರ್ತಾ ಇದ್ದಿದ್ದು, ಈ ಕಾಲರ್ ಟ್ಯೂನ್ ಇದ್ದವ್ರಿಗ್ ಕರೆ ಮಾಡಿ ಸರ್ಕಸ್ ಮಾಡ್ತಾ ಇದ್ದಿದ್ದು.. ಎಲ್ಲ ನೆನ್ಪಿನ್ ಪರದೆ ಮೇಲ್ ಬಂದು, ನಮಗ್ ಗೊತ್ತಿಲ್ದೇ, ಒಂದು ಕಿರುನಗೆಯನ್ನ ಪ್ರತ್ಯಕ್ಷ ಆಗೋ ಹಾಗ್ ಮಾಡತ್ತೆ. ಅಲ್ವಾ? ಅದಕ್ಕೆ ಹೇಳೋದ್ ಅನ್ಸತ್ತೆ:

"What is hard to endure
Is sweet to remember" ಅಂತ :)

Monday, 20 February 2017

ಸುಖ



ಗಾಂಧಿ ಬಜಾರಿನ ಅಂಗಡಿಗಳ ಮುಂದೆ ಬೇಡುತ್ತಿದ್ದ ಭಿಕ್ಷುಕನಿಗೆ ಚಳಿಯಲ್ಲಿ ನಡುಗುತ್ತಿದ್ದಾಗ ಹೊದ್ದುಕೊಳ್ಳಲು ಬಟ್ಟೆ ಇರಲಿಲ್ಲ.

ಇಂದು ಮುಂಜಾನೆ ಅವನು ತೀರಿಕೊಂಡ.

ಪಾಲಿಕೆಯವರು ಬಿಳಿ ಬಟ್ಟೆ ಹೊದಿಸಿ ಕರೆದೊಯ್ದರು.

ಸಾವಲ್ಲೆ ಸುಖವಿದೆ ಎಂದು, ಎಂದೂ ಕಣ್ತೆರೆಯದೆ ಬೆಚ್ಚನೆ ಮಲಗಿದ!

ನಗು ಮುಖ


ಬಂಧು ಬಾಂಧವ್ಯಗಳನ್ನೆಲ್ಲಾ ಬದಿಗಿರಿಸಿ, "ದುಡ್ಡೇ ದೊಡ್ಡಪ್ಪ" ಎಂದು ನೋಟಿನ ಕಂತೆಗಳ ಕಲೆಹಾಕುತ್ತಾ ಬಂದೆ.

ಅರಿವಿಲ್ಲದೆ ಎಲ್ಲರೂ ನನ್ನಿಂದ ದೂರಾದರು. ಇಂದು ನನ್ನ ಬಳಿ ಇರುವುದು ಒಂದೇ ಒಂದು ನಗು ಮುಖ.

ಅಪ್ಪ ಅಮ್ಮನದ್ದಲ್ಲ, ಹೆಂಡತಿ ಮಕ್ಕಳದ್ದಲ್ಲ, ಕಡೆಗೆ ನನ್ನದೂ ಅಲ್ಲ!

ನೋಟಿನ ಮೇಲಿರುವ ಗಾಂಧಿ ತಾತನದ್ದು!

ಕಣ್ಣಲಿ


ಲೇಖನಿಯಿಂದ ಇಳಿಯದ
ಪುಟಗಳ ಮೇಲೆ ಹರಿಯದ
ಹಾಡಾಗಿ ತೇಲದ
ನೂರಾರು ಕವಿತೆ ಬೆಚ್ಚನೆ
ಹುದುಗಿದೆ ನಿನ್ನ ಕಣ್ಣಲಿ!

ಪುಟ್ಟ ದೀಪ

ಹಚ್ಚ ಹೊರಟೆ ಪುಟ್ಟ ದೀಪವೊಂದ
ಕತ್ತಲ ಗೆಲ್ಲುವ ಭರಾಟೆಯಲಿ

ದೀಪ ಬೆಳಗಲೇ ಇಲ್ಲ! ಕಾರಣ;
ಎಣ್ಣೆಯ ಬದಲು ನೀರ ಹಾಕಿದ್ದೆ ಅವಸರದಲಿ