Thursday 10 December 2015

ಜಯಂತ್ ಕಾಯ್ಕಿಣಿಯವರ ಇತ್ತೀಚಿನ ಈ ೧೦ ಹಾಡುಗಳು ನಿಮ್ಮ ಹೃದಯಕ್ಕೆ ಹತ್ತಿರವಾಗುವುದು ಖಂಡಿತ!


ಜಯಂತ್ ಕಾಯ್ಕಿಣಿ


ಮೊನ್ನೆಯ ದಿನ ಓಡುಲಿಯಲ್ಲಿ (ಮೊಬೈಲ್) ನನ್ನ ನೆಚ್ಚಿನ ಪ್ಲೇ ಲಿಸ್ಟಲ್ಲಿರುವ ಹಾಡುಗಳನ್ನ ಕೇಳುತ್ತಿರುವಾಗ ಫಕ್ಕನೆ ಏನೋ ಹೊಳೆದಂತಾಗಿ, ಗಮನಿಸಿದಾಗ, ನನ್ನ ಅರಿವಿಗೆ ಬಂದದ್ದು ಏನೆಂದರೆ, ಆ ಪಟ್ಟಿಯಲ್ಲಿದ್ದ ಬಹುತೇಕ ಹಾಡುಗಳು ಜಯಂತ್ ಕಾಯ್ಕಿಣಿಯವರು ಬರೆದದ್ದು! ಬೇಸರವಾದಾಗ ಕೇಳಲು ಒಂದಿಷ್ಟು ಹಾಡುಗಳು, ಸಂತಸದಿ ಇರುವಾಗ ಕೇಳಲು ಮತ್ತಿಷ್ಟು ಹಾಡುಗಳನ್ನು ಅವರು ನಮಗಾಗಿ ನೀಡುತ್ತಾ ಬಂದಿದ್ದಾರೆ. ಒಂದಾದ ಮೇಲೊಂದು ಸೊಗಸಾದ ಹಾಡುಗಳನ್ನು ಕೊಟ್ಟು ಕಾಯ್ಕಿಣಿಯವರು ಇಂದಿನ ಪರಿಸ್ಥಿತಿಯನ್ನು ಹೇಗೆ ಮಾಡಿಬಿಟ್ಟಿದ್ದಾರೆ ಎಂದರೆ, ಒಳ್ಳೆಯ ಸಾಲುಗಳಿರುವ ಹಾಡೊಂದನ್ನು ಕೇಳಿದೊಡನೆ ನಮ್ಮ ಮನದಲ್ಲಿ ಮೂಡುವ ಮೊದಲ ಯೋಚನೆ "ಬಹುಶಃ ಕಾಯ್ಕಿಣಿಯವ್ರ್ ಲಿರಿಕ್ಸ್ ಇರ್ಬೇಕು!" ಅಲ್ವಾ? 

ನಿಮ್ಮ ಹೃದಯಕ್ಕೆ ಹತ್ತಿರವಾಗಬಹುದಾದ ಕಾಯ್ಕಿಣಿಯವರ ಇತ್ತೀಚಿನ ೧೦ ಹಾಡುಗಳು ಇಲ್ಲಿವೆ. ಇದರಲ್ಲಿ ನಿಮ್ಮ ನೆಚ್ಚಿನ ಹಾಡು ಯಾವುದು?


೧. ನೆನಪೆ ನಿತ್ಯ ಮಲ್ಲಿಗೆ

ಚಿತ್ರ : ಕೆಂಡಸಂಪಿಗೆ
ಸಂಗೀತ : ವಿ. ಹರಿಕೃಷ್ಣ
ಹಾಡಿದವರು : ಕಾರ್ತಿಕ್




೨. ಏಕಾಂಗಿ ನಾನು ಏಕಾಂಗಿ


ಚಿತ್ರ : ಫಸ್ಟ್ ರಾಂಕ್ ರಾಜು
ಸಂಗೀತ : ಕಿರಣ್ ರವೀಂದ್ರನಾಥ್
ಹಾಡಿದವರು : ಸೋನು ನಿಗಮ್





೩. ಬಿದ್ದಲ್ಲೇ ಬೇರೂರಿ

ಚಿತ್ರ : ವಾಸ್ತು ಪ್ರಕಾರ
ಸಂಗೀತ : ವಿ. ಹರಿಕೃಷ್ಣ
ಹಾಡಿದವರು : ವಿಜಯ್ ಪ್ರಕಾಶ್




೪. ಈ ಜನುಮವೆ ಆಹಾ ದೊರೆತಿದೆ

ಚಿತ್ರ : ಒಗ್ಗರಣೆ
ಸಂಗೀತ : ಇಳಯರಾಜ ಸರ್
ಹಾಡಿದವರು : ಕೈಲಾಶ್ ಖೇರ್






೫. ನಿನ್ನ ದನಿಗಾಗಿ

ಚಿತ್ರ : ಸವಾರಿ - ೨
ಸಂಗೀತ : ಮಣಿಕಾಂತ್ ಕದ್ರಿ
ಹಾಡಿದವರು : ಕಾರ್ತಿಕ್, ಸುಪ್ರಿಯಾ




೬. ಕನಸಲಿ ನಡೆಸು

ಚಿತ್ರ : ಕೆಂಡಸಂಪಿಗೆ
ಸಂಗೀತ : ವಿ. ಹರಿಕೃಷ್ಣ
ಹಾಡಿದವರು : ಶ್ವೇತಾ ಮೋಹನ್





೭. ಗಾಳಿಯ ಮಾತಲಿ

ಚಿತ್ರ : ಒಗ್ಗರಣೆ
ಸಂಗೀತ : ಇಳಯರಾಜ ಸರ್
ಹಾಡಿದವರು : ರಂಜಿತ್, ವೈಭವರಿ




೮. ನಿನ್ನಯ ಸಂಗಡ ನಾನಿರುವೆ

ಚಿತ್ರ : ಭಾಗ್ಯರಾಜ್
ಸಂಗೀತ : ಅನೂಪ್ ಸಿಳೀನ್
ಹಾಡಿದವರು : ರಾಜೇಶ್ ಕೃಷ್ಣನ್, ಸಮನ್ವಿತಾ ಶರ್ಮ

https://soundcloud.com/deepak-madhuvanahalli-j-anoop-seelin



೯. ಒಂದೇ ಸಮನೆ ಮಿಡಿದಿದೆ ಈ ಮನಸು

ಚಿತ್ರ : ಆಟ
ಸಂಗೀತ : ಸಾಧುಕೋಕಿಲ
ಹಾಡಿದವರು : ಸೋನುನಿಗಮ್, ಶ್ರೇಯಾ ಘೋಶಾಲ್





೧೦. ಮರೆಯದ ಪುಸ್ತಕ

ಚಿತ್ರ : ರಥಾವರ
ಸಂಗೀತ : ಧರ್ಮ ವಿಶ್
ಹಾಡಿದವರು : ಅನುರಾಧ ಭಟ್



ಯಾವ್ ಯಾವ್ ಹಾಡನ್ನ ನೀವು ಕೇಳಿಲ್ವೋ, ಕೇಳಿ. ಕಾಯ್ಕಿಣಿಯವರ ಸೊಗಸಾದ ಬೇರೆ ಹಾಡುಗಳು ಗೊತ್ತಿದ್ರೆ ಹೇಳಿ. ನಾನೂ ಕೇಳ್ತೀನಿ.

ಮುಂದಿನ ದಿನಗಳಲ್ಲಿ ಜಯಂತ್ ಕಾಯ್ಕಿಣಿಯವರು ಇನ್ನೂ ಮನ ಮುಟ್ಟುವ ಹಾಡುಗಳನ್ನ ಬರೀಲಿ ಅಂತ ಹಾರೈಸುವೆ.

Friday 4 December 2015

ಅಸಹಾಯಕ ಪ್ರೇಕ್ಷಕ

                                          


            ಕೆಲವೊಮ್ಮೆ ನಮ್ಮ ಸುತ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಮಗೆ ಎಷ್ಟೇ ಬೇಸರ, ನೋವಿದ್ದರೂ ನಮ್ಮಿಂದ ಏನೂ ಬದಲಾಯಿಸಲು ಸಾಧ್ಯವಿಲ್ಲ ಎಂಬ ಸಂಗತಿ ಬಹಳ ಸಂಕಟವನ್ನುಂಟುಮಾಡುತ್ತದೆ. ಡಿಸೆಂಬರ್ ೪ರಂದು ಉಗ್ರಂ ಶ್ರೀಮುರಳಿ ಅಭಿನಯದ ಚಿತ್ರ 'ರಥಾವರ'ದ ಬಿಡುಗಡೆ. ಇದು ಬಹುನಿರೀಕ್ಷಿತ ಚಿತ್ರವಾದ್ದರಿಂದ ಯಾವ ಯಾವ ಚಿತ್ರಮಂದಿರಗಳಲ್ಲಿದೆ? ಎಷ್ಟೆಷ್ಟು ಪ್ರದರ್ಶನಗಳಿವೆ? ಎಂಬ ಕುತೂಹಲದಲ್ಲಿ ಬುಕ್ ಮೈ ಶೋ ನೋಡ ಹತ್ತಿದೆ. ಚಿತ್ರಮಂದಿರಗಳ ಸಂಖ್ಯೆ ಗಮನಾರ್ಹ ಮಟ್ಟದಲ್ಲಿದ್ದರೂ, ಮಲ್ಟಿಪ್ಲೆಕ್ಸಗಳಲ್ಲಿ ಪ್ರದರ್ಶನಗಳ ಸಂಖ್ಯೆ ಕಡಿಮೆಯೇ ಇತ್ತು. ಸರಿ ಯಾವುದೋ ಒಂದು ಚಿತ್ರಮಂದಿರದಲ್ಲಿ ನೋಡಿದರಾಯ್ತು ಅಂದುಕೊಂಡು, ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿರುವ ಕನ್ನಡದ ಚಿತ್ರ 'ದ ಪ್ಲಾನ್' ಅನ್ನು ನಾನು ಇನ್ನೂ ನೋಡಿಲ್ಲವಾದ್ದರಿಂದ ಈ ವಾರದ ಕೊನೆಯಲ್ಲಿ ನೋಡೋಣ ಎಂದು ಯಾವ ಚಿತ್ರಮಂದಿರದಲ್ಲಿದೆ ಎಂದು ಹುಡುಕಿದೆ. ಕೇವಲ ಮೂರು ಚಿತ್ರಮಂದಿರದಲ್ಲಿತ್ತು! ಎಷ್ಟು ಪ್ರದರ್ಶನ ಎಂದರೆ ಬರೇ ಮೂರು!  ೮೩% ಜನರು ಬುಕ್ ಮೈ ಶೋನಲ್ಲಿ ಮೆಚ್ಚುಗೆಯನ್ನು ತೋರಿಸಿದ ಹೊರತಾಗಿಯೂ ಕೇವಲ ಮೂರು ಪ್ರದರ್ಶನ! ಇದು ಯಾವ ನ್ಯಾಯ ಸ್ವಾಮಿ? ಸಿಟ್ಟಿನಲ್ಲಿ ಬೇರೆ ಭಾಷೆಗಳ ಚಿತ್ರಗಳು ಎಷ್ಟು ಚಿತ್ರಮಂದಿರಗಳಲ್ಲಿವೆ? ಎಷ್ಟು ಪ್ರದರ್ಶನಗಳು? ನೋಡತೊಡಗಿದೆ. ಹಿಂದಿಯ 'ತಮಾಷಾ' ಚಿತ್ರಕ್ಕೆ ಅದೆಷ್ಟು ಚಿತ್ರಮಂದಿರಗಳು, ಅದೆಷ್ಟು ಪ್ರದರ್ಶನಗಳು! ಅಬಾಬಾಬಾ! ಚಕಿತವಾಯಿತು. ಕರ್ನಾಟಕದ ರಾಜಧಾನಿ, ಕನ್ನಡ ನುಡಿಯ ಮನೆ ನಮ್ಮ ಬೆಂಗಳೂರಿನಲ್ಲಿ ಕನ್ನಡದ ಒಳ್ಳೆಯ ಚಿತ್ರಗಳಿಗಿಂತ ಬೇರೆ ಭಾಷೆಯ ಚಿತ್ರಗಳಿಗೆ ಹೆಚ್ಚಿನ ಮನ್ನಣೆ, ಮಾನ್ಯತೆ!

ಕೆಲ ತಿಂಗಳ ಹಿಂದೆ 'ರಂಗಿತರಂಗ' ಬಿಡುಗಡೆಯಾದಾಗ ಅದು ನಮ್ಮ ಅಳವೆಡೆಗೆ (ಆಫೀಸ್) ಹತ್ತಿರವಿರುವ 'ಕ್ಯೂ ಸಿನೆಮಾಸ್'ನಲ್ಲಿ ಬಿಡುಗಡೆಯಾಗದಿದ್ದಾಗ, ಸಹೋದ್ಯೋಗಿ ಮಿತ್ರರೊಂದಿಗೆ ಅಲ್ಲಿಗೆ ಹೋಗಿ 'ಕ್ಯೂ ಸಿನೆಮಾಸ್' ಸಿಬ್ಬಂದಿಯ ಬಳಿ ಕನ್ನಡ ಚಿತ್ರಗಳನ್ನು ಇಲ್ಲಿ ಏಕೆ ಪ್ರದರ್ಶಿಸುವುದಿಲ್ಲ ಎಂದು ಪ್ರಶ್ನಿಸಿದ್ದೆವು. "ಕನ್ನಡ ಸಿನೆಮಾಗಳನ್ನ ಜನರು ನೋಡೋದಿಲ್ಲ ಸಾರ್" ಎಂಬುದು ಅವನು ಕೊಟ್ಟ ಉತ್ತರವಾಗಿತ್ತು. "ನೀವು ಕನ್ನಡ ಸಿನೆಮಾಗಳನ್ನು ಹಾಕದೆ, ಜನ ನೋಡೋದಿಲ್ಲ ಅಂತ ಹೇಗ್ರಿ ಹೇಳ್ತೀರ?" ಎಂದು ತಕರಾರು ಎತ್ತಿದ್ದೆವು. ಕೊನೆಗೆ ಅವನು 'ರಂಗಿತರಂಗ'ವನ್ನು ಪ್ರದರ್ಶಿಸಲು ಪ್ರಯತ್ನಿಸುವುದಾಗಿ ಹೇಳಿದ್ದ. ಅದು ಆಗಲಿಲ್ಲ ಎನ್ನುವುದು ಬೇರೆ ಮಾತು. ನಾವು ಹೋಗಿದ್ದಕ್ಕೊ ಎಂಬಂತೆ 'ಬುಲೆಟ್ ಬಸ್ಯಾ' ಅಲ್ಲಿ ಪ್ರದರ್ಶನಗೊಂಡಿತು. ಅದರ ನಂತರ ಬಂದ 'ಉಪ್ಪಿ ೨ ' ಆಗಲಿ, 'ಆಟಗಾರ'ವಾಗಲಿ, 'ಕೆಂಡಸಂಪಿಗೆ' ಆಗಲಿ, 'ಫರ್ಸ್ಟ್ ರಾಂಕ್ ರಾಜು' ಆಗಲಿ ಇಲ್ಲಿ ಬರಲೇ ಇಲ್ಲ. ಕೊನೆಗೆ 'ರಥಾವರ'ವೂ ಬರುತ್ತಿಲ್ಲ! ಎಂತಹ ಪರಿಸ್ಥಿತಿ ಸ್ವಾಮಿ. ಕಳೆದ ವಾರ ಗೆಳತಿಯೊಬ್ಬಳು, ಮರಾಠಿಯ 'ಕತ್ಯಾರ್ ಕಲ್ಜಿತ್ ಘುಸಲಿ' ಎಂಬ ಚಿತ್ರ ಬಹಳ ಸೊಗಸಾಗಿದೆ. ಸಾಧ್ಯವಾದರೆ ನೋಡು ಎಂದಳು. ಅದಕ್ಕುತ್ತರವಾಗಿ ನಾನು, ಬೆಂಗಳೂರಲ್ಲಿ ಮರಾಠಿ ಚಿತ್ರ ನೋಡಲು ಸಿಗುವುದು ನನಗಂತೂ ಅನುಮಾನ, ಆದರೂ ಒಮ್ಮೆ ಹುಡುಕುತ್ತೇನೆ ಎಂದೆ. ಏನು ಹೇಳಲಿ! ಕನ್ನಡ ಚಿತ್ರಗಳ ಬಗ್ಗೆ ತಾತ್ಸಾರ ತೋರುವ ಇದೇ ದರಿದ್ರ 'ಕ್ಯೂ ಸಿನೆಮಾಸ್'ನಲ್ಲಿ ಆ ಚಿತ್ರ ಇರಬೇಕೆ! ಖುಷಿ ಪಡುವುದೋ ದುಃಖ ಪಡುವುದೋ ತಿಳಿಯಲಿಲ್ಲ!

ಬೇರೆ ಭಾಷೆಯ ಪ್ರೇಕ್ಷಕರಿಗೆ ಅಲ್ಲೊಂದು ಇಲ್ಲೊಂದು ಎಂಬಂತೆ ಅವರ ಭಾಷೆಯ ಚಿತ್ರಗಳು ಬೆಂಗಳೂರಿನಲ್ಲಿ ನೋಡಲು ಸಿಗುವಾಗ ನಾವು ಕನ್ನಡಿಗರು ನಮ್ಮ ಭಾಷೆಯ ಚಿತ್ರ ನೋಡಲು ಚಿತ್ರಮಂದಿರಗಳನ್ನು ಹುಡುಕಾಡಿ, ಹಲವಾರು ಕಿ.ಮೀ ಓಡಾಡಬೇಕಾದ ಪರಿಸ್ಥಿತಿ! ಹೀಗೆಯೇ ಮುಂದುವರೆದರೆ ಗತಿ ಏನು? ಚಿತ್ರಮಂದಿರಗಳ ಮುಂದೆ ಕನ್ನಡ ಚಿತ್ರ ಹಾಕಿ ಸ್ವಾಮಿ ಎಂದು ಅಂಗಲಾಚುವ ಸನ್ನಿವೇಶ ಎದುರಾಗಬಹುದು ಎಂಬ ಅಳುಕು ಕಾಡುತ್ತಿದೆ. "What dude there are no theatres for Kannada movie?" ಎಂದು ಬೇರೆ ಭಾಷೆಯ ಗೆಳೆಯರು ಅಣಕಿಸುವಾಗ ಮೈ ಉರಿಯುತ್ತದೆ. ತಪ್ಪು ಯಾರದ್ದು ಸ್ವಾಮಿ? ಕನ್ನಡ ಚಿತ್ರಗಳನ್ನು ನಿರ್ಲಕ್ಷಿಸುವ ಚಿತ್ರಮಂದಿರಗಳದ್ದೆ? ಕನ್ನಡ ಚಿತ್ರಗಳ ಹಂಚಿಕೆದಾರರದ್ದೇ? ಗುಣಮಟ್ಟ ನೋಡದೆ ಸಾಲು ಸಾಲು ರಿಮೇಕ್ ಚಿತ್ರಗಳನ್ನು ಮಾಡಿಕೊಂಡು ಬಂದ ನಿರ್ದೇಶಕ/ನಟರದ್ದೆ? ಅಥವಾ ಇಂತಹ ಬರಿಯ ಪ್ರಶ್ನೆಗಳು, ಉತ್ತರ ಸಿಗದ ಪ್ರಶ್ನೆಗಳ ಹೊತ್ತು ಕೂತಿರುವ ಅಸಹಾಯಕ ಪ್ರೇಕ್ಷಕರದ್ದೆ?! 

ನಾವು ಸದಭಿರುಚಿಯಿರುವ ಒಳ್ಳೆಯ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸದಿದ್ದರೆ, ಚಿತ್ರಮಂದಿರಗಳು ಕನ್ನಡ ಚಿತ್ರ ಪ್ರದರ್ಶಿಸದಿದ್ದಾಗ ದನಿ ಎತ್ತದಿದ್ದರೆ, ನಾವು ಅಸಹಾಯಕ ಪ್ರೇಕ್ಷಕರೆಂಬುದ ಮೊದಲು ತಲೆಯಿಂದ ಕಿತ್ತೊಗೆಯದಿದ್ದರೆ ಬೇರೆ ಭಾಷೆಯ ಚಿತ್ರಗಳನ್ನು ನಮ್ಮ ಭಾಷೆಯ ಚಿತ್ರಗಳೆಂದು ನೋಡಬೇಕಾದ ಕರಾಳ ದಿನಗಳು ಬರುವುದು ನಿಶ್ಚಿತ! ಆಯ್ಕೆ ನಮ್ಮದು!

Friday 6 November 2015

ಕತ್ತಲ ಕವಿತೆ



ನರಳಿ ನರಳಿ ಗಾಡಿ ನಿಂತಿತು. ಸೆಲ್ಫ್ ಸ್ಟಾರ್ಟ್ ಮೂಲಕ ಗಾಡಿ ಸ್ಟಾರ್ಟ್ ಮಾಡಲು ನೋಡಿದಳು. ಇಲ್ಲ! ಕಿಕ್ ಸ್ಟಾರ್ಟ್ ಮಾಡಲು ನೋಡಿದಳು. ಅದೂ ಆಗಲಿಲ್ಲ! ಇಂತಹ ವೇಳೆಯಲ್ಲಿ ನಮ್ಮಿಂದ ಸಾಧ್ಯವಾಗುವನಾವು ಮಾಡುವ, ಏಕೈಕ ಘನ ಕಾರ್ಯವೆಂದರೆಪೆಟ್ರೋಲ್ ಇದೆಯೇ ಎಂದು ನೋಡುವುದು! ರಂಗಿತರಂಗದ ತೆಂಕ ಬಯಲು ಕಾಳಿಂಗ ಭಟ್ಟರುಬಾವಿಯಲ್ಲಿ ನೀರು ಇದೆಯೋ ಇಲ್ಲವೋ ಎಂದು ನೋಡಲು ಬಾವಿಯಲ್ಲಿ ಇಣುಕಬಾರದುಬದಲಿಗೆ ಬಾವಿಗೆ ಕಲ್ಲನ್ನು ಎಸೆಯಬೇಕು; 'ಬ್ಲಪ್ಪ್ಎಂಬ ಸಪ್ಪಳ ಬಂದರೆ ನೀರು ಇದೆ ಎಂದೂಬಾರದಿದ್ದರೆ ನೀರು ಇಲ್ಲ ಎಂದೂ ಹೇಳಿದ್ದರು. ಆದರೆ, ಪೆಟ್ರೋಲ್ ಟಾಂಕಿಯಲ್ಲಿ ಪೆಟ್ರೋಲ್ ಇದೆಯೇ ಇಲ್ಲವೇ ಎಂದು ಪರಿಶೀಲಿಸುವುದು ಹೇಗೆ  ಎಂದು ಹೇಳಿಕೊಡಲೇ ಇಲ್ಲ! ಆದ್ದರಿಂದ ಟಾಂಕಿಯ ಮುಚ್ಚಳ ತೆಗೆದು ಇಣುಕಿದಳು. ಟಾಂಕಿ ಹಾಳು ಬಾವಿಯಂತೆ ಗೋಚರಿಸಿತು. ಒಂದು ತೊಟ್ಟು ಪೆಟ್ರೋಲ್ ಕೂಡಾ ಇರಲಿಲ್ಲ. "ಬೆಳಿಗ್ಗೆ ಬರುವಾಗ ಪೆಟ್ರೋಲ್ ಹಾಕಿಸಿದ್ದೆಇಷ್ಟು ಬೇಗ ಹೇಗೆ ಖಾಲಿ ಆಯಿತು?!" ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಪಾಪ ಜೀವವಿಲ್ಲದೇ ನಿಂತ ಆ ಗಾಡಿಯಾದರೂ ಹೇಗೆ ಉತ್ತರ ಕೊಡಲು ಸಾಧ್ಯ! ಉತ್ತರ ಕೊಡದಿದ್ದಕ್ಕೆ ಶಿಕ್ಷೆ ಎಂಬಂತೆ ಎರಡು ಬಾರಿ ಗಾಡಿಗೆ ಒದ್ದಳು. ಅವಳ ಕಾಲಿಗೆ ನೋವಾಯ್ತೆ ಹೊರತು ಗಾಡಿ ತುಟಿಕ್ ಪಿಟಿಕ್ ಎನ್ನಲಿಲ್ಲ! ಪೆಟ್ರೋಲೂ ಸಹ ಒದೆಗೆ  ಹೆದರಿ ಪ್ರತ್ಯಕ್ಷವಾಗಲಿಲ್ಲ! ಕೈಗಡಿಯಾರವನ್ನೊಮ್ಮೆ ನೋಡಿಕೊಂಡಳು. ಗಂಟೆ ರಾತ್ರಿ ೧೧.೩೦ ಆಗಿತ್ತು. ಸುತ್ತಮುತ್ತ ಒಮ್ಮೆ ಕಣ್ಣು ಹಾಯಿಸಿದಳು. ಯಾವುದೇ ಗಾಡಿಗಳಾಗಲೀ ನರಪಿಳ್ಳೆಗಳಾಗಲೀ ಕಾಣಿಸಲಿಲ್ಲ. ತಲೆ ಎತ್ತಿ ಮೇಲೆ ನೋಡಿದಳು. ಊರಿಗೊಬ್ಳೆ ಪದ್ಮಾವತಿ ಎಂಬಂತೆ ಬೀದಿಗೊಂದೇ ಇದ್ದ ಬೀದಿ ದೀಪ ಫ್ಲಿಕ್ಕರ್ ಆಗುತ್ತತನ್ನನ್ನು ನೋಡಿ ಗಹಗಹಿಸಿ ನಗುತ್ತಿದ್ದಂತೆ ಭಾಸವಾಯಿತು. ಅಣ್ಣನಿಗೆ ಕರೆ ಮಾಡಲು ಜಂಗಮವಾಣಿ ತೆಗೆದಳು. ಅದೇಕೋ ಗೊತ್ತಿಲ್ಲಜಂಗಮವಾಣಿಯು ಮುಷ್ಕರ ಹೂಡಿತ್ತು. ಜಪ್ಪಯ್ಯ ಎಂದರೂ ಆನ್ ಆಗಲಿಲ್ಲ. ಅವಳು ಧೈರ್ಯಶಾಲಿಯೇಆದರೂ ಕೊಂಚ ದಿಗಿಲಾಗಿ ಚಳಿಯಲ್ಲಿಯೂ ನಿಧಾನ ಬೆವರಿಳಿಯತೊಡಗಿತು. ಕೋಪದಿಂದಬೆಳಿಗ್ಗೆ ಎದ್ದು ಯಾರ ಮುಖ ನೋಡಿದ್ದೆ ಎಂದು ನೆನಪಿಸಿಕೊಂಡಳು. ನೆನಪಾಗಿಮನೆ ಸೇರುತ್ತಿದ್ದಂತೆ ತನ್ನ ಹಾಸಿಗೆಯ ಮುಂದಿರುವ ಕನ್ನಡಿಯನ್ನು ಅಲ್ಲಿಂದ ಮೊದಲು ಎತ್ತಂಗಡಿ ಮಾಡಬೇಕೆಂದು ನಿರ್ಧರಿಸಿದಳು!

ಬೆಳಿಗ್ಗೆ ಅಮ್ಮ ಮಾಡಿಕೊಟ್ಟ ಚಹಾವನ್ನು ಹೀರುತ್ತಾ ಅಡಿಗೆ ಮನೆಯಲ್ಲಿ ಕುಳಿತಿದ್ದಾಗತಿಂಡಿಯ ತಯಾರಿಯನ್ನು ಶುರು ಮಾಡ ಹೊರಟಿದ್ದ ಅಮ್ಮ, "ಬೇಗ ತಿಂಡಿ ಎಲ್ಲಾ ಮಾಡೊದ್ ಕಲಿಯೇ.. ನಾನ್ ಸ್ವಲ್ಪ ರೆಸ್ಟ್ ತಗೋ ಬಹುದು ಅವಾಗ " ಎಂದರು ನಗುತ್ತ. "ನಂಗೆ ಬರುತ್ತೆ" ಎಂದಳು ಥಟ್ಟನೆ! " ನಿಂಗೆ ತಿನ್ನೋಕ್ ಬರುತ್ತೆ ಅಂತ ನಂಗೂ ಗೊತ್ತು ಕಣೆ.. ಮಾಡಕ್ ಕಲಿ ಅಂದಿದ್ದು" ಎಂದು ಗೇಲಿ ಮಾಡುತ್ತಾ ತಲೆಗೆ ಮೊಟಕಿದರು. ಇವಳು ಇದ್ದಕ್ಕಿದ್ದಂತೆ ಎದ್ದು "ನನ್ ಮೇಲೆ ನಿಂಗೆ ನಂಬ್ಕೆ ಇಲ್ಲ ಅಲ್ವಾಸರಿ. ಇವತ್ ನಾನೇ ತಿಂಡಿ ರೆಡಿ ಮಾಡಿ ತೋರಿಸ್ತೀನಿ. ನೀನ್ ಹೊರಗಡೆ ಕೂತ್ಕೊಂಡು ಟಿ.ವಿ ನೋಡು" ಎನ್ನುತ್ತಾ ಅಮ್ಮನನ್ನು ಅಡಿಗೆ ಮನೆಯಿಂದ ದರದರ ಎಳೆದುಕೊಂಡು ಬಂದು ಟಿ.ವಿಯ ಮುಂದೆ ಕೂರಿಸಿದಳು. ಮಗಳ ಮದುವೆ ಮಾಡಿಮೊಮ್ಮಕ್ಕಳನ್ನು ಎತ್ತಿ ಆಡಿಸುವ ಕನಸುಗಳ ಹೊತ್ತಿದ್ದರಿಂದಮಗಳು ಮಾಡುವ ತಿಂಡಿಯನ್ನು ತಿನ್ನುವುದರ ಬಗ್ಗೆಅವಳು ತಯಾರು ಮಾಡುವ ಮೊದಲೇ ಅಮ್ಮನಿಗೆ ಭಯ ಹುಟ್ಟಿತು! "ಸಿಲ್ಕ್ ಬೋರ್ಡ್ ಸಿಗ್ನಲ್ ಟ್ರಾಫಿಕ್ ಫ್ರೀ ಆಗೋದುನೀನು ಅಡಿಗೆ ಕಲಿಯೋದು ಎರಡೂ  ಈ ಜನ್ಮದಲ್ಲಿ ಸಾಧ್ಯ ಇಲ್ಲ ಕಣೆ" ಎನ್ನಲು ಬಾಯಿ ತೆರೆದವರುಮಗಳೇ ಅಡಿಗೆ ಮಾಡುತ್ತೇನೆ ಎಂದಾಗ ಹೀಗೆ ಹೇಳಿ ಅವಳ ಉತ್ಸಾಹಕ್ಕೆ ತಣ್ಣೀರು ಎರಚುವುದು ಸರಿಯಲ್ಲ ಎಂದು ಭಾವಿಸಿಟಿ.ವಿಯಲ್ಲಿ ದಿನ ಭವಿಷ್ಯ ಹೇಳುವ ಜ್ಯೋತಿಷಿಗಳು ತನ್ನ ರಾಶಿಯ ಬಗ್ಗೆ ಹೇಳುತ್ತ, "ಮಗಳು ಮಾಡಿದ ತಿಂಡಿ ತಿಂದು ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿದೆ" ಎಂದು ಏನಾದರೂ ಹೇಳುತ್ತಾರೋ ಎಂದು ಆಲಿಸುತ್ತ ಕುಳಿತಳು
"ಅಮ್ಮ ಅಕ್ಕಿ ಎಲ್ಲಿದೆ?"
"
ಆ ದೊಡ್ಡ ಬಿಳಿ ಡಬ್ಬಿಲಿದೆ ನೋಡೆ"
"
ಹಾ! ಸಿಕ್ತು. ಬೇಳೆ ಎಲ್ಲಿದೆ"
"
ಅಕ್ಕಿ ಡಬ್ಬಿ ಪಕ್ಕ ಒಂದ್ ಸ್ಟೀಲ್ ಡಬ್ಬಿ ಇದ್ಯಲ್ಲಾ.. ಅದ್ರಲ್ ಇದೆ ನೋಡು"
ಹೀಗೆ ಒಂದಾದ ಮೇಲೊಂದು ಕೇಳುತ್ತಾ ಹೋದಳು. ಅಮ್ಮನಿಗೆಅಕ್ಕಿಬೇಳೆಮೆಂತ್ಯೆಏಲಕ್ಕಿಲವಂಗ.. ಇವುಗಳನ್ನೆಲ್ಲ ಅಡಿಗೆಗೆ ಬಳಸುತ್ತಾರೆ ಎಂಬುದಾದರೂ ತಿಳಿದುಕೊಂಡಿದ್ದಾಳಲ್ಲ ಎಂಬ ಖುಶಿ ಒಂದೆಡೆಯಾದರೆಇವನ್ನೆಲ್ಲಾ ಹಾಕಿ ಅದಾವ ಅಮೋಘ ರಸಪಾಕ ಮಾಡುತ್ತಾಳೋ ಎಂಬ ಕುತೂಹಲ ಇನ್ನೊಂದೆಡೆ. ಇಷ್ಟೆಲ್ಲಾ ಕೇಳಿತನ್ನ ಕೋಣೆಗೆ ಹೋಗಿ ಯಾವುದೋ ಪುಸ್ತಕವನ್ನು ತಂದಳು. ಅದನ್ನು ನೋಡಿಓಹೋ! ಮಗಳು ಅಡಿಗೆಯ ರಿಸಿಪಿಗಳನ್ನು ಬರೆದಿಟ್ಟುಕೊಂಡಿದ್ದಾಳಲ್ಲ ಎಂದು ಅಮ್ಮ ಹಿರಿ ಹಿರಿ ಹಿಗ್ಗಿದರು. ಅಡಿಗೆ ಕಲಿತಳೆಂದರೆ ಮದುವೆಗೆ ಗಂಡು ಹುಡುಕಲು ಶುರು ಮಾಡಬಹುದು ಎಂಬುದು ಎಲ್ಲಾ ತಾಯಂದಿರ ಲೆಕ್ಕಾಚಾರ! ".. ಮೀನ ರಾಶಿಯವರಿಗೆ ವ್ಯಾಪಾರ ವಹಿವಾಟುಗಳಲ್ಲಿ ಲಾಭವಾಗುವುದು. ಆರೋಗ್ಯದಲ್ಲಿ ಸುಧಾರಣೆ ಕಾಣುವುದು.. ಅದೃಷ್ಟ ಸಂಖ್ಯೆ ೫&೭.. " ಜ್ಯೋತಿಷಿಗಳು ಭವಿಷ್ಯ ನುಡಿಯುವುದ ಕೇಳಿಮಗಳು ಮಾಡುವ ಅಡಿಗೆ ತಿನ್ನಬಹುದು ಎಂದು ಸಮಾಧಾನ ಮಾಡಿಕೊಂಡರು. ಅಡಿಗೆ ಕೋಣೆಯಿಂದ ಸುವಾಸನೆ ಬರಲಾರಂಭವಾಯಿತು. ಅಮ್ಮನ ಮುಖದಲ್ಲಿ ಮಂದಹಾಸ. ಸ್ವಲ್ಪ ಹೊತ್ತಿನಲ್ಲೇತಾನು ಮಾಡಿದ ಅಮೋಘ ರಸಪಾಕವನ್ನು ಅಮ್ಮನ ಮುಂದಿಡಲು ಬಂದಳು. ಟಿ.ವಿಯಲ್ಲಿ ಜಾಹಿರಾತು ಬರುತ್ತಿತ್ತು. "ಮತ್ತೆ ಮಾರುಕಟ್ಟೆಯಲ್ಲಿವಿನೂತನ ಸುವಾಸನೆಯೊಂದಿಗೆನಿಮ್ಮ ಮನೆ ಮನಗಳನ್ನು ಗೆದ್ದ.." ಅಮ್ಮ ತಟ್ಟೆ ನೋಡಿದರುಜಾಹಿರಾತು ನೋಡಿದರು ".. ಮ್ಯಾಗಿ ಮ್ಯಾಗಿ ಮ್ಯಾಗಿ" 

ಮಾರುಕಟ್ಟೆಯಿಂದ ಮ್ಯಾಗಿ ಕಣ್ಮರೆಯಾದಾಗ ಅದರ ಮಾಲೀಕರು ಅಷ್ಟು ದುಃಖ ಪಟ್ಟಿದ್ದರೋ ಗೊತ್ತಿಲ್ಲಆದರೆ ಪ್ರತಿಮಾ ಪ್ರತಿ ರಾತ್ರಿ ಗೊಳೋ ಎಂದು ಅತ್ತಿದ್ದಳು. ಮ್ಯಾಗಿ ಮತ್ತೆ ಮಾರುಕಟ್ಟೆಗೆ ಬಂದರೆ ಬಸವನಗುಡಿಯ ದೊಡ್ಡ ಗಣೇಶನಿಗೆ ೧೦೧ ತೆಂಗಿನಕಾಯಿಗಳನ್ನು ಒಡೆಯುವ ಹರಕೆಯನ್ನೂ ಹೊತ್ತಿದ್ದಳು! ಮ್ಯಾಗಿಯ ಮಾರಾಟ ಪುನರಾರಂಭವಾದಾಗವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಗೆದ್ದಾಗ ಭಾರತೀಯರು ಸಂಭ್ರಮಿಸುವಂತೆ ಸಂಭ್ರಮಿಸಿದ್ದಳು. ಯಾವುದೋ ರುಚಿಯಾದ ತಿಂಡಿ ತಯಾರು ಮಾಡಲು ಸಜ್ಜಾಗಿದ್ದ ಅಮ್ಮನಿಗೆತಾನೇ ತಿಂಡಿ ಮಾಡುತ್ತೇನೆ ಎಂದುಅಡಿಗೆ ಪುಸ್ತಕವೆಂಬಂತೆ ಯಾವುದೋ ಪುಸ್ತಕವನ್ನು ಇಟ್ಟುಕೊಂಡುಅಕ್ಕಿ ಎಲ್ಲಿದೆ ಬೇಳೆ ಎಲ್ಲಿದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಚಮಕ್ ಕೊಟ್ಟು ಮ್ಯಾಗಿಯನ್ನು ತಿನ್ನುವಂತೆ ಮಾಡಿದ್ದರಿಂದಅವರಿಂದ ಅಷ್ಟೋತ್ತರ ಶತನಾಮಾವಳಿಗಳನ್ನು ಮಾಡಿಸಿಕೊಳ್ಳುವ ಮೊದಲೇ ತನ್ನ ಕೋಣೆಯನ್ನು ಸೇರಿಕೊಂಡು ತಯಾರಾಗತೊಡಗಿದಳು.

ಬಾಲ್ಯದಿಂದಲೂ ಜೀವನದಲ್ಲಿ ಏನಾದರೂ ಸಾಧಿಸಬೇಕುಸ್ವಾವಲಂಬಿಯಾಗಿ ಬಾಳನ್ನು ಸಾಗಿಸಬೇಕು ಎಂಬ ಆಸೆ ಹೊತ್ತವಳು ಪ್ರತಿಮಾ. ಎಷ್ಟೇ ಕಷ್ಟವಿದ್ದರೂಏನೇ ಸಮಸ್ಯೆಗಳಿದ್ದರೂ ಮುಖದಲ್ಲಿ ಮಂದಹಾಸದ ಮೆರುಗನ್ನು ಝಳಪಿಸುವವಳು. ಕಸ್ತೂರಿ ನಿವಾಸದ ಅಣ್ಣಾವ್ರ ಹಾಗೆ ತನ್ನ ಕೈ ಯಾವುದೇ ಕಾರಣಕ್ಕೂ ಆಗಸವ ನೋಡಬಾರದೆಂದು ಪಣ ತೊಟ್ಟಿದ್ದಳು. ಇತರರ ಕಷ್ಟ ಸುಖಗಳಲ್ಲಿ ಬಹಳ ಸುಲಭವಾಗಿ ಭಾಗಿಯಾಗುತ್ತಿದ್ದರಿಂದ ಪ್ರತಿಮಾಗೆ ಗೆಳೆಯ ಗೆಳತಿಯರ ದೊಡ್ಡ ಗುಂಪೇ ಇತ್ತು! ಸ್ನಾನಾದಿ ಕಾರ್ಯಗಳನ್ನು ಮುಗಿಸಿಬೀರುವಿನಲ್ಲಿದ್ದ ನೀಲಿ ಬಣ್ಣದ ಚೂಡಿದಾರವನ್ನು ಧರಿಸಲು ಸಿದ್ಧಳಾದಳು. ಯಾವಾಗಲೂ ಹಾಡನ್ನು ಕೇಳುತ್ತಾ ಇರುವುದು ಅವಳ ಅಭ್ಯಾಸ ಹಾಗೂ ಹವ್ಯಾಸ. ಹಾಗಾಗಿ ತಯಾರಾಗುವಾಗ ಲೌಡ್ ಸ್ಪೀಕರ್ ನಲ್ಲಿ ಎಫ್.ಎಮ್ ಅನ್ನು ಹಾಕಿದಳು. ".. ಬ್ಯಾಕ್ ಟು ಬ್ಯಾಕ್ ಎಸ್.ಪಿ.ಬಾಲಸುಬ್ರಮಣ್ಯಂ ಹಿಟ್ಸ್ ಓನ್ಲಿ ಆನ್ ೯೨.೭ ಬಿಗ್ ಎಫ್.ಎಮ್. ಅಂದಿಗೂ ಹಿಟ್ ಎಂದೆಂದಿಗೂ ಹಿಟ್.." ಬರತೊಡಗಿತು. ಆ ನೀಲಿ ಚೂಡಿದಾರ ಧರಿಸಿ ಕನ್ನಡಿಯ ಮುಂದೆ ನಿಂತು ಬಲಗೈಯ ಕಿರುಬೆರಳಿನಿಂದ ಕಣ್ಣಿಗೆ ಕಾಡಿಗೆ ಇಟ್ಟುಕೊಳ್ಳುತ್ತಿರುವಾಗಸಂದರ್ಭಕ್ಕೆ ಹೊಂದುವಂತೆ ಎಸ್.ಪಿ.ಬಿ ಯವರ ಮಧುರ ಗೀತೆ ಉಲಿಯುತ್ತಿತ್ತು "ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು.. ಮಿಂಚು ಕೂಡಾ ನಾಚುವ ಮಿಂಚಿನ ಬಳ್ಳಿ ನೀನು.." ಕನ್ನಡಿಗೂ ಅದೇನೋ ಸಂತಸಅವಳ ರೂಪವನ್ನು ಪ್ರತಿಫಲಿಸುತ್ತಾಕ್ಷಣಕಾಲ ತಾನೂ ಸೌಂದರ್ಯ ಲೋಕದ ಕುವರಿಯಾದೆನಲ್ಲಾ ಎಂದು! ಪ್ರತಿಮಾ ಹೊರಡಲು ಸಜ್ಜಾಗಿಕಿವಿಯುಲಿಯಲ್ಲಿ ಹಾಡು ಕೇಳುತ್ತಾಅಮ್ಮನ ಹಣೆಗೆ ಮುತ್ತಿಟ್ಟು ಆಫೀಸಿನೆಡೆಗೆ ಗಾಡಿ ಚಲಾಯಿಸಿದಳು. ಶ್ವೇತವರ್ಣದ ಗಾಡಿಯ ಮೇಲೆ ಮುದ್ದು ಮೊಗದ ಶ್ವೇತವರ್ಣೆ! ಬೀಸುವ ಗಾಳಿಯು ಅವಳ ಕೂದಲನ್ನು ಸೋಕಲುಅವಳು ಹೆಲ್ಮೆಟನ್ನು ತೆಗೆಯುವುದನ್ನೇ ಕಾಯುತ್ತಾ ಹಿಂಬಾಲಿಸುತ್ತಿತ್ತು! ದಾರಿಯಲ್ಲಿ ಗಾಡಿಗೆ ಪೆಟ್ರೋಲ್ ಹಾಕಿಸಿಕೊಂಡು ಆಫೀಸು ತಲುಪಿದಳು.

ಗಡಿಯಾರದ ಮುಳ್ಳುಗಳು ಪಿ.ಟಿ ಉಷಾರಂತೆ ಓಡುತ್ತಿತ್ತು. ತಡರಾತ್ರಿಯವರೆಗೆ ಕೆಲಸ ಮಾಡಬಾರದಿತ್ತು ಎಂದು ಕೆಲಸ ಕೊಟ್ಟ ಮ್ಯಾನೇಜರ್ ಗೆ ಶಾಪ ಹಾಕುತ್ತಾಪಕ್ಕದ ರಸ್ತೆಯಲ್ಲಾದರೂ ಯಾವುದೇ ಗಾಡಿ ಅಥವಾ ಯಾರಾದರೂ ಸಿಗುವರೇ ಎಂದು ನೋಡುವುದು ಲೇಸೆಂದು ಗಾಡಿಯನ್ನು ಅಲ್ಲೇ ರಸ್ತೆಯ ಒಂದು ಬದಿಯಲ್ಲಿ ನಿಲ್ಲಿಸಿಪಕ್ಕದ ರಸ್ತೆ ಎಡೆಗೆ ಹೆಜ್ಜೆ ಇಡತೊಡಗಿದಳು. ನಡೆಯುತ್ತಾ ನಡೆಯುತ್ತಾ ಅವಳ ಯೋಚನಾಲಹರಿ ನೆನಪಿನಂಗಳಕ್ಕೆ ವಿಹರಿಸಲು ಹೋಯಿತು. ಬೆಳಿಗ್ಗೆ ಪೆಟ್ರೋಲ್ ಹಾಕಿಸಿದ್ದರೂ ಅದ್ಹೇಗೆ ಪೆಟ್ರೋಲ್ ಖಾಲಿಯಾಯಿತುಜಂಗಮವಾಣಿಯನ್ನು ನೂರು ಶೇಕಡಾ ಚಾರ್ಜ್ ಮಾಡಿದ್ದರೂ ಅದ್ಹೇಗೆ ನಿಷ್ಕ್ರಿಯಗೊಂಡಿತುಪ್ರತಿದಿನ ಕಿವಿಯುಲಿ ಹಾಕಿಕೊಂಡು ಗಾಡಿ ಓಡಿಸುವ ತಾನು ಆಫೀಸಿನಿಂದ ಹೊರಡುವಾಗ ಕಿವಿಯುಲಿ ಸಿಗದಿದ್ದಾಗ ಹುಡುಕದೆ ಸುಮ್ಮನೇಕೆ ಹೊರಟೆಇತ್ಯಾದಿ ಪ್ರಶ್ನೆಗಳು ಟ್ರಾಫಿಕ್ ಸಿಗ್ನಲ್ ಹಳದಿಯಾದೊಡನೆ ಒಂದರ ಹಿಂದೆ ಒಂದು ವೇಗವಾಗಿ ಸಿಗ್ನಲ್ ದಾಟಲು ಹವಣಿಸುವ ವಾಹನಗಳಂತೆಸಾಲು ಸಾಲಾಗಿ ಬಂದವು. ಏನೋ ಮಿಸ್ ಹೊಡೆಯುತ್ತಿದೆಯಲ್ಲ ಅಂದುಕೊಳ್ಳುತ್ತ ಹೆಜ್ಜೆ ಇಡುತ್ತಿದ್ದಾಗ ಹಿಂದೆ ಏನೋ ಸದ್ದು ಕೇಳಿಸಿತು. ತಿರುಗುವಷ್ಟರಲ್ಲಿ ಇಬ್ಬರು ಮುಸುಕುಧಾರಿಗಳು ಒಮ್ಮೆಲೇ ಎರಗಿ ಅವಳ ಮುಖವನ್ನು ಒಂದು ಕಪ್ಪು ಬಣ್ಣದ ಬಟ್ಟೆಯಿಂದ ಬಿಗಿಯಾಗಿ ಸುತ್ತಿದರು. ಕಿರುಚಾಡಲು ಬಾಯಿ ತೆರೆಯುವ ಮುನ್ನ ಇನ್ನೊಂದು ಬಟ್ಟೆಯಿಂದ ಬಾಯಿಗೆ ಪಟ್ಟಿ ಕಟ್ಟಿದರು. ವೇಗವಾಗಿ ಕಾರೊಂದು ಬಂದು ಇವರ ಪಕ್ಕ ನಿಂತಿತು. ಆ ಮುಸುಕುಧಾರಿಗಳು ಅವಸರ ಅವಸರವಾಗಿ ಅವಳನ್ನು ಎತ್ತಿ ಕಾರಲ್ಲಿ ಕೂರಿಸಿದರು. ಅವರು ಕೈ ಕಾಲುಗಳನ್ನು ಬಿಗಿಯಾಗಿ ಹಿಡಿದಿದ್ದರಿಂದ ಅಲುಗಾಡಲೂ ಆಗದೆಬಾಯಿಗೆ ಕಟ್ಟಿದ್ದ ಪಟ್ಟಿಯಿಂದಾಗಿ ಕಿರುಚಲೂ ಆಗದೆಮುಸುಕಿನಿಂದಾಗಿ ಅತ್ತಿತ್ತ ನೋಡಲೂ ಆಗದೆಪ್ರತಿಮಾ ಸುಮ್ಮನೆ ಉಸಿರಾಡುತ್ತ ಕುಳಿತಳು. ಎದೆಬಡಿತದ ವೇಗ ದ್ವಿಗುಣಗೊಂಡಿತು. ಭಯದಲ್ಲಿ ಮೈ ನಡುಗತೊಡಗಿತು. ಯಾವ ಕಾರುಎಷ್ಟು ಜನರಿದ್ದಾರೆಎಲ್ಲಿಗೆ ಕರೆದೊಯ್ಯುತ್ತಿದ್ದಾರೆಯಾಕೆಪ್ರಶ್ನೆಗಳ ಸುರಿಮಳೆ. ಉತ್ತರವಿಲ್ಲ. ಸ್ಮಶಾನ ಮೌನ.

ಕಾರು ಒಂದೆಡೆ ನಿಂತಿತು. ತಪ್ಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಾಸಂದರ್ಭಕ್ಕಾಗಿ ಹಾತೊರೆಯತೊಡಗಿದಳು. ಆ ಮುಸುಕುಧಾರಿಗಳು ಇವಳನ್ನು ಮೂಟೆಯಂತೆ ಎತ್ತಿಕೊಂಡು ಯಾವುದೋ ನಿರ್ಜನ ಮನೆಯನ್ನು ಪ್ರವೇಶಿಸಿದರು. ಒಬ್ಬರೂ ಮಾತನಾಡುತ್ತಿಲ್ಲ. ಭಯ ಹೆಚ್ಚಿತು. ಒಳಗೆ ಕರೆದೊಯ್ದವರೇ ಕುರ್ಚಿಗೆ ಇವಳನ್ನು ಕಟ್ಟಿ ಹಾಕಿದರು. ಉಸಿರಾಟದ ವೇಗ ಹೆಚ್ಚಿಅದರ ಸದ್ದಿನ ಹೊರತಾಗಿ ಬೇರಾವ ಸದ್ದೂ ಕೇಳಿಸುತ್ತಿಲ್ಲ. ಒಳಗೊಳಗೆ ಕಂಪನಆಕ್ರಂದನ ಸದ್ದಿಲ್ಲದೇ ಮುಗಿಲು ಮುಟ್ಟಿತು. ಭವಿಷ್ಯದ ಕನಸಿನ ಗೋಪುರ ಕುಸಿಯುತ್ತಿರುವಂತೆ ಅನಿಸಿತು. ನಿಶ್ಯಬ್ದದಲ್ಲೇ ಅಳತೊಡಗಿದಳು. ಕಾಪಾಡು ಎಂದು ಎಲ್ಲಾ ದೇವರನ್ನು ಮನಸ್ಸು ಅಂಗಲಾಚತೊಡಗಿತು. 

"ಆ ಚಾಕು ತಗೊಂಡ್ ಬಾರೊ ಕೊನೆಗೂ ಯಾವುದೋ ಧ್ವನಿ ಕೇಳಿಸಿತು. ಕಿವಿ ಚುರುಕಾಯಿತು. ಸರಿಯಾಗಿ ಯೋಚಿಸಿದಳು. ಪರಿಚಯದ ಧ್ವನಿಯಂತಿತ್ತು! ಈ ಹಿಂದೆಅತಿಯಾಗಿ ನಂಬಿದ್ದ ಗೆಳೆಯರಿಂದ ವಿಶ್ವಾಸ ಘಾತಕತನವನ್ನು ಅನುಭವಿಸಿದ್ದರಿಂದದಿನದಲ್ಲಿ ನಡೆದ ಘಟನೆಗಳನ್ನು ನೆನೆಸಿಕೊಂಡಾಗಯಾರೋ ಗೆಳೆಯರೇ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿದ್ದಾರೆಂಬುದು ಸ್ಪಷ್ಟವಾಗತೊಡಗಿತು. ಯಾರೋ ಬಂದು ಮುಸುಕನ್ನು ತೆಗೆದರು. ಬಹಳಷ್ಟು ಹೊತ್ತು ಕಣ್ಣು ಬಿಗಿಯಾದ ಬಂಧನಕ್ಕೆ ಒಳಪಟ್ಟಿದ್ದರಿಂದ ದೃಷ್ಟಿ ಮಂಜು ಮಂಜಾಗಿತ್ತು. ಆದರೂ ಸುತ್ತಲೂ ನೋಡಿದಳು. ಒಂದು ದೀಪವೂ ಇಲ್ಲದೆ ಕಗ್ಗತ್ತಲು. "ಬಾಯಿಗ್ ಕಟ್ಟಿದ್ ಪಟ್ಟಿ ತೆಗಿಯೋ" ಎಂದಿತು ಗಡುಸಾದ ಧ್ವನಿಯೊಂದು. ಬೆವರು ಕಣ್ಣೀರುಗಳು ಸೋಕಿ ಪಟ್ಟಿ ಒದ್ದೆಯಾಗಿತ್ತು. ಅವರು ಪಟ್ಟಿ ತೆಗೆಯುತ್ತಿದ್ದಂತೆ ಜೋರಾಗಿ ಅವನನ್ನು ಕಡಿಯಬೇಕು ಇಲ್ಲವೇ ಗಟ್ಟಿಯಾಗಿ ಕಿರುಚಾಡಿ ರಂಪ ಮಾಡಬೇಕೆಂದು ಧೈರ್ಯ ತಂದುಕೊಂಡು ಅಣಿಯಾದಳು. ಗಂಟನ್ನು ಬಿಡಿಸಿ ಅವನು ಪಟ್ಟಿಯನ್ನು ಬಿಚ್ಚಿದ. ಇವಳು ಇನ್ನೇನು ಜೋರಾಗಿ ಕಿರುಚಬೇಕುಅಷ್ಟರಲ್ಲಿ ಸುತ್ತಲಿನಿಂದ ಕಿರುಚಾಟ ಕೇಳಿಸಿತು. "ಹ್ಯಾಪ್ಪಿ ಬರ್ತ್ ಡೇ ಪ್ರತಿಮಾ" ಎಂದು! ಅಲಂಕಾರದ ಬಣ್ಣ ಬಣ್ಣದ ದೀಪಗಳು ಹೊತ್ತಿಕೊಂಡವು. ಪ್ರತಿಮಾ ಕೋಪದ ಜ್ವಾಲಾಮುಖಿಯಲ್ಲಿ ಮಿಂದೆದ್ದವಳಂತೆ ಕಂಡರೆಕೇಕುಚಾಕುಟೊಪ್ಪಿಗಳನ್ನು ಹೊತ್ತ ಗೆಳೆಯ ಗೆಳತಿಯರ ಬಳಗ ತಮ್ಮ ಯೋಜನೆ ಚಾಚೂ ತಪ್ಪದೆ ಫಲಕಾರಿಯಾಗಿದ್ದಕ್ಕೆಅದರಲ್ಲೂ ಅವಳ ಮುಖದಲ್ಲಿದ್ದ ಭಾವಕ್ಕೆ ಗೊಳ್ಳನೆ ನಗತೊಡಗಿದರು. ಹುಟ್ಟು ಹಬ್ಬದ ದಿನ ಬರ್ತ್ ಡೇ ಬಾಯ್/ ಗರ್ಲ್ ಗೆ ಬರ್ತ್ ಡೇ ಬಮ್ಸ್ ಕೊಡುವುದು ವಾಡಿಕೆ. ಆದರೆ ಇವರು ಮಾಡಿದ ಕಿತಾಪತಿಗೆಒಬ್ಬೊಬ್ಬರನ್ನೂ ಅಟ್ಟಾಡಿಸಿಕೊಂಡು ಜಾಡಿಸಿ ಒದೆಯತೊಡಗಿದಳು ಪ್ರತಿಮಾ!

ಕಂಬನಿಯ ಕಣ್ಣ ಒರೆಸಿ
ಹರುಷದ ಕಾಡಿಗೆಯ ಹಚ್ಚಿ
ನಗೆಯ ಸ್ವಾತಿಮಳೆಯ ತರಿಸೋ
ಸಿರಿತನವೇ ಗೆಳೆತನ



Thursday 24 September 2015

ಮಳೆಯಾಗದ ಮೋಡ


"ಟೊಮೇಟೊ, ಪೊಟಾಟೋ, ಬ್ರಿಂಜಾಲ್, ಡ್ರಮ್ ಸ್ಟಿಕ್ " ಎಂದು ಉಚ್ಛ ಸ್ವರದಲ್ಲಿ ಕೂಗುತ್ತಾ, ಗಾಡಿಯಲ್ಲಿ ತರಕಾರಿ ಮಾರುತ್ತಾ, ರಾಮಣ್ಣ ಸಾಗುತ್ತಿದ್ದ. ಆನಿಯನ್ ದರ ಗಗನಕ್ಕೇರಿರುವುದರಿಂದ ಬೆಳ್ಳಂಬೆಳ್ಗೆ ಅದರ ದರವನ್ನು ಕೇಳಿಸಿ ಗಿರಾಕಿಗಳ ಹೃದಯವನ್ನು ಆಘಾತಕ್ಕೀಡು ಮಾಡುವುದು ಬೇಡ ಎಂದು ಉಳಿದ ತರಕಾರಿಗಳನ್ನು ಮಾತ್ರ ತಂದಿದ್ದ! ಇನ್ನೊಂದೆಡೆ ಹೂವಾಡಗಿತ್ತಿ ಕಮಲಕ್ಕ, "ಹೂವಾ ಬೇಕೆನಮ್ಮಾ.. ಹೂವಾ" ಎನ್ನುತ್ತಾ ತಲೆಯ ಮೇಲೆ ಹೂಬುಟ್ಟಿಯನ್ನು ಹೊತ್ತುಕೊಂಡು, ಗಿರಾಕಿಗಳಿಗಾಗಿ ಅತ್ತಿತ್ತ ಕಣ್ಣು ಹಾಯಿಸುತ್ತಾ ನಡೆಯುತ್ತಿದ್ದಾಗ ಎದುರಾದ ದಿನೇಶಣ್ಣನಿಗೆ  "ಅಣ್ಣ.. ಹೊಸ್ದಾಗಿ ಮದ್ವೆ ಆಗಿರಿ.. ಎಂಡ್ರಿಗೆ ಒನ್ದೆಲ್ಡ್ ಮೊಳ ಹೂ ತಗೊಂಡ್ ಹೋಗಿ ಅಣ್ಣ" ಎಂದು ಕಿಸಿದು ಬಳಿಕ ಸಿಕ್ಕ ಪದ್ಮಕ್ಕನ ಕೈಯಲ್ಲಿದ್ದ ಹಣ್ಣುಕಾಯಿ ಬುಟ್ಟಿ ನೋಡಿ, "ಅಕ್ಕಾ.. ದೇವಸ್ಥಾನಕ್ಕ್ ಹೊಂಟೀರಿ, ಹೂ ತಗೊಂಡ್ ಹೋಗಿಕ್ಕ.. ಸಿವಂಗೆ ಹೂ ಅಂದ್ರೆ ಬಾಳ್ ಪಿರುತಿ" ಎಂದು ಸನ್ನಿವೇಶಕ್ಕೆ ತಕ್ಕಂತೆ ಹೂವಷ್ಟೆ ನಾಜೂಕಾಗಿ ಪದಗಳನ್ನು ಹೆಣೆಯುತ್ತಾ, ವ್ಯಾಪಾರದಲ್ಲಿ ತನಗಿರುವ ಚಾಕಚಕ್ಯತೆಯನ್ನು ತೋರುತ್ತಾ ಮುಂದುವರೆಯುತ್ತಿದ್ದಳು.

ಮನೆಯ ಹೊರಗಡೆ ಬೀದಿಯಲ್ಲಿ ತರಕಾರಿ, ಹೂವು ಮಾರುವವರ, ಹಳೆ ಪಾತ್ರೆ ಕೊಳ್ಳುವವರ ಭರಾಟೆಯಾದರೆ, ಮನೆಯ ಒಳಗಡೆ ಹೆಂಗಸರ ಗರ್ಭಗುಡಿಯಾದ (ಒಂದಾನೊಂದು ಕಾಲದಲ್ಲಿ) ಅಡುಗೆ ಕೋಣೆಯಲ್ಲಿ ದಿನದ ಮೊದಲ ಮಹಾಯುದ್ಧ ಆರಂಭವಾಗಿತ್ತು! ಆ ಸದ್ದಿಗೆ ಬೆಳಗ್ಗಿನ ಚಳಿಯಲ್ಲಿ ತುದಿಯಿಂದ ಮುಡಿಯವರೆಗೂ ರಗ್ಗು ಹೊದ್ದುಕೊಂಡು ಜೇನುನಿದ್ದೆಯಲ್ಲಿದ್ದ ರಕ್ಷಾ ಹಠಾತ್ತನೆ ಎದ್ದು ಕೂತಳು. ಅಂದ ಹಾಗೆ ಅಡುಗೆ ಕೋಣೆಯಲ್ಲಿ ನಡೆಯುತ್ತಿದ್ದದ್ದು ಗಂಡ ಹೆಂಡಿರ ಅಥವಾ ಯಾವುದೇ ವ್ಯಕ್ತಿಗಳ ನಡುವಿನ ಮಹಾಯುದ್ಧವಲ್ಲ! ಬದಲಿಗೆ, ಫಿಲಿಪ್ಸ್ ಕಂಪೆನಿಯ ಮಿಕ್ಸರ್ ಒಳಗಡೆ; ತೆಂಗಿನಕಾಯಿ ತುರಿ, ಮೆಣಸಿನಕಾಯಿ, ಶುಂಠಿ, ಉಪ್ಪು ಮತ್ತು ನೀರಿನ ನಡುವೆ ನಡೆಯುತ್ತಿದ್ದ ಮಹಾಯುದ್ಧವದು! ಈ ಐವರಲ್ಲಿ  ಪ್ರಬಲರಾರು? ದುರ್ಬಲರಾರು? ಯಾರು ಯಾರು ಒಂದೇ ಪಕ್ಷ? ಎಂಬಿತ್ಯಾದಿ ವಿವರಗಳು ಇನ್ನೂ ಯಾವುದೇ ಗುಪ್ತಚರ ಇಲಾಖೆಗಳ ತೆಕ್ಕೆಗೂ ಸಿಗದೇ ನಿಗೂಢವಾಗಿವೆ! ಇದರ ಬಗ್ಗೆ ಬಹಿರಂಗವಾಗಿರುವುದು ಒಂದೇ ಸಂಗತಿ, ಈ ಯುದ್ಧದಲ್ಲಿ ಹೋರಾಡಿದವರೆಲ್ಲಾ ಕೊನೆಗೆ ಒಂದಾಗಿ 'ಕಾಯಿ ಚಟ್ನಿಯಲ್ಲಿ' ಲೀನವಾಗುವರು ಎಂದು! ಅಮ್ಮ ತನ್ನನ್ನು ಎಬ್ಬಿಸಲು ಅಲಾರ್ಮ್ಗಿಂತ ಒಳ್ಳೆಯ ಅಸ್ತ್ರವನ್ನೇ ಹುಡುಕಿದ್ದಾಳಲ್ಲ ಅಂದುಕೊಳ್ಳುತ್ತಾ, ಅಲ್ಪಾಯುಷ್ಯದಲ್ಲೇ ವೀರಮರಣ ಹೊಂದಿದ ನಿದ್ದೆಗೆ ಮೌನಾಚರಣೆ ಎಂಬಂತೆ ಇನ್ನೊಂದೆರಡು ನಿಮಿಷ ಹಾಸಿಗೆಯ ಮೇಲೆ ಹೊಡಕುತ್ತಿದ್ದಾಗ, ಏನೋ ನೆನಪಾಗಿ ಸಂಭ್ರಮದಿ ಎದ್ದು ಹಲ್ಲುಜ್ಜಲು ತೆರಳಿದಳು.

ತಲೆಗೆ, ಕಾಮನಬಿಲ್ಲಿನ ಏಳೂ ಬಣ್ಣಗಳಿರುವ, ಕಾಮನಬಿಲ್ಲಿನ ಆಕಾರದ ಹೇರ್ ಬ್ಯಾಂಡು, ಹುಬ್ಬುಗಳ ನಡುವೆ ವೃತ್ತಾಕಾರದ ಒಂದು ಪುಟ್ಟ ಬಿಂದಿ, ಕಿವಿಗಳಿಗೆ ದೇವಸ್ಥಾನದ ಗಂಟೆಯ ಆಕಾರದ ಕಿವಿಯೋಲೆಗಳನ್ನು ತೊಡುವ ಏಳು ವರ್ಷದ ಪುಟಾಣಿ, ಅಪ್ಪ ಅಮ್ಮನ ಮುದ್ದಿನ ರಾಜಕುಮಾರಿ, ರಕ್ಷಾ! ಆಟ ಊಟ ಪಾಠಗಳಲೆಲ್ಲಾ ಮುಂದು. ನಟನೆ, ಅದರಲ್ಲೂ ಏಕಪಾತ್ರಾಭಿನಯ ಅಂದರೆ ಎಲ್ಲಿಲ್ಲದ ಪ್ರೀತಿ. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಒಬವ್ವರ ಪಾತ್ರಗಳಿಂದ ಹಿಡಿದು ಇತ್ತೀಚಿಗೆ ಪ್ರಖ್ಯಾತಿ ಪಡೆದ ಹುಚ್ಚ ವೆಂಕಟರ "ಬ್ಯಾನ್ ಆಗ್ ಬೇಕ್.. ನನ್ನ ಮಗಂದ್!!" ತನಕದ ಎಲ್ಲಾ ತರಹದ ಡೈಲಾಗ್ ಹೇಳಿ ಅಭಿನಯಿಸುವಲ್ಲಿ ಆಕೆ ಎತ್ತಿದ ಕೈ. ಇಂದು ಅವಳ ಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಏಕಪಾತ್ರಾಭಿನಯ ಸ್ಪರ್ಧೆ ಇದ್ದು, ಅದರ ತಯಾರಿಯ ನೆನಪಾಗಿಯೇ ಅಮ್ಮ ಎಬ್ಬಿಸುವ ಮೊದಲೇ ಎದ್ದು ಹಲ್ಲುಜ್ಜಲು ಓಡಿದ್ದು. ಪಟಪಟನೆ ಹಲ್ಲುಜ್ಜಿ; ಸ್ನಾನ ಮಾಡಿ ಶುಭ್ರವಾಗಿ; ಅಮ್ಮ ಹೇಳಿಕೊಟ್ಟಂತೆ ಸ್ಪರ್ಧೆಗೆ ತಯಾರಿ ನಡೆಸಲಾರಂಭಿಸಿದಳು. ಅವಳು ಮಾಡ ಹೊರಟಿದ್ದು, ಯುದ್ಧದಲ್ಲಿ ಶತ್ರು ಸೈನಿಕರ ರುಂಡ ಚೆಂಡಾಡಿ, ರಕ್ತದಲ್ಲಿ ಮಿಂದ ಖಡ್ಗವನ್ನು ಝಳಪಿಸುತ್ತಾ, ಶತ್ರು ರಾಜನ ಎದೆ ಮೆಟ್ಟಿ, ತಾಯ್ನಾಡಿನ-ತಾಯ್ನುಡಿಯ ರಕ್ಷಣೆಗೆ ಸದಾ ಸಿದ್ಧ ಎಂಬ ಶೌರ್ಯದ ಮಾತುಗಳನ್ನಾಡುವ ಕಾಲ್ಪನಿಕ ರಾಣಿಯ ಪಾತ್ರ. ಅಮ್ಮನೇ ಪಕ್ಕದ ಮನೆಯಲ್ಲಿರುವ ನಾಟಕದ ನಿರ್ದೇಶಕರ ಹತ್ತಿರ ಡೈಲಾಗ್ಸ್ ಗಳನ್ನು ಬರೆದು ತಂದು, ಪಾತ್ರಕ್ಕಾಗಿ ರಾಣಿಯ ವೇಷ ಭೂಷಣ, ಖಡ್ಗವನ್ನೂ, ಪಕ್ಕದ ರಸ್ತೆಯಲ್ಲಿದ್ದ ಕಾಸ್ಟ್ಯೂಮ್ ಅಂಗಡಿಯಿಂದ ಬಾಡಿಗೆಗೆ ತಂದಿದ್ದರು. ಮಗಳ ನಟನೆಯೆಂದರೆ ತಾಯಿಗದೆನೋ ಉಲ್ಲಾಸ! ಅದಕ್ಕಾಗಿಯೇ ಅವಳಿಗೆ ಪ್ರತಿ ಹಂತದಲ್ಲಿಯೂ ಪ್ರೋತ್ಸಾಹ ನೀಡುತ್ತಿದ್ದರು. ಈ ವಿಷಯದಲ್ಲಿ ತಂದೆಯೂ ಏನು ಕಡಿಮೆ ಇರಲಿಲ್ಲ.

"ಕೈಯಲ್ಲಿ ಬಳೆ ತೊಟ್ಟರೂ, ಮನದಲ್ಲಿ ತಾಯ್ನಾಡಿನ ರಕ್ಷಣೆಯ ಪಣ ತೊಟ್ಟಿದ್ದೇನೆ. ಅದನ್ನು ಅರಿಯದೆ ಕದಾಚಿತ್ ಈ ಹೆಣ್ಣು ಏನು ಮಾಡಿಯಾಳು ಎಂದು ಗರ್ವ ತೋರಿದ್ದಕ್ಕೆ ನಿನಗೆ ತಕ್ಕ ಶಾಸ್ತಿ ಮಾಡುತ್ತೇನೆ. ನಿನ್ನ ರುಂಡ ಮುಂಡಗಳು ಬೇರೆ ಆಗಿರುವುದ ನೋಡಿ ಕಣ್ಣೀರಿಡುವ ನಿನ್ನ ತಾಯಿಗೆ ಈ ಘಳಿಗೆ ಕ್ಷಮೆಯಾಚಿಸಿ ನನ್ನ ಖಡ್ಗಕ್ಕೆ ನಿನ್ನ ರಕ್ತದ ಅಭಿಷೇಕ ಮಾಡುತ್ತಿದ್ದೇನೆ.. ಇಗೋ.. " ಆ ಪುಟಾಣಿ ಇಂತಹ ವೀರಾವೇಶದ ಮಾತುಗಳನ್ನು ರಾಣಿಯ ಠೀವಿಯಲ್ಲಿ ನುಡಿಯುವಾಗ, ಯಾರಿಗಾದರೂ "ಶಹಭಾಷ್" "ಭಲೇ ಭಲೇ" ಎನ್ನದೇ ಇರುವುದು ಅಸಾಧ್ಯವಾಗಿತ್ತು. ಒಮ್ಮೆ ಕನ್ನಡಿಯ ಮುಂದೆ, ಇನ್ನೊಮ್ಮೆ ಅಡುಗೆ ಕೋಣೆಯಲ್ಲಿ ಅಮ್ಮನ ಮುಂದೆ, ಇನ್ನೊಮ್ಮೆ ಟಿ.ವಿಯ ಮುಂದೆ ಖಡ್ಗ ಹಿಡಿದು ಪಾತ್ರದ ತಯಾರಿ ಮಾಡಿಕೊಂಡಳು. ತಂದೆಯು ಮರೆಯಲ್ಲಿ ನಿಂತು ಮಗಳ ಅಭ್ಯಾಸವನ್ನು ನೋಡುತ್ತಿದ್ದರು. ತಿಂಡಿ ತಯಾರಾದಾಗ; ಅಮ್ಮ, ಅಪ್ಪ ಮಗಳಿಬ್ಬರಿಗೂ ಬಿಸಿ ಬಿಸಿ ಪುಳಿಯೋಗರೆ ಜೊತೆ ಕಾಯಿ ಚಟ್ನಿಯನ್ನು ಬಡಿಸಿದರು. ತಿಂಡಿಯನ್ನು ಮುಂದಿಟ್ಟುಕೊಂಡು ಕೂಡಾ ಡೈಲಾಗ್ಸ್ ಹೇಳುತ್ತಾ, ಶತ್ರುಗಳ ರುಂಡವೆಂಬಂತೆ ಪುಳಿಯೋಗರೆಯಲ್ಲಿ ಅನ್ನದ ಜೊತೆ ಬೆರೆತ ಕಡಲೆಕಾಯಿಗಳನ್ನು, ಚಮಚೆಯನ್ನೇ ಖಡ್ಗವಾಗಿಸಿ ತುಂಡರಿಸುತ್ತಾ ಕೂತಳು.

"ಪುಟ್ಟೀ ಬೇಗ ತಿನ್ನು.. ಕಾಸ್ಟ್ಯೂಮ್ ಹಾಕ್ತೀನಿ.. ಅಪ್ಪಂಗೆ ತಡ ಆಗುತ್ತೆ" ಎಂದು ಮೂರು ನಾಲಕ್ಕು ಬಾರಿ ಹೇಳಿದ ಮೇಲೆ ತಿಂದು ಎದ್ದಳು. ಎದ್ದವಳೇ ಚಕಚಕನೆ ಚುರುಕಾಗಿ ವೇಷಭೂಷಣವನ್ನೆಲ್ಲಾ ಅಮ್ಮನ ಸಹಾಯದಿಂದ ತೊಟ್ಟು, ಕೈಯಲ್ಲಿ ಖಡ್ಗ ಝಳಪಿಸುತ್ತಾ ನಿಂತಳು. ಅಮ್ಮ ಅವಳ ದೃಷ್ಟಿ ತೆಗೆದು ಹಣೆಗೆ ಮುತ್ತಿಟ್ಟು ಶುಭವನ್ನು ಹಾರೈಸಿದರು. ಅಪ್ಪ ಬೈಕಿನಲ್ಲಿ ಮಗಳ ಬರುವಿಕೆಗಾಗಿ ಕಾಯುತ್ತಿದ್ದರು. ಇವಳು ಬಂದು ಕೂತೊಡನೆ, "ಏನ್ ಪುಟ್ಟಿ ರೆಡಿನಾ?" ಎಂದು ಕೇಳಿದ್ದಕ್ಕೆ "ಹೌದು ಸಾರಥಿಗಳೆ, ನೀವು ರಥವನ್ನು ಮುನ್ನಡೆಸಿರಿ.. ನಾನು ವೈರಿಗಳ ಸದೆ ಬಡಿಯುತ್ತೇನೆ" ಎಂದಳು. ಮಗಳ ಚೂಟಿತನಕ್ಕೆ ಮನಸೋತು "ಆಗಲಿ ಮಹಾರಾಣಿ ನಾನು ಈಗಲೇ ಶಿರಸ್ತ್ರಾಣವನ್ನು ಧರಿಸುತ್ತೇನೆ" ಎಂದು ಹೆಲ್ಮೆಟನ್ನು ಹಾಕಿಕೊಂಡು ನಗುತ್ತಾ ಅವಳ ಶಾಲೆಯೆಡೆಗೆ ಬೈಕನ್ನು ಚಲಾಯಿಸಿದರು.

ಹಿಂದೆ ಕೂತ ರಕ್ಷಾ ಖಡ್ಗವರಸೆ ಮಾಡುತ್ತಿದ್ದ ನೋಟ ಸಹಪ್ರಯಾಣಿಕರ ಮೊಗದಲ್ಲೂ ಮಂದಹಾಸ ಮೂಡಿಸುತಿತ್ತು. ಮನೆಯಲ್ಲಿ ಅಮ್ಮ ಪಾತ್ರೆ ತೊಳೆಯುತ್ತ ಅವಳ ಭವಿಷ್ಯದ ಬಗ್ಗೆ, ಮುಂದೆ ಏನು ಓದಿಸಬೇಕು ಅವಳು ಯಾವ ಹುದ್ದೆಗೇರಿದರೆ ಚೆಂದ ಇತ್ಯಾದಿ ಇತ್ಯಾದಿ ಯೋಚನಾಲಹರಿಯಲ್ಲಿ ಮಗ್ನಳಾದಳು. ಇಂಜಿನಿಯರಿಂಗ್ ನಾಯಿಸಂತೆ ಆಗಿರುವುದರಿಂದ ಅದೊಂದನ್ನು ಬಿಟ್ಟು ಬೇರೆ ಯಾವುದಾದರೂ ಸರಿ ಎಂದುಕೊಂಡು ಬಕೆಟ್ನಲ್ಲಿ ಇದ್ದ ನೀರಿಗೆ ಈಜು ಬಾರದ ಚಮಚೆಯನ್ನು ನೂಕಿದಳು. ಚಮಚೆ ನೀರಿನಲ್ಲಿ ಮುಳುಗಿ ವಿಲವಿಲ ಎಂದು ಒದ್ದಾಡುತ್ತಿರುವಾಗ ಬೆಳಿಗ್ಗೆ ಮಗಳ ಜೊತೆ ನಡೆದ ಸಂವಾದದ ನೆನಪಾಯಿತು. ರಕ್ಷಾ, "ಅಮ್ಮಾ.. ಈ ಖಡ್ಗಕ್ಕೆ ಕುಂಕುಮದ ನೀರ್ ಹಾಕಿ ಕೊಡಮ್ಮ.. ರಕ್ತದ ತರಹ ಕಾಣಿಸುತ್ತೆ" ಎಂದು ಬೆಂಬಿಡದ ಬೇತಾಳನಂತೆ ಹಿಂದೆ ಬಿದ್ದಿದ್ದಳು. ಆ ಕುಂಕುಮದ ನೀರು ಕಾಸ್ಟ್ಯೂಮ್ ಗೆ ತಾಗಿದರೆ ಅದಕ್ಕೆ ಕಲೆಯಾಗುವುದೆಂದು ಅದರಿಂದ ತಪ್ಪಿಸಿಕೊಳ್ಳಲು ಅಮ್ಮ ಪ್ರಯತ್ನಿಸಿದಳು. ಅದು ಫಲಕಾರಿಯಾಗದಿದ್ದಾಗ ಕುಂಕುಮಕ್ಕಾಗಿ ಮನೆಯಲ್ಲಿ ಅತ್ತಿತ್ತ ಹುಡುಕಾಡಿದಳು. ಕೊನೆಗೆ ದೇವರ ಕೋಣೆಯಲ್ಲಿರುವ ಕುಂಕುಮದ ಹೊರತಾಗಿ ಬೇರೆ ಸಿಗದಿದ್ದಾಗ, "ಖಡ್ಗಕ್ಕೆ ರಕ್ತ ಬೇಕಾಗಿಲ್ಲಮ್ಮ.. ನೀನು ಚೆನ್ನಾಗಿ ಆಕ್ಟ್ ಮಾಡಿದ್ರೆ ಜನರ ಗಮನ ಏನು ಅದರ ಮೇಲೆ ಹೋಗೋದಿಲ್ಲ.. ಜಾಣಮರಿ ಅಲ್ಲ ನೀನು.." ಎಂದು ಪುಸಲಾಯಿಸಿ ಅವಳನ್ನು ಕಳುಹಿಸಿದ್ದರು.

ರಕ್ಷಾಳ ಶಾಲೆಯ ಸ್ವಲ್ಪ ಮೊದಲು ಒಂದು ದೊಡ್ಡ ಟ್ರಾಫಿಕ್ ಸಿಗ್ನಲ್ ಇದ್ದು, ಪ್ರಯಾಣಿಕರು ಕನಿಷ್ಟ ಪಕ್ಷ ೧೦-೧೫ ನಿಮಿಷವಾದರೂ ಆ ಸಿಗ್ನಲ್ ಗಾಗಿ ಒತ್ತೆ ಇಡಲೇಬೇಕಾಗಿತ್ತು. ಒಮ್ಮೆ ಸಿಗ್ನಲ್ ಕೆಂಬಣ್ಣವ ಹೊತ್ತು ಕೂತರೆ, ತಲೆ ಮೇಲೆ ಆಟಿಕೆಗಳನ್ನು, ಜೋಳವನ್ನು ಇನ್ನಿತರ ಸಾಮಗ್ರಿಗಳನ್ನು ಹೊತ್ತು ಮಾರುವವರು ಪ್ರತ್ಯಕ್ಷವಾಗುತ್ತಾರೆ! ಸಿಗ್ನಲ್ ಯಾವಾಗ ಹಸಿರಾಗುವುದೋ ಅಲ್ಲಿಂದ ಯಾವಾಗ ಕಾಲ್ಕೀಳುವುದೋ ಎಂದು ಕಾಯುವ ಪ್ರಯಾಣಿಕರಲ್ಲಿ ಹಲವರು ಸಮಯ ತಳ್ಳಲು ಕಿವಿಯುಲಿ ಹಾಕಿಕೊಂಡು ಹಾಡು ಕೇಳಿದರೆ, ಕೆಲವರು ಬಸ್ಸಿನಲ್ಲಿ, ಕಾರಿನಲ್ಲಿ ಲ್ಯಾಪ್ಟಾಪ್ ನಲ್ಲಿ ಕೆಲಸ ಮಾಡುತ್ತಾ  ತಮ್ಮ ಕಂಪೆನಿಯನ್ನು ಉದ್ಧಾರ ಮಾಡಲು ಅಣಿಯಾಗುವರು. ರಕ್ಷಾ ಇದಾವುದರ ಗೋಜೇ ಇಲ್ಲದೆ ಖಡ್ಗದಲ್ಲಿ ತನ್ನ ಮುಖಭಂಗಿಯ ಪ್ರತಿಫಲನವನ್ನೇ ನೋಡುತ್ತಾ ವಿಧವಿಧವಾದ ಅಭಿವ್ಯಕ್ತಿಯನ್ನು ನೀಡುತ್ತಾ ಅದನ್ನು ಆನಂದಿಸುತ್ತಿದ್ದಳು.

ಇವರ ಬೈಕು ಜೀಬ್ರಾ ಕ್ರಾಸಿಗೆ ತಾಗಿಕೊಂಡೇ ನಿಂತಿತ್ತು. ಇಂತಹ ಸಿಗ್ನಲ್ ಗಳಲ್ಲಿ ಮುಂದಿನ ಸಾಲಿನಲ್ಲಿ ಇದ್ದರೆ, ಸಿಗ್ನಲ್ ಕೌಂಟ್ ಡೌನ್ ೧೦ಕ್ಕೆ ಬಂದಾಗಲೇ ಬೈಕನ್ನು ಚಾಲು ಮಾಡಿ; ಓಟದ ಸ್ಪರ್ಧೆಯಲ್ಲಿ "ಆನ್ ಯುವರ್ ಮಾರ್ಕ್, ಗೆಟ್ ಸೆಟ್.." ಅನ್ನುವಾಗ ಓಟಗಾರರು ಹೇಗೆ ಸಜ್ಜಾಗಿರುವರೋ, ಅದೇ ಭಂಗಿಯಲ್ಲಿ ತಯಾರಾಗಿ ನಿಂತಿರಬೇಕು. ಸಿಗ್ನಲ್ ಹಸಿರಾಗುತ್ತಿದ್ದಂತೆ ದೇಹದ ಎಲ್ಲ ಬಲವನ್ನೂ ಬಲಗೈಗೆ ಕೇಂದ್ರಿಕರಿಸಿ ಆಕ್ಸಿಲರೇಟರ್ ಅನ್ನು ತಿಪ್ಪಿ, ಎಡಗೈಯಿಂದ ಕ್ಲಚ್ಚನ್ನು ಬಿಟ್ಟು, ೧೦೦ಮೀ ಓಟದ ಪಟುವಿನಂತೆ ರಸ್ತೆ ದಾಟುವುದು ಆ ಕ್ಷಣದ ಪರಮ ಗುರಿಯಾಗಿರಬೇಕು. ಸಿಗ್ನಲ್ ಹಸಿರಾಗಿ ಅರ್ಧ ನ್ಯಾನೋ ಸೆಕೆಂಡ್ ಕೂಡ ತಡ ಮಾಡಿದರೆ, ಪಾಕಿಸ್ತಾನದವರು ನಮ್ಮ ಮೇಲೆ ಬಾಂಬ್ ಹಾಕಿ ಬಿಡುತ್ತಾರೆ ಎಂಬಂತೆ ತರಹ ತರಹದ, ವಿಧವಿಧದ ಧಾಟಿಯಲ್ಲಿ ರಾಗದಲ್ಲಿ ಹಿಂದಿರುವವರು ಹಾರ್ನ್ ಮಾಡುತ್ತಾರೆ. ಆ ರಗಳೆಯೇ ಬೇಡ ಎಂದು ರಕ್ಷಾಳ ತಂದೆ ಬೈಕನ್ನು ಚಾಲು ಮಾಡಿ ಸಿಗ್ನಲ್ ಬಿಟ್ಟ ತಕ್ಷಣ ಹೊರಡಲು ಸನ್ನದ್ಧನಾದ.

"೩.. ೨..೧.." ಸಿಗ್ನಲ್ ಬಿಟ್ಟಿತು! ಈ ಬೆಂಗಳೂರಿಗರಿಗೆ ಮಲೆನಾಡಿನ ಹಸಿರನ್ನು ನೋಡಿದಾಗ ಮನ ಮುದಗೊಳ್ಳುವುದೋ ಇಲ್ಲವೋ ಗೊತ್ತಿಲ್ಲ ಆದರೆ ಸಿಗ್ನಲ್ನಲ್ಲಿ ಕ್ಷಣಮಾತ್ರ ಕಾಣುವ ಹಸಿರಿಗೆ ಜೀವವನ್ನೇ ಮುಡಿಪಾಗಿಟ್ಟವರ ಹಾಗೆ ವರ್ತಿಸುತ್ತ, ಹಸಿರು ಬಂದಾಗ ಲಾಟರಿ ಗೆದ್ದಂತೆ ಸಂತೋಷದಿಂದ ಹೊರಡುವರು! ನಾಲ್ಕು ರಸ್ತೆಗಳನ್ನು ಜೋಡಿಸುವ ದೊಡ್ಡ ಜಂಕ್ಷನ್ ಅದು. ರಕ್ಷಾಳ ತಂದೆ ಬಲಕ್ಕೆ ಇಂಡಿಕೇಟರ್ ಹಾಕಿ ಹೊರಟರು. ಅದೇ ವೇಳೆಗೆ ಸಿಗ್ನಲ್ನಲ್ಲಿ ಕೆಂಬಣ್ಣ ಇದ್ದರೂ, ಅವಸರ ಅವಸರವಾಗಿ ಒಬ್ಬ ವ್ಯಕ್ತಿ ತನ್ನ ಆರ್.ಎಕ್ಸ್.೧೦೦ ನಲ್ಲಿ ಇನ್ನೊಂದು ದಿಕ್ಕಿನಿಂದ ವೇಗವಾಗಿ ಸಿಗ್ನಲ್ ಸ್ಕಿಪ್ ಮಾಡಹತ್ತಿದ. ಆರ್.ಎಕ್ಸ್.೧೦೦ ನಲ್ಲಿ ಹೇಳಿಕೇಳಿ ಪಿಕ್ ಅಪ್ ಜಾಸ್ತಿ. ಆ ಹುಚ್ಚು ಮನಸಿನ ವೇಗಕ್ಕೆ ಅತ್ತ ರಸ್ತೆ ನಿಯಮವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ರಕ್ಷಾಳ ತಂದೆಯ ಬೈಕು ಕಾಣಿಸಲಿಲ್ಲವೋ ಏನೋ, ನಾಗಲೋಟದಲ್ಲಿ ಬಂದು ಅವರ ಬೈಕಿನ ಎಡಪಾರ್ಶ್ವಕ್ಕೆ ಗುದ್ದಿದ. ಆ ಹೊಡೆತದ ರಭಸಕ್ಕೆ ಏನಾಯಿತು ಎಂದು ಯೋಚಿಸುವ ಮೊದಲೇ, ಅವಘಡ ಜರುಗಿತ್ತು!
ಮೇಲ್ಸೇತುವೆ ಕಟ್ಟುವ ಸಲುವಾಗಿ ರಸ್ತೆಯ ಬಲಭಾಗದಲ್ಲಿ ಜಲ್ಲಿ ಕಲ್ಲಿನ ರಾಶಿ ಹಾಕಿದ್ದರು. ಅಪಘಾತದ ಪರಾಕಾಷ್ಟೆ ಎಷ್ಟಿತ್ತೆಂದರೆ, ರಕ್ಷಾಳ ತಂದೆ ಒಂದು ಕಡೆ, ಬೈಕು ಇನ್ನೊಂದೆಡೆ ಬಿದ್ದಿತ್ತು. ಆ ಪುಟ್ಟ ಕಂದಮ್ಮ ಆ ರಭಸಕ್ಕೆ ಒಂದಿಷ್ಟು ಅಡಿ ಆಚೆಗೆ ಹಾರಿ  ಅದೃಷ್ಟವಶಾತ್ ಜಲ್ಲಿ ಕಲ್ಲಿನ ರಾಶಿಯ ಮೇಲೆ ಬಿದ್ದಳು. ಅದಾವ ಬಗೆಯಲ್ಲಿ ಪಾತ್ರದಲ್ಲಿ ತಲ್ಲೀನಳಾಗಿದ್ದಳೋ, ಅಂತಹ ಒಂದು ಸ್ಥಿತಿಯಲ್ಲೂ, ಖಡ್ಗವನ್ನು ಕೈ ಇಂದ ಬೀಳಿಸಿರಲಿಲ್ಲ! ಆ ಕಲ್ಲಿನ ರಾಶಿಯೇ ಯುದ್ಧಭೂಮಿಯಾಯಿತು. ಆದರೆ ಹೋರಾಟ ಇವಳ ಮತ್ತು ವೈರಿಗಳ ನಡುವೆ ಅಲ್ಲ! ಇವಳ ಸಾವು ಮತ್ತು ಬದುಕಿನ ನಡುವೆ!

ಅತ್ತ ಮನೆಯಲ್ಲಿ ತಾಯಿ ಪಾತ್ರೆ ತೊಳೆದು ಜೋಡಿಸುತ್ತಿದ್ದಾಗ ಹಿಂದಿನ ವಾರ ಅಂಗಡಿಯಿಂದ ತಂದಿದ್ದ ಕುಂಕುಮದ ಪೊಟ್ಟಣ ಸಿಕ್ಕಿತು. "ಅಯ್ಯೋ! ಆಗಲೇ ಸಿಕ್ಕಿದ್ದರೆ ಪುಟ್ಟಿಯ ಖಡ್ಗಕ್ಕೆ ಕುಂಕುಮದ ನೀರ್ ಹಾಕಿ ರಕ್ತದಂತೆ ಕಾಣುವ ಹಾಗೆ ಮಾಡಬಹುದಾಗಿತ್ತು.. ಪಾಪ ಕೂಸು ಖುಷಿಯಾಗ್ತಿತ್ತು.. ಛೆ!" ಎಂದು ಪರಿತಪಿಸತೊಡಗಿದಳು. ಇತ್ತ, ಅಮ್ಮನ ಕೊರಗಿಗೆ ಸಮಾಧಾನ ಎಂಬಂತೆ, ಖಡ್ಗಕ್ಕೆ ಕುಂಕುಮದ ನೀರಿನ ಅಗತ್ಯವಿರಲಿಲ್ಲ! ರಕ್ಷಾಳ ಹಣೆಗೆ ಬಿದ್ದ ಬಲವಾದ ಏಟಿನಿಂದ ಚಿಮ್ಮಿದ್ದ ರಕ್ತ, ಖಡ್ಗದ ಮೇಲೆ ಹನಿಹನಿಯಾಗಿ ತೊಟ್ಟಿಕ್ಕುತಿತ್ತು. 


ಕನಸಿನ ಮೀನಿಗೆ

ಗಾಳ ಹಾಕುವ ಮುನ್ನ

ಕನಸು ಎಳೆಯಿತೇ

ಕೊನೆಯುಸಿರನ್ನ?

Sunday 31 May 2015

ಮನೆಯಿಂದ, ಊರಿಂದ ದೂರ ಇರುವವರು ಅರ್ಥ ಮಾಡಿಕೊಳ್ಳುವ 10 ಸಂಗತಿಗಳು

ನಮಸ್ಕಾರ! ನಮ್ ಮನೆ, ನಮ್ ಊರು, ನಮ್ ಸ್ಕೂಲು.. ಇಲ್ಲೆಲ್ಲಾ ನಮ್ ಜೀವನದ ಮರೆಯಲಾರದ ನೂರಾರು ನೆನಪುಗಳಿರುತ್ವೆ. ವಿದ್ಯಾಭ್ಯಾಸದ ಕಾರಣದಿಂದಲೋ, ಕೆಲಸದ ನಿಮಿತ್ತವೋ ನಾವು ಮನೆಯಿಂದ, ಊರಿಂದ ದೂರ ಇರಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಲವು ಸಂಗತಿಗಳನ್ನು ಅರ್ಥ ಮಾಡ್ ಕೊಳ್ತೀವಿ. ಅದ್ರಲ್ಲಿ ಹತ್ತು ಸಂಗತಿಗಳು ಇಲ್ಲಿವೆ.




1. ಅಮ್ಮನ ಕೈ ಅಡುಗೆ ಮುಂದೆ ಯಾವ್ ರುಚಿನೂ ಇಲ್ಲ


ಅಮ್ಮನ್ ಅಡುಗೆಗಿಂತ ರುಚಿ ಬೇರೆ ಇಲ್ಲ. ಒಪ್ಪಿಕೊಂಡೊನು ದಡ್ಡನಲ್ಲ :D















ಇಲ್ಲಿ ಬೆಂಗಳೂರಲ್ಲಿ MTR ಇದೆ, SLV ಇದೆ, ವಿದ್ಯಾರ್ಥಿ ಭವನ್ ಇದೆ. ಶಾಂತಿಸಾಗರ್, ಸುಖ್ ಸಾಗರ್ ಗಳೂ ಇವೆ. ಇಲ್ಲೆಲ್ಲಾ ತಿಂದಾಗ, ಹೊಟ್ಟೆ ತುಂಬತ್ತೆ ನಿಜ, ಆದ್ರೆ ಮನಸ್ಸಿನ್ ಯಾವುದೋ ಮೂಲೆಲಿ
"ಛೆ! ಏನ್ ಅಂದ್ರು ಅಮ್ಮ ಮಾಡಿದ್ ಹಾಗಿಲ್ಲ.."  ಅನ್ನೋದು ಕೊರಿತಾನೆ ಇರುತ್ತೆ.




2. ಭಾನುವಾರ ಬಂದ್ರೆ ಬಟ್ಟೆಗಳು "ರಾರಾ.. ಒಗೆಯಲು ಬಾರಾ" ಅಂದ್ಕೊಂಡ್ ಕೂತಿರುತ್ವೆ




ಮನೆಯಲ್ ಆಗಿದ್ರೆ ಬಟ್ಟೆ ಒಗೊಯೋಕ್ಕೆ ಅಮ್ಮ ಇರ್ತಾರೆ. ಇಲ್ಲಿ ನಾವೇ ಒಗಿಬೇಕು. ಭಾನುವಾರ ಬಂತು ಅಂದ್ರೆ ಬಟ್ಟೆ ರಾಶಿ ನಮಗೋಸ್ಕರ ಕಾಯ್ತಾ ಇರುತ್ತೆ. ಅವಾಗ್ ಅನ್ಸುತ್ತೆ 
"ಥೋ! ಇಷ್ಟೊಂದ್ ಬಟ್ಟೆ ಹಾಕಿದ್ನಾ ನಾನು.." ಅಂತ. ಮನೇಲಿ ವಾಶಿಂಗ್ ಮ್ಯಾಶಿನ್ ಇದ್ರೆ ಪರ್ವಾಗಿಲ್ಲ, ಇಲ್ಲ ಅಂದ್ರೆ ಡಿಯೋಡ್ರೆಂಟ್ ಬೇಕೇ ಬೇಕು.



3. ಎಷ್ಟೇ ಗುಡ್ಸಿದ್ರೂ, ನೆಲ ಒರ್ಸಿದ್ರೂ, ಅಮ್ಮ ಮಾಡಿದ್ ಹಾಗೆ clean ಆಗಲ್ಲ



ಅಮವಾಸ್ಯೆ, ಹುಣ್ಣಿಮೆ ಬಂದ್ರೆ ಒಂದೊಂದ್ ಸರ್ತಿ ಗಲೀಜ್ ಆಗಿರೋ ರೂಮ್ ಮೇಲೆ ಕಣ್ ಹೋಗುತ್ತೆ. ಇನ್ನೇನ್ ಕ್ಲೀನ್ ಮಾಡದೇ ಇದ್ರೆ ಇಲ್ಲ್ ಇರಕ್ಕೇ ಅಗಲ್ಲ ಅನ್ನೋ ಸ್ಥಿತಿ ತಲುಪ್ದಾಗ ಕ್ಲೀನ್ ಮಾಡೋದು. ಆವಾಗ್ ಅನ್ಸುತ್ತೆ " ಅಮ್ಮ ಮನೇನ ಅದ್ ಹ್ಯಾಗ್ ಅಷ್ಟ್ ಕ್ಲೀನ್ ಮಾಡ್ ಇಡ್ತಾರೋ.." ಅಂತ.



4. ಅಡುಗೆ ಮಾಡ್ಲಿಕ್ ಪ್ರಯತ್ನ ಮಾಡಿ, ಕೊನೆಗೆ Maggi ಮಾಡೋದ್ ಕಲಿತೀವಿ



ದಿನ ಹೊರಗಡೆ ತಿಂದು ಬೇಜಾರ್ ಆಗಿ, ಅಡುಗೆ ಮಾಡಕ್ ಟ್ರೈ ಮಾಡೋಣ ಅಂತ ಹೋಗೋದು, ಆಮೇಲೆ ಇದೆಲ್ಲಾ ನಮ್ ಕೈಯಲ್ಲಿ ಆಗೋ ಮಾತಲ್ಲ ಅಂತ ಗೊತ್ತಾಗಿ ಬ್ರಹ್ಮಚಾರಿಗಳ ಕುಲದೇವರು "ಮ್ಯಾಗಿ ಮ್ಯಾಗಿ ಮ್ಯಾಗಿ..." ಗೆ ಶರಣು ಅನ್ನೋದು.



5. ಅಡುಗೆ ಮಾಡೋದ್ ಓಕೆ. ಪಾತ್ರೆ ತೊಳೆಯೋದ್ ಯಾಕೆ?












ಕಷ್ಟಪಟ್ಟು ಆವಾಗೊಮ್ಮೆ ಇವಾಗೊಮ್ಮೆ ಮ್ಯಾಗಿ ಮಾಡಿದ್ವಿ ಅಂದ್ಕೊಳಿ, ಹಂಗೋ ಹಿಂಗೋ ತಿಂದೂ ಬಿಡ್ತೀವಿ. ನಿಜವಾದ್ ಪರದಾಟ ಶುರುವಾಗೋದೆ ಇವಾಗ. "ಪಿಚ್ಚರ್ ಅಭಿ ಬಾಕಿ ಹೈ ಮೆರೆ ದೋಸ್ತ್.. " ಅಂದ್ಕೊಂಡು ಪಾತ್ರೆಗಳು ಕಾಯ್ಕೊಂಡ್ ಕೂತಿರುತ್ವೆ. ಏನೇ ಹೇಳಿ, ಈ ಅಡುಗೆ ಆದ್ರೂ ಮಾಡ್ ಬಿಡ್ ಬಹುದು, ಪಾತ್ರೆ ತೊಳೆಯೊ ಗೋಳ್ ಬೇಡಪ್ಪ!



6. ಬೆಳಿಗ್ಗೆ ಸಮಯಕ್ ಸರಿಯಾಗಿ ಎಬ್ಸಕ್ಕೆ ಅಮ್ಮ ಇರಲ್ಲ. ಎಲ್ಲಾ ಕಡೆ ನಮ್ದು late entry





ಮನೇಲ್ ಆದ್ರೆ ಅಪ್ಪ ಅಮ್ಮ, ಸುಪ್ರಭಾತ ಹಾಡಿನೋ, ಕ್ಯಾಕರ್ಸ್ ಉಗ್ದೋ ಎಬ್ಬಿಸ್ತಾ ಇದ್ರು. ಇವಾಗ್ ಏನಿದ್ರು ಮೊಬೈಲ್ ಅಲ್ಲಿರೊ ಅಲಾರ್ಮೆ ಗತಿ. ಈ Snooze ನ ಯಾವನ್ ಕಂಡ್ ಹಿಡ್ದ್ನೋ! ಅದೋಂದ್ ಇದೆ ಅಂತ ೫ ನಿಮಿಷಕ್ಕೆ ೧೦ ನಿಮಿಷಕ್ಕೆ Snooze ಮಾಡಿ ಮಾಡಿ, ಎದ್ದು ತಯಾರಾಗಿ ಹೋಗೋದ್ರೊಳಗೆ, ನಮ್ದು ಎಲ್ಲಾ ಕಡೆನು ತಡಾನೆ.



7. ತಿಂಗಳ್ ಕೊನೆಯಲ್ಲಿ ದುಡ್ ಇರಲ್ಲ. ಫ಼್ರೆಂಡೇ ಗತಿ





ಕೆಲ್ಸಕ್ ಸೇರಿದ್ ಮೇಲೆ ಸ್ವಾಭಿಮಾನ ಅನ್ನೋದು ಮನೇಲಿ ದುಡ್ ಕೇಳೋಕೆ ಅಡ್ಡಿ ಆಗುತ್ತೆ. ತಿಂಗಳ್ ಕೊನೇಲಿ ದುಡ್ ಇಲ್ದೇ ಇದ್ದಾಗ, ದುಡ್ ಕೊಟ್ಟು ಕಾಪಾಡೋನು ಫ಼್ರೆಂಡ್. ಇನ್ ಕೆಲವ್ರು ಎಲ್ಲಿ ದುಡ್ ಕೇಳ್ತಾನೋ ಅಂದ್ಕೊಂಡು ತಿಂಗಳ್ ಕೊನೇಲಿ ಕಾಲ್ ಪಿಕ್ ಮಾಡೋದೆ ಇಲ್ಲ.



8. ಜೀವನದ್ ಬಗ್ಗೆ ಅಪ್ಪ ಹೇಳ್ತಿದ್ ಮಾತುಗಳೇ ನಿಜ ಅನ್ಸಕ್ ಶುರು ಆಗುತ್ತೆ















ಮನೇಲಿ ಅಪ್ಪ ಜೀವನದ್ ಬಗ್ಗೆ ಏನಾದ್ರೂ ಹೇಳಿದ್ರೆ, "ಅಯ್ಯೊ, ಇವ್ರದ್ದು ಇದ್ದಿದ್ದೆ." ಅನ್ಸ್ತಾ ಇತ್ತು. ಇವಾಗ ಅದೆ ಮಾತುಗಳು ವೇದವಾಕ್ಯ ಅನ್ಸುತ್ತೆ. ಜೀವನದ್ ಬಗ್ಗೆ ಅವ್ರು ಸರ್ಯಾಗ್ ಅರ್ಥ ಮಾಡ್ ಕೊಂಡಿದಾರೆ ಅನ್ನೋದು ಗೊತ್ತಾಗುತ್ತೆ.



9. ಈ HOD, Manager ಗಳ ಬೈಗುಳಕ್ಕಿಂತ ಅಮ್ಮನ್ ಬೈಗುಳಾನೇ ಹಿತವಾಗಿತ್ತು













ಅಮ್ಮ ಮನೇಲಿ ಬೈದಾಗ "ಯಾಕಪ್ಪ ಬೈತಾರೆ" ಅನ್ಸೋದಿತ್ತು. ಆದ್ರೆ ಇವಾಗ ಈ ಎಚ್.ಓಡಿ, ಮ್ಯಾನೇಜರ್ ಗಳ ಬೈಗುಳ, ಮಾತುಗಳ್ ಕೇಳ್ಸ್ ಕೊಂಡ್ ಮೇಲೆ, ಅಮ್ಮ್ನ್ ಬೈಗುಳಾನೆ ಹಿತವಾಗಿತ್ತು ಅನ್ಸುತ್ತೆ. ಅದನ್ನ ಒಂಥರಾ ಮಿಸ್ ಮಾಡ್ ಕೊಳ್ಳಕ್ ಶುರು ಮಾಡ್ತೀವಿ.



10. ಈ ಐ.ಟಿ ಕಂಪೆನಿಯಲ್ಲಿ ಕೆಲ್ಸ ಮಾಡೋದಕ್ಕಿಂತ ಊರಲ್ಲಿ ಬಜ್ಜಿ ಬೋಂಡ ಅಂಗಡಿ ಹಾಕಿದ್ರೂ ಜಾಸ್ತಿ ದುಡ್ ಮಾಡ್ ಬಹುದು



ಹೈಕ್ ಸಿಗದೆ ಇದ್ದಾಗ, ರಜೆ ಅಪ್ಪ್ರೂವ್ ಮಾಡದೆ ಇದ್ದಾಗ ನಮ್ ತಲೇಲಿ ಮೊದಲ್ ಬರೋ ವಾಕ್ಯ "ಈ ಐ.ಟಿ ಕಂಪೆನಿಯೆಲ್ಲಾ ಬ್ಯಾನ್ ಆಗ್ ಬೇಕ್.. ನನ್ ಮಗಂದ್". ಆರಕ್ ಏರ್ದೆ, ಮೂರಕ್ ಇಳಿದೆ, ಅದೆ ರಾಗ ಅದೆ ಹಾಡು ಅನ್ನೊ ತರ ಕೆಲ್ಸ ಮಾಡೋವಾಗ, ಇದಕ್ಕಿಂತ ಓಲಾ ಲಿ ಕ್ಯಾಬ್ ಡ್ರೈವರ್ ಆಗೋ, ಇಲ್ಲಾ ಊರಲ್ಲಿ ಬಜ್ಜಿ ಬೋಂಡಾ ಅಂಗಡಿನೋ ಹಾಕಿದ್ರೆ ಇದಕ್ಕಿಂತ ಜಾಸ್ತಿ ದುಡ್ ಮಾಡ್ ಬಹುದು ಅನ್ಸುತ್ತೆ.


Wednesday 4 February 2015

ಸಭ್ಯ ಗೃಹಸ್ಥ


ಎಂದಿನಂತೆ ಇಂದೂ ಮುಂಜಾವಿನ ಚಳಿಯಲಿ
ಹೊರಗೆ ಮಂಜಿನ ಹನಿ ಉದುರುತಿತ್ತು
ಒಲೆಯ ಮೆಲೆ ಹಾಲು ಕುದಿಯುತಿತ್ತು
ವೆಂಕಟೇಶ್ವರ ಸುಪ್ರಭಾತ ಗುನುಗುತಿತ್ತು

ಖಡಕ್ ಇಸ್ತ್ರಿ ಹಾಕಿದ ಬಟ್ಟೆ
ನನಗಾಗಿ ಬೀರುವಿನಲಿ ಕಾಯುತಿತ್ತು
ಪಾಲಿಶ್ ಮಾಡಿದ shoes ಅಂತು
ಧ್ರುವತಾರೆಯಂತೆ ಮಿನುಗುತಿತ್ತು

ಏನೋ ಒಂದು ತೆರನಾದ ಯೋಚನೆ, ಯಾತನೆ
ಮನದ ಕಿಟಕಿಯಲ್ಲಿ ಇಣುಕುತಿತ್ತು
ಬಸವನಹುಳು ಕೂಡ ನನ್ನ ನಡಿಗೆಗೆ
ಸ್ಪರ್ಧೆ ಒಡ್ಡುತ್ತಾ ಮುಂದೆ ಮುಂದೆ ಸಾಗುತಿತ್ತು

ಸಂಸ್ಥೆಯಲ್ಲಿ ಹಲವಾರು ವರ್ಷ ದುಡಿದು
ನಿವೃತ್ತಿ ಹೊಂದುವ ದಿನ ಇದು
ದಿನ ನಡೆವ ದಾರಿ, ಜನ, ಜಾಗ
ಇಂದು ಭಿನ್ನವಾಗಿ ಕಾಣುತಿತ್ತು

ದಿನ ಬೆಳಗಾದರೆ ಮಿಂಚಂಚೆ ಪೆಟ್ಟಿಗೆಯಲ್ಲಿ 
ಬರಿಯ weekly status report, deadline ಅನ್ನು
ನೋಡುತ್ತಿದ್ದವನಿಗೆ ಅದೆನೋ ಆನಂದ
ಶುಭವಿದಾಯದ ಸಂದೇಶಗಳ ನೋಡಲು

ಸಹೋದ್ಯೋಗಿಗಳ ಮೊಗದಲ್ಲಿ ಧನ್ಯತಾಭಾವ
Desktop ಮೇಲಿನ wallpaper ನಂತೆ ಕಾಣಿಸುತಿತ್ತು
ಎಲ್ಲರೂ ಕೂಡಿ ಉಡುಗೊರೆ ನೀಡಿ
ನನ್ನ ವೃತ್ತಿ ಜೀವನಕ್ಕೆ ತೆರೆ ಎಳೆದರು

ವಿದ್ಯಾಭ್ಯಾಸದ ಸಾಲ ತೀರಿಸಲು ದುಡಿಯ ಹೊರಟಿದ್ದೆ
ಬಳಿಕ ತಂದೆ ತಾಯಿಗಾಗಿ ದುಡಿದೆ
ಮಡದಿ ಮಕ್ಕಳಿಗಾಗಿ ದುಡಿಯುತ್ತಾ ಹೋದೆ
ಅವರ ಬಯಕೆಗಳ ಬಂಡಿಗೆ ಚಾಲಕನಾದೆ

ಇಂದು ನೋಡುಗರ ಕಣ್ಣಿಗೆ, ನಾನೊಬ್ಬ ಸಭ್ಯ ಗೃಹಸ್ಥ
ಆದರೆ ಯಾರಿಗೂ ತಿಳಿಯದ ಸತ್ಯವೊಂದಿದೆ
ನಾನೊಬ್ಬ 'ಕೊಲೆಗಾರ'!
ನನ್ನೊಳಗಿನ ಕಲೆಯನ್ನ, ನನ್ನ ಕನಸಿನ ಕೂಸನ್ನ
ಕೊಂದ 'ಕೊಲೆಗಾರ'!

- ನಿರುಪಯೋಗಿ