Wednesday 24 August 2016

ಬಳಸಿದರೆ; ಕಲಿಸಿದರೆ, ಉಳಿದೀತು; ಬೆಳೆದೀತು - ಕನ್ನಡ

         
ಕೃಪೆ: ಗೂಗಲ್

          'ಚಹಾ' - ಈ ಒಂದ್ ಪದ ಸಾಕು, ನನ್ನ ಎಂತಹ ನಿದ್ದೆ ಇಂದನೂ ಎಬ್ಬಿಸೋಕೆ! ಎಷ್ಟೋ ದಿನ, ಅಮ್ಮ ಬೆಳಿಗ್ಗೆ 5 ಗಂಟೆಗೆ ಚಹಾ ಮಾಡ್ತಾರೆ ಅಂತ ಎದ್ದು, ಚಹಾ ಕುಡ್ದು ಮಲಗಿದ್ದಿದೆ. ಚಹಾ ಅಂದ್ರೆ ಅದೇನೋ ಒಂತರ ಪ್ರೀತಿ, ಒಂತರ ಹುಚ್ಚು. ಬೆಳಿಗ್ಗೆ ತಿಂಡಿ ಇಲ್ಲದಿದ್ರೂ ನಡಿಯತ್ತೆ ಆದ್ರೆ ಚಹಾ ಕುಡಿಲಿಲ್ಲ ಅಂದ್ರೆ, ಜೊಶೇ ಇರಲ್ಲ. ಚಹಾದ ಹುಚ್ಚು ಎಲ್ಲಿವರೆಗೆ ಅಂದ್ರೆ ಒಮ್ಮೆ ರಾತ್ರಿ 2.30 ಸುಮಾರಿಗೆ ಚಹಾ ಕುಡಿಬೇಕು ಅನ್ಸಿ, ಗೆಳೆಯನ ಜೊತೆ ಬೈಕ್ ಅಲ್ಲಿ ಚಹಾ ಹುಡ್ಕೊಂಡು ಕೆಲವ್ ಏರಿಯಾ ಸುತ್ತಿದ್ದೂ ಇದೆ! ನನ್ನ ಒಡನಾಡಿಗಳಿಗೆ ಗೊತ್ತಿರತ್ತೆ, ಏನೇ ಕೆಲಸ ಇರ್ಲಿ, ಶಾರ್ಟ್ ಫಿಲಂ ಶೂಟಿಂಗ್ ಇರ್ಲಿ, ನಾಟಕದ್ ತಾಲೀಮ್ ಇರ್ಲಿ, ನಂದೊಂದ್ ಸಾಮಾನ್ಯ ಮಾತ್ ಇರತ್ತೆ "ಬಾ ಮಗ ಟೀ ಕುಡ್ಕೊಂಡ್ ಶುರು ಮಾಡೋಣ.." ಅಂತ! ಅಮ್ಮ ಯಾವಾಗ್ಲೂ ಉಗಿತಾರೆ, ಯಾರಿಂದ ಬಂತೋ ನಿಂಗೆ ಈ ಚಹಾದ ಹುಚ್ಚು ಅನ್ಕೊಂಡು.

         ನನ್ ಪಿ.ಜಿ ಪಕ್ಕ ಒಂದು ಬೇಕರಿ ಇದೆ. ಅದರ ಮಾಲೀಕ ಕೇರಳದವನು. ಭಾರಿ ರುಚಿಯಾಗಿ ಚಹಾ ಮಾಡ್ತಾನೆ. ಅಲ್ದೆ, ಎಲ್ಲರ ಹತ್ರ ನಗ್ ನಗ್ತಾ ಮಾತಾಡೋ ಮನುಷ್ಯ ಅವನು. ಅದ್ಕೆ ಅಲ್ಲಿ ಚಹಾ ಕುಡಿಯೋದಕ್ಕೆ ಏನೋ ಒಂತರ ಖುಷಿ. ಅವನು ಕೇರಳದವನಾದ್ರಿಂದ ಸುಮಾರು ಜನ ಅವ್ನನ್ನ "ಚೇಟಾ" ಅಂತಾ ಕರೀತಾರೆ. ನನಗೆ ಅವನನ್ನ "ಅಣ್ಣ" ಅಂತಾನೇ ಕರ್ದು ಅಭ್ಯಾಸ.

           ವೈಟ್ ಫೀಲ್ಡ್ ಕಡೆ ತೆಲುಗು ಕನ್ನಡಕ್ಕಿಂತ ಹೆಚ್ಚು ಹಬ್ಬಿರೋದ್ರಿಂದಲೋ ಏನೋ; ಅವನಿಗೆ ತೆಲುಗು, ಬಡಗಣ ಭಾರತದವ್ರು ಜಾಸ್ತಿ ಇರೋದ್ರಿಂದ ಹಿಂದಿ, ಮೂಲತಃ ಕೇರಳದವನಾದ್ದರಿಂದ ಮಲಯಾಳಂ ಬರುತ್ತೆ. ನಾನ್ ಅವನ ಹತ್ರ ಕನ್ನಡದಲ್ಲೇ ಮಾತಾಡೋದು. ಅವನು ಸ್ಪಷ್ಟವಾಗಿ ಕನ್ನಡ ಮಾತಾಡ್ತಾನೆ.

          ಒಂದ್ ದಿನ ನಾ ಚಹಾ ಕುಡಿತಾ ಇರ್ಬೇಕಾದ್ರೆ ಒಬ್ರು ಅವ್ನನ್ನ ಕೇಳಿದ್ರು, "ಚೇಟಾ.. ನೀನು ಕೇರಳದವ್ನಲ್ವಾ.. ಹೇಗ್ ಇಷ್ಟ್ ಚೆನ್ನಾಗ್ ಕನ್ನಡ ಮಾತಾಡ್ತ್ಯಾ" ಅಂತ. ಏನ್ ಉತ್ತರ ಕೊಡ್ತಾನೆ ಅಂತ ನಾನು ಕಾತುರದಿಂದ ಕೇಳ್ತಾ ಇದ್ದೆ. "ಸಾರ್.. ನೀವು ಕೇರಳಕ್ ಬಂದ್ ನೋಡಿ.. ಮಲಯಾಳಂ ಬರಲ್ಲ ಅಂದ್ರೆ ಅಂಗ್ಡಿ ಇಟ್ಕೊಂಡು ವ್ಯಾಪಾರ ಮಾಡೋಕ್ ಆಗಲ್ಲ.. ನಾನು ಕರ್ನಾಟಕದಲ್ ವ್ಯಾಪಾರ ಮಾಡ್ತಾ ಇದೀನಿ.. ಅದ್ಕೆ ಕನ್ನಡ ಕಲ್ತಿದೀನಿ" ಅಂತ ಹೇಳಿ ಮುಗುಳ್ನಕ್ಕು ಮತ್ತೆ ಚಹಾ ಮಾಡೋಕ್ ಹೋದ.

          ಅವ್ನ್ ಮೇಲೆ ಅವತ್ತಿಂದ ಗೌರವ ಜಾಸ್ತಿ ಆಯ್ತು! ಬೇರೆ ದೇಶಕ್ಕೆ ಓದೋಕ್ ಹೋಗ್ಬೇಕಾದ್ರೆ, ಆ ದೇಶದ್ ಭಾಷೆ ಕಲ್ತು, ಅಲ್ಲಿನ್ ಸಂಸ್ಕೃತಿಗೆ ಒಗ್ಗಿಕೊಳ್ಳೋ ನಮ್ಮವ್ರು, ಕರ್ನಾಟಕದಲ್ಲಿ ಕನ್ನಡ ಕಲಿ ಅಂತ ಕೇಳ್ಕೊಂಡ್ರೆ "ನಾವು ಭಾರತೀಯರು" "ಹಿಂದಿ ನಮ್ಮ ರಾಷ್ಟ್ರಭಾಷೆ" "ನಾನ್ ಯಾಕ್ ಕನ್ನಡ ಕಲೀಬೇಕು" ಇತ್ಯಾದಿ ಇತ್ಯಾದಿ ಪೋಳ್ಳುವಾದ ಮಂಡಿಸ್ತಾರೆ. ಕೆಲವ್ರು ಇನ್ನೂ ಒಂದೆರ್ಡ್ ಹೆಜ್ಜೆ ಮುಂದ್ ಹೋಗಿ ಕಲಿ ಅಂದವ್ರಿಗೆ ಯಾವ್ ಯಾವ್ದೋ ಪಟ್ಟಾನೂ ಕಟ್ತಾರೆ! ಹೀಗೆಲ್ಲಾ ಇರ್ಬೇಕಾದ್ರೆ, ನಾವ್ ಸುಮ್ನೆ "ಗಾಂಚಾಲಿ ಬಿಡಿ ಕನ್ನಡ ಮಾತಾಡಿ" ಅಂತ ಹೇಳ್ಕೊಂಡ್ ಓಡಾಡೋದ್ ಬಿಟ್ಟು, ಯಾರಿಗ್ ಕನ್ನಡ ಬರಲ್ವೋ ಅವ್ರಿಗ್ ಕನ್ನಡ ಹೇಳ್ಕೊಡೋದು, ಯಾವ್ಯಾವ್ ಬಳಕಗಳು (apps) ಕನ್ನಡದಲ್ಲಿದ್ಯೋ ಅದನ್ನ ಕನ್ನಡದಲ್ಲೇ ಬಳ್ಸೋದು, ಎಲ್ ಎಲ್ಲಿ ಕನ್ನಡದಲ್ಲಿ ಸೇವೆ ಸಿಗ್ತಾ ಇಲ್ವೋ ಅಲ್ಲಿ ಕನ್ನಡದಲ್ಲಿ ಸೇವೆ ಕೊಡೋಕೆ ಒತ್ತಡ ಹಾಕೋದು, ಹೆಚ್ಚೆಚ್ಚು ಅರಿಮೆ(ವಿಜ್ಞಾನ), ಮನರಂಜನೆ contents ಗಳನ್ನ ಕನ್ನಡದಲ್ಲಿ ತಯಾರ್ ಮಾಡೋದು ಮಾಡ್ಬೇಕು. ಆಗ ಮಾತ್ರ ಕನ್ನಡ ಉಳಿಯುತ್ತೆ ಬೆಳೆಯುತ್ತೆ. ಅಲ್ವಾ?

4 comments:

  1. ಸೂಪರ್ ಭಟ್ಟರೆ, ನನ್ನ ಪ್ರಿಯವಾದ ಚಹಾದ ಬಗ್ಗೆ ಬರೆದಿದ್ದೀರೆಂದು ಓದಲು ಶುರು ಮಾಡಿದೆ. ಚೆನ್ನಾಗಿದೆ

    ReplyDelete
  2. ಓದಿದೆ ಚೆನ್ನಾಗಿತ್ತು ಬಾ ಮಗ ಟೀ ಕುಡ್ಕೊಂಡ್ ಬರೋಣ

    ReplyDelete
  3. ತುಂಬಾ ನನ್ನಿ ಎಲ್ಲರಿಗೂ :)

    ReplyDelete