Wednesday 10 February 2016

"NaMo ನಮಃ" ಎಂದರಷ್ಟೇ ಸಾಕೆ?

        
           ಈ ವಿಷಯದ ಬಗ್ಗೆ ಬಹಳ ಹಿಂದೆಯೇ ಬರೆಯಬೇಕೆಂದುಕೊಂಡಿದ್ದರೂ, ಬೇಡ ಎಂದು ದಿನ ದೂಡುತ್ತಾ ಬಂದೆ. ಆದರೆ ಈ ಕೆಲ ದಿನಗಳಿಂದ ನಾ ಕಂಡ ಘಟನೆಗಳಿಂದ ಸುಮ್ಮನಿರಲಾಗದೆ, ತಲೆಯಲ್ಲಿ ಹರಿದಾಡುತಿಹ ಯೋಚನೆಗಳಿಂದ ಲೇಖನಿಯ ಶಾಯಿಯನ್ನು ಹಾಳೆಗೆ ತಳ್ಳುತ್ತಿರುವೆ!

          ನಾವು ಹಲವಾರು ಹಬ್ಬ ಹರಿದಿನಗಳನ್ನು ಆಚರಿಸಿದರೂ, ಕೆಲವು ಹಬ್ಬಗಳು ನಮ್ಮ ಮನಸ್ಸಿಗೆ ಹತ್ತಿರವಾಗಿ ನಾವು ಪ್ರತೀ ವರ್ಷ ಆ ದಿನದ ಸಂಭ್ರಮಕ್ಕಾಗಿ ಕಾಯುವಂತೆ ಮಾಡುತ್ತವೆ. ನಾನು, ನನ್ನ ನೆಚ್ಚಿನ ಹಬ್ಬಗಳು ಅಂತ ಒಂದು ಪಟ್ಟಿ ಮಾಡಿದರೆ ಬಹುಷಃ ನಮ್ಮೂರಿನ 'ಕೊಡಿ ಹಬ್ಬ' ಮತ್ತು ಊರಿನಲ್ಲಿಯೇ ನವರಾತ್ರಿಯ ಸಂದರ್ಭದಲ್ಲಿ ಆಚರಿಸುವ 'ಶಾರದಾ ಪೂಜಾ ಮಹೋತ್ಸವ' ಮೊದಲೆರಡು ಸ್ಥಾನವನ್ನು ಗಳಿಸುತ್ತವೆ! ಕೊಡಿ ಹಬ್ಬವು ಒಂದು ವರ್ಷ ನವೆಂಬರ್ ತಿಂಗಳಲ್ಲಿ ಬಂದರೆ ಇನ್ನೊಂದು ವರ್ಷ ಡಿಸೆಂಬರ್ ತಿಂಗಳಲ್ಲಿ ಬರುತ್ತದೆ. ನವರಾತ್ರಿಯು ನನಗೆ ತಿಳಿದಿರುವ ಮಟ್ಟಿಗೆ ಪ್ರತೀ ವರ್ಷ ಅಕ್ಟೋಬರ್ ತಿಂಗಳಲ್ಲಿಯೇ ಬರುತ್ತದೆ. ಶಾರದಾ ಪೂಜಾ ಮಹೋತ್ಸವದ ಕೊನೆಯ ಭಾಗವಾಗಿರುವ ಶಾರದ ಮಾತೆಯ ಪುರಮೆರವಣಿಗೆಯಲ್ಲಿ ಬಣ್ಣಗಳಲ್ಲಿ ಓಕುಳಿ (ಹೋಲಿ) ಆಡುತ್ತ, ಕುಣಿಯುತ್ತ ಸಾಗಲು ವರ್ಷವಿಡೀ  ಕಾಯುತ್ತಾ ಕೂರುವವರಲ್ಲಿ ನಾನೂ ಒಬ್ಬ!


          ಊರಿನಲ್ಲಿ ನನ್ನ ಅನೇಕ ಗೆಳೆಯರು ಶ್ರೀ ನರೇಂದ್ರ ಮೋದಿಯವರ ಅಭಿಮಾನಿಗಳು. ೨೦೧೪ರ ಲೋಕಸಭಾ ಚುನಾವಣೆಯು ಹತ್ತಿರವಾಗುತ್ತಿದ್ದಂತೆ, ತಮ್ಮ ಬೆಂಬಲ ಸೂಚಿಸಲು Facebook, WhatsApp ಗಳಲ್ಲಿ ಮೋದಿಯವರ ಭಾವಚಿತ್ರವನ್ನು ತಮ್ಮ ಪ್ರೊಫೈಲ್ ಪಿಕ್, ಕವರ್ ಪಿಕ್ ಮಾಡಿಕೊಂಡದ್ದಷ್ಟೇ ಅಲ್ಲದೆ, Facebook ನಲ್ಲಿ ತಮ್ಮ ಹೆಸರಿಗೆ ಪ್ರಿಫಿಕ್ಸ್ ಆಗಿ 'NaMo' ಎಂದು ಹಲವರು, ಹೆಸರಿಗೆ ಸಫಿಕ್ಸ್ ಆಗಿ 'Modi' ಎಂದು ಕೆಲವರು ಸೇರಿಸಿಕೊಂಡಿದ್ದರು! ಉದಾ: 'NaMo Naresh Bhat' ಅಥವಾ 'Naresh Bhat Modi' ಹೀಗೆ. ಚುನಾವಣೆಯ ಸಮಯದಲ್ಲಿ ಮೋದಿಯ ಕ್ರೇಜ್ ಎಷ್ಟಿತ್ತೆಂದರೆ, ನಮ್ಮ ಮನೆಯ ಬಾಗಿಲಿನ ಮೇಲೆ, ಬೀರುವಿನ ಮೇಲೆಲ್ಲಾ ನನ್ನ ತಮ್ಮ ಮೋದಿಯ ಚಿತ್ರವನ್ನು ಅಂಟಿಸಿ, ಒಂದು ರಟ್ಟಿನ ಮೇಲೆ "I want my nation to be MODIfied" ಎಂದು ಬರೆದು ಮೋದಿಯ ಚಿತ್ರವ ಅಂಟಿಸಿ ಗೋಡೆಗೆ ತೂಗು ಹಾಕಿದ್ದ!  

          ಚುನಾವಣೆಯ ಸಮಯದಲ್ಲಿ ಬಹಳಷ್ಟು ಜನರು ತಮ್ಮ ತಮ್ಮ ಊರಿಗೆ ತೆರಳಿ ಮತವನ್ನು ಚಲಾಯಿಸಿದರು. ಫಲಿತಾಂಶದ ದಿನ ಬಂದೇ ಬಿಟ್ಟಿತು! ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆದು, ಬಹುಮತದೊಂದಿಗೆ ಸರ್ಕಾರವನ್ನು ರಚಿಸಿ, ಶ್ರೀ ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಕೆಲಸ ಆರಂಭಿಸಿದರು. ಅದೇ ವರ್ಷದ ಅಕ್ಟೋಬರ್ ೨ರಂದು "ಸ್ವಚ್ಛ ಭಾರತ" ಅಭಿಯಾನಕ್ಕೆ ಚಾಲನೆ ನೀಡಿ, ಗಾಂಧೀಜಿಯ ಸ್ವಚ್ಛ ಭಾರತದ ಕನಸನ್ನು ನನಸು ಮಾಡುವತ್ತ ಮೊದಲ ಮಹಾ ಹೆಜ್ಜೆ ಇಟ್ಟರು. ಅಭಿಯಾನಕ್ಕೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿ, ಬಹಳಷ್ಟು ಗಣ್ಯರು, ತಾರೆಗಳು ಅಭಿಯಾನದಲ್ಲಿ ಪಾಲ್ಗೊಂಡು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನೂ ಮಾಡಿದರು.


          ಇದೇ ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ಶಾರದಾ ಪೂಜಾ ಮಹೋತ್ಸವದ ಸಲುವಾಗಿ ನಾನು ಊರಿಗೆ ಬಂದೆ. ಶಾರದೆಯ ಪುರಮೆರವಣಿಗೆಯಲ್ಲಿ ಯುವಕರು ಗುಂಪು ಮಾಡಿಕೊಂಡು, catchy quote ಗಳಿರುವ ಟಿ ಶರ್ಟನ್ನು ಸಮವಸ್ಥ್ರವಾಗಿ ಧರಿಸಿ ಅಥವಾ ಒಂದೇ ತೆರನಾದ ವೇಷಭೂಷಣವನ್ನು ತೊಟ್ಟು ಜನರ ಗಮನವನ್ನು ಸೆಳೆಯುತ್ತಾರೆ. ಹಾಗೆಯೇ ಈ ಬಾರಿ ಒಂದು ದೊಡ್ಡ ಗುಂಪು ಮೋದಿಯ ಚಿತ್ರವಿರುವ, "I want my nation to be MODIfied" ಎಂಬ ಸಾಲುಗಳಿರುವ ಟಿ ಶರ್ಟನ್ನು ಧರಿಸಿದ್ದರು. ಗುಂಪಿನಲ್ಲಿ ಮಾನವ ಪಿರಮಿಡ್ ಮಾಡುವ ಸಂದರ್ಭದಲ್ಲಿ 'ಮೋದಿ ಮೋದಿ' ಎಂದು ಒಕ್ಕೊರಲಲ್ಲಿ ಅಬ್ಬರಿಸುತ್ತಿದ್ದರು. ಮೋದಿಯವರ ಈ ಬಗೆಯ ಜನಪ್ರಿಯತೆ ನೋಡಿ ಬೆಕ್ಕಸ ಬೆರಗಾದೆ. ಹಿಂದೆಂದು ಯಾವುದೇ ರಾಜಕೀಯ ನಾಯಕರು ಇಷ್ಟೊಂದು ಜನಮನ್ನಣೆಯನ್ನು ಪಡೆದದ್ದನ್ನು ನಾನು ಕಂಡಿರಲಿಲ್ಲ. ಆ ದೊಡ್ಡ ಗುಂಪನ್ನು ಹಾಗೆಯೇ ಗಮನಿಸುತ್ತಿದ್ದೆ. ಮೆರವಣಿಗೆ ಸಾಗುತ್ತಿದ್ದಂತೆ ಊರಿನ ಜನರು ತಮ್ಮ ಮನೆಯ ಮೇಲ್ಭಾಗದಿಂದ ಹಣ್ಣನ್ನೋ, ಬಿಸ್ಕಿಟನ್ನೋ, ಚಾಕಲೇಟನ್ನೋ, ಐಸ್ ಕ್ಯಾಂಡಿಯನ್ನೋ ಎಸೆಯುತ್ತಾರೆ. ಮೆರವಣಿಗೆಯಲ್ಲಿ ಸಾಗುವ ಜನರು ಅವುಗಳನ್ನು ಹಿಡಿಯುತ್ತಾ, ಕಲೆ ಹಾಕುತ್ತಾ, ತಿನ್ನುತ್ತಾ, ಓಕುಳಿ ಆಡುತ್ತಾ, ಕುಣಿಯುತ್ತಾ ಮುಂದುವರೆಯುತ್ತಾರೆ.


          ನೋಡ ನೋಡುತ್ತಿದ್ದಂತೆ ಮೋದಿಯ ಚಿತ್ರವಿರುವ ಟಿ ಶರ್ಟ್ ಧರಿಸಿದ್ದ ಆ ಗುಂಪಿನ ಕೆಲ ಮಂದಿ ಐಸ್ ಕ್ಯಾಂಡಿ, ಚಾಕ್ಲೇಟು, ಬಿಸ್ಕಿಟ್ ಗಳನ್ನು ತಿಂದು ಅದರ ಪ್ಲಾಸ್ಟಿಕ್ wrapper ಗಳನ್ನು ಅಲ್ಲಲ್ಲಿಯೇ ಎಸೆಯುತ್ತಾ ನಡೆಯತೊಡಗಿದರು! ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಒಂದು ತಿಂಗಳು ಕಳೆದಿರಲಿಲ್ಲ! ಆಗಲೇ ಮೋದಿಯ ಚಿತ್ರವಿರುವ ಟಿ ಶರ್ಟ್ ಅನ್ನು ಧರಿಸಿ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿದ್ದವರೇ, ಮೋದಿಯು ಚಾಲನೆ ನೀಡಿದ ಅಭಿಯಾನದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಹೀಗೆ ವರ್ತಿಸುತ್ತಿದ್ದರು! ಒಂದೆರಡು ತಿಂಗಳ ಬಳಿಕ  "ಸ್ವಚ್ಛ ಭಾರತ" ಅಭಿಯಾನದ ಅಂಗವೆಂಬಂತೆ, ಈ ಗುಂಪಿನ ಹಲವರು ನಮ್ಮೂರಿನ ಕೆರೆಯ ಸ್ವಚ್ಛತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೆರೆಯ ಸ್ವಚ್ಛತೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರೆನ್ನಿ. ನಮ್ಮ ರೋಲ್ ಮಾಡೆಲ್ ಗಳ, ನಾಯಕರ, ಧ್ಯೇಯಾದರ್ಶಗಳನ್ನು ಪಾಲಿಸುವುದರ ಬದಲು, ಅವರ ಫೋಟೋವನ್ನು ಪ್ರೊಫೈಲ್ ಪಿಕ್ ಮಾಡಿಕೊಳ್ಳುವುದು, ಇಂಟರ್ನೆಟ್ ಕನೆಕ್ಷನ್ ಇದೆ; Facebook, WhatsApp ಫ್ರೀ ಎಂದು, ಅವರ ಬಗ್ಗೆ ಹೊಗಳುವ ಯಾವುದೇ ಸಂದೇಶ ಬರಲಿ; ಅದು ನಿಜವೇ ಇಲ್ಲಾ ಉತ್ಪ್ರೇಕ್ಷೆಯೇ ಎಂದು ಪರಾಮರ್ಶಿಸದೆ ಎಲ್ಲಾ ಕಡೆ ಶೇರ್ ಮಾಡುವುದು ಫಾರ್ವರ್ಡ್ ಮಾಡುವುದು ಮಾಡಿಕೊಂಡು ಕೂತೊಡೊನೆ, ಅವರ ಅಪ್ಪಟ ಅನುಯಾಯಿ ಅಥವಾ ಹಿಂಬಾಲಕರಾಗುತ್ತೇವೆ ಎಂದುಕೊಂಡರೆ ಅದು ಕೇವಲ ಭ್ರಮೆ ಮಾತ್ರ! ಪರಾಮರ್ಶಿಸದೆ ಸುಮ್ಮನೆ ಸಂದೇಶಗಳನ್ನು, ಮಾಹಿತಿಯನ್ನು ಫಾರ್ವರ್ಡ್ ಮಾಡುವುದರಿಂದ ಅವರ ಹೆಸರಿಗೆ ಸುಳ್ಳಿನ ಮಸಿಯನ್ನು ನಾವೇ ಬಳಿದಂತಾಗುತ್ತದೆ! ಇಂತಹ ಸನ್ನಿವೇಶಗಳಲ್ಲಿ, ಯಾರೂ ನಮ್ಮ ಬಗ್ಗೆ ಕಡೆಯಾಗಿ ಮಾತನಾಡುವುದಿಲ್ಲ, ಬದಲು ನಮ್ಮ ನಾಯಕ 'ಫ಼ೇಕು' ಅಥವಾ 'ಫೋಟೋಶಾಪ್ ಅಭಿವೃದ್ಧಿ' ಮಾಡುವವ ಎಂಬ ಅಪಕೀರ್ತಿಗೆ, ಅನಾವಶ್ಯಕವಾಗಿ ಭಾಜನರಾಗುತ್ತಾರೆ! ಮೋದಿ ಎಂಬುದು ಕೇವಲ ಉದಾಹರಣೆ ಮಾತ್ರ. ನಮ್ಮ ರೋಲ್ ಮಾಡೆಲ್, ನೆಚ್ಚಿನ ನಾಯಕರಾರೆ ಇರಲಿ; ನಾವು ಅವರ ಆದರ್ಶಗಳ ಪಾಲನೆ ಮಾಡಬೇಕೆ ಹೊರತು ಅವರ ಹೆಸರಿನಲ್ಲಿ ಆಡಂಭರ  ಮಾಡುವುದು ಅಥವಾ ಅವರ ಬಗ್ಗೆ ಟೀಕೆ ಮಾಡಿದವರ ಬಗ್ಗೆ ಹರಿಹಾಯುತ್ತಾ ಕೂತರೆ ಯಾವುದೇ ಬದಲಾವಣೆ ಸಾಧ್ಯವಿಲ್ಲ!

                                           (ಎಡ) ಅಹಮದಾಬಾದ್                                    (ಬಲ) ಅಭಿವೃದ್ಧಿ ಹೊಂದಿದ ಅಹಮದಾಬಾದ್ ಎಂದು ಹರಿದಾಡಿದ ಚಿತ್ರ                                                  
          ಸ್ವಚ್ಛ ಭಾರತ, ಮೇಕ್ ಇನ್ ಇಂಡಿಯ, ಬೇಟಿ ಬಚಾವೋ ಬೇಟಿ ಪಢಾವೋ, ಜನ ಧನ ಯಾವುದೇ ಯೋಜನೆಯ ಬ್ಯಾನರ್ ಹಾಕಿದಾಗಲೇ ಅಥವಾ ಅದರ ಅಧಿಕೃತ ಕಾರ್ಯಕ್ರಮ ಇದ್ದಾಗ ಮಾತ್ರ ಹೋಹೋ ಎಂದು ಶೋ ಆಫ್ ಮಾಡಿಕೊಂಡು volunteer ಮಾಡಿ, ಆಡಂಭರದ ಅಭಿಮಾನವ ತೋರಿ ಉಳಿದ ಸಮಯದಲ್ಲಿ ಅದನ್ನು ಮರೆತು ನಮಗೆ ಹೇಗೆ ಬೇಕೋ ಹಾಗೆ ನಡೆದುಕೊಳ್ಳುವುದಕ್ಕಿಂತ ಅವರ ಆದರ್ಶಗಳನ್ನು ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ, ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಹಿತದೃಷ್ಟಿಯನ್ನು ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಾ ಸಾಗಿದರೆ ಮಾತ್ರ ನಮ್ಮ ದೇಶವನ್ನು ನಿಜವಾಗಿಯೂ "Modify" ಮಾಡಿ ಸುಂದರ ಭಾರತವನ್ನು ಭವಿಷ್ಯದಲ್ಲಿ ಕಟ್ಟಲು ಸಾಧ್ಯ!


Thursday 4 February 2016

ರಿಕ್ಕಿ - ನಾ ಕಂಡಂತೆ

       

          "ಸೋಮ್ವಾರ ಕನ್ನಡ ಮೂವಿಗೆ ಟಿಕೆಟ್ ಆರಾಮಗ್ ಸಿಗುತ್ತೆ ಗುರು. ಅದ್ರಲ್ಲೂ ವೈಟ್ ಫೀಲ್ಡಲ್ಲಂತೂ ಇನ್ನೂ ಆರಾಮು!" ಈ ಆಲೋಚ್ನೆ ಇಟ್ಕೊಂಡು, 6.30 ಶೋಗೆ 6.15 ಅಷ್ಟ್ ಹೊತ್ಗೆ ವೈಟ್ ಫೀಲ್ಡಲ್ಲಿರೋ ಐನೋಕ್ಸ್ ಗೆ ಹೋದೆ. ಹೋಗಿ ಕೇಳಿದ್ರೆ 'ಹೌಸ್ ಫುಲ್' ಅನ್ಬೇಕಾ ಆ ಆಸಾಮಿ! ಕನ್ನಡ ಮೂವಿ ವೀಕ್ ಡೇನಲ್ಲಿ, ಅದೂ ವೈಟ್ ಫೀಲ್ಡಲ್ಲಿ ಹೌಸ್ ಫುಲ್ ಅಂತ ಖುಶಿ ಪಡೋದೋ ದುಃಖ ಪಡೋದೋ ಗೊತ್ತಾಗ್ಲಿಲ್ಲ! 1st ಡೇ 1st ಶೋ ನೋಡ್ಬೇಕು ಅಂದ್ಕೊಂಡಿದ್ ಮೂವಿನಾ ಅದ್ ರಿಲೀಸ್ ಆಗಿ ಒಂದ್ ವಾರ ಬಿಟ್ಟು ನೋಡ್ದೆ! ಯಾವ್ ಮೂವಿ ಅಂತ ಗೊತ್ತಾಯ್ತಲ್ವ? ಓಹ್! ಟೈಟಲಲ್ಲೇ ಹೇಳ್ಬಿಟ್ಟಿದೀನಲ್ಲ! ಛೇ! ಹಾ.. ಅದೇ.. "ರಿಕ್ಕಿ".

          ನಾವು ಎಕ್ಸ್ಪೆಕ್ಟೇಶನ್ ಇಟ್ಕೊಂಡು, ಕಾಯ್ಕೊಂಡ್ ಕೂತಿರೋ ಮೂವಿನಾ ಬೇಗ ನೋಡ್ಬೇಕು! ತಡ ಮಾಡ್ದಷ್ಟೂ ಈ ರಿವ್ಯೂಗಳ್ದು ತಲೆ ನೋವು! ಅದ್ಕೆ ಯಾವ್ ರಿವ್ಯೂನೂ ನೊಡ್ದೆ, ಕೆಲವ್ರು ಬಾಯ್ಮಾತಲ್ಲಿ "ಚೆನ್ನಾಗಿದೆ" "ಚೆನ್ನಾಗಿಲ್ಲ" "ಒಕೆಒಕೆ" "ಸಕ್ಕತ್ತಾಗಿದೆ" ಅಂದವ್ರಿಗೆಲ್ಲಾ, "ಮೂವಿ ಬಗ್ಗೆ ಏನೂ ಹೇಳ್ಬೇಡಾ, ನೋಡ್ಕೊಂಡ್ ಬಂದ್ ಮೇಲ್ ಮಾತಾಡ್ತೀನಿ" ಅಂತ ಹೇಳಿ ಫ್ರೆಂಡ್ ಜೊತೆ ಮೂವಿಗ್ ಹೋದೆ. ಥಿಯೇಟರ್ ಹೌಸ್ ಫುಲ್! ಆದ್ರೆ ನಾವು ಮೊದ್ಲೆ ಬುಕ್ ಮಾಡಿದ್ವಿ, ಹಾಗಾಗಿ ಬಚಾವ್!

          ಅರ್ಜುನ್ ಜನ್ಯಾ ಅವ್ರ ಸಂಗೀತ ಮತ್ತು ಹಿನ್ನೆಲೆ ಸಂಗೀತ, ವೆಂಕಟೇಶ್ ಅವ್ರ ಸಿನೆಮಾಟೋಗ್ರಫಿ, ರಕ್ಷಿತ್ ಶೆಟ್ಟಿ - ಹರಿಪ್ರಿಯಾ ಅವ್ರ ರಸಾಯನ ಶಾಸ್ತ್ರ ಅರ್ಥಾತ್ ಕೆಮಿಸ್ಟ್ರಿ ಒಳ್ಳೆ ಕಚಗುಳಿ ಕೊಡ್ತಾ ಹೋಗುತ್ತೆ. ಹೀರೋಗೂ ಸಿಗ್ದೇ ಇರೋ ಎಂಟ್ರಿ ಸಾಧು ಮಹಾರಾಜ್ ಗೆ ಸಿಕ್ದಾಗ ಥಿಯೇಟರಲ್ಲಿ ಫುಲ್ ಶಿಳ್ಳೆಗಳು ಚಪ್ಪಾಳೆಗಳು! ರಿಷಭ್ ಶೆಟ್ರು ರಕ್ಷಿತ್ ಶೆಟ್ರ ಮನೆ ಹತ್ರ ಬಂದು "Here we meet once again" ಅಂದಾಗ, ಬುಳ್ಳಾ ಪಾತ್ರಧಾರಿ ರಘು ಪಾಂಡೇಶ್ವರ್ ಅವ್ರು ಬೂಟ್ಸ್ ಬಗ್ಗೆ ಮಾತಾಡ್ತಾ "ರತ್ನಕ್ಕನ ಮಗಾ ದುಬಾಯಿ ಇಂದ ಕಳ್ಸಿ ಕೊಟ್ಟಿದ್ದು" ಅಂದಾಗ, ಮನ್ಸು ಟಕ್ ಅಂತ 'ಉಳಿದವರು ಕಂಡಂತೆ'ಗೆ ಒಂದ್ ಸುತ್ ಹಾಕಿ ಬರುತ್ತೆ.

          ಸಾಧು ಮಹಾರಾಜ್ - ರಘು ಪಾಂಡೇಶ್ವರ ಜೋಡಿ ನಮ್ಮನ್ನ ನಗ್ಸಿದ್ರೂ, ರಕ್ಷಿತ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಸರ್, ಪ್ರಮೋದ್ ಶೆಟ್ಟಿ ಹಾಗೂ ಉಳಿದವ್ರು ಒಳ್ಳೆಯ ಅಭಿನಯ ನೀಡಿದ್ರೂ, ರಿಷಭ್ ಶೆಟ್ರು "ಇದೀಗ ಚಲನಚಿತ್ರಗೀತೆಗಳು ಪ್ರಸಾರವಾಗುತ್ತದೆ" ಅಂತಾ ಜಾಣತನದಿಂದ 'ಮಲಗೆ ಮಲಗೆ' ಹಾಡಿಗೆ ಕೋ ಕೊಟ್ರೂ, ಯಾಕೋ ಫಸ್ಟ್ ಹಾಫಲ್ಲಿ ಕಮರ್ಷಿಯಲ್ ಎಲಿಮೆಂಟ್ಸನ್ನ ಹಾಕ್ಬೇಕು ಅಂತ ಕಾಮಿಡಿ ಸೀನ್ ಗಳನ್ನ ಹಾಗೂ ಒಂದೆರ್ಡು ಹಾಡ್ಗಳನ್ನ ತುರುಕ್ಸಿದಾರೆ ಅಂತ ಅನ್ಸ್ತು ನಂಗೆ. ಫಸ್ಟ್ ಹಾಫ್ ಲೈವ್ಲಿ ಆಗಿದ್ರೂ, ಸೆಕೆಂಡ್ ಹಾಫನ್ನೇ ಗ್ರಿಪ್ಪಿಂಗ್ ಆಗಿ ತೆಗೊಂಡ್ ಹೋಗಿದಾರೆ ಅನ್ನೋದು ನನ್ ಅಭಿಪ್ರಾಯ.

          "ಚಿತ್ರದ ಟ್ರೇಲರ್ ಕೊಟ್ಟಂತಹ ಹೆವೀ ಕಿಕ್ಕನ್ನಾ, ಚಿತ್ರದ ಹಾಡುಗಳು ಕೊಟ್ಟಂತಹ ಮುದವನ್ನಾ, ಒಟ್ಟು ಚಿತ್ರ ಕೊಡದೇ ಇದ್ರೂ, ಎಲ್ಲರೂ ನೋಡಬಹುದಾದ ಹಾಗೂ ನೋಡಬೇಕಾದ ಒಳ್ಳೆಯ ಸಂದೇಶವಿರುವ ಕನ್ನಡ ಚಿತ್ರ ರಿಕ್ಕಿ" ಇದು ಥಿಯೇಟರಿಂದ ಹೊರಗ್ ಬಂದಾಗ ನಂಗನ್ಸಿದ್ದು! ಆದ್ರೆ.. ಆದ್ರೆ.. ಮೂವಿ ಸಬ್ಜೆಕ್ಟ್ ನಂಗೆ ಯಾವಾಗ ಸಕ್ಕತ್ ನಾಟ್ತು ಅಂದ್ರೆ, ಮೂವಿ ನೋಡಿ ಎರಡ್ ದಿನದ್ ನಂತ್ರ ಸೈಕಲಲ್ಲಿ ಆಫೀಸಿಗ್ ಬರ್ತಾ ಇರೋವಾಗ, ನನ್ ಆಫೀಸ್ ಇರೋದು SEZ - ಸ್ಪೆಶಲ್ ಎಕನಾಮಿಕ್ ಝೋನಲ್ಲಿ ಅಂತ ಫ್ಲ್ಯಾಶ್ ಆದಾಗ! ಕಂಪೆನಿಯವ್ರಂತೂ SEZ ಅಲ್ಲಿ ಸೌಕರ್ಯ ಸಿಗುತ್ತೆ ಅಂತ ಬಂದ್ ಬಿಡ್ತಾರೆ, ನಾವುಗಳು ಸಂಬಳ ಸಿಗುತ್ತೆ ಅಂತ ಹೋಗ್ಬಿಡ್ತೀವಿ, ಆದ್ರೆ SEZ ಆಗೋ ಸಮಯದಲ್ಲಿ ಅಲ್ಲಿ ಎಷ್ಟು ಸಾವು ನೋವಾಗಿರ್ಬಹುದು? ಎಷ್ಟು ರಾಧಾ- ಕೃಷ್ಣರ ಪ್ರೀತಿ ದಡ ಸೇರ್ದೆ ಮುಳುಗಿರ್ಬಹುದು? ಎಷ್ಟ್ ಜನ ತಾವು ತಮ್ಮ ಹಿರಿಕರು ಹುಟ್ಟಿ ಬೆಳ್ದಿದ್ದ ಮನೆ, ಜಾಗಗಳನ್ನ ಕೆಡವೋದನ್ನ ನೋಡಿ ಮರುಗಿರಬಹುದು? ನನ್ ಆಫೀಸ್ ಕೂಡಾ ಯಾರ್ದೋ ಕನಸಿನ್ ಗೋರಿ ಮೇಲ್ ಇರ್ಬಹುದಾ? ಈ ಎಲ್ಲಾ ಯೋಚ್ನೆಗಳು ಸಾಲು ಸಾಲಾಗಿ ಬಂದಾಗ ಇಂತಹ ಒಂದು ಸಬ್ಜೆಕ್ಟ್ ಬಗ್ಗೆ ಮೂವಿ ಮಾಡಿದ್ದಕ್ಕೆ ರಿಷಭ್ರನ್ನು ಒಂದೆರ್ಡು ಲೆವೆಲ್ ಜಾಸ್ತಿ ಮನಸಾರೆ ಮೆಚ್ಚಿದೆ. ನನ್ ಆಫಿಸ್ ಇರೋ SEZ ಅಲ್ಲಿ ಇಂತಹ ಕಹಿ ಘಟನೆಗಳು ನಡೆದಿದ್ದ್ಯೋ ಇಲ್ವೊ ನಂಗ್ ಗೊತ್ತಲ್ಲ. ಆದ್ರೆ ಉಡುಪಿ ಮಂಗಳೂರಲ್ಲಿ SEZ ವಿರುದ್ಧ ಧ್ವನಿಯನ್ನಂತೂ ನಾನ್ ಕೇಳಿದೀನಿ. ಈ ಎಲ್ಲಾ ಕಾರಣಗಳಿಂದ ಎಸ್ಪೆಶಲಿ ಹಿನ್ನೆಲೆ ಸಂಗೀತದಿಂದ ನನ್ನ ನೆಚ್ಚಿನ ಚಿತ್ರಗಳ ಸಾಲಿಗೆ ರಿಕ್ಕಿಯೂ ಸೇರುತ್ತೆ! ನನ್ನ ನೆಚ್ಚಿನ ಕನ್ನಡದ ಉದಯೋನ್ಮುಖ ನಿರ್ದೇಶಕರ ಸಾಲಿಗೆ ರಿಷಭ್ರೂ ಸೇರ್ಪಡೆ ಆಗ್ತಾರೆ.

PS: ರಕ್ಷಿತ್ ಶೆಟ್ರೆ.. ಇಲ್ ಕೇಳಿ ಮಾರ್ರೆ..  ನೀವ್ ಇಷ್ಟ್ ಚೆಂದ ಮಾಡಿ ಅಳ್ತ್ರಿ ಅಂತ ಗೊತ್ತಿರ್ಲಾ! ಮುಂಗಾರು ಮಳೆ ಗಣೇಶ್ ನಂತ್ರ ಒಂದ್ ಹೀರೋ ಅತ್ತು ನನ್ನ್ ಕಣ್ಣಂಚಲ್ ನೀರ್ ತರ್ಸಿದ್ ಅಂದ್ರೆ ನೀವೇ!