Friday 13 October 2017

ನಾನು ದೇವರನ್ನು ಕಂಡಿದ್ದೇನೆ!




ನಾನ್ ಕೆಲಸಕ್ ಸೇರಿ ಕೆಲ ಸಮಯ ಆದಾಗ ನನ್ ಹಲವು ಗೆಳೆಯರು ಅವರಿಗ್ ಬಂದ್ ಸಂಬಳದಲ್ಲಿ ಬೈಕನ್ನ ಕೊಂಡುಕೊಂಡ್ರು. ಕೆಲವರಂತೂ ಕಾರನ್ನೇ ಕೊಂಡ್ರು. ನನ್ ಕೈಯಲ್ಲಿ ಕೊಳ್ಳೋಕ್ ಆಗಿದ್ದು ಸೈಕಲ್ ಮಾತ್ರ. ಚಿಕ್ಕಂದ್ನಲ್ಲಿ ಗೇರ್ ಸೈಕಲ್ ಬೇಕು ಅಂತ ಅಪ್ಪನ್ನ ತುಂಬಾ ಪೀಡ್ಸಿದ್ದೆ. ಕೊಳ್ಳೋಕ್ ಆಗಿರ್ಲಿಲ್ಲ. ಆದ್ರೆ ಕೆಲಸಕ್ ಸೇರ್ದಾಗ ಮುಂದ್ಗಡೆ, ಹಿಂದ್ಗಡೆ ಎರಡೂ ಕಡೆ ಗೇರು, ಶಾಕ್ ಅಬ್ಸಾರ್ಬರು, ಮುಂದ್ಗಡೆ ಡಿಸ್ಕ್ ಬ್ರೇಕ್! ಇದೆಲ್ಲಾ ಇರೋ ಒಂದು ಚೆಂದದ ಸೈಕಲನ್ನ ಡೆಕತ್ಲಾನಲ್ಲಿ ತೆಗೊಂಡೆ. ದಿನಾ ಅಳವೆಡೆಗೆ ಸೈಕಲಲ್ಲೇ ಓಡಾಡೋಕೆ ಶುರು ಮಾಡಿದೆ. 
ನಂಗಂತೂ ಭಾರಿ ಖುಷಿ! ವೈಟ್ ಫೀಲ್ಡ್ ತುಂಬಾ ಟ್ರಾಫಿಕ್ ಇರೋದ್ರಿಂದ ಬೈಕು, ಕಾರು, ಬಸ್ಸಿಗಿಂತ ಸೈಕಲಲ್ಲೇ ಬೇಗ ತಲ್ಪ್ ಬಹುದಿತ್ತು. ದೇಹಕ್ ಸ್ವಲ್ಪ ವ್ಯಾಯಾಮಾನೂ ಆಗೋದು, ದುಡ್ಡೂ ಉಳಿಯೋದು! ಅಷ್ಟೇ ಅಲ್ದೆ, "ಆಫೀಸಿಗ್ ಹೇಗ್ ಓಡಾಡ್ತಿಯಾ?" ಅಂತ ಯಾರದ್ರೂ ಕೇಳ್ದಾಗ, "ಸೈಕಲಲ್ಲಿ" ಅನ್ನೋವಾಗ ಮುಖದಲ್ಲೊಂದು ಮಂದಹಾಸ ಗೊತ್ತಿಲ್ದೆ ಪ್ರತ್ಯಕ್ಷ ಆಗೋದು. ಕೇಳಿಸ್ಕೊಂಡೋರು ಹುಬ್ಬೇರಿಸ್ಕೊಂಡು, "ಕಾರಲ್ಲಿ ಬೈಕಲ್ಲಿ ಓಡಾಡೋಕಿಂತ ಬೆಸ್ಟ್ ಅದು! ತಲೆ ನೋವ್ ಇರಲ್ಲ" ಅನ್ನೋರು. "ಹೌದು! ನೀವೂ ಒಂದ್ ಸೈಕಲ್ ತೆಗೊಂಡು ಸೈಕಲಲ್ಲೇ ಓಡಾಡಿ" ಅಂತ ನಾನ್ ಅಂದ್ರೆ, ನಕ್ಕೊಂಡು ವಿಷ್ಯ ಬದಲಾಯಿಸೋರು!

ಹೀಗೆ ಹೋದ್ ವರ್ಷ ಸೆಪ್ಟೆಂಬರ್ ಸಮಯದಲ್ಲಿ ಅಳವೆಡೆಗ್ ಹೋಗೇ ತಿಂಡಿ ತಿನ್ನೋಣ ಅಂದ್ಕೊಂಡು ಸೈಕಲ್ ತುಳ್ಕೊಂಡು ಹೋಗ್ತಾ ಇದ್ದೆ. ಅಷ್ಟಾಗಿ ಟ್ರಾಫಿಕ್ ಇರ್ಲಿಲ್ಲ. ತಲೆಲಿ ಯಾವ್ದೋ ಹಾಡು ಓಡ್ತಾ ಇತ್ತು. ಹಂಗೆ ಹಾಡ್ ಗುನುಗ್ತಾ ಹೋಗ್ಬೇಕಾದ್ರೆ ಸಡನ್ ಆಗಿ ಒಂದ್ ಆಟೋ ನಂಗ್ ಗುದ್ತು. ನಂಗ್ ಅರಿವಾಗೋ ಮೊದ್ಲೇ ನಾನ್ ಸೈಕಲಿಂದ ಜಿಗ್ದು ರಸ್ತೆಗ್ ಮುಖ ಮಾಡಿ ಬಿದ್ದಿದ್ದೆ. ಟಾರ್ ಕಿತ್ತೋದ್ ರಸ್ತೆ ಅಂತ ಸುಮಾರ್ ಸಲ ಬೈಕೊಂಡಿದ್ದಕ್ಕೊ ಏನೋ, ಎರಡ್ ದಿನದ್ ಹಿಂದೆ ಹೊಸ್ದಾಗಿ ಟಾರ್ ಹಾಕಿ ರಸ್ತೆ ಫಳ ಫಳ ಹೊಳಿತಾ ಇತ್ತು. ಬಿದ್ ಹೊಡೆತಕ್ಕೆ ಗಲ್ಲ ರಸ್ತೆಗೆ ಬಡ್ದು ಗಾಯ ಆಗಿ ಗಲ್ಲದಿಂದ ರಕ್ತ ಸುರಿಯೋಕ್ ಶುರು ಆಯ್ತು. ಆಟೊ ಕಡೆ ಕಷ್ಟಪಟ್ ಕಣ್ ಹಾಯಿಸ್ದೆ. ಅವ್ನು ನಿಲ್ಲಿಸ್ದೆ ಹಂಗೆ ಮುಂದ್ ಹೋಗ್ಬಿಟ್ಟಿದ್ದ. ಸೈಕಲ್ ಒಂದ್ ಕಡೆ, ನಾನ್ ಒಂದ್ ಕಡೆ. ಖಾಲಿ ಹೊಟ್ಟೆಲಿ ಇದ್ದಿದ್ರಿಂದ, ಅದ್ರಲ್ಲೂ ರಕ್ತ ಸುರಿಯೋಕ್ ಶುರು ಆಗಿದ್ರಿಂದ ತಲೆ ಸುತ್ತೋಕ್ ಶುರು ಆಯ್ತು.

ಕಾಲು ತುಂಬಾ ನೋವ್ ಆದ್ ಹಾಗ್ ಆಯ್ತು. ನೋಡಿದ್ರೆ ಜೀನ್ಸ್ ಪ್ಯಾಂಟು ಹರಿದು ಮಂಡಿಗೆ ಗಾಯವಾಗುವಷ್ಟು ಜೋರಾಗಿ ತರ್ಚಿತ್ತು. ರಸ್ತೆಗ್ ಎಡಗೈ ಊರಿ ಮೇಲ್ ಏಳೋಣ ಅಂತ ಪ್ರಯತ್ನ ಪಟ್ಟೆ. ಕೈಗೆ ಬಲವೇ ಇಲ್ಲದ ಹಾಗ್ ಇತ್ತು. ನೋಡಿದ್ರೆ ಬೆರಳುಗಳು ರಸ್ತೆ ಜೊತೆ ತಿಕ್ಕಾಟ ನಡ್ಸಿ, ಚರ್ಮ ಕಿತ್ ಹೋಗಿ, ಮೂರು ಬೆರಳುಗಳಿಂದ ರಕ್ತ ಸುರಿತಾ ಇತ್ತು. 
ಅಷ್ಟರಲ್ಲಿ ಯಾರೋ ಆಟೋದವರು ಬಂದು ಮುಖಕ್ ನೀರ್ ಹಾಕಿ, ಕುಡಿಯೋಕ್ ನೀರ್ ಕೊಟ್ರು. ತಲೆ ಸುತ್ತುತ್ತಾ ಇದ್ದದ್ದರಿಂದ ನಂಗ್ ಎಲ್ಲವೂ ಅಸ್ಪಷ್ಟ ಕಲಾಕೃತಿಗಳ್ ತರ ಕಾಣ್ತಾ ಇದ್ವು. ನನ್ ಸುತ್ತ ೪-೫ ಜನ ಇದ್ದದ್ ಮಾತ್ರ ಗೊತ್ತು. ಗಲ್ಲಕ್ಕೆ, ಮುಖಕ್ಕೆ ಗಾಯ ಆಗಿದ್ರಿಂದ ಅವ್ರು ಕೇಳಿದ್ ಪ್ರಶ್ನೆಗೆ ಬಾಯಿ ಬಿಟ್ಟು ಉತ್ರಾನೂ ಕೊಡೋಕ್ ಆಗ್ತಾ ಇರ್ಲಿಲ್ಲ. 
ಆಗ ಯಾರೋ, "ಬಾ ಗಾಡಿ ಹತ್ತು" ಅಂತ ಅವನ್ ಸ್ಕೂಟಿ ಮೇಲ್ ಕೂರೋಕ್ ಹೇಳ್ದ. ಅಲ್ಲಿದ್ ನಾಲ್ಕೈದ್ ಜನ್ರಲ್ಲಿ ಯಾರೋ ಸೈಕಲ್ಲನ್ನ ರಸ್ತೆಯ ಬದಿಯಲ್ ಇಟ್ಟು ಬೀಗ ಹಾಕಿ, ಓಡಿ ಬಂದು ಬೀಗದ್ ಕೈಯನ್ನ ನನ್ ಬೆನ್ಚೀಲ (bag pack) ದಲ್ಲಿ ಹಾಕಿದ. ನಾ ಕಷ್ಟದಲ್ಲಿ ಸ್ಕೂಟಿ ಹತ್ತಿ ಕೂತೆ. ಸ್ಕೂಟಿಯವ ಗಾಡಿ ಓಡಿಸ್ತಾ, "ಏನಾಯಿತು?" "ಯಾರು ಗುದ್ದಿದ್ದು?" ಅಂತೆಲ್ಲಾ ಕೇಳ್ತಾ ಇದ್ದ. ನಾನು ಉತ್ರಾ ಕೊಡೋಕೆ ಪ್ರಯತ್ನ ಪಡ್ತಾ ಇದ್ದೆ. ಆದ್ರೆ ತಲೆ ಸುತ್ತು ಜೋರಾಗಿ ಗಾಡಿಯಿಂದ ಬೀಳೋ ತರ ಅನ್ಸಿ ಭಯ ಆಗೋಕ್ ಶುರುವಾಗಿ "ನಾನ್ ತಲೆ ಸುತ್ತಿ ಬೀಳ್ತೀನಿ ಅನ್ನಿಸ್ತಾ ಇದೆ" ಅಂತ ಹೇಳ್ದೆ. ಅವ್ನು "ಎರಡೇ ನಿಮಿಷ ಗಟ್ಟಿಯಾಗ್ ಕೂತ್ಕೋ ಇಲ್ಲೇ ಒಂದ್ ಕ್ಲಿನಿಕ್ ಇದೆ" ಅಂದ. ವೇಗವಾಗ್ ಹೋಗಿ ಆ ಕ್ಲಿನಿಕ್ ಮುಂದೆ ನಿಲ್ಲಿಸ್ದ. ಕ್ಲಿನಿಕ್ ತೆರ್ದಿದ್ರೂ ಡಾಕ್ಟರ್ ಕಾಣ್ಲಿಲ್ಲ. ನನಗ್ ಒಳಗ್ ಕೂರೋಕ್ ಹೇಳಿ, ಓಡಿ ಹೋಗಿ ಡಾಕ್ಟರನ್ನ ಕರ್ಕೊಂಡ್ ಬಂದ. 

ಕೈಗೆ ಬಲವೇ ಇಲ್ಲದ್ ಹಾಗ್ ಆಗಿದ್ ನೋಡಿ ನಂಗೆ ಮೂಳೆ ಮುರ್ದ್ ಹೋಗಿದೆ ಅಂತ ಅಳುಕು ಶುರು ಆಯ್ತು. ಡಾಕ್ಟರ್ ಬಂದು ಗಾಯಗಳನ್ನ ನೋಡಿ ಒಂದಿಷ್ಟು ಮಾತ್ರೆ, ಚುಚ್ಚು ಮದ್ದು, ಮುಲಾಮುಗಳನ್ನ ಬರೆದ್ಕೊಟ್ಟು, ತರೋಕ್ ಹೇಳಿದ್ರು. ಅವ್ನು ತರೋಕ್ ಹೊರಡ್ತಾ ಇದ್ ಹಾಗೆ ಅವ್ನಿಗ್ ನನ್ ಪರ್ಸನ್ನ ಕೊಟ್ಟೆ. ಅವನು ನನ್ನ ಪರ್ಸಿನಲ್ಲಿ ೫೦೦ ರೂಪಾಯಿ ಇದ್ದದ್ದನ್ನ ನೋಡಿ, "ಇರಲಿ ಊಟಕ್ಕೆ, ಡಾಕ್ಟರ್ ಫೀಸಿಗೆ ಬಾಕಾಗ್ಬಹುದು, ಇಟ್ಕೊ ನಂಗೆ ಆಮೇಲೆ ಕೊಡೋವಂತೆ" ಅಂತ ಹೇಳಿ ಪರ್ಸ್ ಇಟ್ಟು, ಮೆಡಿಕಲ್ಸ್ ಗೆ ಹೋಗಿ ಅದನ್ನೆಲ್ಲಾ ತಂದುಕೊಟ್ಟು, ವೈದ್ಯರು ಶುಶ್ರೂಷೆ ಮಾಡಲು ಶುರು ಮಾಡ್ತಾ ಇದ್ ಹಾಗೆ "ನಂಗೆ ಒಂದು ಮೀಟಿಂಗ್ ಇದೆ, ಸ್ವಲ್ಪ ತಡ ಆಗ್ತಾ ಇದೆ, ನಾನ್ ಹೋಗಿರ್ತೀನಿ, ನೀನು ಮನೆಗ್ ಹುಶಾರಾಗಿ ತಲ್ಪು, ಆಫೀಸಿಗೆಲ್ಲಾ ಹೋಗ್ಬೇಡ" ಅಂತ ನಕ್ಕು ಹೊರಟ. ನಾನು ನನ್ ಫೊನ್ ಕೊಟ್ಟು "ನಿನ್ ನಂಬರ್ ಸೇವ್ ಮಾಡ್ಕೊಡು" ಅಂದೆ. 'ಆಕಾಶ್' ಅಂತ ಉಳಿಸಿ ಹೋದ. 

ನಾನು ಕ್ಲಿನಿಕ್ ಮುಂದೇನೆ ಇದ್ ಬಸ್ ನಿಲ್ದಾಣಕ್ ಹೋಗಿ ಬಸ್ ಹತ್ತಿ ಮನೆ ಸೇರ್ಕೊಂಡೆ. ಸ್ವಲ್ಪ ಹೊತ್ತು ಸುಧಾರಿಸ್ಕೊಂಡೆ. ಆಗ ಮಾತ್ರೆ ನೆನಪ್ ಆಯ್ತು. ಮಧ್ಯಾಹ್ನ ಮಾತ್ರೆ ತೆಗೊಳ್ಳೋ ಮೊದ್ಲು ಊಟ ಮಾಡ್ಬೇಕಲ್ಲ! ಊಟ ತರೋಕ್ ಹೋಗೋಕೂ ಆಗದ ಸ್ಥಿತಿಯಲ್ಲಿದ್ದೆ. ಗೆಳೆಯ ಭರತನಿಗೆ ಫೋನು ಹಾಯಿಸ್ದೆ. ಅವನು ಪಾಪ ಅಳವೆಡೆಗ್ ಹೋಗೋ ಹಾದಿಯಲ್ಲಿ ಒಂದು ಹೋಟೆಲ್ನಲ್ಲಿ ಮೊಸ್ರನ್ನ ಕಟ್ಟಿಸ್ಕೊಂಡು ನನ್ ಕೋಣೆಗ್ ತಂದು ಕೊಟ್ಟು, ಆರೋಗ್ಯ ವಿಚಾರ್ಸಿ ಹೋದ. ಉಂಡು, ಮಾತ್ರೆ ತೆಗೊಂಡ್ ಮಲಗಿದವ್ನಿಗೆ ಸಂಜೆ ಹೊತ್ತಿಗೆ, ರಸ್ತೆ ಬದಿಯಲ್ಲೇ ನಿಲ್ಲಿಸಿ ಬಂದ ಸೈಕಲ್ಲಿನ್ ನೆನಪಾಯ್ತು. ಗಾಬರಿಯಾಗಿ ಗೆಳೆಯ ಪ್ರಶಾಂತನಿಗ್ ಕರೆ ಮಾಡಿ ನಡೆದ ಸಂಗತಿ ತಿಳಿಸ್ದೆ. ಅವನೂ ನನ್ನ ಥರ ಸೈಕಲ್ ಸವಾರ. ಓಡಿ ಬಂದು, ಆ ಆಟೋದವ್ನಿಗೆ ಶಪಿಸಿ ನನ್ನೊಡನೆ ಸೈಕಲ್ ಇಟ್ಟ ಜಾಗದೆಡೆಗ್ ಹೆಜ್ಜೆ ಹಾಕ್ದ. ಅಲ್ಲಿಗ್ ಹೋಗಿ ನೋಡಿದ್ರೆ ನಾನಿಟ್ ಜಾಗದಲ್ಲಿ ಸೈಕಲ್ ಇರ್ಲಿಲ್ಲ. ತಲೆ ಕೆಟ್ಟ್ ಹೋದಾಗ್ ಆಯ್ತು! ಏನ್ ಮಾಡೋಕೂ ತೋಚ್ಲಿಲ್ಲ. ಪಕ್ಕದಲ್ಲೇ ಒಂದು 'ಕಾಫಿ ಡೇ' ಇತ್ತು. ಅದ್ರ ಸೆಕ್ಯೂರಿಟಿ ಗಾರ್ಡ್ ಹತ್ರ ಹೋಗಿ "ಬೆಳಿಗ್ಗೆ ಇಲ್ಲಿ ಆಕ್ಸಿಡೆಂಟ್ ಆದಾಗ ಸೈಕಲನ್ನ ಇಲ್ಲೇ ಬಿಟ್ ಹೋಗಿದ್ದೆ, ನೀವ್ ನೋಡಿದ್ರಾ?" ಅಂತ ಕೇಳ್ದೆ. ಅವನು "ಹಾ! ರಸ್ತೆಯಲ್ಲೇ ಇದ್ರೆ ಯಾರಾದ್ರೂ ಕದ್ಗೊಂಡು ಹೋಗ್ಬಹುದು ಅಂತ ನಮ್ ಬೇಸ್ಮೆಂಟಲ್ಲಿ ಪಾರ್ಕ್ ಮಾಡಿದೀನಿ. ಬನ್ನಿ ಕೊಡ್ತೀನಿ" ಅಂದ. ಅವ್ನ್ ಕಾಳಜಿ ನೋಡಿ ಅತೀವವಾಗ್ ಖುಷಿ ಆಯ್ತು. ಬೇಸ್ಮೆಂಟಿಗ್ ಹೋಗಿ ಸೈಕಲ್ ತೆಗೊಂಡು,ಸೆಕ್ಯೂರಿಟಿಗೆ ನನ್ನಿ ಹೇಳಿ ಅಲ್ಲಿಂದ ಹೊರಟ್ವಿ. ನಂಗೆ ಕೈ ಏಟಾಗಿದ್ರಿಂದ ಕೋಣೆ ತಂಕ ಪ್ರಶಾಂತನೇ ಸೈಕಲನ್ನ ತಳ್ಕೊಂಡು ಬಂದು ನಿಲ್ಸಿ ಹೋದ. ಕೈ ಸರಿ ಹೋಗೋಕೆ ಡಾಕ್ಟರ್ರು ಕ್ರೇಪ್ ಬ್ಯಾಂಡೇಜ್ ಹಾಕೋಳೋಕ್ ಹೇಳಿದ್ರು. ನಂಗೆ ಒಂದ್ ಕೈಯಲ್ಲಿ ಸರ್ಕಸ್ ಮಾಡಿ ಹಾಕೊಳ್ಳೊಕ್ ಆಗಲ್ಲ ಅಂತ ಗೆಳೆಯ ಸಚಿನ್ ದಿನಾ ಬೆಳಿಗ್ಗೆ ಕ್ರೇಪ್  ಬ್ಯಾಂಡೇಜ್ ಹಾಕಿ ಅಳವೆಡೆಗೆ ಜೊತೆಗ್ ಕರ್ಕೊಂಡು ಹೋಗಿ, ವಾಪಸ್ಸು ಬರ್ತಾ ಬಿಡ್ತಾ ಇದ್ದ. ಇವ್ರೆಲ್ಲರ್ ಸಹಾಯ್ದಿಂದ ಅಂತ ಒಂದ್ ಸಂಕಷ್ಟದ್ ಸ್ಥಿತಿನ ಸುಲಭ್ವಾಗ್ ನಿಭಾಯಿಸೋ ಹಾಗಾಯ್ತು. ತಡ್ಕೊಳಕ್ ಆಗ್ದೇ ಇರೋ ಅಷ್ಟು ನೋವ್ ಇದ್ರೂ, ಎಲ್ರ ಕಾಳಜಿಯಿಂದ, ಅಕ್ಕರೆಯಿಂದ ನಾ ಕಳ್ದ್ ಹೋಗಿದ್ದೆ.

"ದೇವರು ಒಬ್ಬ, ಹೆಸರು ಹಲವು" - ಈ ಮಾತನ್ನ ಚಿಕ್ಕಂದಿನಿಂದ ಕೇಳಿದ್ದೆ. ಆದ್ರೆ ಈ ಘಟನೆಯಿಂದ, ನನ್ ಪರಿಚಯಾನೇ ಇಲ್ಲದಿದ್ದ್ರೂ ಕ್ಲಿನಿಕ್ ಗೆ ಕರ್ಕೊಂಡು ಹೋಗಿ, ಅವನೇ ₹250 ಯ ಮದ್ದು ಕೊಡಿಸಿ, ಹಿಂಪಡೆಯೋಕೆ ಸಿಗ್ತೀನಿ ಅಂತ ಹೇಳಿ ಒಂದ್ ವರ್ಷ ಆದ್ರೂ ಸಿಗದ ಆಕಾಶನಲ್ಲಿ, ಸೈಕಲ್; ರಸ್ತೆ ಬದಿಯಿದ್ದರೆ ಯಾರಾದರೂ ಕದೀಬಹುದು ಅಂತ ಕಾಳಜಿಯಿಂದ ಭದ್ರವಾಗ್ ಇಟ್ಟ ಸೆಕ್ಯೂರಿಟಿಯಲ್ಲಿ, ಮಧ್ಯಾಹ್ನ ಊಟ ತಂದ್ ಕೊಟ್ ಭರತನಲ್ಲಿ, ತನ್ ಕೆಲ್ಸ ಬಿಟ್ಟು ನನ್ ಜೊತೆ ಇದ್ ಪ್ರಶಾಂತನಲ್ಲಿ, ದಿನಾ ಕ್ರೇಪ್ ಬ್ಯಾಂಡೇಜ್ ಹಾಕಿ ಅಳವೆಡೆಗ್ ಕರೆದೊಯ್ದು, ಕರೆ ತರ್ತಾ ಇದ್ ಸಚಿನನಲ್ಲಿ ನಾನ್ ದೇವ್ರನ್ನ ಕಂಡಿದ್ದೇನೆ! ಈ ಹಲವು ಹೆಸರುಗಳಲ್ಲಿ ಕಂಡಿದ್ದೇನೆ. "ಪ್ರತಿಫಲ ಬಯಸದೇ ತೋರಿದ ಕರುಣೆಯು ಮೊದಲು ಮನುಜನೆಂಬ ಸಾರ್ಥಕತೆಯ ನೆಮ್ಮದಿ ತರುವುದು" ಅನ್ನೋ ಸಾಲಿನಂತೆ, ಪ್ರತಿಫಲ ಬಯಸ್ದೇ ತೋರೋ ಮಾನವೀಯತೆನೇ ದೈವತ್ವ, ಅದನ್ನ ತೋರುವವ್ರೇ ದೇವರು! ಅಲ್ವಾ?