Wednesday 11 January 2017

ಹಿಮಾಲಯ ಕೈ ಬೀಸಿ ಕರೆದಾಗ...

          ೨೦೧೨ರಲ್ಲಿ ಗೆಳೆಯ ನೇಪಾಳಕ್ಕೆ ಹೋಗುವಾಗ ಬಾನೋಡ (ವಿಮಾನ)ದಲ್ಲಿ ಕೂತು ಹಿಮಾಲಯದ ಚಿತ್ರ ತೆಗೆದಿದ್ದ. ಆ ಅಂದವನ್ನು ನೋಡಿ ನಿಬ್ಬೆರಗಾಗಿ, ಮುಂದೆ ಒಮ್ಮೆಯಾದರೂ ಹಿಮಾಲಯವನ್ನು ನೋಡಲೇಬೇಕೆಂಬ ಹೆಬ್ಬಯಕೆಯೊಂದನ್ನು ಮನದ ತಿಜೋರಿಯಲ್ಲಿ ಗುಪ್ತವಾಗಿ ಬಚ್ಚಿಟ್ಟಿದ್ದೆ.

          ೨೦೧೬ ಅಕ್ಟೋಬರ್ ವೇಳೆಯಲ್ಲಿ ಗೆಳೆಯರು, ಡಿಸೆಂಬರ್ ಕೊನೆಯಲ್ಲಿ ಹಿಮಾಲಯಕ್ಕೆ ಚಾರಣಕ್ಕೆ ಹೋಗೋಣ ಎಂದಾಗ ಮರುಯೋಚನೆ ಮಾಡದೆ ಖಡಾಖಂಡಿತವಾಗಿ ಇಲ್ಲವೆಂದಿದ್ದೆ. ರಜೆ ಕೇಳಿದರೆ ಕಿಡ್ನಿ ಕೇಳಿದ ಹಾಗೆ ಮುಖ ಮಾಡುವ ಮ್ಯಾನೇಜರ್; ಬ್ಯಾಂಕ್ ಖಾತೆಯಲ್ಲಿದ್ದ ಅತ್ಯಲ್ಪ ಮೊತ್ತ, ಇವುಗಳು ನೆನಪಿಗೆ ಬಂದದ್ದೇ ಆ ನಿರಾಕರಣೆಗೆ ಮುಖ್ಯ ಕಾರಣವಾಗಿತ್ತು!

          ನನ್ನ ಮಾತಿಗೆ ತಲೆಕೆಡಿಸಿಕೊಳ್ಳದೆ, ನನ್ನನ್ನೂ ಲೆಕ್ಕಕ್ಕೆ ಹಿಡಿದು; ಗೆಳೆಯರು ಅವರ ಪಾಡಿಗೆ ಯೋಜನೆ ಮಾಡಲು ಶುರು ಮಾಡಿದರು. ಟ್ರೆಕ್ ದ ಹಿಮಾಲಯಾಸ್ (ಟಿ.ಟಿ.ಎಚ್) ಸಂಸ್ಥೆಯ ಜೊತೆ "ಚೋಪ್ತಾ-ಚಂದ್ರಶಿಲಾ" ಬೆಟ್ಟ (೧೩,೧೦೦ ಅಡಿ ಎತ್ತರ)ವ ಚಾರಣ ಮಾಡೋಣ ಎಂದರು. ಹೇಗೂ ಹೋಗುವುದಿಲ್ಲ ಎಂದು ನಿರ್ಧರಿಸಿದ್ದರಿಂದ ನಾನೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಮ್ಯಾಂಡೇಟರಿ ಅನ್ನೋ ಹಾಗೆ ವಾಟ್ಸಾಪ್ನಲ್ಲಿ  ಗುಂಪು ಕೂಡಾ ರಚನೆ ಆಯ್ತು! ಅಲ್ಲಿ ಯಾವ ದಿನ ಹೋಗುವುದು, ಯಾವ ಬ್ಯಾಚಲ್ಲಿ ಜಾಗವಿದೆ, ಯಾವಾಗ ಹೋದರೆ ಬಾನೋಡದಲ್ಲಿ ಕಡಿಮೆ ವೆಚ್ಚದಲ್ಲಿ ಹೋಗಬಹುದು ಇತ್ಯಾದಿ ವಿವರಗಳನ್ನು ಚರ್ಚಿಸಿ, ಬುಕ್ ಮಾಡಿಯೇ ಬಿಟ್ಟರು! ದಿನಾಂಕ ತಿಳಿಸಿ ನನಗೆ ರಜೆ ಹಾಕಲು ಸೂಚಿಸಿದರು. ನಾನು ರಜೆ ಕೇಳಲೇ ಬೇಕಾಯ್ತು! ಲಂಡನಲ್ಲಿದ್ದ ಮ್ಯಾನೇಜರ್ಗೆ ಮಿಂಚೆಯಲ್ಲಿ ರಜೆಗಾಗಿ ಕೋರಿದೆ, ೪ನೇ ಈಯತ್ತಿನಲ್ಲಿದ್ದಾಗ ಕ್ಲಾಸ್ ಟೀಚರ್ಗೆ ರಜೆ ಅರ್ಜಿ ಕೊಡುತ್ತಿದ್ದ ಹಾಗೆ! ಗೆಳೆಯರು ಚಂದ್ರಶಿಲಾ ಶಿಖರದ ಚಿತ್ರಗಳನ್ನು ಕಳುಹಿಸ್ತಾ ಇದ್ದರು. ಚಿತ್ರಗಳನ್ನು ನೋಡಿದರೆ ಅಲ್ಲಿ ಹೋದ ಮೇಲೆ ಸರ್ಪ್ರೈಸ್ ಇರುವುದಿಲ್ಲ ಎಂದು ನೋಡುವುದರಿಂದ ಹಿಂದೆ ಸರಿದಿದ್ದೆ. ಅತ್ತ ಟಿ.ಟಿ.ಎಚ್ ಅವರು ಚಾರಣಕ್ಕೆ ಯಾವ ರೀತಿ ಸಿದ್ಧತೆ ನಡೆಸಬೇಕು, ಏನೇನನ್ನು ತರಬೇಕು ಎಂಬಿತ್ಯಾದಿ ಮಾಹಿತಿ ಇರುವ ಮಿಂಚೆಯನ್ನು  ಒಂದರ ಹಿಂದೆ ಒಂದನ್ನು ಕಳುಹಿಸುತ್ತಿದ್ದರು. ಇತ್ತ ಪುಣ್ಯಾತ್ಮ ನಮ್ಮ ಮ್ಯಾನೇಜರ್ ರಜೆಗೆ ಒಪ್ಪಿಗೆ ಸೂಚಿಸಿದ . ಅಲ್ಲಿಗೆ ನಾನು ಚಾರಣಕ್ಕೆ  ಹೋಗುವುದು ಖಾತ್ರಿಯಾಗಿತ್ತು. ಹಣದ ಸಮಸ್ಯೆಗೆ ಗೆಳೆಯರು ಅಭಯಹಸ್ತ ಸೂಚಿಸಿದ್ದರು!

          ಚಾರಣಕ್ಕೆ ಬೇಕಾಗುವ ಸಾಮಗ್ರಿಗಳನ್ನ ಹಿಂದಿನ ಬಾರಿ ಚಾರಣಕ್ಕೆ ಹೋದ ಗೆಳೆಯರಿಂದ, ಡೆಕತ್ಲಾನಿಂದ ತಂದು, ಹೇಗೆ ಪ್ಯಾಕ್ ಮಾಡಬೇಕು ಎಂಬ ವೀಡಿಯೋ ನೋಡಿ, ಎಲ್ಲಾ ಸಾಮಗ್ರಿ, ಬಟ್ಟೆ ಬರೆಗಳನ್ನ ಚೀಲಕ್ಕೆ ತುರುಕಿಸಿದ್ದು ಆಯ್ತು. ೨೨ನೇ ತಾರೀಕು ಬಾನೋಡದಲ್ಲಿ ಹೊರಡುವವರಿದ್ದೆವು. 


ನಾನು, ಸಂಕೇತ್, ಪರೀಕ್ಷಿತ್ ಮತ್ತು ಸುಖೇಶ್ 

          ನಾನು, ಗೆಳೆಯರಾದ ಸುಖೇಶ್, ಸಂಕೇತ್ ಮತ್ತು ಪರೀಕ್ಷಿತ್ ಬಾನೋಡದಲ್ಲಿ ಕೂತು ದೆಹಲಿ ತಲುಪಿ, ಮರುದಿನ  ಹೃಶಿಕೇಷಕ್ಕೆ ತಲುಪಿದೆವು. ಅಲ್ಲಿ ಒಂದು ದಿನ ಯೂತ್ ಹಾಸ್ಟೇಲ್ನಲ್ಲಿ ತಂಗಿ, ಹೃಶಿಕೇಷ ಸುತ್ತಿ, ೨೫ನೇ ತಾರೀಕು ಬೆಳಿಗ್ಗೆ ಟಿ.ಟಿ.ಎಚ್ ಅವರ ಗಾಡಿಯಲ್ಲಿ ಉಳಿದ ೧೪ ಚಾರಣಿಗರ ಪರಿಚಯ ಮಾಡಿಕೊಂಡು ಸಂಜೆ ೭ರ ಸುಮಾರಿಗೆ ಚಾರಣದ ಬೇಸ್ ಕ್ಯಾಂಪ್ 'ಸಾರಿ' ಯನ್ನು ತಲುಪಿದೆವು. ಮಧ್ಯಾಹ್ನ ಊಟಕ್ಕೆ ನಿಲ್ಲಿಸಿದಾಗ ಮಳೆರಾಯ ಸಿಕ್ಕಿದ್ದರಿಂದ, ಚಂದ್ರಶಿಲಾದಲ್ಲಿ ಹಿಮ ಬಿದ್ದರಬಹುದೆಂದು ಊಹಿಸಿದರು. ಗೂಗಲ್ನಲ್ಲಿ ಇನ್ನು ಒಂದು ವಾರ ಹಿಮ ಬೀಳದು ಎಂದು ಓದಿದ ನಾವು ಎಲ್ಲಿಲ್ಲದ ಖುಷಿಯಲ್ಲಿ ಕುಣಿದಾಡುತ್ತಿದ್ದಾಗ ನೆನಪಾದದ್ದು ಗಾಡಿ ಮೇಲಿದ್ದ ಮಳೆಯಲ್ಲಿ ನೆನೆಯುತ್ತಿದ್ದ ನಮ್ಮ ಬ್ಯಾಗುಗಳು! ಓಡಿ ಹೋಗಿ ಬ್ಯಾಗುಗಳನ್ನು ಗಾಡಿ ಒಳಗೆ ಇಟ್ಟೆವು. ದಾರಿಯಲ್ಲಿ ಸಿಕ್ಕ ಒಂದೆರಡು ಸುಂದರ ತಾಣಗಳಲ್ಲಿ ನಿಲ್ಲಿಸಿ ತನ್ನಿ (ಸೆಲ್ಫಿ) ತೆಗೆದುಕೊಂಡೆವು. 


ರುದ್ರಪ್ರಯಾಗ

         ಸಾರಿ ಗೆ ತಲುಪಿದಾಗ ಚಳಿ ವಿಪರೀತವಾಗಿತ್ತು. ಊಟ ಮಾಡುವಾಗ ಚಳಿಗೆ ಚಪಾತಿ ಕತ್ತರಿಸಲಾಗದಷ್ಟು ಕೈ ಮಂಜುಗಟ್ಟಿತ್ತು! ಬೇಸ್ ಕ್ಯಾಂಪ್ ಅಲ್ಲೇ ಹೀಗಿದ್ದರೆ ಬೆಟ್ಟದ ತುದಿಯಲ್ಲಿ ಚಳಿ ಹೇಗಿರಬಹುದು ಎಂಬ ಯೋಚನೆಯೇ ಚಳಿಯನ್ನು ಇಮ್ಮಡಿಗೊಳಿಸಿತು. ಊಟ ರುಚಿ ರುಚಿಯಾಗಿದ್ದರಿಂದ ಬ್ಯಾಟಿಂಗ್ ಭರ್ಜರಿಯಾಗೇ ನಡೆಯಿತು. ಊಟ ಮುಗಿಯುತ್ತಿದ್ದ ಹಾಗೆಯೆ ಚಾರಣದ ಲೀಡ್ ರವಿ ಮತ್ತು ಆಪರೇಶನಲ್ ಹೆಡ್ ಗೋಪಾಲ್ ಒಟ್ಟು ಚಾರಣದ ಬಗ್ಗೆ, ಮರುದಿನ ನಾವು ಎಷ್ಟು ಕಿ.ಮೀ ನಡೆಯಬೇಕೆಂಬ ವಿವರಗಳನ್ನ ನೀಡಲಾರಂಭಿಸಿದರು. ಆ ವಾತಾವರಣಕ್ಕೆ ಮೈ ಹೊಂದಿಕೊಳ್ಳಲಿ ಎಂದು ನಾನು ಜಾಕೇಟ್ ಹಾಕಿಕೊಳ್ಳದೆ ಬರೀ ಒಂದು ಸ್ವೆಟರ್ ಧರಿಸಿದ್ದೆ. ಅದನ್ನು ನೋಡಿ ಗೋಪಾಲ್, "ಜಾಕೇಟ್ ಎಲ್ಲಿ?" ಎಂದು ಕೇಳಿದ. "ಜಾಕೇಟ್ ರೂಮಲ್ಲಿದೆ.. ಹೀಗೆ ಆರಾಮಾಗಿದೆ!" ಎಂದೆ. ಈ ಸನ್ನಿವೇಶ ನನಗೆ 'ಜಾಕೇಟ್ ಮ್ಯಾನ್' ಎಂಬ ಹೊಸ ಬಿರುದು ತಂದು ಕೊಟ್ಟಿತು! ಬೆಳಿಗ್ಗೆ ೭ಕ್ಕೆ ಚಹಾ, ೮ಕ್ಕೆ ತಿಂಡಿ ಹಾಗೂ ೯ಕ್ಕೆ ಹೊರಡುವುದು ಎಂದು ಹೇಳಿದರು. ಚಳಿಯ ನಡುಕದಿಂದ ಹೊರಬರಲು ಕ್ಯಾಂಪ್ ಫೈರ್ ಮುಂದೆ ಕೂತು ಚಳಿ ಕಾಯಿಸಿ, ಚಹಾ ಹೀರಿ ಕೋಣೆಗೆ ಹೋಗಿ ದಪ್ಪನೆಯ ರಗ್ಗಿನ ಕೆಳಗೆ ಬೆಚ್ಚನೆ ಮಲಗಿದೆವು. ಮುಂದಿನ ೩-೪ ದಿನ ಟೆಂಟಲ್ಲಿ ಮಲಗಬೇಕೆಂಬ ಯೋಚನೆಯೇ ಹಾಸಿಗೆಯನ್ನು ಇನ್ನೂ ಮೆತ್ತಗೆ ಮಾಡಿದವು. 


ಸಾರಿ 

          ಮೊದಲನೇ ದಿನ ನಾವು ಬೇಸ್ ಕ್ಯಾಂಪ್ನಿಂದ ೩ ಕಿ.ಮೀ ಚಾರಣ ಮಾಡಿ ದೇವರಿಯಾತಾಲ್ ಕ್ಯಾಂಪನ್ನು ತಲುಪಬೇಕಿತ್ತು. ಬೆಳಿಗ್ಗೆ ಗೆಳೆಯ ಪರೀಕ್ಷಿತ್ ನಮ್ಮನ್ನು ಎಬ್ಬಿಸಿದ. ಮುಖ ತೊಳೆಯಲು ನೀರಿಗೆ ಕೈ ಇಟ್ಟರೆ ತಂಪೆಟ್ಟಿಗೆಯಿಂದ ಹೊರ ತೆಗೆದ ನೀರನ್ನು ಮುಟ್ಟಿದಂತಾದಾಗ "ಮುಂದಿನ ನಾಲ್ಕು ದಿನ ಕಷ್ಟ ಇದೆ ಗುರು" ಎಂದು ಮನಸ್ಸು ಪಿಸುಗುಟ್ಟಿತು. ತಿಂಡಿ ತಿನ್ನಲು ಹೋದರೆ ಅಲ್ಲಿ ಬ್ರೆಡ್ ಜಾಮ್ ಮತ್ತು ಬ್ರೆಡ್ ಆಮ್ಲೇಟ್ ಇಟ್ಟಿದ್ರು. ದೋಸೆ, ಇಡ್ಲಿ, ಬೇಳೆ ಬಾತ್ ತಿಂದು ಬೆಳೆದ ಜೀವ "ಅಯ್ಯೋ ಶಿವನೆ! ಈ ಒಣಕಲು ಬ್ರೆಡ್ಡಿಗೆ ಜಾಮ್ ಸವರಿ ತಿಂದು ನಾನು ಬೆಟ್ಟ ಹತ್ತೋದ್ ಹೌದಾ?" ಎಂದು ಪ್ರಶ್ನಿಸಿತು. ಬೇರೆ ಆಯ್ಕೆ ಇರಲಿಲ್ಲ. ದೋಸೆ ಜೊತೆ ಚಟ್ನಿ ತಿಂದ ಹಾಗೆ ಬ್ರೆಡ್ ಜೊತೆ ಜಾಮ್ ಹಾಕಿಕೊಂಡು ತಿಂದು ದಾರಿಯಲ್ಲಿ ಹಸಿವಾದರೆ ಎಂದು ಟಿ.ಟಿ.ಎಚ್ ಅವರು ಕೊಟ್ಟ ಬಿಸ್ಕತ್ತು, ಚಾಕಲೇಟುಗಳನ್ನು ಚೀಲದಲ್ಲಿ ತುಂಬಿ ಚಾರಣ ಶುರು ಮಾಡುವ ಜಾಗಕ್ಕೆ ಬಂದೆವು. "ಹೊರಡುವ ಮೊದಲು ಒಂದು ಚಿತ್ರ ಬೇಕಲ್ವ" ಎಂದು ಯಾರೋ ಹೇಳಿದ್ದರಿಂದ ಅಲ್ಲಿ ನಿಂತು ಸಶಸ್ತ್ರ ಸಮೇತರಾಗಿದ್ದ ಇಡೀ ಗುಂಪಿನ ಚಿತ್ರ ತೆಗೆದೆವು.

          ಆಶ್ಚರ್ಯಕರ ಸಂಗತಿಯೆಂದರೆ ಚಾರಣದ ಗುಂಪಿನ ೧೮ ಜನರಲ್ಲಿ ೧೦ ಜನ ಬೆಂಗಳೂರಿನವರೇ! ಉಳಿದ ೮ ಜನರಲ್ಲಿ ೪ ಜನ ಮುಂಬಯಿ ಹಾಗೂ ಇನ್ನು ೪ ಜನ ದೆಹಲಿಯವರು. ನಮ್ಮ ನಾಲ್ವರ ಗುಂಪಿಗೆ 'ಬೆಂಗಳೂರು ಬಾಯ್ಸ್' ಎಂಬ ನಾಮಕರಣವಾಯಿತು!

          ಚಳಿ ಇರುತ್ತೆ ಅಂತ ಸ್ವೆಟರು, ಜಾಕೆಟು ಹಾಕ್ಕೊಂಡಿದ್ವಿ, ಆದ್ರೆ, ಸಿಕ್ಕಾಪಟ್ಟೆ ಬಿಸಿಲು ಬಂದು ಬೆವ್ರು ಜಲಪಾತದ ತರಹ ಇಳಿಯೋಕೆ ಶುರು ಆಯ್ತು. ಹೋಗೋ ದಾರಿ ಬೇರೆ ಸಿಕ್ಕಾಪಟ್ಟೆ ಏರುಮಟ್ಟದಲ್ಲಿತ್ತು. ಇನ್ನು ಈ ಜಾಕೇಟ್, ಥರ್ಮಲ್ಸ್ ಹಾಕಿಕೊಂಡರೆ ಬೆವರಲ್ಲಿ ತೋಯ್ದು ಹೋಗುವುದು ನಿಶ್ಚಿತ ಎಂದು ಅವುಗಳನ್ನು ತೆಗೆದು ಚೀಲದಲ್ಲಿ ತುರುಕಿ ನಡಿಯೋಕೆ ಶುರು ಮಾಡಿದ್ವಿ. ಚೀಲದಲ್ಲಿ ಕಿವಿಯುಲಿ ಇದ್ದಿದ್ದು ನೆನಪಾಗಿ ಕಿರಿಕ್ ಪಾರ್ಟಿದು, ಎಸ್.ಪಿ.ಬಿ ಸರ್ ದು ಹಾಡುಗಳನ್ನು ಕೇಳ್ತಾ ಬೆಟ್ಟ ಹತ್ತತಾ ಇದ್ವಿ. ಚಾರಣದ ಗೈಡ್ ಯುಗಲ್ ನಮ್ಮೊಡನೆ ಬರುತ್ತಿದ್ದ. ದಾರೀಲಿ ಒಂದೆರ್ಡು ಒಳ್ಳೆಯ ವ್ಯೂ ಪಾಯಿಂಟ್ಗಳು ಇದ್ವು. ಬರೀ ೩ ಕಿ.ಮೀ ಚಾರಣ ಇದ್ದಿದ್ದರಿಂದ  ಊಟದ ಸಮಯಕ್ಕೆ ನಾವು ದೇವರಿಯಾತಲ್ ಕ್ಯಾಂಪನ್ನು ತಲುಪಿದೆವು. ಮಹಾಭಾರತದ 'ಯಕ್ಷ ಪ್ರಶ್ನೆ' ನಡೆದದ್ದು ಇದೇ ದೇವರಿಯಾತಾಲ್ ಕೆರೆಯ ಬಳಿ ಅಂತೆ! ಕೇಳಿ ಬೆರಗುಗೊಂಡೆವು. ಟೆಂಟ್ಗಳನ್ನ ಇನ್ನೂ ಹಾಕಿರದಿದ್ದರಿಂದ ಚೀಲಗಳನ್ನು ಪಕ್ಕದಲ್ಲಿಟ್ಟು ವಾಚ್ ಟವರ್, ಕೆರೆಯಲ್ಲಿ ಕಾಣುತ್ತಿದ್ದ ದೈತ್ಯ 'ಚೌಕಂಬ' ಪರ್ವತದ ಬಿಂಬ, ಎಲ್ಲಿಡೆ ಹರಡಿದ ಹಿಮವನ್ನು ನೋಡುತ್ತ ಕೂತು ಬಿಟ್ಟೆವು.


ದೈತ್ಯ ಚೌಕಂಬ

ದೈತ್ಯ ಚೌಕಂಬದ ಬಿಂಬ

          ಬಿಸಿ ಬಿಸಿ ಅನ್ನ, ಬೇಳೆ ಸಾರು, ನೆಂಚಿಕೊಳ್ಳಲು ಉಪ್ಪಿನಕಾಯಿ ಕಣ್ಣ ಮುಂದೆ ಬೃಹತ್ ಬೆಟ್ಟಗಳ ಸಾಲು! ಆಹಾ! ಎಂತಹ ರಮಣೀಯ ನೋಟ! ಆ ಅಂದ ಊಟದ ರುಚಿಯನ್ನು ಹೆಚ್ಚಿಸಿತ್ತು. ಊಟ ಮುಗಿಯುತ್ತಿದ್ದಂತೆ ಟಿ.ಟಿ.ಎಚ್ ಅವರು  ಟೆಂಟ್ ಹಾಕಲು ಶುರು ಮಾಡಿದರು. ಟೆಂಟ್ ಹಾಕಲು ಕಲಿತಂತಾಗುತ್ತದೆ ಎಂದು ನಾವೂ ಕೈ ಜೋಡಿಸಿ ಒಂದಿಷ್ಟು ಟೆಂಟ್ ಹಾಕಿದೆವು. ಸಂಜೆ ಅತ್ತಿತ್ತ ಅಲೆಯುತ್ತಿದ್ದಾಗ ಆಪರೇಶನಲ್ ಹೆಡ್ ಗೋಪಾಲ್ ಸಿಕ್ಕ. ಹಾಗೇ ಮಾತಾಡುತ್ತ ಪ್ರಪಂಚ ಎಷ್ಟು ಚಿಕ್ಕದು ಎಂಬುದು ಮತ್ತೊಮ್ಮೆ ಅರಿವಾಯಿತು! ಅವನಿಗೂ ನನಗೂ ಹಲವಾರು ಪರಸ್ಪರ ಗೆಳೆಯರಿದ್ದರು. ಅವನು ಮತ್ತು ನನ್ನ ಹಲವಾರು ಗೆಳೆಯರು ಮನಾಲಿಯಲ್ಲಿ 'ಬೇಸಿಕ್ ಮೌಂಟೇನಿರಿಂಗ್ ಕೋರ್ಸ್' ಅನ್ನು ಜೊತೆಗೆ ಮುಗಿಸಿದ್ದರು. ಅಷ್ಟು ತಿಳಿಯುತ್ತಿದ್ದಂತೆ ನನ್ನನ್ನು 'ಮಚ್ಚಾ' ಎಂದು ಕರೆಯಲಾರಂಭಿಸಿದ! ಸಂಜೆ ಬಿಸಿ ಬಿಸಿ ಸೂಪ್ ಕುಡಿದು, ರಾತಿ ಊಟ ಮಾಡಿ ಡಿನ್ನರ್ ಟೆಂಟ್ ಇಂದ ಹೊರಬಂದು ಆಗಸ ನೋಡಿ ದಂಗಾದೆ! ಬೆಂಗಳೂರಿನಲ್ಲಿ ಕಣ್ಮರೆಯಾಗಿದ್ದ ಎಲ್ಲಾ ಚುಕ್ಕಿ ತಾರೆಗಳು ಅಲ್ಲಿ ಪ್ರತ್ಯಕ್ಷವಾಗಿದ್ದವು. ನಾವು ಆಡುತ್ತಿದ್ದ ಮಾತುಗಳನ್ನು ಆ ತಾರೆಗಳು ಪಿಳಿ ಪಿಳಿ ನೋಡುತ್ತ ಕೇಳಿಸಿಕೊಳ್ಳುತ್ತಿವೆ ಎಂಬಂತೆ ಭಾಸವಾಯಿತು. ಆ ತಾರೆ ತುಂಬಿದ ಆಗಸದ ಕೆಳಗೆ ಮಾತು ಮುಗಿಸಿ ಮಲಗಲು ಹೋದೆವು. ಮಲಗಲು ಸ್ಲೀಪಿಂಗ್ ಬ್ಯಾಗ್ ಕೊಟ್ಟಿದ್ದರು. ಅದನ್ನು ನೋಡಿದ್ದೇ ಮೊದಲ ಬಾರಿ! ಅದನ್ನು ಬಳಸುವುದು ಹೇಗೆ ಅಂತೆಲ್ಲ ಅರಿತು ಅದನ್ನು ಕೆಳಗೆ ಹಾಕಿಕೊಂಡು ಮಲಗಿದ್ದಾಯ್ತು. ಚಳಿಗೆ ಅದೆಷ್ಟು ಬಾರಿ ಎಚ್ಚರವಾಯಿತೋ! ಅದೆಷ್ಟು ಬಾರಿ ತಾರೆಗಳೊಡನೆ ಮಾತಾಡುತ್ತ ನಿಂತೆನೋ! ಆ ದೇವರೆ ಬಲ್ಲ.




ದೇವರಿಯಾತಾಲ್ ಕ್ಯಾಂಪ್

          ಅಲ್ಲಿ ಶೌಚಾಲಯವೋ, ಗುಂಡಿ ತೋಡಿ ಟೆಂಟ್ ಹಾಕಿದಂತಹ ಶೌಚಾಲಯ! ಅದನ್ನು ಬಳಸುವುದು ಹೇಗೆಂದು ಕೇಳಿಕೊಂಡು ಜೀವನದಲ್ಲಿ ಮೊದಲ್ನೇ ಬಾರಿ ಟಿಶ್ಯು ಪೇಪರ್ ಬಳಸಿ ಕೆಲಸ ಮುಗಿಸಿ ಬಂದದ್ದಾಯ್ತು! ಫ್ರೆಶ್ ಆಗಿ ಮತ್ತೆ ಒಣಕಲು ಬ್ರೆಡ್ ತಿನ್ನಬೇಕಲ್ಲ ಎಂಬ ಬೇಜಾರಿನಲ್ಲಿ ಡಿನರ್ ಟೆಂಟ್ಗೆ ಹೋದರೆ ಬಿಸಿ ಬಿಸಿ ಮ್ಯಾಗಿ ಮತ್ತು ಪಾಸ್ತಾ ಇತ್ತು. ತಿಂದು ತಯಾರಾಗಿ ಹೊರಟೆವು. ಟಿ.ಟಿ.ಎಚ್ ಅವರು ನಮಗೆ ಎರಡು ಆಯ್ಕೆ ಕೊಟ್ಟಿದ್ದರು. ಎರಡನೇ ದಿನ ಒಂದೇ ಸಾರಿ ಬೇಸ್ ಕ್ಯಾಂಪ್ ತನಕ ಮರಳಿ ಹೋಗಿ ಅಲ್ಲಿಂದ ಗಾಡಿಯಲ್ಲಿ 'ಚೋಪ್ತಾ' ಕ್ಯಾಂಪ್ ತನಕ ತಲುಪುವುದು. ಇಲ್ಲವೇ ದೇವರಿಯಾತಾಲ್ ಇಂದ ಚೋಪ್ತಾ ವರೆಗೆ ೧೬ ಕಿ.ಮೀ ಚಾರಣ ಮಾಡುವುದು. ಚಾರಣಕ್ಕಾಗಿ ಬಂದಿದ್ದೇವೆ ಆದ್ದರಿಂದ ಚಾರಣವೇ ಮಾಡೋಣ ಎಂದು ನಿರ್ಧರಿಸಿ ಅದೇ ಯಾದಿಯಾಗಿ ಹೊರಟಿದ್ದೆವು. ಅದೆಷ್ಟು ಲೀಟರ್ ನೀರು, ಅದೆಷ್ಟು ಗ್ಲೂಕೋಸ್ ಹೋಗಿದೆಯೋ ಲೆಕ್ಕ ಇಟ್ಟವರಿಲ್ಲ! 'ರೋಹಿಣಿ ಭುಗಿಯಾಲ್' ಎಂಬ ಸುಂದರ ಜಾಗದಲ್ಲಿ ಊಟಕ್ಕೆ ನಿಲ್ಲುವ ನಿರ್ಧಾರವಾಗಿತ್ತು. ಹೆಣ ಭಾರದ ಚೀಲವನ್ನು ಹೊತ್ತು ಅಲ್ಲಿ ತನಕ ತಲುಪುವುದರೊಳಗೆ ಅರೆಜೀವವಾಗಿದ್ದೆವು. ಊಟ ಮಾಡಿ ಸ್ವಲ್ಪ ಹೊತ್ತು ಒರಗಿ ಮತ್ತೆ ಆ ಭಾರದ ಚೀಲವನ್ನು ಹೆಗಲಿಗೇರಿಸಿ ಹೊರಟೆವು. 


ಟ್ರೆಕ್ ಲೀಡ್ ರವಿಯ ಜೊತೆ ಬೆಂಗಳೂರು ಬಾಯ್ಸ್

ದಾರಿಯಲ್ಲಿ ಹಿಮ ಬಿದ್ದ ಕಾರಣಕ್ಕೆ ಸುತ್ತಮುತ್ತಲಿನ ಜಾಗಗಳು ಸೊಗಸಾಗಿ ಕಾಣಿಸುತ್ತಿದ್ದವು. ನಡೆದು ನಡೆದು, ಇನ್ನು ಒಂದೇ ಒಂದು ಹೆಜ್ಜೆ ಇಡಲಾಗುವುದಿಲ್ಲ ಎಂಬ ಸ್ಥಿತಿ ತಲುಪಿ ಕೂತು ಬಿಟ್ಟೆ. ಚೋಪ್ತಾ ತಲುಪಲು ಮತ್ತೂ ೩ ಕಿ.ಮೀ ನಡೆಯಬೇಕಿತ್ತು. ಕತ್ತಲಾದರೆ ಪರದಾಡಬೇಕು ಎಂದು ಇದ್ದ ಬದ್ದ ಶಕ್ತಿಯೆಲ್ಲ ಹಾಕಿ ನಡೆಯ ಹತ್ತಿದೆ. ವಿರಾಮ ತೆಗೆದುಕೊಳ್ಳುತ್ತ, ಸುಧಾರಿಸಿಕೊಳ್ಳುತ್ತ ಸೂರ್ಯ ಮುಳುಗುವಷ್ಟರಲ್ಲಿ ಚೋಪ್ತಾ ಕ್ಯಾಂಪ್ ತಲುಪಿದೆವು. ಟೆಂಟ್ ಒಳಗೆ ಚೀಲ ಎಸೆದು ಊಟ ಮಾಡಿ ಮಲಗಿದವರಿಗೆ ನಿದ್ದೆ ಹತ್ತಿದ್ದು, ಬೆಳಗಾದದ್ದು ಗೊತ್ತೇ ಆಗಲಿಲ್ಲ! ನಿದ್ದೆ ದಣಿವನ್ನು ತಕ್ಕ ಮಟ್ಟಿಗೆ ಆರಿಸಿತ್ತು.


ಚೋಪ್ತಾದ ತಾರೆಭರಿತ ಆಗಸವನ್ನು ಸೆರೆ ಹಿಡಿದ ಗೆಳೆಯ ಸುಧೀರ್  

          ಯಥಾಪ್ರಕಾರ ಇಲ್ಲೂ ಪರೀಕ್ಷಿತ್ ನಮ್ಮನ್ನು ಎಬ್ಬಿಸಿದ. ತಯಾರಾಗಿ ತಿಂಡಿ ಅಂತ ಕೊಟ್ಟ ಅವಲಕ್ಕಿ ಒಗ್ಗರಣೆ ಮತ್ತು ಓಟ್ಸನ್ನು ತಿಂದು ಕೊನೆಯ ದಿನದ ಚಾರಣಕ್ಕೆ ಅಣಿಯಾದೆವು. ಚಾರಣದ ಕೊನೆ, ಚಂದ್ರಶಿಲಾ ಬೆಟ್ಟದ ತುದೆಯೆಡೆಗೆ ಹೆಜ್ಜೆ ಇಡಲಾರಂಭಿಸಿದೆವು. ಚೋಪ್ತಾ ಕ್ಯಾಂಪಿನಲ್ಲೇ ಕೊನೆಯ ದಿನವೂ ತಂಗಬೇಕಾಗಿದ್ದರಿಂದ ಚೀಲವನ್ನು ಹೊತ್ತೊಯ್ಯುವ ಬಾಧೆಯಿರಲಿಲ್ಲ. ಅದೇ ನಮಗೆ ದೊಡ್ಡ ಸಮಾಧಾನದ ವಿಷಯವಾಗಿತ್ತು. ಚಂದ್ರಶಿಲಾಕ್ಕೂ ಮೊದಲು ತೃತೀಯ ಕೇದಾರ ಎಂಬ ಖ್ಯಾತಿಯ 'ತುಂಗನಾಥ' ದೇವಸ್ಥಾನ ಸಿಗುವುದೆಂದು ಹೇಳಿದರು. ತುಂಗನಾಥ ದೇವಸ್ಥಾನದವರೆಗೆ ಬರೀ ಮೆಟ್ಟಿಲುಗಳಿದ್ದ ಹಾದಿ.





 ನಾನು ಪರೀಕ್ಷಿತ್ ಕಷ್ಟಪಟ್ಟು ಸುಧಾರಿಸಿಕೊಳ್ಳುತ್ತ ಮೆಟ್ಟಿಲೇರುತ್ತಿದ್ದರೆ ಗೆಳೆಯ ಸುಖೇಶ್ ಮನೆಯಲ್ಲಿ ನಡೆದಾಡುವ ಹಾಗೆ ಆರಾಮವಾಗಿ ಹೋಗುತ್ತಿದ್ದ. ಸಂಕೇತ್ ಕೂಡ ಕೊಂಚ ಸಲೀಸಾಗೇ ಬೆಟ್ಟವೇರತೊಡಗಿದ. ತುಂಗನಾಥ ದೇವಸ್ಥಾನ ತಲುಪಿ ಕೈ ಮುಗಿದು, ದಣಿವಾರಿಸಿಕೊಂಡು ಮುಂದೆ ಹೊರಟೆವು.


ತುಂಗನಾಥ ದೇವಸ್ಥಾನ 
ಅಲ್ಲಿಂದ ಚಂದ್ರಶಿಲಾ ತುದಿ ಕಾಣಿಸುತ್ತಿತ್ತು. ಆ ಎತ್ತರ ಒಮ್ಮೆ ದಂಗುಬಡಿಸಿತು. ಮುಂದೆ ನಡೆಯುವ ಹಾದಿ ದುರ್ಗಮವಾಗಿಯೂ, ಕಷ್ಟಕರವಾಗಿಯೂ, ಬಲ ಭಾಗದಲ್ಲಿದ್ದ ಭಾರೀ ಪ್ರಪಾತಗಳು ಭಯ ಹುಟ್ಟಿಸುವಂತೆಯೂ ಇತ್ತು. ಪುರಂದರದಾಸರ ಗೀತೆಯಲ್ಲಿ ಬರುವ ಸಾಲು "ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಕ್ಕುತ" ಎಂಬಂತೆ ಬಸವನಹುಳುವಿನ ಹಾಗೆ ಹೆಜ್ಜೆ ಹಾಕುತ್ತಿದ್ದೆವು. ತುದಿಯನ್ನು ನೋಡಿದರೆ ಸುಖೇಶ್ ಮತ್ತು ಸಂಕೇತ್ ಮೊದಲಿಗರಾಗಿ ತಲುಪಿ, ಬೇಗ ಬನ್ನಿ ಎಂದು ನಮ್ಮೆಡೆಗೆ ಕೈ ಬೀಸುತ್ತಿದ್ದರು. ಉಳಿದವರಿಗೂ ಪ್ರೇರೇಪಿಸುತ್ತಾ, ನಾವೂ ಅವರಿಂದ ಶಕ್ತಿ ತುಂಬಿಸಿಕೊಳ್ಳುತ್ತಾ, ಏದುಸಿರು ಬಿಡುತ್ತಾ ತುದಿಯನ್ನು ತಲುಪಿಯೇ ಬಿಟ್ಟೆವು!




          ಏನೋ ಸಂತಸ! ಒಲಂಪಿಕ್ಸ್ನಲ್ಲಿ ಪದಕ ಗೆದ್ದೆವೆಂಬಂತ ಉಲ್ಲಾಸ! ಸ್ವಲ್ಪ ಸುಧಾರಿಸಿಕೊಂಡು ಸುತ್ತಲೂ ಕಣ್ಣಾಡಿಸಿದೆ. ಎಂತಹ ನೋಟ! ದೇವರು ಸ್ವಲ್ಪ ಜಾಸ್ತಿ ಸಮಯ ಇಟ್ಟುಕೊಂಡು ಸೃಷ್ಟಿಸಿದ ಸುಂದರ ಚಿತ್ರದಂತಿತ್ತು! ಬರೀ ಚಿತ್ರಗಳಲ್ಲಿ ನೋಡಿ ಆನಂದಿಸಿದ ಹಿಮಾಲಯದ ಅಂದ ಕಣ್ಣ ಮುಂದಿತ್ತು. ನಂಬಲಾಗಲಿಲ್ಲ. ಅತ್ತ ಇತ್ತ ಎತ್ತ ನೋಡಿದರೂ ಭವ್ಯ ಬೆಟ್ಟಗಳ ಸಾಲು! ಅವುಗಳ ಮುಂದೆ ನಾವೆಷ್ಟು ಚಿಕ್ಕವರು ಎಂಬ ಯೋಚನೆ ಬರತೊಡಗಿತು. 


ಕಳ್ದ್ ಹೋದೆ ಗುರು! 

ಅಲ್ಲಿದ್ದ ಪಂಚಮುಖಿ ಶಿವನಿಗೆ ಕೈ ಮುಗಿದು "Successfully completed" ಬ್ಯಾನರ್ ಮುಂದೆ ಎಲ್ಲರು ನಿಂತು ಕಿರಚಾಡುತ್ತ ಚಿತ್ರ ತೆಗೆಸಿಕೊಂಡೆವು. ಮುಂದೆ ಯಾರದರೂ ಕೇಳಿದರೆ ತೋರಿಸಲು ಬೇಕಲ್ಲವೇ!



 ನೆನಪಿಗೆ ಮತ್ತೊಂದಿಷ್ಟು ಚಿತ್ರಗಳನ್ನು ತೆಗೆದುಕೊಂಡು ಬೆಟ್ಟಗಳ ಸಾಲಿಗೆ ನಮಸ್ಕರಿಸಿ, ಹಿಮದೊಂದಿಗೆ ಆಡುತ್ತ ಚೋಪ್ತಾ ಕ್ಯಾಂಪಿನತ್ತ ಹೊರಟೆವು.



ಚಾರಣ ಮುಗಿಸಿದ ಖುಷಿಗೆ ಊಟಕ್ಕೆ ತುಪ್ಪ ಸವರಿದ ಚಪಾತಿ, ಪನ್ನೀರ್ ಪಲ್ಯ, ಗುಲಾಬ್ ಜಾಮೂನ್ ಎಲ್ಲ ಮಾಡಿದ್ದರು! ಚೆನ್ನಾಗಿ ತಿಂದು ಡಿನ್ನರ್ ಟೆಂಟ್ನಲ್ಲಿ ಎಲ್ಲರೂ ಅಂತ್ಯಾಕ್ಷರಿ ಆಡಿ, ಹೋಗಿ ಮಲಗಿದೆವು. ಇಷ್ಟು ದಿನ ಕಾಡುತ್ತಿದ್ದ ಸ್ಲೀಪಿಂಗ್ ಬ್ಯಾಗ್, ಟೆಂಟ್ ಎಲ್ಲ ಅಂದೇ ಕೊನೆ ಎಂದಾಗ ನೋವು ನಿಧಾನಕ್ಕೆ ಕಾಡತೊಡಗಿತು. ಹಿಮಾಲಯದ ತಪ್ಪಲಿನಲ್ಲಿನ ಕೊನೆಯ ನಿದ್ದೆಯದು! 

          ಬೆಳೆಗೆದ್ದಾಗ ಚಾರಣ ಮುಗಿಸಿದ್ದಕ್ಕೆ ಟಿ.ಟಿ.ಎಚ್ ಅವರು ನಮಗೆಲ್ಲ ಪ್ರಶಂಸಾ ಪತ್ರಗಳನ್ನು ನೀಡಿದರು. ಎಲ್ಲರೂ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು ಕೊನೆಗೊಂದು ಇಡೀ ಗುಂಪಿನ ತನ್ನಿ ತೆಗೆದುಕೊಂಡು ಗಾಡಿ ಹತ್ತಿ ಹೃಶಿಕೇಷದತ್ತ ಹೊರಟೆವು.



          ೩೧ಕ್ಕೆ ದೆಹಲಿಯಿಂದ ಬಾನೋಡದಲ್ಲಿ ಬೆಂಗಳೂರಿಗೆ ಹಿಂದಿರುಗಿ ಬರುವವರಿದ್ದೆವು. ಹೃಶಿಕೇಷದಲ್ಲಿ ಒಂದು ದಿನ ತಂಗಿ ಮರುದಿನ ಕಾರಿನಲ್ಲಿ ದೆಹಲಿಯತ್ತ ಹೊರಟೆವು. ಪ್ರತೀ ಬಾರಿ ಪ್ರವಾಸ ಮುಗಿಯುವಾಗ ಆಗುವ ಸಂಕಟ ಹೇಳತೀರದು. ವಾಪಾಸ್ ಹೋದ ಮೇಲೆ ಮತ್ತೆ ಅದೇ ಟ್ರಾಫಿಕ್ಕು, ಅದೇ ಆಫೀಸು, ಅದೇ ತಲೆನೋವು ಎಲ್ಲ ನೆನಪಾಗಿ ಹಿಂದಿರುಗಿ ಬರಲು ಮನಸ್ಸಾಗುವುದೇ ಇಲ್ಲ! ಆದರೆ ಇದೇ ಮೊದಲ ಬಾರಿಗೆ ಪ್ರವಾಸ ಮುಗಿದ ಬೇಸರದ ಭಾವವಿರಲಿಲ್ಲ! ಮರಳಿ ಬೆಂಗಳೂರಿಗೆ ಬರಲು ಮನಸ್ಸು ತುಡಿಯುತ್ತಿತ್ತು. ಕಾರಣ ಒಂದೇ, ಬಂದ ತಕ್ಷಣ ನೋಡಬೇಕೆಂದು ಉತ್ತರ ಪ್ರದೇಶದಲ್ಲಿದ್ದಾಗಲೇ ಬುಕ್ ಮೈ ಶೋನಲ್ಲಿ ಬುಕ್ ಮಾಡಿದ ನಾನು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಸಿನೆಮಾ 'ಕಿರಿಕ್ ಪಾರ್ಟಿ'! :) ಪ್ರವಾಸದ ಗುಂಗಿಂದ ಸುಲಭವಾಗಿ ಹೊರಬರುವಂತೆ ಮಾಡಿದ ಕಿರಿಕ್ ಪಾರ್ಟಿಗೆ ನಾನು ಋಣಿ.

          ನನ್ನ ಪ್ರಕಾರ ಪ್ರತಿಯೊಬ್ಬರು ಒಮ್ಮೆಯಾದರೂ ಹಿಮಾಲಯ ಚಾರಣಕ್ಕೆ ಹೋಗಲೇಬೇಕು! ಅದು, ಜೀವನದಲ್ಲಿ ನಾವು 'ಟೇಕನ್ ಫಾರ್ ಗ್ರಾಂಟೆಡ್' ನಿಲುವು ತೋರಿಸುವ ಹಲವಾರು ವಿಷಯಗಳನ್ನು ಮನವರಿಕೆ ಮಾಡಿಕೊಡುತ್ತೆ. ಅಲ್ಲಿ ಚಳಿಗೆ ೪-೫ ಲೇಯರ್ ಬಟ್ಟೆ ಹಾಕಿಕೊಂಡೇ ದಿನ ಕಳೆಯುವಾಗ, ಇಲ್ಲಿ ಅಂಗಿ - ಚಡ್ಡಿ ಹಾಕಿಕೊಂಡು ಅಡ್ಡಾಡುವುದೂ ಒಂದು ಭಾಗ್ಯ ಎಂಬ ಅರಿವು! ಸ್ಲೀಪಿಂಗ್ ಬ್ಯಾಗಿನಲ್ಲಿ ಹೊಡಕಲು ಆಗದೆ ಮುದುರಿಕೊಂಡು ಮಲಗುವಾಗ, ಮೆತ್ತನೆ ಹಾಸಿಗೆಯ ಮೇಲೆ ಕಾಲು ಚಾಚಿ ಮಲಗುವುದೂ ಒಂದು ಭಾಗ್ಯ ಎಂಬ ಅರಿವು! ಆ ಚಳಿಗೆ ಸ್ನಾನ ಮಾಡಲು ಆಗದಿದ್ದಾಗ, ಬಿಸಿ ನೀರಲ್ಲಿ ಪ್ರತಿ ನಿತ್ಯ ಸ್ನಾನ ಮಾಡುವುದೂ ಒಂದು ಭಾಗ್ಯ ಎಂಬ ಅರಿವು! ಮೊಬೈಲ್ ನೆಟ್ವರ್ಕ್ ಇಲ್ಲದ ಜಾಗದಲ್ಲಿದ್ದದ್ದರಿಂದ, ನಮಗೆ ಬೇಕಾದವರ ಬಳಿ ಬೇಕಾದಾಗ ಕರೆ ಮಾಡಿ ಮಾತನಾಡುವುದೂ ಒಂದು ಭಾಗ್ಯ ಎಂಬ ಅರಿವು! ನಾವಿಲ್ಲಿ ಗಣನೆಗೆ ತೆಗೆದುಕೊಳ್ಳದ ಹಲವಾರು ಚಿಕ್ಕ ಚಿಕ್ಕ ಸಂಗತಿಗಳೂ ಅಲ್ಲಿ ಭಾಗ್ಯಗಳಂತೆ ಗೋಚರಿಸುತ್ತಿದ್ದವು!

ನೀವು ಚೋಪ್ತಾ - ಚಂದ್ರಶಿಲಾ ಚಾರಣಕ್ಕೆ ಹೋಗುವುದಾದರೆ ದಯವಿಟ್ಟು ಅವರು ಸೂಚಿಸಿದಂತೆ ವ್ಯಾಯಾಮ ಮಾಡಿ ದೇಹವನ್ನು ಪಳಗಿಸಿಕೊಂಡು ಹೋಗಿ. ಇಲ್ಲವಾದಲ್ಲಿ ಸುಂದರ ನೋಟವನ್ನು ಅನುಭವಿಸುವ ಬದಲು ನರಳಿ, ಹೆಣಗಾಡಿ ಬೆಟ್ಟವೇರುವ ಸ್ಥಿತಿ ಎದುರಾಗಬಹುದು!
https://www.trekthehimalayas.com/fitness-for-trekking/exercise-charts/easy/

ಚಾರಣಕ್ಕೆ ಯಾವ ಯಾವ ಸಾಮಗ್ರಿಗಳು ಬೇಕೆಂಬ ಪಟ್ಟಿಯನ್ನು ಇಲ್ಲಿ ಕೊಟ್ಟಿದ್ದಾರೆ. ಅದು ಬೇಡ ಇದು ಬೇಡ ಎಂದು ಅಸಡ್ಡೆ ಮಾಡದೆ ಸೂಚಿಸಿದ ಎಲ್ಲವನ್ನೂ ತೆಗೆದುಕೊಂಡು ಹೋಗಿ.
https://www.trekthehimalayas.com/tth-treks/Chopta-Chandrashila-Deoria-Tal-Trek/#essential

          ಚೋಪ್ತಾ - ಚಂದ್ರಶಿಲಾ ೫ ದಿನದ ಚಾರಣವಾಗಿದ್ದು; ಹೋಗುವುದಾದರೆ, ನೀವು ದೆಹಲಿ ತಲುಪಿ ಅಲ್ಲಿಂದ ಬಸ್ ಅಥವಾ ಮಸ್ಸೂರಿ ಎಕ್ಸ್ಪ್ರೆಸ್ ಅಲ್ಲಿ ಹರಿದ್ವಾರ/ಹೃಶಿಕೇಷವನ್ನು ತಲುಪಬೇಕು. ಅಲ್ಲಿಂದ ಟಿ.ಟಿ.ಎಚ್ ಅವರ ಗಾಡಿಯಲ್ಲಿ ಸಾರಿ ಬೇಸ್ ಕ್ಯಾಂಪನ್ನು ತಲುಪಬಹುದು. ವಾಪಾಸ್ ಬರುವಾಗಲೂ ಹರಿದ್ವಾರ/ಹೃಶಿಕೇಷದವರೆಗೆ ಅವರು ನಿಮ್ಮನ್ನು ತಲುಪಿಸುತ್ತಾರೆ. 

          ಹೆಚ್ಚಿನ ದಿನಗಳಿದ್ದರೆ ನೀವು, ಹೃಶಿಕೇಷದಲ್ಲಿ ಬಂಜಿ ಜಂಪ್, ರಿವರ್ ರಾಫ್ಟಿಂಗ್, ಝಿಪ್ ಲೈನಿಂಗ್ ಕೂಡಾ ಮಾಡಬಹುದು. ಇದರ ಬಗ್ಗೆ ಮುಂದಿನ ಬಾರಿ ಬರೆಯುವೆ. ೨೫ ರಿಂದ ೩೦ ಸಾವಿರದಲ್ಲಿ ಜೀವನುದ್ದಕ್ಕೂ ನೆನೆಯುವಂತಹ ಪ್ರವಾಸ ಮಾಡಲಿಚ್ಚಿಸಿದರೆ, ಈ ಪ್ರವಾಸ ಹೇಳಿ ಮಾಡಿಸಿದ್ದು!


ನೆನಪಲ್ಲುಳಿಯುವ ಚಿತ್ರ!

          ಹಿಮಾಲಯ, ಮನುಷ್ಯ ಜೀವನವನ್ನು ನೋಡುವ ರೀತಿಯನ್ನು ಬದಲಾಯಿಸುವುದರಲ್ಲಿ ಅನುಮಾನವಿಲ್ಲ! ಒಮ್ಮೆ ಹೋಗಿ ಬನ್ನಿ! ಅನುಭವವ ಪಡೆದು ಬನ್ನಿ! ಹೋದದ್ದೇ ಆದರೆ, ಆ ದೈತ್ಯ ಬೆಟ್ಟಗಳಿಗೆ ನನ್ನ ಅನಂತಾನಂತ ನಮಸ್ಕಾರಗಳನ್ನು ತಿಳಿಸಿ ಬನ್ನಿ!