Monday 13 August 2018

ಸಂಬಂಧಗಳು ಮಾರಾಟಕ್ಕಿವೆ!


ಬಿಗ್ ಬಿಲಿಯನ್ ಡೇ ಆಗಿರಬೇಕಾಗಿಲ್ಲ
ತಿಂಗಳ ಸೂಪರ್ ಸೇವರ್ ದಿನವೂ ಬೇಕಿಲ್ಲ ಪ್ರತೀ ದಿನ ಇಲ್ಲಿ
ಭರ್ಜರಿ ಮಾರಾಟ

ಹಳೆಯದು ಬೇಸರವಾಯಿತೆ?
ಕಿತ್ತೊಗೆಯಿರಿ!
ಅದಕ್ಕೂ ಆಕರ್ಷಕವಾದ ಹೊಸತನ್ನು
ನಿಮ್ಮದಾಗಿಸಿಕೊಳ್ಳಿ

ಎಕ್ಸ್ಚೇಂಜ್ ಆಫರ್ಗಳೂ ಇವೆ
ಬೇಡವಾದದ್ದನ್ನು ಮಾರಿ ಬಿಡುವ
ಅಲಕ್ಷ್ಯವಾದದ್ದನ್ನು ಮರೆತು ಬಿಡುವ
ಸಕಲ ಸುಸಜ್ಜಿತ ವ್ಯವಸ್ಥೆಯೂ ಇದೆ

ಇಲ್ಲಿ ಸಂಬಂಧಗಳು ಮಾರಾಟಕ್ಕಿವೆ!
ಹಳೆಯ ಹರಿದ ಚಡ್ಡಿಯ ಬಿಸುಟಿ
ಹೊಸ ಪ್ಯಾಂಟನ್ನು ಖರೀದಿಸುವಂತೆ
ಹಳೆ ಸಂಬಂಧಗಳನ್ನು ಮಾರುಕಟ್ಟೆಯಲ್ಲಿಟ್ಟು
ಹೊಸದನ್ನು‌ ನಿಮ್ಮದಾಗಿಸಿಕೊಂಡು ಬಿಡಿ!

ಇಂದೇ ತ್ವರೆ ಮಾಡಿ!

Monday 11 December 2017

ನಂಬಿ ಕೆಟ್ಟವರಿಲ್ಲವೊ..

ಕೃಪೆ: LinkedIn

ಅವಳು ನಂಬಿಕೆ ದ್ರೋಹವನ್ನೆಸೆಗಿದ್ದಕ್ಕೆ ನೊಂದು, ನೆಮ್ಮದಿಯನ್ನರಸಿ ದೇವಸ್ಥಾನಕ್ಕೆ ಬಂದು ಕೂತ.

"ನಂಬಿ ಕೆಟ್ಟವರಿಲ್ಲವೋ.." ದಾಸರ ಪದ ಗುನುಗಲು ಶುರು ಆಯಿತು.

ಇಲ್ಲೂ ನೆಮ್ಮದಿಯಿಲ್ಲ ಎಂದು ಎದ್ದು ಹೊರಟ!


Thursday 7 December 2017

ಕಷ್ಟ

ಕೃಪೆ: http://images.asianage.com

"ಕಷ್ಟ ಮನುಷ್ಯನಿಗ್ ಬರ್ದೇ ಮರಗಳಿಗ್ ಬರುತ್ತಾ?" ಗೆಳೆಯನಿಗೆ ಸಮಾಧಾನ ಮಾಡುತ್ತಾ ಉಲಿದ.

ಮೆಟ್ರೋ ಕಾಮಗಾರಿಗೆ ಸಾಲುಸಾಲಾಗಿ ಪ್ರಾಣ ತೆತ್ತ ಮರಗಳು ಅದ ಕೇಳಿ ಗೋರಿಯಿಂದಲೇ ನಕ್ಕವು!

Wednesday 6 December 2017

ನಮ್ಮದಲ್ಲದ್ದು!


ನಮ್ಮದಲ್ಲದ್ದನ್ನು ಕೆಲವೊಮ್ಮೆ
ನಮ್ಮದೇ ಎಂದು ನಂಬುತ್ತೇವೆ
ಅದನ್ನು ಬಾಚಿ ತಬ್ಬಿಕೊಳ್ಳುತ್ತೇವೆ
ಹಿಡಿದಿಡಿದು ನಗುತ್ತೇವೆ, ಅಳುತ್ತೇವೆ, ಕನಸು ಕಾಣುತ್ತೇವೆ
ಕೊನೆಗೆ ಅದು ನಮ್ಮದಲ್ಲ ಎಂಬುದು
ಅರಿವಿಗೆ ಬರುವ ವೇಳೆಗೆ
ನಾವಾಗಲೇ ತಿರುಗಿ ಬಾರದಷ್ಟು
ದೂರ, ಬಹುದೂರ ನಡೆದಿರುತ್ತೇವೆ
ಮರಳಿ ಬರಲು ಬಯಸಿದರೂ
ಕಣ್ಣ ತುಂಬಿದ ಕಂಬನಿ
ದಾರಿ ಕಾಣದ ಹಾಗೆ ಕಂಗಾಲು ಮಾಡಿ ಬಿಟ್ಟಿರುತ್ತದೆ
ನಾವು ನಿಂತಲ್ಲೆ ನಿಂತು ಬಿಡುತ್ತೇವೆ, ಕುಸಿದು ಬಿಡುತ್ತೇವೆ!

Tuesday 28 November 2017

ಮುದ್ದು ಮೊಗ

ಕೃಪೆ : https://cdn.tinybuddha.com

ಹಿಂದಿ ಶಾಯರಿ:

Kasoor Neend ka nahi k hum usse Shikwa kare….
Kasoor to us Chehre ka he Jiski Wajah se Neend nahi Ati

ಭಾವಾನುವಾದ:

ಎಷ್ಟು ಕರೆದರೂ, ಗೋಗರೆದರೂ
ನಿದ್ದೆಯದು ಬರುತ್ತಿಲ್ಲ
ಹಾಗೆಂದು ನಿದ್ದೆಯದೇ ತಪ್ಪೆಂದು ನಾ ಚಾಡಿ ಹೇಳುತ್ತಿಲ್ಲ
ತಪ್ಪು ನಿದ್ದೆಯದ್ದಲ್ಲ, ಮಲಗಲು ಬಿಡದೆ ನಿದ್ದೆಗೆಡಿಸುತ್ತಿರುವ ಆಕೆಯ ಮುದ್ದು ಮುಖದ್ದು

ಕನಸಾಗಿ ಸಿಗು

ಕೃಪೆ: http://www.dreams.metroeve.com


ಹಿಂದಿ ಶಾಯರಿ:

Na sawaal banke mila karo,
Na jawaab banke mila karo,
Meri zindagi mera khwaab hai,
Mujhe khwaab banke mila karo…

 ಭಾವಾನುವಾದ:

ನೀನೆನಗೆ ಪ್ರಶ್ನೆಯಾಗಿ ಸಿಗದಿರು
ನೀನೆನಗೆ ಉತ್ತರವಾಗಿ ಸಿಗದಿರು
ನನ್ನೀ ಜೀವನ ನನ್ನದೇ ಸುಂದರ ಕನಸು,
ನೀನೆನಗೆ ಕನಸಾಗಿ ಸಿಗುತ್ತಿರು

ಜೊತೆಗಾರ