Tuesday 5 July 2016

ಮಾನವನಾಗಿ ಹುಟ್ಟಿದ್ ಮೇಲೆ : ಕಂತು ೧ : ನಮ್ಮ ಶಾಲೆ

          
ಕೃಪೆ : ಗೂಗಲ್

          
          ನಮಗೆ "ಅ ಆ ಇ ಈ" "A B C D" ಇಂದ ಹಿಡಿದು ದೊಡ್ಡ ವೈಜ್ಞಾನಿಕ ಸಂಗತಿಗಳನ್ನೂ, ಗಣಿತದ ಪ್ರಮೇಯಗಳನ್ನೂ ಕಲಿಸಿ ಕೊಡುವುದು ನಮ್ಮ ಶಾಲೆ. ಒಳ್ಳೆಯ ಭವಿಷ್ಯಕ್ಕಾಗಿ ಭದ್ರ ಬುನಾದಿಯನ್ನು ಹಾಕಿ ಕೊಡುವಲ್ಲಿ ಶಾಲೆಗಳ ಪಾತ್ರ ಮಹತ್ವದ್ದು. ಶಾಲೆಯಲ್ಲಿ ಓದುವಾಗ ಎಷ್ಟೇ ಸಂಭ್ರಮಿಸಿದರೂ, ಬೀಳ್ಕೊಡುಗೆ ಸಮಾರಂಭದಲ್ಲಿ ಗೊಳೋ ಎಂದು ಅತ್ತರೂ, ಕಾಲ ಉರುಳಿದಂತೆ ನಾವು ಕಲಿತ ಶಾಲೆಯನ್ನು ಮರೆತು ಬಿಡುತ್ತೇವೆ. ಅದು ನೆನಪಾಗುವುದು ಗೆಳೆಯರೆಲ್ಲಾ ಸೇರಿ ಶಾಲೆಯ ಯಾವುದೋ ಒಂದು ನೆನಪನ್ನು ಮೆಲುಕು ಹಾಕಿದಾಗ ಮಾತ್ರ!

          ಆದರೆ ನಮ್ಮಲ್ಲಿ ಕೆಲವರು ಎಷ್ಟೇ ವರ್ಷ ಕಳೆದರೂ, ಕಲಿತ ಶಾಲೆಯನ್ನು ಮರೆಯುವುದಿಲ್ಲ. ಅಂತವರಲ್ಲಿ ಒಬ್ಬ ನನ್ನ ಗೆಳೆಯ ಸೂರ್ಯ (ಒತ್ತಾಯದ ಮೇರೆಗೆ ಹೆಸರು ಬದಲಾಯಿಸಿದ್ದೇನೆ). ಅವನು ಕಲಿತಿದ್ದು ಮಹಾಲಕ್ಷ್ಮೀಪುರದ ಬಸವೇಶ್ವರ ಶಾಲೆಯಲ್ಲಿ. ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ, ಇಂದಿಗೂ ತಾನು ಓದಿದ ಶಾಲೆಯೊಂದಿಗೆ ನಂಟು ಹೊಂದಿದ್ದಾನೆ. ಅದರಲ್ಲೂ ವಿಶೇಷ ಎಂದರೆ, ಈ ಆಸಾಮಿ ಕಳೆದೆರಡು ವರ್ಷಗಳಿಂದ, ಶಾಲೆಯ ಪುನರಾರಂಭದ ಹೊತ್ತಿನಲ್ಲಿ ಶಾಲೆಯ ಪ್ರಾಂಶುಪಾಲರನ್ನು ಭೇಟಿ ಮಾಡಿ, ಗೆಳೆಯರ, ಶಾಲೆಯ ಹಳೆ ವಿದ್ಯಾರ್ಥಿಗಳ, ಸಹೋದ್ಯೋಗಿಗಳ ನೆರವಿನಿಂದ, ಶಾಲೆಗೆ ಮೊದಲನೇ; ಎರಡನೇ; ಮೂರನೇ ಸ್ಥಾನ ಬಂದವರಿಗೆ ಬಹುಮಾನ ನೀಡುವುದು, ವಿದ್ಯಾರ್ಥಿಗಳಿಗೆ ಪುಸ್ತಕ ಹಂಚುವುದು ಅಷ್ಟೇ ಅಲ್ಲದೆ ಆ ಮಕ್ಕಳಲ್ಲಿ ಯಾರಿಗೆ ಶಾಲೆಯ ಶುಲ್ಕ ಕಟ್ಟುವುದಕ್ಕೆ ಸಾಧ್ಯವಿಲ್ಲವೊ ಅಂತಹ ಮಕ್ಕಳ ಶಾಲಾ ಶುಲ್ಕ ಕಟ್ಟುವ ಮಾನವೀಯ ಕೆಲಸವನ್ನೂ ಮಾಡುತ್ತಿದ್ದಾನೆ!

          ನಾವಾಯ್ತು ನಮ್ಮ ಕೆಲಸವಾಯ್ತು ಎನ್ನುವವರ, ಚಿಕ್ಕಪುಟ್ಟ ದಾನ ಮಾಡಿ ಬ್ಯಾನರ್ ಕಟ್ ಔಟ್ ಹಾಕಿಸಿಕೊಳ್ಳುವವರ  ನಡುವೆ ಸೂರ್ಯನಂತವರು ಬಹಳ ದೊಡ್ಡ ವ್ಯಕ್ತಿಗಳಾಗಿ ಕಾಣಿಸಿಕೊಳ್ಳುತ್ತಾರೆ! ಸಹಾಯ ಮಾಡಲು ಹೋದಾಗ ಮಕ್ಕಳಿಗೆ ಸೂರ್ಯ ಹೇಳುವ ಕಿವಿಮಾತು ಎರಡು. 

ಒಂದು: "ಕನ್ನಡ ಮೀಡಿಯಂ ಅಲ್ಲಿ ಓದಿದ್ರೆ ಮುಂದೆ ಭವಿಷ್ಯ ಇಲ್ಲ ಅನ್ಕೋಬೇಡಿ, ನಾನು ಕನ್ನಡ ಮೀಡಿಯಂ ಅಲ್ಲೇ ಓದಿದೋನು"

ಎರಡು "ನಾವು ಓದುವಾಗ, ಕಷ್ಟದಲ್ಲಿದ್ದಾಗ, ನಮಗೆ ಯಾರೋ ಬಂದು ಸಹಾಯ ಮಾಡಿದ್ರು.. ನಾವ್ ಈಗ ನಿಮಗ್ ಸಹಾಯ ಮಾಡ್ತಾ ಇದೀವಿ.. ನೀವ್ ಮುಂದೆ ಬೇರೆಯವ್ರಿಗ್ ಸಹಾಯ ಮಾಡಿದ್ರೆ ನಾವ್ ಮಾಡಿದ್ದು ಸಾರ್ಥಕ"

          ಮಾಡಿದ ಸಹಾಯಕ್ಕೆ, ದಾನಕ್ಕೆ ಯಾವುದೇ ಹೆಸರನ್ನು; ಲಾಭವನ್ನು ಆಪೇಕ್ಷಿಸದೇ, ಹಲವು ವಿದ್ಯಾರ್ಥಿಗಳಿಗೆ ನೆರವಾಗುತ್ತಾ, ಅವರಿಗೆ ಮಾದರಿಯಾಗುತ್ತಾ ಇರುವ ಸೂರ್ಯ ತರದವರು ಕಾಣಸಿಗುವುದು ಅಪರೂಪ. ಅವನು ನನ್ನ ಗೆಳೆಯ ಅಂತ ಹೇಳೋಕೆ ಒಳಗೊಳಗೇ ಏನೋ ಒಂತರ ಹೆಮ್ಮೆ! ಮೊನ್ನೆ ಜುಲೈ 3 ಅವನ ಹುಟ್ಟುಹಬ್ಬ. ಆ ದಿನ ಬರೀಬೇಕು ಅನ್ಕೊಂಡಿದ್ದು ಇವಾಗ ಬರೀತಾ ಇದೀನಿ. "ಹುಟ್ಟು ಹಬ್ಬದ ಸಿಹಿ ಹಾರಯ್ಕೆಗಳು ಸೂರ್ಯ. ನೀನ್ ಮಾಡೊ ಈ ಕೆಲಸಗಳು ನಾವ್ ಕಲ್ತಿದ್ ಶಾಲೆನ ನೆನ್ಪ್ ಮಾಡ್ಕೊಳ್ಳೋಕೆ, ನಮ್ ಪರಿಮಿತಿಲಿ ಆಗೋ ಕೆಲ್ಸಗಳ್ನ ಶಾಲೆಗಾಗಿ ಮಾಡೋಕೆ ಪ್ರೇರೇಪಿಸುತ್ವೆ. ನಿನ್ನಂತವರು ನೂರಾರು, ಸಾವಿರಾರು ಜನ ಮುಂದೆ ಬಂದು ಇಂತ ಸ್ಪೂರ್ತಿ ಕೊಡೋ ಕೆಲಸ ಮಾಡ್ಲಿ, ಇಂತಹ ಕೆಲಸಗಳು ಇನ್ನೂ ದೊಡ್ಡ ಮಟ್ಟದಲ್ಲಿ ನೀನು ಮಾಡುವಂತಾಗ್ಲಿ ಅಂತ ಹಾರೈಸ್ತೀನಿ.