Monday 11 December 2017

ನಂಬಿ ಕೆಟ್ಟವರಿಲ್ಲವೊ..

ಕೃಪೆ: LinkedIn

ಅವಳು ನಂಬಿಕೆ ದ್ರೋಹವನ್ನೆಸೆಗಿದ್ದಕ್ಕೆ ನೊಂದು, ನೆಮ್ಮದಿಯನ್ನರಸಿ ದೇವಸ್ಥಾನಕ್ಕೆ ಬಂದು ಕೂತ.

"ನಂಬಿ ಕೆಟ್ಟವರಿಲ್ಲವೋ.." ದಾಸರ ಪದ ಗುನುಗಲು ಶುರು ಆಯಿತು.

ಇಲ್ಲೂ ನೆಮ್ಮದಿಯಿಲ್ಲ ಎಂದು ಎದ್ದು ಹೊರಟ!


Thursday 7 December 2017

ಕಷ್ಟ

ಕೃಪೆ: http://images.asianage.com

"ಕಷ್ಟ ಮನುಷ್ಯನಿಗ್ ಬರ್ದೇ ಮರಗಳಿಗ್ ಬರುತ್ತಾ?" ಗೆಳೆಯನಿಗೆ ಸಮಾಧಾನ ಮಾಡುತ್ತಾ ಉಲಿದ.

ಮೆಟ್ರೋ ಕಾಮಗಾರಿಗೆ ಸಾಲುಸಾಲಾಗಿ ಪ್ರಾಣ ತೆತ್ತ ಮರಗಳು ಅದ ಕೇಳಿ ಗೋರಿಯಿಂದಲೇ ನಕ್ಕವು!

Wednesday 6 December 2017

ನಮ್ಮದಲ್ಲದ್ದು!


ನಮ್ಮದಲ್ಲದ್ದನ್ನು ಕೆಲವೊಮ್ಮೆ
ನಮ್ಮದೇ ಎಂದು ನಂಬುತ್ತೇವೆ
ಅದನ್ನು ಬಾಚಿ ತಬ್ಬಿಕೊಳ್ಳುತ್ತೇವೆ
ಹಿಡಿದಿಡಿದು ನಗುತ್ತೇವೆ, ಅಳುತ್ತೇವೆ, ಕನಸು ಕಾಣುತ್ತೇವೆ
ಕೊನೆಗೆ ಅದು ನಮ್ಮದಲ್ಲ ಎಂಬುದು
ಅರಿವಿಗೆ ಬರುವ ವೇಳೆಗೆ
ನಾವಾಗಲೇ ತಿರುಗಿ ಬಾರದಷ್ಟು
ದೂರ, ಬಹುದೂರ ನಡೆದಿರುತ್ತೇವೆ
ಮರಳಿ ಬರಲು ಬಯಸಿದರೂ
ಕಣ್ಣ ತುಂಬಿದ ಕಂಬನಿ
ದಾರಿ ಕಾಣದ ಹಾಗೆ ಕಂಗಾಲು ಮಾಡಿ ಬಿಟ್ಟಿರುತ್ತದೆ
ನಾವು ನಿಂತಲ್ಲೆ ನಿಂತು ಬಿಡುತ್ತೇವೆ, ಕುಸಿದು ಬಿಡುತ್ತೇವೆ!