Thursday 19 May 2016

ರಾಮನವಮಿಯ ದಿನ ವಿಜಯದಶಮಿ!


          "ರಾಮನವಮಿ ಇನ್ ಟೂ ಡೇಸ್" "ಪಾನಕ ಪಾನಕ ಪಾನಕ".. ರಾಮನವಮಿ ಹತ್ತಿರವಾಗುತ್ತಿದ್ದಂತೆ ಗೆಳೆಯ ಸ್ಕಂದ WhatsApp ಗುಂಪಿನ ಹೆಸರನ್ನು ಹೀಗೆಲ್ಲಾ ಬದಲಾಯಿಸಲು ಶುರು ಮಾಡಿದ್ದ. ನನ್ನೂರು ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ, ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ, ರಾಮನವಮಿ ಬಹಳ ಸಡಗರದಿಂದ ನಡೆವ ಹಬ್ಬ. ಬೆಳಿಗ್ಗೆ ಇಂದ ಮಧ್ಯಾಹ್ನದವರೆಗೆ ನಾವುಗಳೇ ಎಲ್ಲರಿಗೂ ಪಾನಕ ಹಂಚುತ್ತಿದ್ದೆವು. ಮಧ್ಯಾಹ್ನ ಪೂಜೆಯ ಬಳಿಕ ಮಹಾಸಮಾರಾಧನೆ, ಸಂಜೆ ಚಿಕ್ಕ ಪಲ್ಲಕ್ಕಿ ಉತ್ಸವ, ರಾತ್ರಿ ದೊಡ್ಡ ಪಲ್ಲಕ್ಕಿ ಉತ್ಸವ, ಭಜನೆ, ರಾತ್ರಿ ಪೂಜೆ, ಫಲಾಹಾರದೊಂದಿಗೆ ರಾಮನವಮಿ ಮುಕ್ತಾಯ! ಆಹಾ! ಅದೆಂತಹ ಸಂಭ್ರಮ! ಊರು ಬಿಟ್ಟು ಇಂಜಿನಿಯರಿಂಗ್ ಗೆ ಬೆಂಗಳೂರಿಗೆ ಬರುವ ತನಕ ರಾಮನವಮಿಯ ಸಡಗರ ಇದ್ದಿದ್ದು ಹೀಗೆಯೆ!

          ೨೦೦೯ ರಲ್ಲಿ ಬಿ.ಎಂ.ಎಸ್ ಕಾಲೇಜು ಸೇರಿದ ಬಳಿಕ, ರಾಮನವಮಿ ಆಚರಣೆ ಆಗುತ್ತಿದ್ದದ್ದು ನಮ್ಮ ಮೆಕ್ಯಾನಿಕಲ್ ವರ್ಕ್ ಶಾಪ್ನಲ್ಲಿ ವಿತರಿಸುತ್ತಿದ್ದ ಪಾನಕ, ಮಜ್ಜಿಗೆ ಮತ್ತು ಕೋಸಂಬರಿಯನ್ನು ತಿಂದು ಕಾಲೇಜಿನ ಹಿಂಭಾಗದಲ್ಲಿರುವ ಶ್ರೀರಾಮ ಮಂದಿರಕ್ಕೆ ಹೋಗಿ ಅಲ್ಲಿಯೂ ಮಜ್ಜಿಗೆ, ಪಾನಕ ಕುಡಿಯುವುದರ ಮೂಲಕ! ಕಳೆದ ವರ್ಷ ರಾಮನವಮಿ ದಿನ, ನಾವು ಬೀದಿನಾಟಕಕ್ಕಾಗಿ, ಮಲೆ ಮಹಾದೇಶ್ವರ ಬೆಟ್ಟದೆಡೆಗೆ ಸಾಗುವಾಗ ಕನಕಪುರದ ಬಳಿ ಶನಿಮಹಾತ್ಮನ ದೇವಸ್ಥಾನದಲ್ಲಿ ಪಾನಕ ಹಂಚುತ್ತಿದ್ದನ್ನು ನೋಡಿ, ಗಾಡಿ ನಿಲ್ಲಿಸಿ, ಪಾನಕ ಮಜ್ಜಿಗೆ ಕುಡಿದು ಮುಂದೆ ಸಾಗಿದ್ದೆವು. ಆದರೆ ಯಾವತ್ತೂ ರಾಮನವಮಿ ಎಂದರೆ ಕ್ರೇಜ್ ಇದ್ದಿರಲಿಲ್ಲ. ಪಾನಕ ಮಜ್ಜಿಗೆಯ ನೆಪ ಮಾಡಿಕೊಂಡು ರಾಮನವಮಿಗಾಗಿ ವಾರಗಟ್ಟಲೆ ಕಾದ ನೆನಪೂ ಇಲ್ಲ! ಆದರೆ ಈ ಬಾರಿ ಅದು ಬದಲಾಯಿತು.

          ರಾಮನವಮಿಗೆ ಸ್ವಲ್ಪ ದಿನಗಳ ಹಿಂದೆ ಜರ್ಮನಿಯಿಂದ ಹಿಂದಿರುಗಿದ ಗೆಳೆಯ ಸ್ಕಂದ, ಈ ಬಾರಿ ರಾಮನವಮಿಯಂದು ಎಲ್ಲೆಲ್ಲ ಪಾನಕ ಹಂಚುತ್ತಾರೋ ಅಲ್ಲೆಲ್ಲ ಹೋಗಿ ಹೊಟ್ಟೆ ಮತ್ತು ನಾಲಿಗೆ ತಂಪು ಮಾಡಿಕೊಳ್ಳುವ ಪಣತೊಟ್ಟಿದ್ದ. WhatsApp ಗುಂಪಿನ ಹೆಸರನ್ನು "ರಾಮನವಮಿ ಇನ್ ಟೂ ಡೇಸ್" "ರಾಮನವಮಿ ಟುಮಾರೋ" "ಪಾನಕ ಪಾನಕ ಪಾನಕ" ಎಂದು ಬದಲಾಯಿಸುತ್ತಾ, ಎಲ್ಲೆಲ್ಲಾ ಪಾನಕ ಹಂಚುತ್ತಾರೆ ಎಂದು ಎಲ್ಲರ ಬಳಿ ಕೇಳಿ ಪಟ್ಟಿ ಮಾಡುತ್ತಾ, ನನ್ನಲ್ಲೂ ಪಾನಕದ ಆಸೆಯ ಕಿಡಿಯನ್ನು ಹಚ್ಚಿಸಿದ. ಎಲ್ಲಿಯ ತನಕ ಎಂದರೆ, ಆಫೀಸಿಗೆ ರಜೆ ಹಾಕಿ ರಾಮನವಮಿಗೆ ಊರಿಗೆ ಹೋಗಿ ಬಿಡೋಣ ಎನ್ನುವಷ್ಟು ಆಸೆ ಆಗಿ ಬಿಟ್ಟಿತ್ತು! ಆದರೆ ಕಾರಣಾಂತರಗಳಿಂದ ಹೋಗಲಾಗಲಿಲ್ಲ.

          ರಾಮನವಮಿ ಬಂತು. ದಾರಿಯಲ್ಲಿ ಸಿಗುವ ಆಂಜನೇಯನ ದೇವಸ್ಥಾನದಲ್ಲಿ ಪಾನಕ ಕುಡಿಯುವ ಲೆಕ್ಕಾಚಾರ ಮಾಡಿಕೊಂಡು ಆಫೀಸಿಗೆ ಹೊರಟೆ. ನೋಡಿದರೆ ನನ್ನ ರೂಮಿನ ಬಳಿಯ ವೆಂಕಟರಮಣನ ದೇವಸ್ಥಾನದ ಮುಂದೆಯೇ ಪೆಂಡಾಲ್ ಹಾಕಿ ಪಾನಕ ಹಂಚುತ್ತಿದ್ದರು. ಎಲ್ಲಿಲ್ಲದ ಖುಷಿ ನನಗೆ! ಸೈಕಲನ್ನು ಅಲ್ಲಿಯೇ ಪಕ್ಕದಲ್ಲಿ ನಿಲ್ಲಿಸಿ ಪಾನಕದ ಕ್ಯೂನಲ್ಲಿ ನಿಂತೆ. ಅಲ್ಲಿ ಕಾಯಿ ಹೋಳಿಗೆ, ಕೋಸಂಬರಿ, ಬಜ್ಜಿ, ರೈಸ್ ಬಾತ್, ಮಜ್ಜಿಗೆ ಮತ್ತು ಪಾನಕ ಕೊಟ್ಟರು! ಗಾಂಧೀ ಕ್ಲಾಸ್ ಸೀಟ್ ಹುಡ್ಕೊಂಡ್ ಹೋದವನಿಗೆ ಬಾಲ್ಕನಿ ಸೀಟ್ ಸಿಕ್ಕಷ್ಟು ಆನಂದ ಆಯ್ತು. ಹಾಗೇ ತಿನ್ನುತ್ತಾ, ತಿಂದು ಮುಗಿಸಿದ ಮೇಲೆ ತಟ್ಟೆ ಲೋಟವನ್ನು ಎಸೆಯುವುದು ಎಲ್ಲಿ ಎಂದು ಯೋಚಿಸುತ್ತ ಇರಬೇಕಾದರೆ, ರಸ್ತೆ ದಾಟಿದರೆ ಸಿಗುವ ದೇವಸ್ಥಾನದ ಪಕ್ಕದಲ್ಲಿ ಮೂರು ದೊಡ್ಡ ಕಸದ ಬುಟ್ಟಿಗಳು ಕಂಡವು. ಅಯ್ಯೋ! ಅವುಗಳಲ್ಲಿ ಒಂದು ಕಸದ ಬುಟ್ಟಿಯನ್ನು ಇತ್ತ ಕಡೆ ತಂದು ಇಟ್ಟಿದ್ದರೆ ಇಲ್ಲಿ ತಿನ್ನುತ್ತಿದ್ದವರಿಗೆ ಸುಲಭವಾಗುತ್ತಿತ್ತಲ್ಲ ಎಂದು ಯೋಚಿಸುವಷ್ಟರಲ್ಲಿ ಯಾರೋ ಪುಣ್ಯಾತ್ಮ ಅಲ್ಲಿಂದ ಒಂದು ಕಸದ ಬುಟ್ಟಿಯನ್ನು ತಂದು ಪೆಂಡಾಲ್ ಬಳಿ ಇಟ್ಟ.

          ವಿಪರ್ಯಾಸ ಅಂದರೆ ಕೆಲವರು ತಟ್ಟೆ ಲೋಟವನ್ನು ಕಸದ ಬುಟ್ಟಿಗೆ ಹಾಕದೆ ಅದರ ಪಕ್ಕದಲ್ಲಿ ಎಸೆಯಲಾರಂಭಿಸಿದರು. ಹಾಗೇ ನೋಡುತ್ತಿರಬೇಕಾದರೆ ಒಳ್ಳೆಯ ಸೀರೆ ಉಟ್ಟ, ವಿದ್ಯಾವಂತೆಯಂತಿದ್ದ ಓರ್ವ ಹೆಂಗಸು ಕಸದ ಬುಟ್ಟಿಯ ಬಳಿ ತಟ್ಟೆಯನ್ನು ಎಸೆದಳು. ನನಗೇಕೋ ಸ್ವಲ್ಪ ರೇಗಿ, "ಅಲ್ಲೇ ಕಸದ್ ಬುಟ್ಟಿ ಇದ್ಯಲ್ಲ ಮೇಡಮ್" ಅಂದೆ ಸ್ವಲ್ಪ ಖಾರವಾಗಿ. ಇವನ್ಯಾವನೋ ಹುಚ್ ನನ್ ಮಗ ಅನ್ನೋ ತರ ಲುಕ್ ಕೊಟ್ಟು ಹೋದಳು ("ಕನ್ನಡ್ ಗೊತ್ತಿಲ್ಲ" ಪಾರ್ಟಿ ಇದ್ದಿರಲೂ ಬಹುದು!). ಇದಾಗಿ ಸ್ವಲ್ಪ ಹೊತ್ತಿನಲ್ಲೇ ಬಹಳಷ್ಟು ಜನ ಕಸದಬುಟ್ಟಿಯ ಪಕ್ಕದಲ್ಲೇ ತಟ್ಟೆ ಲೋಟ ಎಸೆದು, ದೇವಸ್ಥಾನದ ಪಕ್ಕದಲ್ಲೇ ಕೈ ತೊಳೆಯಲು ನಳ್ಳಿ ಇದ್ದರೂ, ಆ ಕಸದ ರಾಶಿಯಲ್ಲಿ ಕುಡಿಯುವ ನೀರಿಂದ ಕೈ ತೊಳೆಯಲು ಶುರು ಮಾಡಿ, ಅಲ್ಲೊಂದು ಚಿಕ್ಕ ಕಸದ ರಾಶಿ ಮಾಡಿ ಹಾಕಿದರು. ಅಷ್ಟು ದೊಡ್ಡ ಕಸದ ಬುಟ್ಟಿ ಇದ್ದರೂ ಅದನ್ನು ಬಳಸದೆ ಅದರ ಪಕ್ಕ ಕಸದ ರಾಶಿ ಮಾಡಿದ ತಿಟ್ಟ(ಫೊಟೊ) ತೆಗೆದು ಫೇಸ್ಬುಕ್ಕಿನಲ್ಲಿ ಇದರ ಬಗ್ಗೆ ಬರೆಯುವ ಯೋಚನೆಯಾಗಿ ತಿಟ್ಟ ತೆಗೆಯಲು ಮನಸ್ಸು ತುಡಿಯಿತು. ಆದರೆ ಅದರ ಬೆನ್ನಲ್ಲಿಯೇ ಒಂದು ಪ್ರಶ್ನೆ ಮೂಡಿತು. ಇದರ ಬಗ್ಗೆ ಫೇಸ್ಬುಕ್ಕಿನಲ್ಲಿ ಗೋಳಾಡಿಕೊಂಡು ಸಾಧಿಸುವುದಾದರೂ ಏನನ್ನು ಎಂದು! ದೇಶದಲ್ಲಿ ಸಮಸ್ಯೆ ಇರುವುದು ಎಲ್ಲರಿಗೂ ಗೊತ್ತು. ಮತ್ತೆ ಅದರ ಬಗ್ಗೆಯೇ ಮಾತಾಡಿ ನಾನು ಏನು ಕಿಸಿದಂತಾಗುತ್ತದೆ ಎಂದೆನಿಸಿ ಸುಮ್ಮನಾದೆ. ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ಅಪರೂಪಕ್ಕೆ ಯಾಕೋ ಮೆದುಳು ಇಂಗ್ಲಿಷ್ನಲ್ಲಿ ವಾಕ್ಯರಚನೆ ಮಾಡಿತ್ತು! "Either you can crib about it or you can fix it" ಇದು ಸೊಲ್ಲರಿಮೆ (ವ್ಯಾಕರಣ) ಬದ್ಧವಾಗಿದೆಯೇ ಇಲ್ಲವೇ ನನಗೆ ಗೊತ್ತಿಲ್ಲ. ಆದರೆ ಈ ವಾಕ್ಯ ನನ್ನ ತಟ್ಟೆ ಲೋಟವನ್ನು ಕಸದ ಬುಟ್ಟಿಗೆ ಹಾಕುವಾಗ ನನ್ನನ್ನು ಅಪಾರವಾಗಿ ಕಾಡಿತು.

          ಕಸದ ರಾಶಿಯಿಂದ ತಟ್ಟೆ ಲೋಟಗಳನ್ನು ಆರಿಸಿ ಕಸದಬುಟ್ಟಿಗೆ ಹಾಕಿ ಆ ಜಾಗವನ್ನು ಶುಚಿಗೊಳಿಸಿದರೆ ಮುಂದೆ ಕಸ ಎಸೆಯುವವರಾದರೂ ಕಸದ ಬುಟ್ಟಿಗೆ ಎಸೆಯಬಹುದು ಎಂದು ಮನಸ್ಸು ಹೇಳಿದರೂ, ಇನ್ನೊಂದು ಕಡೆ "ನಾನ್ಯಾಕ್ ಮಾಡ್ಬೇಕು" "ಆ ಕಡೆ ಈ ಕಡೆ ಇರೋರು ಏನಾದ್ರೂ ಅನ್ಕೊಂಡ್ರೆ" "ಇದನ್ನ ಶುಚಿ ಮಾಡೊ ಗೋಜಲ್ಲಿ ಬಟ್ಟೆ ಗಲೀಜಾದರೆ?" ಇತ್ಯಾದಿ ಇತ್ಯಾದಿ ಯೋಚನೆಗಳು ಹಿಂದೇಟು ಹಾಕಲು ಪ್ರೇರೇಪಿಸಿತು. ಕೊನೆಗೆ ಆದದ್ದಾಗಲಿ ಎಂದು ಫೇಸ್ಬುಕ್ಕಿನ 'ಅಗ್ಲಿ ಇಂಡಿಯನ್' ಗುಂಪಿನ ಧ್ಯೇಯ ವಾಕ್ಯ "ಬಾಯ್ ಮುಚ್ಕೋ - ಕೆಲಸ ಹಚ್ಕೊ" ನೆನಪಾಗಿ, ಆದದ್ದಾಗಲಿ ಎಂದು ಕಸದ ರಾಶಿಯಿಂದ ತಟ್ಟೆ ಲೋಟಗಳನ್ನೆಲ್ಲಾ ಎತ್ತಿ ಕಸದ ಬುಟ್ಟಿಗೆ ಹಾಕಿಯೇ ತೀರಲು ನಿರ್ಧರಿಸಿ, ರಾಶಿಯಲ್ಲಿದ್ದ ಎಲ್ಲ ತಟ್ಟೆ ಲೋಟಗಳನ್ನು ಕಸದ ಬುಟ್ಟಿಗೆ ಹಾಕತೊಡಗಿದೆ. ಇದನ್ನು ಗಮನಿಸಿಯೋ ಏನೋ, ಅಂದಾಜು ನಲವತ್ತರ ಆಸುಪಾಸಿನ ಇನ್ನೊಬ್ಬರು ಬಂದು ಶುಚಿ ಮಾಡುವ ಕೆಲಸಕ್ಕೆ ಕೈ ಜೋಡಿಸಿದರು. ಇಬ್ಬರೂ ಸೇರಿ ಅಲ್ಲಿ ಬಿದ್ದಿದ್ದ ತಟ್ಟೆ ಲೋಟಗಳನ್ನು ಕಸದ ಬುಟ್ಟಿಗೆ ಹಾಕಿದೆವು. ನಾನು ದೇವಸ್ಥಾನದ ಪಕ್ಕಕ್ಕೆ ಹೋಗಿ ಕೈ ತೊಳೆಯುತ್ತಿದ್ದಾಗ ಆ ವ್ಯಕ್ತಿ ಬಂದು ನನ್ನ ಪರಿಚಯ ಕೇಳಿ ಕೊನೆಗೆ "ಪ್ರೌಡ್ ಟು ಸಿ ಸಮ್ ಒನ್ ಲೈಕ್ ಯು" ಅಂದರು. ಅವರಿಗೆ ನನ್ನಿ (ಧನ್ಯವಾದ)  ಹೇಳಿ ಸೈಕಲ್ ಏರಿ ಆಫೀಸ್ ಕಡೆಗೆ ಹೊರಟೆ.

          ಪ್ರತಿದಿನಕ್ಕಿಂತ ಅಂದು ಸೈಕಲ್ ತುಳಿಯುವಾಗ ಉತ್ಸಾಹ ಜಾಸ್ತಿಯೇ ಇತ್ತು. ಏನೋ ಓಂದು ತೆರನಾದ ಹೇಳಿಕೊಳ್ಳಲಾಗದ, ಹೊಟ್ಟೆ ಒಳಗೆ ಚಿಟ್ಟೆ ಬಿಟ್ಟಂತಹ ಅನುಭವ, ಸಮಾಧಾನ! "Either you can crib about it or you can fix it" ಈ ವಾಕ್ಯ ತಲೆಯಲ್ಲಿ ಗುನುಗುತ್ತಲೇ ಇತ್ತು. ಎಲ್ಲರ ಪಾಲಿಗದು ರಾಮನವಮಿಯೇ ಆದರೂ, ನನ್ನ ಪಾಲಿಗೆ, "ನಾನ್ಯಾಕ್ ಮಾಡ್ಬೇಕು" "ಬೇರೆಯವರು ಏನ್ ಅನ್ಕೊತಾರೆ" ಎಂಬಿತ್ಯಾದಿ ಎಕ್ಸ್ ಕ್ಯೂಸ್ ಗಳ ವಿರುದ್ಧ ನನಗೆ ಗೆಲುವನ್ನು ತಂದುಕೊಟ್ಟ ವಿಜಯ ದಶಮಿ ಆಯಿತು!