Wednesday 4 February 2015

ಸಭ್ಯ ಗೃಹಸ್ಥ


ಎಂದಿನಂತೆ ಇಂದೂ ಮುಂಜಾವಿನ ಚಳಿಯಲಿ
ಹೊರಗೆ ಮಂಜಿನ ಹನಿ ಉದುರುತಿತ್ತು
ಒಲೆಯ ಮೆಲೆ ಹಾಲು ಕುದಿಯುತಿತ್ತು
ವೆಂಕಟೇಶ್ವರ ಸುಪ್ರಭಾತ ಗುನುಗುತಿತ್ತು

ಖಡಕ್ ಇಸ್ತ್ರಿ ಹಾಕಿದ ಬಟ್ಟೆ
ನನಗಾಗಿ ಬೀರುವಿನಲಿ ಕಾಯುತಿತ್ತು
ಪಾಲಿಶ್ ಮಾಡಿದ shoes ಅಂತು
ಧ್ರುವತಾರೆಯಂತೆ ಮಿನುಗುತಿತ್ತು

ಏನೋ ಒಂದು ತೆರನಾದ ಯೋಚನೆ, ಯಾತನೆ
ಮನದ ಕಿಟಕಿಯಲ್ಲಿ ಇಣುಕುತಿತ್ತು
ಬಸವನಹುಳು ಕೂಡ ನನ್ನ ನಡಿಗೆಗೆ
ಸ್ಪರ್ಧೆ ಒಡ್ಡುತ್ತಾ ಮುಂದೆ ಮುಂದೆ ಸಾಗುತಿತ್ತು

ಸಂಸ್ಥೆಯಲ್ಲಿ ಹಲವಾರು ವರ್ಷ ದುಡಿದು
ನಿವೃತ್ತಿ ಹೊಂದುವ ದಿನ ಇದು
ದಿನ ನಡೆವ ದಾರಿ, ಜನ, ಜಾಗ
ಇಂದು ಭಿನ್ನವಾಗಿ ಕಾಣುತಿತ್ತು

ದಿನ ಬೆಳಗಾದರೆ ಮಿಂಚಂಚೆ ಪೆಟ್ಟಿಗೆಯಲ್ಲಿ 
ಬರಿಯ weekly status report, deadline ಅನ್ನು
ನೋಡುತ್ತಿದ್ದವನಿಗೆ ಅದೆನೋ ಆನಂದ
ಶುಭವಿದಾಯದ ಸಂದೇಶಗಳ ನೋಡಲು

ಸಹೋದ್ಯೋಗಿಗಳ ಮೊಗದಲ್ಲಿ ಧನ್ಯತಾಭಾವ
Desktop ಮೇಲಿನ wallpaper ನಂತೆ ಕಾಣಿಸುತಿತ್ತು
ಎಲ್ಲರೂ ಕೂಡಿ ಉಡುಗೊರೆ ನೀಡಿ
ನನ್ನ ವೃತ್ತಿ ಜೀವನಕ್ಕೆ ತೆರೆ ಎಳೆದರು

ವಿದ್ಯಾಭ್ಯಾಸದ ಸಾಲ ತೀರಿಸಲು ದುಡಿಯ ಹೊರಟಿದ್ದೆ
ಬಳಿಕ ತಂದೆ ತಾಯಿಗಾಗಿ ದುಡಿದೆ
ಮಡದಿ ಮಕ್ಕಳಿಗಾಗಿ ದುಡಿಯುತ್ತಾ ಹೋದೆ
ಅವರ ಬಯಕೆಗಳ ಬಂಡಿಗೆ ಚಾಲಕನಾದೆ

ಇಂದು ನೋಡುಗರ ಕಣ್ಣಿಗೆ, ನಾನೊಬ್ಬ ಸಭ್ಯ ಗೃಹಸ್ಥ
ಆದರೆ ಯಾರಿಗೂ ತಿಳಿಯದ ಸತ್ಯವೊಂದಿದೆ
ನಾನೊಬ್ಬ 'ಕೊಲೆಗಾರ'!
ನನ್ನೊಳಗಿನ ಕಲೆಯನ್ನ, ನನ್ನ ಕನಸಿನ ಕೂಸನ್ನ
ಕೊಂದ 'ಕೊಲೆಗಾರ'!

- ನಿರುಪಯೋಗಿ