Thursday 10 December 2015

ಜಯಂತ್ ಕಾಯ್ಕಿಣಿಯವರ ಇತ್ತೀಚಿನ ಈ ೧೦ ಹಾಡುಗಳು ನಿಮ್ಮ ಹೃದಯಕ್ಕೆ ಹತ್ತಿರವಾಗುವುದು ಖಂಡಿತ!


ಜಯಂತ್ ಕಾಯ್ಕಿಣಿ


ಮೊನ್ನೆಯ ದಿನ ಓಡುಲಿಯಲ್ಲಿ (ಮೊಬೈಲ್) ನನ್ನ ನೆಚ್ಚಿನ ಪ್ಲೇ ಲಿಸ್ಟಲ್ಲಿರುವ ಹಾಡುಗಳನ್ನ ಕೇಳುತ್ತಿರುವಾಗ ಫಕ್ಕನೆ ಏನೋ ಹೊಳೆದಂತಾಗಿ, ಗಮನಿಸಿದಾಗ, ನನ್ನ ಅರಿವಿಗೆ ಬಂದದ್ದು ಏನೆಂದರೆ, ಆ ಪಟ್ಟಿಯಲ್ಲಿದ್ದ ಬಹುತೇಕ ಹಾಡುಗಳು ಜಯಂತ್ ಕಾಯ್ಕಿಣಿಯವರು ಬರೆದದ್ದು! ಬೇಸರವಾದಾಗ ಕೇಳಲು ಒಂದಿಷ್ಟು ಹಾಡುಗಳು, ಸಂತಸದಿ ಇರುವಾಗ ಕೇಳಲು ಮತ್ತಿಷ್ಟು ಹಾಡುಗಳನ್ನು ಅವರು ನಮಗಾಗಿ ನೀಡುತ್ತಾ ಬಂದಿದ್ದಾರೆ. ಒಂದಾದ ಮೇಲೊಂದು ಸೊಗಸಾದ ಹಾಡುಗಳನ್ನು ಕೊಟ್ಟು ಕಾಯ್ಕಿಣಿಯವರು ಇಂದಿನ ಪರಿಸ್ಥಿತಿಯನ್ನು ಹೇಗೆ ಮಾಡಿಬಿಟ್ಟಿದ್ದಾರೆ ಎಂದರೆ, ಒಳ್ಳೆಯ ಸಾಲುಗಳಿರುವ ಹಾಡೊಂದನ್ನು ಕೇಳಿದೊಡನೆ ನಮ್ಮ ಮನದಲ್ಲಿ ಮೂಡುವ ಮೊದಲ ಯೋಚನೆ "ಬಹುಶಃ ಕಾಯ್ಕಿಣಿಯವ್ರ್ ಲಿರಿಕ್ಸ್ ಇರ್ಬೇಕು!" ಅಲ್ವಾ? 

ನಿಮ್ಮ ಹೃದಯಕ್ಕೆ ಹತ್ತಿರವಾಗಬಹುದಾದ ಕಾಯ್ಕಿಣಿಯವರ ಇತ್ತೀಚಿನ ೧೦ ಹಾಡುಗಳು ಇಲ್ಲಿವೆ. ಇದರಲ್ಲಿ ನಿಮ್ಮ ನೆಚ್ಚಿನ ಹಾಡು ಯಾವುದು?


೧. ನೆನಪೆ ನಿತ್ಯ ಮಲ್ಲಿಗೆ

ಚಿತ್ರ : ಕೆಂಡಸಂಪಿಗೆ
ಸಂಗೀತ : ವಿ. ಹರಿಕೃಷ್ಣ
ಹಾಡಿದವರು : ಕಾರ್ತಿಕ್




೨. ಏಕಾಂಗಿ ನಾನು ಏಕಾಂಗಿ


ಚಿತ್ರ : ಫಸ್ಟ್ ರಾಂಕ್ ರಾಜು
ಸಂಗೀತ : ಕಿರಣ್ ರವೀಂದ್ರನಾಥ್
ಹಾಡಿದವರು : ಸೋನು ನಿಗಮ್





೩. ಬಿದ್ದಲ್ಲೇ ಬೇರೂರಿ

ಚಿತ್ರ : ವಾಸ್ತು ಪ್ರಕಾರ
ಸಂಗೀತ : ವಿ. ಹರಿಕೃಷ್ಣ
ಹಾಡಿದವರು : ವಿಜಯ್ ಪ್ರಕಾಶ್




೪. ಈ ಜನುಮವೆ ಆಹಾ ದೊರೆತಿದೆ

ಚಿತ್ರ : ಒಗ್ಗರಣೆ
ಸಂಗೀತ : ಇಳಯರಾಜ ಸರ್
ಹಾಡಿದವರು : ಕೈಲಾಶ್ ಖೇರ್






೫. ನಿನ್ನ ದನಿಗಾಗಿ

ಚಿತ್ರ : ಸವಾರಿ - ೨
ಸಂಗೀತ : ಮಣಿಕಾಂತ್ ಕದ್ರಿ
ಹಾಡಿದವರು : ಕಾರ್ತಿಕ್, ಸುಪ್ರಿಯಾ




೬. ಕನಸಲಿ ನಡೆಸು

ಚಿತ್ರ : ಕೆಂಡಸಂಪಿಗೆ
ಸಂಗೀತ : ವಿ. ಹರಿಕೃಷ್ಣ
ಹಾಡಿದವರು : ಶ್ವೇತಾ ಮೋಹನ್





೭. ಗಾಳಿಯ ಮಾತಲಿ

ಚಿತ್ರ : ಒಗ್ಗರಣೆ
ಸಂಗೀತ : ಇಳಯರಾಜ ಸರ್
ಹಾಡಿದವರು : ರಂಜಿತ್, ವೈಭವರಿ




೮. ನಿನ್ನಯ ಸಂಗಡ ನಾನಿರುವೆ

ಚಿತ್ರ : ಭಾಗ್ಯರಾಜ್
ಸಂಗೀತ : ಅನೂಪ್ ಸಿಳೀನ್
ಹಾಡಿದವರು : ರಾಜೇಶ್ ಕೃಷ್ಣನ್, ಸಮನ್ವಿತಾ ಶರ್ಮ

https://soundcloud.com/deepak-madhuvanahalli-j-anoop-seelin



೯. ಒಂದೇ ಸಮನೆ ಮಿಡಿದಿದೆ ಈ ಮನಸು

ಚಿತ್ರ : ಆಟ
ಸಂಗೀತ : ಸಾಧುಕೋಕಿಲ
ಹಾಡಿದವರು : ಸೋನುನಿಗಮ್, ಶ್ರೇಯಾ ಘೋಶಾಲ್





೧೦. ಮರೆಯದ ಪುಸ್ತಕ

ಚಿತ್ರ : ರಥಾವರ
ಸಂಗೀತ : ಧರ್ಮ ವಿಶ್
ಹಾಡಿದವರು : ಅನುರಾಧ ಭಟ್



ಯಾವ್ ಯಾವ್ ಹಾಡನ್ನ ನೀವು ಕೇಳಿಲ್ವೋ, ಕೇಳಿ. ಕಾಯ್ಕಿಣಿಯವರ ಸೊಗಸಾದ ಬೇರೆ ಹಾಡುಗಳು ಗೊತ್ತಿದ್ರೆ ಹೇಳಿ. ನಾನೂ ಕೇಳ್ತೀನಿ.

ಮುಂದಿನ ದಿನಗಳಲ್ಲಿ ಜಯಂತ್ ಕಾಯ್ಕಿಣಿಯವರು ಇನ್ನೂ ಮನ ಮುಟ್ಟುವ ಹಾಡುಗಳನ್ನ ಬರೀಲಿ ಅಂತ ಹಾರೈಸುವೆ.

Friday 4 December 2015

ಅಸಹಾಯಕ ಪ್ರೇಕ್ಷಕ

                                          


            ಕೆಲವೊಮ್ಮೆ ನಮ್ಮ ಸುತ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಮಗೆ ಎಷ್ಟೇ ಬೇಸರ, ನೋವಿದ್ದರೂ ನಮ್ಮಿಂದ ಏನೂ ಬದಲಾಯಿಸಲು ಸಾಧ್ಯವಿಲ್ಲ ಎಂಬ ಸಂಗತಿ ಬಹಳ ಸಂಕಟವನ್ನುಂಟುಮಾಡುತ್ತದೆ. ಡಿಸೆಂಬರ್ ೪ರಂದು ಉಗ್ರಂ ಶ್ರೀಮುರಳಿ ಅಭಿನಯದ ಚಿತ್ರ 'ರಥಾವರ'ದ ಬಿಡುಗಡೆ. ಇದು ಬಹುನಿರೀಕ್ಷಿತ ಚಿತ್ರವಾದ್ದರಿಂದ ಯಾವ ಯಾವ ಚಿತ್ರಮಂದಿರಗಳಲ್ಲಿದೆ? ಎಷ್ಟೆಷ್ಟು ಪ್ರದರ್ಶನಗಳಿವೆ? ಎಂಬ ಕುತೂಹಲದಲ್ಲಿ ಬುಕ್ ಮೈ ಶೋ ನೋಡ ಹತ್ತಿದೆ. ಚಿತ್ರಮಂದಿರಗಳ ಸಂಖ್ಯೆ ಗಮನಾರ್ಹ ಮಟ್ಟದಲ್ಲಿದ್ದರೂ, ಮಲ್ಟಿಪ್ಲೆಕ್ಸಗಳಲ್ಲಿ ಪ್ರದರ್ಶನಗಳ ಸಂಖ್ಯೆ ಕಡಿಮೆಯೇ ಇತ್ತು. ಸರಿ ಯಾವುದೋ ಒಂದು ಚಿತ್ರಮಂದಿರದಲ್ಲಿ ನೋಡಿದರಾಯ್ತು ಅಂದುಕೊಂಡು, ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿರುವ ಕನ್ನಡದ ಚಿತ್ರ 'ದ ಪ್ಲಾನ್' ಅನ್ನು ನಾನು ಇನ್ನೂ ನೋಡಿಲ್ಲವಾದ್ದರಿಂದ ಈ ವಾರದ ಕೊನೆಯಲ್ಲಿ ನೋಡೋಣ ಎಂದು ಯಾವ ಚಿತ್ರಮಂದಿರದಲ್ಲಿದೆ ಎಂದು ಹುಡುಕಿದೆ. ಕೇವಲ ಮೂರು ಚಿತ್ರಮಂದಿರದಲ್ಲಿತ್ತು! ಎಷ್ಟು ಪ್ರದರ್ಶನ ಎಂದರೆ ಬರೇ ಮೂರು!  ೮೩% ಜನರು ಬುಕ್ ಮೈ ಶೋನಲ್ಲಿ ಮೆಚ್ಚುಗೆಯನ್ನು ತೋರಿಸಿದ ಹೊರತಾಗಿಯೂ ಕೇವಲ ಮೂರು ಪ್ರದರ್ಶನ! ಇದು ಯಾವ ನ್ಯಾಯ ಸ್ವಾಮಿ? ಸಿಟ್ಟಿನಲ್ಲಿ ಬೇರೆ ಭಾಷೆಗಳ ಚಿತ್ರಗಳು ಎಷ್ಟು ಚಿತ್ರಮಂದಿರಗಳಲ್ಲಿವೆ? ಎಷ್ಟು ಪ್ರದರ್ಶನಗಳು? ನೋಡತೊಡಗಿದೆ. ಹಿಂದಿಯ 'ತಮಾಷಾ' ಚಿತ್ರಕ್ಕೆ ಅದೆಷ್ಟು ಚಿತ್ರಮಂದಿರಗಳು, ಅದೆಷ್ಟು ಪ್ರದರ್ಶನಗಳು! ಅಬಾಬಾಬಾ! ಚಕಿತವಾಯಿತು. ಕರ್ನಾಟಕದ ರಾಜಧಾನಿ, ಕನ್ನಡ ನುಡಿಯ ಮನೆ ನಮ್ಮ ಬೆಂಗಳೂರಿನಲ್ಲಿ ಕನ್ನಡದ ಒಳ್ಳೆಯ ಚಿತ್ರಗಳಿಗಿಂತ ಬೇರೆ ಭಾಷೆಯ ಚಿತ್ರಗಳಿಗೆ ಹೆಚ್ಚಿನ ಮನ್ನಣೆ, ಮಾನ್ಯತೆ!

ಕೆಲ ತಿಂಗಳ ಹಿಂದೆ 'ರಂಗಿತರಂಗ' ಬಿಡುಗಡೆಯಾದಾಗ ಅದು ನಮ್ಮ ಅಳವೆಡೆಗೆ (ಆಫೀಸ್) ಹತ್ತಿರವಿರುವ 'ಕ್ಯೂ ಸಿನೆಮಾಸ್'ನಲ್ಲಿ ಬಿಡುಗಡೆಯಾಗದಿದ್ದಾಗ, ಸಹೋದ್ಯೋಗಿ ಮಿತ್ರರೊಂದಿಗೆ ಅಲ್ಲಿಗೆ ಹೋಗಿ 'ಕ್ಯೂ ಸಿನೆಮಾಸ್' ಸಿಬ್ಬಂದಿಯ ಬಳಿ ಕನ್ನಡ ಚಿತ್ರಗಳನ್ನು ಇಲ್ಲಿ ಏಕೆ ಪ್ರದರ್ಶಿಸುವುದಿಲ್ಲ ಎಂದು ಪ್ರಶ್ನಿಸಿದ್ದೆವು. "ಕನ್ನಡ ಸಿನೆಮಾಗಳನ್ನ ಜನರು ನೋಡೋದಿಲ್ಲ ಸಾರ್" ಎಂಬುದು ಅವನು ಕೊಟ್ಟ ಉತ್ತರವಾಗಿತ್ತು. "ನೀವು ಕನ್ನಡ ಸಿನೆಮಾಗಳನ್ನು ಹಾಕದೆ, ಜನ ನೋಡೋದಿಲ್ಲ ಅಂತ ಹೇಗ್ರಿ ಹೇಳ್ತೀರ?" ಎಂದು ತಕರಾರು ಎತ್ತಿದ್ದೆವು. ಕೊನೆಗೆ ಅವನು 'ರಂಗಿತರಂಗ'ವನ್ನು ಪ್ರದರ್ಶಿಸಲು ಪ್ರಯತ್ನಿಸುವುದಾಗಿ ಹೇಳಿದ್ದ. ಅದು ಆಗಲಿಲ್ಲ ಎನ್ನುವುದು ಬೇರೆ ಮಾತು. ನಾವು ಹೋಗಿದ್ದಕ್ಕೊ ಎಂಬಂತೆ 'ಬುಲೆಟ್ ಬಸ್ಯಾ' ಅಲ್ಲಿ ಪ್ರದರ್ಶನಗೊಂಡಿತು. ಅದರ ನಂತರ ಬಂದ 'ಉಪ್ಪಿ ೨ ' ಆಗಲಿ, 'ಆಟಗಾರ'ವಾಗಲಿ, 'ಕೆಂಡಸಂಪಿಗೆ' ಆಗಲಿ, 'ಫರ್ಸ್ಟ್ ರಾಂಕ್ ರಾಜು' ಆಗಲಿ ಇಲ್ಲಿ ಬರಲೇ ಇಲ್ಲ. ಕೊನೆಗೆ 'ರಥಾವರ'ವೂ ಬರುತ್ತಿಲ್ಲ! ಎಂತಹ ಪರಿಸ್ಥಿತಿ ಸ್ವಾಮಿ. ಕಳೆದ ವಾರ ಗೆಳತಿಯೊಬ್ಬಳು, ಮರಾಠಿಯ 'ಕತ್ಯಾರ್ ಕಲ್ಜಿತ್ ಘುಸಲಿ' ಎಂಬ ಚಿತ್ರ ಬಹಳ ಸೊಗಸಾಗಿದೆ. ಸಾಧ್ಯವಾದರೆ ನೋಡು ಎಂದಳು. ಅದಕ್ಕುತ್ತರವಾಗಿ ನಾನು, ಬೆಂಗಳೂರಲ್ಲಿ ಮರಾಠಿ ಚಿತ್ರ ನೋಡಲು ಸಿಗುವುದು ನನಗಂತೂ ಅನುಮಾನ, ಆದರೂ ಒಮ್ಮೆ ಹುಡುಕುತ್ತೇನೆ ಎಂದೆ. ಏನು ಹೇಳಲಿ! ಕನ್ನಡ ಚಿತ್ರಗಳ ಬಗ್ಗೆ ತಾತ್ಸಾರ ತೋರುವ ಇದೇ ದರಿದ್ರ 'ಕ್ಯೂ ಸಿನೆಮಾಸ್'ನಲ್ಲಿ ಆ ಚಿತ್ರ ಇರಬೇಕೆ! ಖುಷಿ ಪಡುವುದೋ ದುಃಖ ಪಡುವುದೋ ತಿಳಿಯಲಿಲ್ಲ!

ಬೇರೆ ಭಾಷೆಯ ಪ್ರೇಕ್ಷಕರಿಗೆ ಅಲ್ಲೊಂದು ಇಲ್ಲೊಂದು ಎಂಬಂತೆ ಅವರ ಭಾಷೆಯ ಚಿತ್ರಗಳು ಬೆಂಗಳೂರಿನಲ್ಲಿ ನೋಡಲು ಸಿಗುವಾಗ ನಾವು ಕನ್ನಡಿಗರು ನಮ್ಮ ಭಾಷೆಯ ಚಿತ್ರ ನೋಡಲು ಚಿತ್ರಮಂದಿರಗಳನ್ನು ಹುಡುಕಾಡಿ, ಹಲವಾರು ಕಿ.ಮೀ ಓಡಾಡಬೇಕಾದ ಪರಿಸ್ಥಿತಿ! ಹೀಗೆಯೇ ಮುಂದುವರೆದರೆ ಗತಿ ಏನು? ಚಿತ್ರಮಂದಿರಗಳ ಮುಂದೆ ಕನ್ನಡ ಚಿತ್ರ ಹಾಕಿ ಸ್ವಾಮಿ ಎಂದು ಅಂಗಲಾಚುವ ಸನ್ನಿವೇಶ ಎದುರಾಗಬಹುದು ಎಂಬ ಅಳುಕು ಕಾಡುತ್ತಿದೆ. "What dude there are no theatres for Kannada movie?" ಎಂದು ಬೇರೆ ಭಾಷೆಯ ಗೆಳೆಯರು ಅಣಕಿಸುವಾಗ ಮೈ ಉರಿಯುತ್ತದೆ. ತಪ್ಪು ಯಾರದ್ದು ಸ್ವಾಮಿ? ಕನ್ನಡ ಚಿತ್ರಗಳನ್ನು ನಿರ್ಲಕ್ಷಿಸುವ ಚಿತ್ರಮಂದಿರಗಳದ್ದೆ? ಕನ್ನಡ ಚಿತ್ರಗಳ ಹಂಚಿಕೆದಾರರದ್ದೇ? ಗುಣಮಟ್ಟ ನೋಡದೆ ಸಾಲು ಸಾಲು ರಿಮೇಕ್ ಚಿತ್ರಗಳನ್ನು ಮಾಡಿಕೊಂಡು ಬಂದ ನಿರ್ದೇಶಕ/ನಟರದ್ದೆ? ಅಥವಾ ಇಂತಹ ಬರಿಯ ಪ್ರಶ್ನೆಗಳು, ಉತ್ತರ ಸಿಗದ ಪ್ರಶ್ನೆಗಳ ಹೊತ್ತು ಕೂತಿರುವ ಅಸಹಾಯಕ ಪ್ರೇಕ್ಷಕರದ್ದೆ?! 

ನಾವು ಸದಭಿರುಚಿಯಿರುವ ಒಳ್ಳೆಯ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸದಿದ್ದರೆ, ಚಿತ್ರಮಂದಿರಗಳು ಕನ್ನಡ ಚಿತ್ರ ಪ್ರದರ್ಶಿಸದಿದ್ದಾಗ ದನಿ ಎತ್ತದಿದ್ದರೆ, ನಾವು ಅಸಹಾಯಕ ಪ್ರೇಕ್ಷಕರೆಂಬುದ ಮೊದಲು ತಲೆಯಿಂದ ಕಿತ್ತೊಗೆಯದಿದ್ದರೆ ಬೇರೆ ಭಾಷೆಯ ಚಿತ್ರಗಳನ್ನು ನಮ್ಮ ಭಾಷೆಯ ಚಿತ್ರಗಳೆಂದು ನೋಡಬೇಕಾದ ಕರಾಳ ದಿನಗಳು ಬರುವುದು ನಿಶ್ಚಿತ! ಆಯ್ಕೆ ನಮ್ಮದು!