Monday 20 February 2017

ಸುಖ



ಗಾಂಧಿ ಬಜಾರಿನ ಅಂಗಡಿಗಳ ಮುಂದೆ ಬೇಡುತ್ತಿದ್ದ ಭಿಕ್ಷುಕನಿಗೆ ಚಳಿಯಲ್ಲಿ ನಡುಗುತ್ತಿದ್ದಾಗ ಹೊದ್ದುಕೊಳ್ಳಲು ಬಟ್ಟೆ ಇರಲಿಲ್ಲ.

ಇಂದು ಮುಂಜಾನೆ ಅವನು ತೀರಿಕೊಂಡ.

ಪಾಲಿಕೆಯವರು ಬಿಳಿ ಬಟ್ಟೆ ಹೊದಿಸಿ ಕರೆದೊಯ್ದರು.

ಸಾವಲ್ಲೆ ಸುಖವಿದೆ ಎಂದು, ಎಂದೂ ಕಣ್ತೆರೆಯದೆ ಬೆಚ್ಚನೆ ಮಲಗಿದ!

ನಗು ಮುಖ


ಬಂಧು ಬಾಂಧವ್ಯಗಳನ್ನೆಲ್ಲಾ ಬದಿಗಿರಿಸಿ, "ದುಡ್ಡೇ ದೊಡ್ಡಪ್ಪ" ಎಂದು ನೋಟಿನ ಕಂತೆಗಳ ಕಲೆಹಾಕುತ್ತಾ ಬಂದೆ.

ಅರಿವಿಲ್ಲದೆ ಎಲ್ಲರೂ ನನ್ನಿಂದ ದೂರಾದರು. ಇಂದು ನನ್ನ ಬಳಿ ಇರುವುದು ಒಂದೇ ಒಂದು ನಗು ಮುಖ.

ಅಪ್ಪ ಅಮ್ಮನದ್ದಲ್ಲ, ಹೆಂಡತಿ ಮಕ್ಕಳದ್ದಲ್ಲ, ಕಡೆಗೆ ನನ್ನದೂ ಅಲ್ಲ!

ನೋಟಿನ ಮೇಲಿರುವ ಗಾಂಧಿ ತಾತನದ್ದು!

ಕಣ್ಣಲಿ


ಲೇಖನಿಯಿಂದ ಇಳಿಯದ
ಪುಟಗಳ ಮೇಲೆ ಹರಿಯದ
ಹಾಡಾಗಿ ತೇಲದ
ನೂರಾರು ಕವಿತೆ ಬೆಚ್ಚನೆ
ಹುದುಗಿದೆ ನಿನ್ನ ಕಣ್ಣಲಿ!

ಪುಟ್ಟ ದೀಪ

ಹಚ್ಚ ಹೊರಟೆ ಪುಟ್ಟ ದೀಪವೊಂದ
ಕತ್ತಲ ಗೆಲ್ಲುವ ಭರಾಟೆಯಲಿ

ದೀಪ ಬೆಳಗಲೇ ಇಲ್ಲ! ಕಾರಣ;
ಎಣ್ಣೆಯ ಬದಲು ನೀರ ಹಾಕಿದ್ದೆ ಅವಸರದಲಿ

ಹೊಸ ಪ್ರೀತಿಯ ಬಂಡಿ

ತುಕ್ಕು ಹಿಡಿದ ತುಕಾಲಿ
ನೆನಪುಗಳ ಹಳಿಯ ಮೇಲೆ
ಎಷ್ಟು ದೂರ ಸಾಗೀತು
ಹೊಸ ಪ್ರೀತಿಯ ಬಂಡಿ?

ಲಾಗ್ ಇನ್- ಲಾಗ್ ಔಟ್

Credits - Google

"ನಾನ್ ಆಫೀಸಿಂದ ಹೊರಡ್ ಬೇಕಾದ್ರೆನೆ ಶುರುವಾಗ್ ಬೇಕಿತ್ತಾ ಈ ಮಳೆ? ಮನೆ ತಲುಪಿದ್ ಮೇಲ್ ಬಂದಿದ್ರೆ ಏನ್ ಆಗ್ತಿತ್ತು?" ಆತ ಗೊಣಗತೊಡಗಿದ.

ಇನ್ನು ಮುಂದೆ ಎಲ್ಲರ ಲಾಗ್ ಇನ್- ಲಾಗ್ ಔಟ್ ವೇಳೆ ನೋಡಿಕೊಂಡು ಕೆಲಸ ಮಾಡಬೇಕಾಯಿತಲ್ಲ ಎಂದು ವರುಣ ದೇವ ನಗತೊಡಗಿದ.

ಶ್ರೀಕೃಷ್ಣ

Credits : Google


ಹುಟ್ಟುವ ಮಗು ತನ್ನಂತೆ ಬೆಳ್ಳಗಿರಲಿ, ಗಂಡನಂತೆ ಕಪ್ಪಗಿರುವುದು ಬೇಡ ಎಂದು ಮನೆ ದೇವರಾದ ಉಡುಪಿ ಶ್ರೀಕೃಷ್ಣನಲ್ಲಿ ಹರಕೆ ಹೊತ್ತಳು.

ಚಕಿತಗೊಂಡ ಶ್ರೀಕೃಷ್ಣ ಪರಮಾತ್ಮ ನಸುನಕ್ಕು ತನ್ನ ಮೈಬಣ್ಣವ ಒಮ್ಮೆ ನೋಡಿಕೊಂಡ!