Monday 18 January 2016

ಎಳ್ಳು ಬೆಲ್ಲ


ಒಂದೇ ಸಮನೆ ಜೋರಾಗಿ
ಗಾಳಿ ಬೀಸಿರಲು

ಕೈಯಲ್ಲಿದ್ದ ಎಳ್ಳು ಬೆಲ್ಲದ ಮೇಲೂ
ಹಣೆಯ ಕೆಳಗಿದ್ದ ಕಣ್ಣಿನ ಮೇಲೂ
ಧೂಳೇ ಧೂಳು

ಕಣ್ಣಿಗೆ ನೋವಿನ ಉರಿ
ಕೈಗೆ ಧೂಳಿನ ಸಿರಿ

ಕಣ್ಣು ತೆರೆಯಲು, ಕಣ್ಣಿಂದ ಧೂಳು ತೆಗೆಯಲು
ಕೈಯ ಸಹಾಯಕ್ಕೆ ಮೊರೆ ಹೋದೆ

ಕೈ ಖಾಲಿ ಇರಲಿಲ್ಲ, ಫೂ! ಎಂದು ಗಾಳಿಯ ಊದಿದೆ
ಎಳ್ಳು ಬೆಲ್ಲದ ಮೇಲೆ ಕೂತಿದ್ದ ಧೂಳ
ಓಡಿಸಿ ಅದನು ಬಾಯಲಿ ತೂರಿದೆ

ಕಣ್ಣನು ನಿಧಾನವಾಗಿ ಪಿಳಿಪಿಳಿ ಪಿಳಿಪಿಳಿ
ಎಂದು ತೆರೆದೆ
ದೇವಸ್ಥಾನದ ಮೆಟ್ಟಿಲಿಳಿದು
ಬರುತ್ತಿದ್ದ ಭಕ್ತವೃಂದಡೆಗೆ ನೋಡಿದೆ

ದೃಷ್ಟಿಯು ಮಂದವಾಗಿದ್ದರೂ
ರೆಪ್ಪೆ ತೆರೆದು ಮುಚ್ಚುವ ಒಳಗೆ
ಕಾಣಿಸಿತು ಆಕೆ ಮೆಟ್ಟಿಲಿಳಿದು ಬರುವುದು

ಬೀಸಿದ ಗಾಳಿಗೆ, ಆಕೆಯ ಕೇಶರಾಶಿಯು
ಮುದ್ದು ಮೊಗದ ತುಂಬಾ ಪಸರಿಸಿತ್ತು
ನನಗೆ ಆಕೆಯ ಸೌಂದರ್ಯವು ಕಾಣದಂತೆ
ಮಾಡಲು ಗಾಳಿಯು ಎಲ್ಲಾ ಬಗೆಯ ಪ್ರಯತ್ನವನ್ನೂ ಮಾಡಿತ್ತು

ಆದರೆ ಇದು ಸಂಕ್ರಮಣ, ಹಳೆಯ ನೋವು ಹೋಗಿ
ನಲಿವಿನ ಬಾಗಿಲು ತೆರೆಯುವ ಸಮಯ

ಒಂದು ಕೈಯಲಿ, ಕೂದಲ ಸರಿಸಿದಳು
ಇನ್ನೊಂದು ಕೈಯಲಿ, ಸೀರೆಯ ನೆರಿಗೆಯ

ಬಿಂಕದಿ ಮೆಟ್ಟಿಲಿಳಿದು ನಡೆಯುತಾ ಬಂದ ಹಾಗೆ
ತುಂಬತೊಡಗಿತು ನನ್ನ ಹೃದಯದ ಸಂತಸದ ಜೋಳಿಗೆ

ಬಾಯ ತುಂಬಾ ಎಳ್ಳು ಬೆಲ್ಲವ ಮುಕ್ಕಿಕೊಂಡು
ಕಣ್ಣ ಅಗಲಿಸಿ ಮಂಕುದಿಣ್ಣೆಯ ಹಾಗೆ ಅವಳ ನೋಡುತಿರೆ

ಅತ್ತ ಕಡೆ ಹೋದವಳು ಓರೆ ನೋಟದಿ
ನನ್ನೆಡೆಗೆ ಕಿರು ನಗೆಯ ಬೀರಿದಳು

ಹಬ್ಬವು ಕಡೆಗೂ ಸಂಭ್ರಮವ ತಂದಿತು
ಬಾಯ ತುಂಬಾ ಎಳ್ಳು ಬೆಲ್ಲ, ಕಣ್ಣ ತುಂಬಾ ಆಕೆಯ ನಗೆಯ ಬೆಲ್ಲ

- ನಿರುಪಯೋಗಿ