Friday 11 March 2016

ಲವ್ ಫೇಲ್ಯೂರ್ ಆದವ್ರು - ದೇವ್ ದಾಸ್.. ಫ್ರೆಂಡ್ ಝೋನ್ ಆದವ್ರು - ?

"ಏನ್ ಮಗಾ.. ಗಡ್ಡ ಬಿಟ್ಕೊಂಡ್ ದೇವ್ ದಾಸ್ ಆಗಿದ್ಯಾ.. ಹುಡ್ಗಿ ಕೈ ಕೊಟ್ಳಾ?" ಗಡ್ಡ ಬಿಟ್ಕೊಂಡು ಓಡಾಡೊ ಪ್ರತಿಯೊಬ್ಬ ಹುಡುಗನನ್ನ ಕಂಡಾಗ ಜನರ ಮನಸ್ಸಿನಲ್ಲಿ ಮೂಡುವ ಕಟ್ಟ ಕಡೆಯ.. ಅಲ್ಲಲ್ಲ! ಮೊಟ್ಟ ಮೊದಲ ಪ್ರಶ್ನೆ ಇದು! ಲವ್ ಫೇಲ್ಯೂರ್ ಆದ ಹುಡುಗ್ರನ್ನ ದೇವ್ ದಾಸ್ ಅಂತ ಕರೆಯೋ ಸಂಪ್ರದಾಯ, ಬಹುಶಃ ಶಾರುಖ್ ಖಾನ್ ಅಭಿನಯದ 'ದೇವ್ ದಾಸ್' ಚಿತ್ರ ಪ್ರಸಿದ್ಧಿಯಾದ್ ಮೇಲೆ ಶುರುವಾಗಿದ್ದೇನೋ! ಚಿತ್ರದಲ್ಲಿ ಪಾರು ಸಿಗದೆ ದೇವ್ ದಾಸ್ ಕೊರಗಿ ಕೊರಗಿ ಸಾವನ್ನಪ್ಪುವುದ್ರಿಂದ, ಅವನ ಸಾವಿನ ಸ್ಮರಣಾರ್ಥವಾಗಿ, ಯಾರ್ಯಾರಿಗೆ ಹುಡುಗಿ ಕೈ ಕೊಡ್ತಾಳೊ ಅವರಿಗೆ ದೇವ್ ದಾಸ್ ಅಂತ ಅವನ ಹೆಸರು ಇಟ್ಟು, ಆ ಹೆಸರು ಲೋಕದಲ್ಲಿ ಚಿರಸ್ಥಾಯಿಯಾಗಿ ಉಳೀಯೋ ಹಾಗೆ ಮಾಡ್ಬೇಕು ಅನ್ನೋ ಮಹತ್ವಾಕಾಂಕ್ಷೆಯ ಯೋಜನೆಯನ್ನ ಶುರು ಮಾಡಿದ ಹರಿಕಾರ ಯಾರು ಅಂತ ನಂಗ್ ಗೊತ್ತಿಲ್ಲ! ನಿಮಗ್ ಗೊತ್ತಿದ್ರೆ ಹೇಳಿ!

         ಗಡ್ಡ ಬಿಡುವುದಕ್ಕೂ, ಲವ್ ಫೇಲ್ಯೂರ್ ಗೂ ಏನ್ ಸಂಬಂಧ ಅಂತ ಹುಡ್ಕ್ತಾ ಇರ್ಬೇಕಾದ್ರೆ, ಒಂದ್ ಕಡೆ ವಿಚಾರ ಸಿಕ್ತು. ".. ಹಿಂದೂ ಧರ್ಮದಲ್ಲಿ, ಮರಣದ ಸಂತಾಪದ ಸಮಯದಲ್ಲಿ, ಅನೇಕರು ಕೂದಲನ್ನ ಉಗುರನ್ನ ಕತ್ತರಿಸುವುದು, ಗಡ್ಡ ಬೋಳಿಸುವುದು ಮಾಡುವುದಿಲ್ಲ.. ಬಹುಶಃ ಈ ಲವ್ ಫೇಲ್ಯೂರ್ ವಿಷಯದಲ್ಲಿ, ಗಡ್ಡ ಬೋಳಿಸದೆ ಸಂತಾಪ ಸೂಚಿಸುವುದು ಹೊಗೆ ಹಾಕಿಸಿಕೊಂಡ ಪ್ರೀತಿಗಾಗಿ ಇರಬೇಕು!" ಅಲ್ಲ, ಗಡ್ಡ ಬಿಟ್ಟವ್ರೆಲ್ಲಾ ದೇವ್ ದಾಸ್ ? ದೇವ್ ದಾಸ್ ಆದವರೆಲ್ಲ ಗಡ್ಡ ಬಿಡ್ತಾರ? ಎರಡನೇ ಪ್ರಶ್ನೆ ನಿಜಾಂತ ಆದ್ರೆ; ಬಹುಶಃ ಗಡ್ಡ ಬಿಟ್ಟು ಸ್ಟೈಲ್ ಮಾಡ್ ಬೇಕು ಅಂತ ಆಸೆ ಇಟ್ಕೊಂಡು, ಗಡ್ಡ ಬರ್ದೇ ಇರೋ ಸುಮಾರ್ ಜನ ಹೀಗಾದ್ರೂ ಗಡ್ಡ ಬರಲಿ ಅಂತ ದೇವ್ ದಾಸ್ ಆಗಲೂ ಬಹುದು! ನಂಗೆ ಸೈಕಲ್ ಗ್ಯಾಪ್ ಅಲ್ಲಿ ಒಂದ್ ಅನುಮಾನ.. ಹುಡ್ಗೀರು ಕೈ ಕೊಟ್ಟಾಗ ಹುಡುಗ್ರು ಗಡ್ಡ ಬಿಟ್ರೆ, ಹುಡುಗ್ರು ಕೈ ಕೊಟ್ಟಾಗ ಹುಡ್ಗೀರು ಏನ್ ಬಿಡ್ತಾರೆ ಅಂತ!


ನಮ್ಗೆಲ್ಲರ್ಗೂ ಗೊತ್ತಿರೊ ಹಾಗೆ ಕಳೆದ ಕೆಲವರ್ಷಗಳ ತನಕ ಹುಡುಗರನ್ನ (ಬಹುಶಃ ಹುಡ್ಗೀರ್ನೂ ಕೂಡ!) ಅತಿಯಾಗಿ ಭಯಬೀಳಿಸುತ್ತಿದ್ದ ಪೆಡಂಭೂತ - ''ಲವ್ ಫೇಲ್ಯೂರ್''. ಆದರೆ ಈಗ ಅದನ್ನೂ ಮೀರಿಸಿದ ಬ್ರಹ್ಮರಾಕ್ಷಸ ಹುಟ್ಟಿದ್ದಾನೆ, ಅವನೇ "ಫ್ರೆಂಡ್ ಝೋನ್"! ಲವ್ ಫೇಲ್ಯೂರ್ ಒಂದ್ ತರಹ ನೇಣ್ ಹಾಕ್ಕೊಂಡ್ ಸಾಯೋ ಸಾವು. ಟಕ್ ಅಂತ ಮೇಲಿನ್ ಲೋಕದ್ ಟಿಕೆಟು! ಖೇಲ್ ಖತಂ-ದುಖಾನ್ ಬಂದ್. ಮುಗೀತ್! ಆದ್ರೆ ಫ್ರೆಂಡ್ ಝೋನ್ ಇದ್ಯಲ್ಲ, ಇದು ಆರಕ್ ಏರ್ದೇ ಮೂರಕ್ ಇಳಿದೆ, ಹಾರ್ಟನ್ನ ಗರಗಸದಲ್ಲಿ ಪರಪರ ಅಂತ (ಕೆರ್ಕೊಳ್ಳೊದ್ ಅಲ್ಲ!) ಸ್ಲೋ ಮೋಶನ್ ಅಲ್ಲಿ ತುಂಡ್ ಮಾಡೊ ಪ್ರಾಸೆಸ್ಸು

"ನಿನ್ ಹತ್ರ ನಾನ್ ಯಾವ್ದೇ ಸೀಕ್ರೆಟ್ ಮುಚ್ಚಿಡಲ್ಲ ಗೊತ್ತ!"
"ನೀನು ಸಕತ್ ಒಳ್ಳೆ ಹುಡ್ಗ ಕಣೊ"
"ನಿನ್ ಕೈ ಹಿಡಿಯೋ ಹುಡುಗಿ ಲಕ್ಕಿ ಕಣೊ"
"ಮನೇಲಿ ಅಮ್ಮನ್ ಹತ್ರ ನಿನ್ ಬಗ್ಗೆನೇ ಮಾತಾಡ್ತಿದ್ದೆ"
"ನೀನ್ ಅಂದ್ರೆ ನಂಗ್ ತುಂಬಾ ಇಷ್ಟ ಕಣೊ.." 

ಇಷ್ಟ್ ಕೇಳ್ಸ್ಕೊಳ್ತ ಸ್ವರ್ಗ ಇನ್ನೇನ್ ರಪ್ಪಂತ ಪಾಸು ಆಗ್ಬೇಕು, ಅಷ್ಟರಲ್ಲಿ ".. ಆದ್ರೆ as a ಫ್ರೆಂಡ್ ಕಣೊ" ಅಂತ ಬಾಂಬ್ ಹಾಕ್ತಾರೆ! ನಾವುನು ಗೆಳೆತನ ಹಾಳಾಗ್ದೆ ಇರ್ಲಿ ಅನ್ಕೊಂಡು, ಭಾವನೆಗಳಿಗೆ ಕಣ್ಣ ಮುಚ್ಚಾಲೆ ಆಡೋಕ್ ಹೇಳಿ, ಏನು ಆಗಿಲ್ಲ ಅನ್ನೋ ತರಹ ಮ್ಯಾನೇಜ್ ಮಾಡ್ಕೊಂಡು, ಅವ್ಳಿಗ್ ಬಾಯ್ ಫ್ರೆಂಡ್ ಸಿಕ್ಕಿ, ಅವ್ಳು ಕಮಿಟ್ ಆಗಿ, ಅವ್ರು ಯಾವ್ ಮೂವಿಗ್ ಹೋದ್ರು, ಎಲ್ಲಿಗ್ ಶಾಪಿಂಗ್ ಹೋದ್ರು, ವ್ಯಾಲೆಂಟೈನ್ಸ್ ಡೇ ಗೆ ಏನ್ ಪ್ಲಾನ್ ಮಾಡ್ತಿದಾರೆ ಅಂತ ಅವ್ಳ್ ಹೇಳೋದನ್ನ ಕೇಳ್ಸ್ಕೊಂಡು, ಅವ್ಳ್ ಹುಡ್ಗನ್ ಹುಟ್ಟು ಹಬ್ಬಕ್ಕೆ ಏನ್ ಉಡುಗೊರೆ ಕೊಡೋದು ಅಂತ ಸಜೆಸ್ಟ್ ಮಾಡಿ, ಅದ್ರದ್ ಶಾಪಿಂಗ್ ಗೂ ಅವ್ಳ್ ಜೊತೆ ಹೋಗಿಅವ್ನ್ ಶರ್ಟ್ ಸೈಜ್ ಮತ್ತೆ ನಮ್ ಶರ್ಟ್ ಸೈಜ್ ಒಂದೇ ಅಂತ ಸಕ್ಕತ್ತಾಗಿರೋ ಶರ್ಟನ್ನ ಅವ್ಳು ನಮ್ಮ ಬೆನ್ನ ಹಿಂದೆ ಹಿಡ್ದು ಸರಿ ಹೊಂದತ್ತಾ ಅಂತ ಅಳತೆ ಮಾಡಿ, ಅವ್ಳಿಗ್ ಕಾಲ್ ನೋವ್ ಆಗೋದ್ ಯಾಕೆ ಅಂತ ಬಿಲ್ ಪೇ ಮಾಡೋಕ್ ಕ್ಯೂನಲ್ಲಿ ನಾವೇ ನಿಂತು, ಅವ್ನ್ ಹುಟ್ಟುಹಬ್ಬದ್ ದಿನ ಇವ್ಳು ಸರ್ಪ್ರೈಸ್ ವಿಸಿಟ್ ಕೊಡೋಕ್ಕೆ, ಫ್ರೀ ರೈಡ್ ಇಲ್ದೆ ಇದ್ರೂ ಊಬರ್ ಕ್ಯಾಬ್ ಬುಕ್ ಮಾಡಿ ಕಳ್ಸಿ, ಡಿನ್ನರ್ ಡೇಟ್ ಗೆ ಪ್ಲೇಸ್ ಸಜೆಸ್ಟ್ ಮಾಡು ಅಂದಾಗ ನಾವ್ ಅವ್ಳ್ ಜೊತೆ ಫಸ್ಟ್ ಡಿನ್ನರ್ ಡೇಟ್ ಗೆ ಎಲ್ಲಿಗ್ ಹೋಗ್ಬೇಕು ಅಂತ ಪ್ಲಾನ್ ಮಾಡಿದ್ವೋ ಅದೇ ರೋಮ್ಯಾಂಟಿಕ್ ಜಾಗನ ಸಜೆಸ್ಟ್ ಮಾಡಿ, ಅವ್ರ್ ಅಲ್ಲಿ ತೆಕ್ಕೊಳ್ಳೊ ಸೆಲ್ಫಿನ ವಾಟ್ಸ್ ಆಪ್ ನಲ್ಲಿ ನೆಟ್ ಸ್ಲೋ ಇದ್ರೂ ಡೌನ್ಲೋಡ್ ಮಾಡಿ, "ಸೂಪರ್ ಪಿಕ್ ಕಣೆ" ಅಂತ ರಿಪ್ಲೈ ಮಾಡಿ , ಫುಲ್ ಎಗ್ಸೈಟ್ಮೆಂಟಲ್ಲಿ "ಥಾಂಕ್ ಯು ಸೋ ಮಚ್ ಕಣೊ.. ಪ್ಲೇಸ್ ಸೂಪರ್ ಆಗಿತ್ತು" ಅಂತ ಅವ್ಳ್ ಹೇಳೊದ್ನ ಕೇಳ್ಸ್ಕೊಂಡು ಖುಷಿ ಪಡೊದೊ ದುಃಖ ಪಡೊದೊ ಗೊತ್ತಾಗ್ದೆ, ಹರಳೆಣ್ಣೆ ಕುಡ್ದವ್ರ್ ಹಾಗೆ ಸ್ಮೈಲ್ ಕೊಟ್ಕೊಂಡು, "ನನ್ ಹುಡ್ಗಂಗೂ ನೀನ್ ಅಂದ್ರೆ ಇಷ್ಟ ಗೊತ್ತಾ" ಅನ್ನೋ ಡೈಲಾಗ್ ಗೆ ತಲೆ ಅಲ್ಲಾಡ್ಸ್ಕೊಂಡು, ಕೊನೆಗ್ ಒಂದ್ ದಿನ ಅವ್ಳ್ ರಿಲೇಶನ್ ಶಿಪ್ ಬ್ರೇಕ್ ಅಪ್ ಆದಾಗ, ಕಾಫಿ ಡೇ ಲೋ, ಡೊಮಿನೋಸ್ ಅಲ್ಲೋ ಪಕ್ಕದಲ್ ಕೂರ್ಸಿ, ಯಾರ್ಯಾರೋ ದೊಡ್ಡವರು ಹೇಳಿದ್ ನುಡಿಮುತ್ತುಗಳ್ಣ ಉರು ಹೊಡ್ದು, ಸಾಫ್ಟ್ ಟೋನ್ ಅಲ್ ಹೇಳಿ ಸಮಾಧಾನ ಮಾಡಿ, ರಾತ್ರಿ ಮೆಸೇಜ್ ಅಲ್ಲೂ ಕಿತ್ತೋಗಿರೋ ಜೋಕ್ಸ್ ಕಳ್ಸಿ ಅವ್ಳು ನಗೋ ತರಹ ಮಾಡಿ, ಅವ್ಳನ್ನ ಬ್ಯಾಕ್ ಟು ನಾರ್ಮಲ್ ಆಗ್ಸಿ; ಅವ್ಳು ಇನ್ನೊಂದ್ ಹುಡ್ಗನ್ನ ಹುಡ್ಕೋ ತನಕ ಜೊತೆಗಿರೋದು ಅಂದ್ರೆ ತಮಾಷೇನ?! ನನ್ನ ಮಗಂದ್ ಲವ್ ಫೇಲ್ಯೂರ್ ಗಿಂತ ಸಿಕ್ಕಾಪಟ್ಟೆ ಡೇಂಜರಸ್ ಇದು! ಅಲ್ವಾ


ಇದ್ರ್ ಬಗ್ಗೆನೇ ಹಂಗೆ ಯೋಚ್ನೆ ಮಾಡ್ತಾ ಇದ್ದೆ. ಲವ್ ಫೇಲ್ಯೂರ್ ಆದವ್ರಿಗೆನೋ ದೇವ್ ದಾಸ್ ಅಂತ ಬಿರಿದು ಕೊಟ್ ಬಿಡ್ತಿವಿ. ಅದಕ್ಕಿಂತ ದೊಡ್ ತಲೆ ನೋವ್ ಅನುಭವ್ಸೋ; ಫ್ರೆಂಡ್ ಝೋನ್ ಅಲ್ಲಿರೋರ್ಗೆ ಯಾವ್ದೇ ಬಿರುದು ಇಲ್ವಲ್ಲ! ಏನ್ ಕೊಡಬಹುದು ಅಂತ! ಆಗ್ ನಂಗ್ ನೆನಪಾದದ್ದು ಎರ್ಡ್ ಹಾಡ್ಗಳು.

.  ಡೇವಿಡ್ ಚಿತ್ರದ್ದು 'ಕಣವೇ ಕಣವೇ'


. ಇಮ್ರಾನ್ ಹಶ್ಮಿದು 'ಮೇ ರಹೂ ಯಾ ರಹೂ'


ಫ್ರೆಂಡ್ ಝೋನ್ದು  anthem ಅಂತಾನೆ ಅನ್ಸ್ಕೊಂಡಿರೊ ಎರ್ಡ್ ಹಾಡಲ್ಲೂ, ಹುಡ್ಗ; ಹುಡ್ಗೀನ ತುಂಬಾ ಇಷ್ಟ ಪಡ್ತಾನೆ. ಆದ್ರೆ ಹುಡ್ಗಿ ಬೇರೆಯವನನ್ನ ಮದ್ವೆ ಆಗ್ತಾಳೆ. ಬೇರೆ ಆಯ್ಕೆ ಇಲ್ದೆ ಹುಡ್ಗ ಫ್ರೆಂಡ್ ಝೋನ್ ಎಂಟರ್ ಆಗ್ತಾನೆ! ಎರ್ಡ್ ಹಾಡಲ್ಲೂ ಫ್ರೆಂಡ್ ಝೋನ್ ವಿಷ್ಯ ಬಿಟ್ಟು ಇನ್ನೊಂದ್ ಸಾಮ್ಯತೆ ಇದೆ. ಗಮನಿಸಿದ್ರ? ಎರಡರಲ್ಲೂ ಫ್ರೆಂಡ್ ಝೋನ್ ಆಗೋ ಹುಡ್ಗನ್ ಹೆಸ್ರು ಡೇವಿಡ್! ಎರ್ಡ್ ಹಾಡ್ಗಳು ಫ್ರೆಂಡ್ ಝೋನ್ದು anthem, ಎರಡರಲ್ಲೂ ಹುಡ್ಗನ್ ಹೆಸ್ರು ಡೇವಿಡ್.. ಸೊ.. ನನ್ ಕಂಕ್ಲೂಶನ್ ಏನಪ್ಪಾ ಅಂದ್ರೆ.. ಹುಡ್ಗಿ ಕೈ ಕೊಟ್ ಹುಡುಗ್ರು; ದೇವ್ ದಾಸ್ ಆದ್ರೆ.. ಹುಡ್ಗಿರಿಂದ ಫ್ರೆಂಡ್ ಝೋನ್ ಗೆ ತಳ್ಳಲ್ ಪಡುವಂತಹ ಹುಡುಗ್ರು.. "ಡೇವಿಡ್"! ಹೆಂಗೆ? ಓಕೆ ನಾಡೇವಿಡ್ ಡೇವಿಡ್ ಡೇವಿಡ್ ಅಂತ ಕೂಗಿ ನಾಮಕರಣ ಮಾಡಿ ಬಿಡ್ಲಾ? 


Dedicated to all the Davids out there :P