Friday 6 November 2015

ಕತ್ತಲ ಕವಿತೆ



ನರಳಿ ನರಳಿ ಗಾಡಿ ನಿಂತಿತು. ಸೆಲ್ಫ್ ಸ್ಟಾರ್ಟ್ ಮೂಲಕ ಗಾಡಿ ಸ್ಟಾರ್ಟ್ ಮಾಡಲು ನೋಡಿದಳು. ಇಲ್ಲ! ಕಿಕ್ ಸ್ಟಾರ್ಟ್ ಮಾಡಲು ನೋಡಿದಳು. ಅದೂ ಆಗಲಿಲ್ಲ! ಇಂತಹ ವೇಳೆಯಲ್ಲಿ ನಮ್ಮಿಂದ ಸಾಧ್ಯವಾಗುವನಾವು ಮಾಡುವ, ಏಕೈಕ ಘನ ಕಾರ್ಯವೆಂದರೆಪೆಟ್ರೋಲ್ ಇದೆಯೇ ಎಂದು ನೋಡುವುದು! ರಂಗಿತರಂಗದ ತೆಂಕ ಬಯಲು ಕಾಳಿಂಗ ಭಟ್ಟರುಬಾವಿಯಲ್ಲಿ ನೀರು ಇದೆಯೋ ಇಲ್ಲವೋ ಎಂದು ನೋಡಲು ಬಾವಿಯಲ್ಲಿ ಇಣುಕಬಾರದುಬದಲಿಗೆ ಬಾವಿಗೆ ಕಲ್ಲನ್ನು ಎಸೆಯಬೇಕು; 'ಬ್ಲಪ್ಪ್ಎಂಬ ಸಪ್ಪಳ ಬಂದರೆ ನೀರು ಇದೆ ಎಂದೂಬಾರದಿದ್ದರೆ ನೀರು ಇಲ್ಲ ಎಂದೂ ಹೇಳಿದ್ದರು. ಆದರೆ, ಪೆಟ್ರೋಲ್ ಟಾಂಕಿಯಲ್ಲಿ ಪೆಟ್ರೋಲ್ ಇದೆಯೇ ಇಲ್ಲವೇ ಎಂದು ಪರಿಶೀಲಿಸುವುದು ಹೇಗೆ  ಎಂದು ಹೇಳಿಕೊಡಲೇ ಇಲ್ಲ! ಆದ್ದರಿಂದ ಟಾಂಕಿಯ ಮುಚ್ಚಳ ತೆಗೆದು ಇಣುಕಿದಳು. ಟಾಂಕಿ ಹಾಳು ಬಾವಿಯಂತೆ ಗೋಚರಿಸಿತು. ಒಂದು ತೊಟ್ಟು ಪೆಟ್ರೋಲ್ ಕೂಡಾ ಇರಲಿಲ್ಲ. "ಬೆಳಿಗ್ಗೆ ಬರುವಾಗ ಪೆಟ್ರೋಲ್ ಹಾಕಿಸಿದ್ದೆಇಷ್ಟು ಬೇಗ ಹೇಗೆ ಖಾಲಿ ಆಯಿತು?!" ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಪಾಪ ಜೀವವಿಲ್ಲದೇ ನಿಂತ ಆ ಗಾಡಿಯಾದರೂ ಹೇಗೆ ಉತ್ತರ ಕೊಡಲು ಸಾಧ್ಯ! ಉತ್ತರ ಕೊಡದಿದ್ದಕ್ಕೆ ಶಿಕ್ಷೆ ಎಂಬಂತೆ ಎರಡು ಬಾರಿ ಗಾಡಿಗೆ ಒದ್ದಳು. ಅವಳ ಕಾಲಿಗೆ ನೋವಾಯ್ತೆ ಹೊರತು ಗಾಡಿ ತುಟಿಕ್ ಪಿಟಿಕ್ ಎನ್ನಲಿಲ್ಲ! ಪೆಟ್ರೋಲೂ ಸಹ ಒದೆಗೆ  ಹೆದರಿ ಪ್ರತ್ಯಕ್ಷವಾಗಲಿಲ್ಲ! ಕೈಗಡಿಯಾರವನ್ನೊಮ್ಮೆ ನೋಡಿಕೊಂಡಳು. ಗಂಟೆ ರಾತ್ರಿ ೧೧.೩೦ ಆಗಿತ್ತು. ಸುತ್ತಮುತ್ತ ಒಮ್ಮೆ ಕಣ್ಣು ಹಾಯಿಸಿದಳು. ಯಾವುದೇ ಗಾಡಿಗಳಾಗಲೀ ನರಪಿಳ್ಳೆಗಳಾಗಲೀ ಕಾಣಿಸಲಿಲ್ಲ. ತಲೆ ಎತ್ತಿ ಮೇಲೆ ನೋಡಿದಳು. ಊರಿಗೊಬ್ಳೆ ಪದ್ಮಾವತಿ ಎಂಬಂತೆ ಬೀದಿಗೊಂದೇ ಇದ್ದ ಬೀದಿ ದೀಪ ಫ್ಲಿಕ್ಕರ್ ಆಗುತ್ತತನ್ನನ್ನು ನೋಡಿ ಗಹಗಹಿಸಿ ನಗುತ್ತಿದ್ದಂತೆ ಭಾಸವಾಯಿತು. ಅಣ್ಣನಿಗೆ ಕರೆ ಮಾಡಲು ಜಂಗಮವಾಣಿ ತೆಗೆದಳು. ಅದೇಕೋ ಗೊತ್ತಿಲ್ಲಜಂಗಮವಾಣಿಯು ಮುಷ್ಕರ ಹೂಡಿತ್ತು. ಜಪ್ಪಯ್ಯ ಎಂದರೂ ಆನ್ ಆಗಲಿಲ್ಲ. ಅವಳು ಧೈರ್ಯಶಾಲಿಯೇಆದರೂ ಕೊಂಚ ದಿಗಿಲಾಗಿ ಚಳಿಯಲ್ಲಿಯೂ ನಿಧಾನ ಬೆವರಿಳಿಯತೊಡಗಿತು. ಕೋಪದಿಂದಬೆಳಿಗ್ಗೆ ಎದ್ದು ಯಾರ ಮುಖ ನೋಡಿದ್ದೆ ಎಂದು ನೆನಪಿಸಿಕೊಂಡಳು. ನೆನಪಾಗಿಮನೆ ಸೇರುತ್ತಿದ್ದಂತೆ ತನ್ನ ಹಾಸಿಗೆಯ ಮುಂದಿರುವ ಕನ್ನಡಿಯನ್ನು ಅಲ್ಲಿಂದ ಮೊದಲು ಎತ್ತಂಗಡಿ ಮಾಡಬೇಕೆಂದು ನಿರ್ಧರಿಸಿದಳು!

ಬೆಳಿಗ್ಗೆ ಅಮ್ಮ ಮಾಡಿಕೊಟ್ಟ ಚಹಾವನ್ನು ಹೀರುತ್ತಾ ಅಡಿಗೆ ಮನೆಯಲ್ಲಿ ಕುಳಿತಿದ್ದಾಗತಿಂಡಿಯ ತಯಾರಿಯನ್ನು ಶುರು ಮಾಡ ಹೊರಟಿದ್ದ ಅಮ್ಮ, "ಬೇಗ ತಿಂಡಿ ಎಲ್ಲಾ ಮಾಡೊದ್ ಕಲಿಯೇ.. ನಾನ್ ಸ್ವಲ್ಪ ರೆಸ್ಟ್ ತಗೋ ಬಹುದು ಅವಾಗ " ಎಂದರು ನಗುತ್ತ. "ನಂಗೆ ಬರುತ್ತೆ" ಎಂದಳು ಥಟ್ಟನೆ! " ನಿಂಗೆ ತಿನ್ನೋಕ್ ಬರುತ್ತೆ ಅಂತ ನಂಗೂ ಗೊತ್ತು ಕಣೆ.. ಮಾಡಕ್ ಕಲಿ ಅಂದಿದ್ದು" ಎಂದು ಗೇಲಿ ಮಾಡುತ್ತಾ ತಲೆಗೆ ಮೊಟಕಿದರು. ಇವಳು ಇದ್ದಕ್ಕಿದ್ದಂತೆ ಎದ್ದು "ನನ್ ಮೇಲೆ ನಿಂಗೆ ನಂಬ್ಕೆ ಇಲ್ಲ ಅಲ್ವಾಸರಿ. ಇವತ್ ನಾನೇ ತಿಂಡಿ ರೆಡಿ ಮಾಡಿ ತೋರಿಸ್ತೀನಿ. ನೀನ್ ಹೊರಗಡೆ ಕೂತ್ಕೊಂಡು ಟಿ.ವಿ ನೋಡು" ಎನ್ನುತ್ತಾ ಅಮ್ಮನನ್ನು ಅಡಿಗೆ ಮನೆಯಿಂದ ದರದರ ಎಳೆದುಕೊಂಡು ಬಂದು ಟಿ.ವಿಯ ಮುಂದೆ ಕೂರಿಸಿದಳು. ಮಗಳ ಮದುವೆ ಮಾಡಿಮೊಮ್ಮಕ್ಕಳನ್ನು ಎತ್ತಿ ಆಡಿಸುವ ಕನಸುಗಳ ಹೊತ್ತಿದ್ದರಿಂದಮಗಳು ಮಾಡುವ ತಿಂಡಿಯನ್ನು ತಿನ್ನುವುದರ ಬಗ್ಗೆಅವಳು ತಯಾರು ಮಾಡುವ ಮೊದಲೇ ಅಮ್ಮನಿಗೆ ಭಯ ಹುಟ್ಟಿತು! "ಸಿಲ್ಕ್ ಬೋರ್ಡ್ ಸಿಗ್ನಲ್ ಟ್ರಾಫಿಕ್ ಫ್ರೀ ಆಗೋದುನೀನು ಅಡಿಗೆ ಕಲಿಯೋದು ಎರಡೂ  ಈ ಜನ್ಮದಲ್ಲಿ ಸಾಧ್ಯ ಇಲ್ಲ ಕಣೆ" ಎನ್ನಲು ಬಾಯಿ ತೆರೆದವರುಮಗಳೇ ಅಡಿಗೆ ಮಾಡುತ್ತೇನೆ ಎಂದಾಗ ಹೀಗೆ ಹೇಳಿ ಅವಳ ಉತ್ಸಾಹಕ್ಕೆ ತಣ್ಣೀರು ಎರಚುವುದು ಸರಿಯಲ್ಲ ಎಂದು ಭಾವಿಸಿಟಿ.ವಿಯಲ್ಲಿ ದಿನ ಭವಿಷ್ಯ ಹೇಳುವ ಜ್ಯೋತಿಷಿಗಳು ತನ್ನ ರಾಶಿಯ ಬಗ್ಗೆ ಹೇಳುತ್ತ, "ಮಗಳು ಮಾಡಿದ ತಿಂಡಿ ತಿಂದು ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿದೆ" ಎಂದು ಏನಾದರೂ ಹೇಳುತ್ತಾರೋ ಎಂದು ಆಲಿಸುತ್ತ ಕುಳಿತಳು
"ಅಮ್ಮ ಅಕ್ಕಿ ಎಲ್ಲಿದೆ?"
"
ಆ ದೊಡ್ಡ ಬಿಳಿ ಡಬ್ಬಿಲಿದೆ ನೋಡೆ"
"
ಹಾ! ಸಿಕ್ತು. ಬೇಳೆ ಎಲ್ಲಿದೆ"
"
ಅಕ್ಕಿ ಡಬ್ಬಿ ಪಕ್ಕ ಒಂದ್ ಸ್ಟೀಲ್ ಡಬ್ಬಿ ಇದ್ಯಲ್ಲಾ.. ಅದ್ರಲ್ ಇದೆ ನೋಡು"
ಹೀಗೆ ಒಂದಾದ ಮೇಲೊಂದು ಕೇಳುತ್ತಾ ಹೋದಳು. ಅಮ್ಮನಿಗೆಅಕ್ಕಿಬೇಳೆಮೆಂತ್ಯೆಏಲಕ್ಕಿಲವಂಗ.. ಇವುಗಳನ್ನೆಲ್ಲ ಅಡಿಗೆಗೆ ಬಳಸುತ್ತಾರೆ ಎಂಬುದಾದರೂ ತಿಳಿದುಕೊಂಡಿದ್ದಾಳಲ್ಲ ಎಂಬ ಖುಶಿ ಒಂದೆಡೆಯಾದರೆಇವನ್ನೆಲ್ಲಾ ಹಾಕಿ ಅದಾವ ಅಮೋಘ ರಸಪಾಕ ಮಾಡುತ್ತಾಳೋ ಎಂಬ ಕುತೂಹಲ ಇನ್ನೊಂದೆಡೆ. ಇಷ್ಟೆಲ್ಲಾ ಕೇಳಿತನ್ನ ಕೋಣೆಗೆ ಹೋಗಿ ಯಾವುದೋ ಪುಸ್ತಕವನ್ನು ತಂದಳು. ಅದನ್ನು ನೋಡಿಓಹೋ! ಮಗಳು ಅಡಿಗೆಯ ರಿಸಿಪಿಗಳನ್ನು ಬರೆದಿಟ್ಟುಕೊಂಡಿದ್ದಾಳಲ್ಲ ಎಂದು ಅಮ್ಮ ಹಿರಿ ಹಿರಿ ಹಿಗ್ಗಿದರು. ಅಡಿಗೆ ಕಲಿತಳೆಂದರೆ ಮದುವೆಗೆ ಗಂಡು ಹುಡುಕಲು ಶುರು ಮಾಡಬಹುದು ಎಂಬುದು ಎಲ್ಲಾ ತಾಯಂದಿರ ಲೆಕ್ಕಾಚಾರ! ".. ಮೀನ ರಾಶಿಯವರಿಗೆ ವ್ಯಾಪಾರ ವಹಿವಾಟುಗಳಲ್ಲಿ ಲಾಭವಾಗುವುದು. ಆರೋಗ್ಯದಲ್ಲಿ ಸುಧಾರಣೆ ಕಾಣುವುದು.. ಅದೃಷ್ಟ ಸಂಖ್ಯೆ ೫&೭.. " ಜ್ಯೋತಿಷಿಗಳು ಭವಿಷ್ಯ ನುಡಿಯುವುದ ಕೇಳಿಮಗಳು ಮಾಡುವ ಅಡಿಗೆ ತಿನ್ನಬಹುದು ಎಂದು ಸಮಾಧಾನ ಮಾಡಿಕೊಂಡರು. ಅಡಿಗೆ ಕೋಣೆಯಿಂದ ಸುವಾಸನೆ ಬರಲಾರಂಭವಾಯಿತು. ಅಮ್ಮನ ಮುಖದಲ್ಲಿ ಮಂದಹಾಸ. ಸ್ವಲ್ಪ ಹೊತ್ತಿನಲ್ಲೇತಾನು ಮಾಡಿದ ಅಮೋಘ ರಸಪಾಕವನ್ನು ಅಮ್ಮನ ಮುಂದಿಡಲು ಬಂದಳು. ಟಿ.ವಿಯಲ್ಲಿ ಜಾಹಿರಾತು ಬರುತ್ತಿತ್ತು. "ಮತ್ತೆ ಮಾರುಕಟ್ಟೆಯಲ್ಲಿವಿನೂತನ ಸುವಾಸನೆಯೊಂದಿಗೆನಿಮ್ಮ ಮನೆ ಮನಗಳನ್ನು ಗೆದ್ದ.." ಅಮ್ಮ ತಟ್ಟೆ ನೋಡಿದರುಜಾಹಿರಾತು ನೋಡಿದರು ".. ಮ್ಯಾಗಿ ಮ್ಯಾಗಿ ಮ್ಯಾಗಿ" 

ಮಾರುಕಟ್ಟೆಯಿಂದ ಮ್ಯಾಗಿ ಕಣ್ಮರೆಯಾದಾಗ ಅದರ ಮಾಲೀಕರು ಅಷ್ಟು ದುಃಖ ಪಟ್ಟಿದ್ದರೋ ಗೊತ್ತಿಲ್ಲಆದರೆ ಪ್ರತಿಮಾ ಪ್ರತಿ ರಾತ್ರಿ ಗೊಳೋ ಎಂದು ಅತ್ತಿದ್ದಳು. ಮ್ಯಾಗಿ ಮತ್ತೆ ಮಾರುಕಟ್ಟೆಗೆ ಬಂದರೆ ಬಸವನಗುಡಿಯ ದೊಡ್ಡ ಗಣೇಶನಿಗೆ ೧೦೧ ತೆಂಗಿನಕಾಯಿಗಳನ್ನು ಒಡೆಯುವ ಹರಕೆಯನ್ನೂ ಹೊತ್ತಿದ್ದಳು! ಮ್ಯಾಗಿಯ ಮಾರಾಟ ಪುನರಾರಂಭವಾದಾಗವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಗೆದ್ದಾಗ ಭಾರತೀಯರು ಸಂಭ್ರಮಿಸುವಂತೆ ಸಂಭ್ರಮಿಸಿದ್ದಳು. ಯಾವುದೋ ರುಚಿಯಾದ ತಿಂಡಿ ತಯಾರು ಮಾಡಲು ಸಜ್ಜಾಗಿದ್ದ ಅಮ್ಮನಿಗೆತಾನೇ ತಿಂಡಿ ಮಾಡುತ್ತೇನೆ ಎಂದುಅಡಿಗೆ ಪುಸ್ತಕವೆಂಬಂತೆ ಯಾವುದೋ ಪುಸ್ತಕವನ್ನು ಇಟ್ಟುಕೊಂಡುಅಕ್ಕಿ ಎಲ್ಲಿದೆ ಬೇಳೆ ಎಲ್ಲಿದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಚಮಕ್ ಕೊಟ್ಟು ಮ್ಯಾಗಿಯನ್ನು ತಿನ್ನುವಂತೆ ಮಾಡಿದ್ದರಿಂದಅವರಿಂದ ಅಷ್ಟೋತ್ತರ ಶತನಾಮಾವಳಿಗಳನ್ನು ಮಾಡಿಸಿಕೊಳ್ಳುವ ಮೊದಲೇ ತನ್ನ ಕೋಣೆಯನ್ನು ಸೇರಿಕೊಂಡು ತಯಾರಾಗತೊಡಗಿದಳು.

ಬಾಲ್ಯದಿಂದಲೂ ಜೀವನದಲ್ಲಿ ಏನಾದರೂ ಸಾಧಿಸಬೇಕುಸ್ವಾವಲಂಬಿಯಾಗಿ ಬಾಳನ್ನು ಸಾಗಿಸಬೇಕು ಎಂಬ ಆಸೆ ಹೊತ್ತವಳು ಪ್ರತಿಮಾ. ಎಷ್ಟೇ ಕಷ್ಟವಿದ್ದರೂಏನೇ ಸಮಸ್ಯೆಗಳಿದ್ದರೂ ಮುಖದಲ್ಲಿ ಮಂದಹಾಸದ ಮೆರುಗನ್ನು ಝಳಪಿಸುವವಳು. ಕಸ್ತೂರಿ ನಿವಾಸದ ಅಣ್ಣಾವ್ರ ಹಾಗೆ ತನ್ನ ಕೈ ಯಾವುದೇ ಕಾರಣಕ್ಕೂ ಆಗಸವ ನೋಡಬಾರದೆಂದು ಪಣ ತೊಟ್ಟಿದ್ದಳು. ಇತರರ ಕಷ್ಟ ಸುಖಗಳಲ್ಲಿ ಬಹಳ ಸುಲಭವಾಗಿ ಭಾಗಿಯಾಗುತ್ತಿದ್ದರಿಂದ ಪ್ರತಿಮಾಗೆ ಗೆಳೆಯ ಗೆಳತಿಯರ ದೊಡ್ಡ ಗುಂಪೇ ಇತ್ತು! ಸ್ನಾನಾದಿ ಕಾರ್ಯಗಳನ್ನು ಮುಗಿಸಿಬೀರುವಿನಲ್ಲಿದ್ದ ನೀಲಿ ಬಣ್ಣದ ಚೂಡಿದಾರವನ್ನು ಧರಿಸಲು ಸಿದ್ಧಳಾದಳು. ಯಾವಾಗಲೂ ಹಾಡನ್ನು ಕೇಳುತ್ತಾ ಇರುವುದು ಅವಳ ಅಭ್ಯಾಸ ಹಾಗೂ ಹವ್ಯಾಸ. ಹಾಗಾಗಿ ತಯಾರಾಗುವಾಗ ಲೌಡ್ ಸ್ಪೀಕರ್ ನಲ್ಲಿ ಎಫ್.ಎಮ್ ಅನ್ನು ಹಾಕಿದಳು. ".. ಬ್ಯಾಕ್ ಟು ಬ್ಯಾಕ್ ಎಸ್.ಪಿ.ಬಾಲಸುಬ್ರಮಣ್ಯಂ ಹಿಟ್ಸ್ ಓನ್ಲಿ ಆನ್ ೯೨.೭ ಬಿಗ್ ಎಫ್.ಎಮ್. ಅಂದಿಗೂ ಹಿಟ್ ಎಂದೆಂದಿಗೂ ಹಿಟ್.." ಬರತೊಡಗಿತು. ಆ ನೀಲಿ ಚೂಡಿದಾರ ಧರಿಸಿ ಕನ್ನಡಿಯ ಮುಂದೆ ನಿಂತು ಬಲಗೈಯ ಕಿರುಬೆರಳಿನಿಂದ ಕಣ್ಣಿಗೆ ಕಾಡಿಗೆ ಇಟ್ಟುಕೊಳ್ಳುತ್ತಿರುವಾಗಸಂದರ್ಭಕ್ಕೆ ಹೊಂದುವಂತೆ ಎಸ್.ಪಿ.ಬಿ ಯವರ ಮಧುರ ಗೀತೆ ಉಲಿಯುತ್ತಿತ್ತು "ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು.. ಮಿಂಚು ಕೂಡಾ ನಾಚುವ ಮಿಂಚಿನ ಬಳ್ಳಿ ನೀನು.." ಕನ್ನಡಿಗೂ ಅದೇನೋ ಸಂತಸಅವಳ ರೂಪವನ್ನು ಪ್ರತಿಫಲಿಸುತ್ತಾಕ್ಷಣಕಾಲ ತಾನೂ ಸೌಂದರ್ಯ ಲೋಕದ ಕುವರಿಯಾದೆನಲ್ಲಾ ಎಂದು! ಪ್ರತಿಮಾ ಹೊರಡಲು ಸಜ್ಜಾಗಿಕಿವಿಯುಲಿಯಲ್ಲಿ ಹಾಡು ಕೇಳುತ್ತಾಅಮ್ಮನ ಹಣೆಗೆ ಮುತ್ತಿಟ್ಟು ಆಫೀಸಿನೆಡೆಗೆ ಗಾಡಿ ಚಲಾಯಿಸಿದಳು. ಶ್ವೇತವರ್ಣದ ಗಾಡಿಯ ಮೇಲೆ ಮುದ್ದು ಮೊಗದ ಶ್ವೇತವರ್ಣೆ! ಬೀಸುವ ಗಾಳಿಯು ಅವಳ ಕೂದಲನ್ನು ಸೋಕಲುಅವಳು ಹೆಲ್ಮೆಟನ್ನು ತೆಗೆಯುವುದನ್ನೇ ಕಾಯುತ್ತಾ ಹಿಂಬಾಲಿಸುತ್ತಿತ್ತು! ದಾರಿಯಲ್ಲಿ ಗಾಡಿಗೆ ಪೆಟ್ರೋಲ್ ಹಾಕಿಸಿಕೊಂಡು ಆಫೀಸು ತಲುಪಿದಳು.

ಗಡಿಯಾರದ ಮುಳ್ಳುಗಳು ಪಿ.ಟಿ ಉಷಾರಂತೆ ಓಡುತ್ತಿತ್ತು. ತಡರಾತ್ರಿಯವರೆಗೆ ಕೆಲಸ ಮಾಡಬಾರದಿತ್ತು ಎಂದು ಕೆಲಸ ಕೊಟ್ಟ ಮ್ಯಾನೇಜರ್ ಗೆ ಶಾಪ ಹಾಕುತ್ತಾಪಕ್ಕದ ರಸ್ತೆಯಲ್ಲಾದರೂ ಯಾವುದೇ ಗಾಡಿ ಅಥವಾ ಯಾರಾದರೂ ಸಿಗುವರೇ ಎಂದು ನೋಡುವುದು ಲೇಸೆಂದು ಗಾಡಿಯನ್ನು ಅಲ್ಲೇ ರಸ್ತೆಯ ಒಂದು ಬದಿಯಲ್ಲಿ ನಿಲ್ಲಿಸಿಪಕ್ಕದ ರಸ್ತೆ ಎಡೆಗೆ ಹೆಜ್ಜೆ ಇಡತೊಡಗಿದಳು. ನಡೆಯುತ್ತಾ ನಡೆಯುತ್ತಾ ಅವಳ ಯೋಚನಾಲಹರಿ ನೆನಪಿನಂಗಳಕ್ಕೆ ವಿಹರಿಸಲು ಹೋಯಿತು. ಬೆಳಿಗ್ಗೆ ಪೆಟ್ರೋಲ್ ಹಾಕಿಸಿದ್ದರೂ ಅದ್ಹೇಗೆ ಪೆಟ್ರೋಲ್ ಖಾಲಿಯಾಯಿತುಜಂಗಮವಾಣಿಯನ್ನು ನೂರು ಶೇಕಡಾ ಚಾರ್ಜ್ ಮಾಡಿದ್ದರೂ ಅದ್ಹೇಗೆ ನಿಷ್ಕ್ರಿಯಗೊಂಡಿತುಪ್ರತಿದಿನ ಕಿವಿಯುಲಿ ಹಾಕಿಕೊಂಡು ಗಾಡಿ ಓಡಿಸುವ ತಾನು ಆಫೀಸಿನಿಂದ ಹೊರಡುವಾಗ ಕಿವಿಯುಲಿ ಸಿಗದಿದ್ದಾಗ ಹುಡುಕದೆ ಸುಮ್ಮನೇಕೆ ಹೊರಟೆಇತ್ಯಾದಿ ಪ್ರಶ್ನೆಗಳು ಟ್ರಾಫಿಕ್ ಸಿಗ್ನಲ್ ಹಳದಿಯಾದೊಡನೆ ಒಂದರ ಹಿಂದೆ ಒಂದು ವೇಗವಾಗಿ ಸಿಗ್ನಲ್ ದಾಟಲು ಹವಣಿಸುವ ವಾಹನಗಳಂತೆಸಾಲು ಸಾಲಾಗಿ ಬಂದವು. ಏನೋ ಮಿಸ್ ಹೊಡೆಯುತ್ತಿದೆಯಲ್ಲ ಅಂದುಕೊಳ್ಳುತ್ತ ಹೆಜ್ಜೆ ಇಡುತ್ತಿದ್ದಾಗ ಹಿಂದೆ ಏನೋ ಸದ್ದು ಕೇಳಿಸಿತು. ತಿರುಗುವಷ್ಟರಲ್ಲಿ ಇಬ್ಬರು ಮುಸುಕುಧಾರಿಗಳು ಒಮ್ಮೆಲೇ ಎರಗಿ ಅವಳ ಮುಖವನ್ನು ಒಂದು ಕಪ್ಪು ಬಣ್ಣದ ಬಟ್ಟೆಯಿಂದ ಬಿಗಿಯಾಗಿ ಸುತ್ತಿದರು. ಕಿರುಚಾಡಲು ಬಾಯಿ ತೆರೆಯುವ ಮುನ್ನ ಇನ್ನೊಂದು ಬಟ್ಟೆಯಿಂದ ಬಾಯಿಗೆ ಪಟ್ಟಿ ಕಟ್ಟಿದರು. ವೇಗವಾಗಿ ಕಾರೊಂದು ಬಂದು ಇವರ ಪಕ್ಕ ನಿಂತಿತು. ಆ ಮುಸುಕುಧಾರಿಗಳು ಅವಸರ ಅವಸರವಾಗಿ ಅವಳನ್ನು ಎತ್ತಿ ಕಾರಲ್ಲಿ ಕೂರಿಸಿದರು. ಅವರು ಕೈ ಕಾಲುಗಳನ್ನು ಬಿಗಿಯಾಗಿ ಹಿಡಿದಿದ್ದರಿಂದ ಅಲುಗಾಡಲೂ ಆಗದೆಬಾಯಿಗೆ ಕಟ್ಟಿದ್ದ ಪಟ್ಟಿಯಿಂದಾಗಿ ಕಿರುಚಲೂ ಆಗದೆಮುಸುಕಿನಿಂದಾಗಿ ಅತ್ತಿತ್ತ ನೋಡಲೂ ಆಗದೆಪ್ರತಿಮಾ ಸುಮ್ಮನೆ ಉಸಿರಾಡುತ್ತ ಕುಳಿತಳು. ಎದೆಬಡಿತದ ವೇಗ ದ್ವಿಗುಣಗೊಂಡಿತು. ಭಯದಲ್ಲಿ ಮೈ ನಡುಗತೊಡಗಿತು. ಯಾವ ಕಾರುಎಷ್ಟು ಜನರಿದ್ದಾರೆಎಲ್ಲಿಗೆ ಕರೆದೊಯ್ಯುತ್ತಿದ್ದಾರೆಯಾಕೆಪ್ರಶ್ನೆಗಳ ಸುರಿಮಳೆ. ಉತ್ತರವಿಲ್ಲ. ಸ್ಮಶಾನ ಮೌನ.

ಕಾರು ಒಂದೆಡೆ ನಿಂತಿತು. ತಪ್ಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಾಸಂದರ್ಭಕ್ಕಾಗಿ ಹಾತೊರೆಯತೊಡಗಿದಳು. ಆ ಮುಸುಕುಧಾರಿಗಳು ಇವಳನ್ನು ಮೂಟೆಯಂತೆ ಎತ್ತಿಕೊಂಡು ಯಾವುದೋ ನಿರ್ಜನ ಮನೆಯನ್ನು ಪ್ರವೇಶಿಸಿದರು. ಒಬ್ಬರೂ ಮಾತನಾಡುತ್ತಿಲ್ಲ. ಭಯ ಹೆಚ್ಚಿತು. ಒಳಗೆ ಕರೆದೊಯ್ದವರೇ ಕುರ್ಚಿಗೆ ಇವಳನ್ನು ಕಟ್ಟಿ ಹಾಕಿದರು. ಉಸಿರಾಟದ ವೇಗ ಹೆಚ್ಚಿಅದರ ಸದ್ದಿನ ಹೊರತಾಗಿ ಬೇರಾವ ಸದ್ದೂ ಕೇಳಿಸುತ್ತಿಲ್ಲ. ಒಳಗೊಳಗೆ ಕಂಪನಆಕ್ರಂದನ ಸದ್ದಿಲ್ಲದೇ ಮುಗಿಲು ಮುಟ್ಟಿತು. ಭವಿಷ್ಯದ ಕನಸಿನ ಗೋಪುರ ಕುಸಿಯುತ್ತಿರುವಂತೆ ಅನಿಸಿತು. ನಿಶ್ಯಬ್ದದಲ್ಲೇ ಅಳತೊಡಗಿದಳು. ಕಾಪಾಡು ಎಂದು ಎಲ್ಲಾ ದೇವರನ್ನು ಮನಸ್ಸು ಅಂಗಲಾಚತೊಡಗಿತು. 

"ಆ ಚಾಕು ತಗೊಂಡ್ ಬಾರೊ ಕೊನೆಗೂ ಯಾವುದೋ ಧ್ವನಿ ಕೇಳಿಸಿತು. ಕಿವಿ ಚುರುಕಾಯಿತು. ಸರಿಯಾಗಿ ಯೋಚಿಸಿದಳು. ಪರಿಚಯದ ಧ್ವನಿಯಂತಿತ್ತು! ಈ ಹಿಂದೆಅತಿಯಾಗಿ ನಂಬಿದ್ದ ಗೆಳೆಯರಿಂದ ವಿಶ್ವಾಸ ಘಾತಕತನವನ್ನು ಅನುಭವಿಸಿದ್ದರಿಂದದಿನದಲ್ಲಿ ನಡೆದ ಘಟನೆಗಳನ್ನು ನೆನೆಸಿಕೊಂಡಾಗಯಾರೋ ಗೆಳೆಯರೇ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿದ್ದಾರೆಂಬುದು ಸ್ಪಷ್ಟವಾಗತೊಡಗಿತು. ಯಾರೋ ಬಂದು ಮುಸುಕನ್ನು ತೆಗೆದರು. ಬಹಳಷ್ಟು ಹೊತ್ತು ಕಣ್ಣು ಬಿಗಿಯಾದ ಬಂಧನಕ್ಕೆ ಒಳಪಟ್ಟಿದ್ದರಿಂದ ದೃಷ್ಟಿ ಮಂಜು ಮಂಜಾಗಿತ್ತು. ಆದರೂ ಸುತ್ತಲೂ ನೋಡಿದಳು. ಒಂದು ದೀಪವೂ ಇಲ್ಲದೆ ಕಗ್ಗತ್ತಲು. "ಬಾಯಿಗ್ ಕಟ್ಟಿದ್ ಪಟ್ಟಿ ತೆಗಿಯೋ" ಎಂದಿತು ಗಡುಸಾದ ಧ್ವನಿಯೊಂದು. ಬೆವರು ಕಣ್ಣೀರುಗಳು ಸೋಕಿ ಪಟ್ಟಿ ಒದ್ದೆಯಾಗಿತ್ತು. ಅವರು ಪಟ್ಟಿ ತೆಗೆಯುತ್ತಿದ್ದಂತೆ ಜೋರಾಗಿ ಅವನನ್ನು ಕಡಿಯಬೇಕು ಇಲ್ಲವೇ ಗಟ್ಟಿಯಾಗಿ ಕಿರುಚಾಡಿ ರಂಪ ಮಾಡಬೇಕೆಂದು ಧೈರ್ಯ ತಂದುಕೊಂಡು ಅಣಿಯಾದಳು. ಗಂಟನ್ನು ಬಿಡಿಸಿ ಅವನು ಪಟ್ಟಿಯನ್ನು ಬಿಚ್ಚಿದ. ಇವಳು ಇನ್ನೇನು ಜೋರಾಗಿ ಕಿರುಚಬೇಕುಅಷ್ಟರಲ್ಲಿ ಸುತ್ತಲಿನಿಂದ ಕಿರುಚಾಟ ಕೇಳಿಸಿತು. "ಹ್ಯಾಪ್ಪಿ ಬರ್ತ್ ಡೇ ಪ್ರತಿಮಾ" ಎಂದು! ಅಲಂಕಾರದ ಬಣ್ಣ ಬಣ್ಣದ ದೀಪಗಳು ಹೊತ್ತಿಕೊಂಡವು. ಪ್ರತಿಮಾ ಕೋಪದ ಜ್ವಾಲಾಮುಖಿಯಲ್ಲಿ ಮಿಂದೆದ್ದವಳಂತೆ ಕಂಡರೆಕೇಕುಚಾಕುಟೊಪ್ಪಿಗಳನ್ನು ಹೊತ್ತ ಗೆಳೆಯ ಗೆಳತಿಯರ ಬಳಗ ತಮ್ಮ ಯೋಜನೆ ಚಾಚೂ ತಪ್ಪದೆ ಫಲಕಾರಿಯಾಗಿದ್ದಕ್ಕೆಅದರಲ್ಲೂ ಅವಳ ಮುಖದಲ್ಲಿದ್ದ ಭಾವಕ್ಕೆ ಗೊಳ್ಳನೆ ನಗತೊಡಗಿದರು. ಹುಟ್ಟು ಹಬ್ಬದ ದಿನ ಬರ್ತ್ ಡೇ ಬಾಯ್/ ಗರ್ಲ್ ಗೆ ಬರ್ತ್ ಡೇ ಬಮ್ಸ್ ಕೊಡುವುದು ವಾಡಿಕೆ. ಆದರೆ ಇವರು ಮಾಡಿದ ಕಿತಾಪತಿಗೆಒಬ್ಬೊಬ್ಬರನ್ನೂ ಅಟ್ಟಾಡಿಸಿಕೊಂಡು ಜಾಡಿಸಿ ಒದೆಯತೊಡಗಿದಳು ಪ್ರತಿಮಾ!

ಕಂಬನಿಯ ಕಣ್ಣ ಒರೆಸಿ
ಹರುಷದ ಕಾಡಿಗೆಯ ಹಚ್ಚಿ
ನಗೆಯ ಸ್ವಾತಿಮಳೆಯ ತರಿಸೋ
ಸಿರಿತನವೇ ಗೆಳೆತನ