Thursday 24 September 2015

ಮಳೆಯಾಗದ ಮೋಡ


"ಟೊಮೇಟೊ, ಪೊಟಾಟೋ, ಬ್ರಿಂಜಾಲ್, ಡ್ರಮ್ ಸ್ಟಿಕ್ " ಎಂದು ಉಚ್ಛ ಸ್ವರದಲ್ಲಿ ಕೂಗುತ್ತಾ, ಗಾಡಿಯಲ್ಲಿ ತರಕಾರಿ ಮಾರುತ್ತಾ, ರಾಮಣ್ಣ ಸಾಗುತ್ತಿದ್ದ. ಆನಿಯನ್ ದರ ಗಗನಕ್ಕೇರಿರುವುದರಿಂದ ಬೆಳ್ಳಂಬೆಳ್ಗೆ ಅದರ ದರವನ್ನು ಕೇಳಿಸಿ ಗಿರಾಕಿಗಳ ಹೃದಯವನ್ನು ಆಘಾತಕ್ಕೀಡು ಮಾಡುವುದು ಬೇಡ ಎಂದು ಉಳಿದ ತರಕಾರಿಗಳನ್ನು ಮಾತ್ರ ತಂದಿದ್ದ! ಇನ್ನೊಂದೆಡೆ ಹೂವಾಡಗಿತ್ತಿ ಕಮಲಕ್ಕ, "ಹೂವಾ ಬೇಕೆನಮ್ಮಾ.. ಹೂವಾ" ಎನ್ನುತ್ತಾ ತಲೆಯ ಮೇಲೆ ಹೂಬುಟ್ಟಿಯನ್ನು ಹೊತ್ತುಕೊಂಡು, ಗಿರಾಕಿಗಳಿಗಾಗಿ ಅತ್ತಿತ್ತ ಕಣ್ಣು ಹಾಯಿಸುತ್ತಾ ನಡೆಯುತ್ತಿದ್ದಾಗ ಎದುರಾದ ದಿನೇಶಣ್ಣನಿಗೆ  "ಅಣ್ಣ.. ಹೊಸ್ದಾಗಿ ಮದ್ವೆ ಆಗಿರಿ.. ಎಂಡ್ರಿಗೆ ಒನ್ದೆಲ್ಡ್ ಮೊಳ ಹೂ ತಗೊಂಡ್ ಹೋಗಿ ಅಣ್ಣ" ಎಂದು ಕಿಸಿದು ಬಳಿಕ ಸಿಕ್ಕ ಪದ್ಮಕ್ಕನ ಕೈಯಲ್ಲಿದ್ದ ಹಣ್ಣುಕಾಯಿ ಬುಟ್ಟಿ ನೋಡಿ, "ಅಕ್ಕಾ.. ದೇವಸ್ಥಾನಕ್ಕ್ ಹೊಂಟೀರಿ, ಹೂ ತಗೊಂಡ್ ಹೋಗಿಕ್ಕ.. ಸಿವಂಗೆ ಹೂ ಅಂದ್ರೆ ಬಾಳ್ ಪಿರುತಿ" ಎಂದು ಸನ್ನಿವೇಶಕ್ಕೆ ತಕ್ಕಂತೆ ಹೂವಷ್ಟೆ ನಾಜೂಕಾಗಿ ಪದಗಳನ್ನು ಹೆಣೆಯುತ್ತಾ, ವ್ಯಾಪಾರದಲ್ಲಿ ತನಗಿರುವ ಚಾಕಚಕ್ಯತೆಯನ್ನು ತೋರುತ್ತಾ ಮುಂದುವರೆಯುತ್ತಿದ್ದಳು.

ಮನೆಯ ಹೊರಗಡೆ ಬೀದಿಯಲ್ಲಿ ತರಕಾರಿ, ಹೂವು ಮಾರುವವರ, ಹಳೆ ಪಾತ್ರೆ ಕೊಳ್ಳುವವರ ಭರಾಟೆಯಾದರೆ, ಮನೆಯ ಒಳಗಡೆ ಹೆಂಗಸರ ಗರ್ಭಗುಡಿಯಾದ (ಒಂದಾನೊಂದು ಕಾಲದಲ್ಲಿ) ಅಡುಗೆ ಕೋಣೆಯಲ್ಲಿ ದಿನದ ಮೊದಲ ಮಹಾಯುದ್ಧ ಆರಂಭವಾಗಿತ್ತು! ಆ ಸದ್ದಿಗೆ ಬೆಳಗ್ಗಿನ ಚಳಿಯಲ್ಲಿ ತುದಿಯಿಂದ ಮುಡಿಯವರೆಗೂ ರಗ್ಗು ಹೊದ್ದುಕೊಂಡು ಜೇನುನಿದ್ದೆಯಲ್ಲಿದ್ದ ರಕ್ಷಾ ಹಠಾತ್ತನೆ ಎದ್ದು ಕೂತಳು. ಅಂದ ಹಾಗೆ ಅಡುಗೆ ಕೋಣೆಯಲ್ಲಿ ನಡೆಯುತ್ತಿದ್ದದ್ದು ಗಂಡ ಹೆಂಡಿರ ಅಥವಾ ಯಾವುದೇ ವ್ಯಕ್ತಿಗಳ ನಡುವಿನ ಮಹಾಯುದ್ಧವಲ್ಲ! ಬದಲಿಗೆ, ಫಿಲಿಪ್ಸ್ ಕಂಪೆನಿಯ ಮಿಕ್ಸರ್ ಒಳಗಡೆ; ತೆಂಗಿನಕಾಯಿ ತುರಿ, ಮೆಣಸಿನಕಾಯಿ, ಶುಂಠಿ, ಉಪ್ಪು ಮತ್ತು ನೀರಿನ ನಡುವೆ ನಡೆಯುತ್ತಿದ್ದ ಮಹಾಯುದ್ಧವದು! ಈ ಐವರಲ್ಲಿ  ಪ್ರಬಲರಾರು? ದುರ್ಬಲರಾರು? ಯಾರು ಯಾರು ಒಂದೇ ಪಕ್ಷ? ಎಂಬಿತ್ಯಾದಿ ವಿವರಗಳು ಇನ್ನೂ ಯಾವುದೇ ಗುಪ್ತಚರ ಇಲಾಖೆಗಳ ತೆಕ್ಕೆಗೂ ಸಿಗದೇ ನಿಗೂಢವಾಗಿವೆ! ಇದರ ಬಗ್ಗೆ ಬಹಿರಂಗವಾಗಿರುವುದು ಒಂದೇ ಸಂಗತಿ, ಈ ಯುದ್ಧದಲ್ಲಿ ಹೋರಾಡಿದವರೆಲ್ಲಾ ಕೊನೆಗೆ ಒಂದಾಗಿ 'ಕಾಯಿ ಚಟ್ನಿಯಲ್ಲಿ' ಲೀನವಾಗುವರು ಎಂದು! ಅಮ್ಮ ತನ್ನನ್ನು ಎಬ್ಬಿಸಲು ಅಲಾರ್ಮ್ಗಿಂತ ಒಳ್ಳೆಯ ಅಸ್ತ್ರವನ್ನೇ ಹುಡುಕಿದ್ದಾಳಲ್ಲ ಅಂದುಕೊಳ್ಳುತ್ತಾ, ಅಲ್ಪಾಯುಷ್ಯದಲ್ಲೇ ವೀರಮರಣ ಹೊಂದಿದ ನಿದ್ದೆಗೆ ಮೌನಾಚರಣೆ ಎಂಬಂತೆ ಇನ್ನೊಂದೆರಡು ನಿಮಿಷ ಹಾಸಿಗೆಯ ಮೇಲೆ ಹೊಡಕುತ್ತಿದ್ದಾಗ, ಏನೋ ನೆನಪಾಗಿ ಸಂಭ್ರಮದಿ ಎದ್ದು ಹಲ್ಲುಜ್ಜಲು ತೆರಳಿದಳು.

ತಲೆಗೆ, ಕಾಮನಬಿಲ್ಲಿನ ಏಳೂ ಬಣ್ಣಗಳಿರುವ, ಕಾಮನಬಿಲ್ಲಿನ ಆಕಾರದ ಹೇರ್ ಬ್ಯಾಂಡು, ಹುಬ್ಬುಗಳ ನಡುವೆ ವೃತ್ತಾಕಾರದ ಒಂದು ಪುಟ್ಟ ಬಿಂದಿ, ಕಿವಿಗಳಿಗೆ ದೇವಸ್ಥಾನದ ಗಂಟೆಯ ಆಕಾರದ ಕಿವಿಯೋಲೆಗಳನ್ನು ತೊಡುವ ಏಳು ವರ್ಷದ ಪುಟಾಣಿ, ಅಪ್ಪ ಅಮ್ಮನ ಮುದ್ದಿನ ರಾಜಕುಮಾರಿ, ರಕ್ಷಾ! ಆಟ ಊಟ ಪಾಠಗಳಲೆಲ್ಲಾ ಮುಂದು. ನಟನೆ, ಅದರಲ್ಲೂ ಏಕಪಾತ್ರಾಭಿನಯ ಅಂದರೆ ಎಲ್ಲಿಲ್ಲದ ಪ್ರೀತಿ. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಒಬವ್ವರ ಪಾತ್ರಗಳಿಂದ ಹಿಡಿದು ಇತ್ತೀಚಿಗೆ ಪ್ರಖ್ಯಾತಿ ಪಡೆದ ಹುಚ್ಚ ವೆಂಕಟರ "ಬ್ಯಾನ್ ಆಗ್ ಬೇಕ್.. ನನ್ನ ಮಗಂದ್!!" ತನಕದ ಎಲ್ಲಾ ತರಹದ ಡೈಲಾಗ್ ಹೇಳಿ ಅಭಿನಯಿಸುವಲ್ಲಿ ಆಕೆ ಎತ್ತಿದ ಕೈ. ಇಂದು ಅವಳ ಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಏಕಪಾತ್ರಾಭಿನಯ ಸ್ಪರ್ಧೆ ಇದ್ದು, ಅದರ ತಯಾರಿಯ ನೆನಪಾಗಿಯೇ ಅಮ್ಮ ಎಬ್ಬಿಸುವ ಮೊದಲೇ ಎದ್ದು ಹಲ್ಲುಜ್ಜಲು ಓಡಿದ್ದು. ಪಟಪಟನೆ ಹಲ್ಲುಜ್ಜಿ; ಸ್ನಾನ ಮಾಡಿ ಶುಭ್ರವಾಗಿ; ಅಮ್ಮ ಹೇಳಿಕೊಟ್ಟಂತೆ ಸ್ಪರ್ಧೆಗೆ ತಯಾರಿ ನಡೆಸಲಾರಂಭಿಸಿದಳು. ಅವಳು ಮಾಡ ಹೊರಟಿದ್ದು, ಯುದ್ಧದಲ್ಲಿ ಶತ್ರು ಸೈನಿಕರ ರುಂಡ ಚೆಂಡಾಡಿ, ರಕ್ತದಲ್ಲಿ ಮಿಂದ ಖಡ್ಗವನ್ನು ಝಳಪಿಸುತ್ತಾ, ಶತ್ರು ರಾಜನ ಎದೆ ಮೆಟ್ಟಿ, ತಾಯ್ನಾಡಿನ-ತಾಯ್ನುಡಿಯ ರಕ್ಷಣೆಗೆ ಸದಾ ಸಿದ್ಧ ಎಂಬ ಶೌರ್ಯದ ಮಾತುಗಳನ್ನಾಡುವ ಕಾಲ್ಪನಿಕ ರಾಣಿಯ ಪಾತ್ರ. ಅಮ್ಮನೇ ಪಕ್ಕದ ಮನೆಯಲ್ಲಿರುವ ನಾಟಕದ ನಿರ್ದೇಶಕರ ಹತ್ತಿರ ಡೈಲಾಗ್ಸ್ ಗಳನ್ನು ಬರೆದು ತಂದು, ಪಾತ್ರಕ್ಕಾಗಿ ರಾಣಿಯ ವೇಷ ಭೂಷಣ, ಖಡ್ಗವನ್ನೂ, ಪಕ್ಕದ ರಸ್ತೆಯಲ್ಲಿದ್ದ ಕಾಸ್ಟ್ಯೂಮ್ ಅಂಗಡಿಯಿಂದ ಬಾಡಿಗೆಗೆ ತಂದಿದ್ದರು. ಮಗಳ ನಟನೆಯೆಂದರೆ ತಾಯಿಗದೆನೋ ಉಲ್ಲಾಸ! ಅದಕ್ಕಾಗಿಯೇ ಅವಳಿಗೆ ಪ್ರತಿ ಹಂತದಲ್ಲಿಯೂ ಪ್ರೋತ್ಸಾಹ ನೀಡುತ್ತಿದ್ದರು. ಈ ವಿಷಯದಲ್ಲಿ ತಂದೆಯೂ ಏನು ಕಡಿಮೆ ಇರಲಿಲ್ಲ.

"ಕೈಯಲ್ಲಿ ಬಳೆ ತೊಟ್ಟರೂ, ಮನದಲ್ಲಿ ತಾಯ್ನಾಡಿನ ರಕ್ಷಣೆಯ ಪಣ ತೊಟ್ಟಿದ್ದೇನೆ. ಅದನ್ನು ಅರಿಯದೆ ಕದಾಚಿತ್ ಈ ಹೆಣ್ಣು ಏನು ಮಾಡಿಯಾಳು ಎಂದು ಗರ್ವ ತೋರಿದ್ದಕ್ಕೆ ನಿನಗೆ ತಕ್ಕ ಶಾಸ್ತಿ ಮಾಡುತ್ತೇನೆ. ನಿನ್ನ ರುಂಡ ಮುಂಡಗಳು ಬೇರೆ ಆಗಿರುವುದ ನೋಡಿ ಕಣ್ಣೀರಿಡುವ ನಿನ್ನ ತಾಯಿಗೆ ಈ ಘಳಿಗೆ ಕ್ಷಮೆಯಾಚಿಸಿ ನನ್ನ ಖಡ್ಗಕ್ಕೆ ನಿನ್ನ ರಕ್ತದ ಅಭಿಷೇಕ ಮಾಡುತ್ತಿದ್ದೇನೆ.. ಇಗೋ.. " ಆ ಪುಟಾಣಿ ಇಂತಹ ವೀರಾವೇಶದ ಮಾತುಗಳನ್ನು ರಾಣಿಯ ಠೀವಿಯಲ್ಲಿ ನುಡಿಯುವಾಗ, ಯಾರಿಗಾದರೂ "ಶಹಭಾಷ್" "ಭಲೇ ಭಲೇ" ಎನ್ನದೇ ಇರುವುದು ಅಸಾಧ್ಯವಾಗಿತ್ತು. ಒಮ್ಮೆ ಕನ್ನಡಿಯ ಮುಂದೆ, ಇನ್ನೊಮ್ಮೆ ಅಡುಗೆ ಕೋಣೆಯಲ್ಲಿ ಅಮ್ಮನ ಮುಂದೆ, ಇನ್ನೊಮ್ಮೆ ಟಿ.ವಿಯ ಮುಂದೆ ಖಡ್ಗ ಹಿಡಿದು ಪಾತ್ರದ ತಯಾರಿ ಮಾಡಿಕೊಂಡಳು. ತಂದೆಯು ಮರೆಯಲ್ಲಿ ನಿಂತು ಮಗಳ ಅಭ್ಯಾಸವನ್ನು ನೋಡುತ್ತಿದ್ದರು. ತಿಂಡಿ ತಯಾರಾದಾಗ; ಅಮ್ಮ, ಅಪ್ಪ ಮಗಳಿಬ್ಬರಿಗೂ ಬಿಸಿ ಬಿಸಿ ಪುಳಿಯೋಗರೆ ಜೊತೆ ಕಾಯಿ ಚಟ್ನಿಯನ್ನು ಬಡಿಸಿದರು. ತಿಂಡಿಯನ್ನು ಮುಂದಿಟ್ಟುಕೊಂಡು ಕೂಡಾ ಡೈಲಾಗ್ಸ್ ಹೇಳುತ್ತಾ, ಶತ್ರುಗಳ ರುಂಡವೆಂಬಂತೆ ಪುಳಿಯೋಗರೆಯಲ್ಲಿ ಅನ್ನದ ಜೊತೆ ಬೆರೆತ ಕಡಲೆಕಾಯಿಗಳನ್ನು, ಚಮಚೆಯನ್ನೇ ಖಡ್ಗವಾಗಿಸಿ ತುಂಡರಿಸುತ್ತಾ ಕೂತಳು.

"ಪುಟ್ಟೀ ಬೇಗ ತಿನ್ನು.. ಕಾಸ್ಟ್ಯೂಮ್ ಹಾಕ್ತೀನಿ.. ಅಪ್ಪಂಗೆ ತಡ ಆಗುತ್ತೆ" ಎಂದು ಮೂರು ನಾಲಕ್ಕು ಬಾರಿ ಹೇಳಿದ ಮೇಲೆ ತಿಂದು ಎದ್ದಳು. ಎದ್ದವಳೇ ಚಕಚಕನೆ ಚುರುಕಾಗಿ ವೇಷಭೂಷಣವನ್ನೆಲ್ಲಾ ಅಮ್ಮನ ಸಹಾಯದಿಂದ ತೊಟ್ಟು, ಕೈಯಲ್ಲಿ ಖಡ್ಗ ಝಳಪಿಸುತ್ತಾ ನಿಂತಳು. ಅಮ್ಮ ಅವಳ ದೃಷ್ಟಿ ತೆಗೆದು ಹಣೆಗೆ ಮುತ್ತಿಟ್ಟು ಶುಭವನ್ನು ಹಾರೈಸಿದರು. ಅಪ್ಪ ಬೈಕಿನಲ್ಲಿ ಮಗಳ ಬರುವಿಕೆಗಾಗಿ ಕಾಯುತ್ತಿದ್ದರು. ಇವಳು ಬಂದು ಕೂತೊಡನೆ, "ಏನ್ ಪುಟ್ಟಿ ರೆಡಿನಾ?" ಎಂದು ಕೇಳಿದ್ದಕ್ಕೆ "ಹೌದು ಸಾರಥಿಗಳೆ, ನೀವು ರಥವನ್ನು ಮುನ್ನಡೆಸಿರಿ.. ನಾನು ವೈರಿಗಳ ಸದೆ ಬಡಿಯುತ್ತೇನೆ" ಎಂದಳು. ಮಗಳ ಚೂಟಿತನಕ್ಕೆ ಮನಸೋತು "ಆಗಲಿ ಮಹಾರಾಣಿ ನಾನು ಈಗಲೇ ಶಿರಸ್ತ್ರಾಣವನ್ನು ಧರಿಸುತ್ತೇನೆ" ಎಂದು ಹೆಲ್ಮೆಟನ್ನು ಹಾಕಿಕೊಂಡು ನಗುತ್ತಾ ಅವಳ ಶಾಲೆಯೆಡೆಗೆ ಬೈಕನ್ನು ಚಲಾಯಿಸಿದರು.

ಹಿಂದೆ ಕೂತ ರಕ್ಷಾ ಖಡ್ಗವರಸೆ ಮಾಡುತ್ತಿದ್ದ ನೋಟ ಸಹಪ್ರಯಾಣಿಕರ ಮೊಗದಲ್ಲೂ ಮಂದಹಾಸ ಮೂಡಿಸುತಿತ್ತು. ಮನೆಯಲ್ಲಿ ಅಮ್ಮ ಪಾತ್ರೆ ತೊಳೆಯುತ್ತ ಅವಳ ಭವಿಷ್ಯದ ಬಗ್ಗೆ, ಮುಂದೆ ಏನು ಓದಿಸಬೇಕು ಅವಳು ಯಾವ ಹುದ್ದೆಗೇರಿದರೆ ಚೆಂದ ಇತ್ಯಾದಿ ಇತ್ಯಾದಿ ಯೋಚನಾಲಹರಿಯಲ್ಲಿ ಮಗ್ನಳಾದಳು. ಇಂಜಿನಿಯರಿಂಗ್ ನಾಯಿಸಂತೆ ಆಗಿರುವುದರಿಂದ ಅದೊಂದನ್ನು ಬಿಟ್ಟು ಬೇರೆ ಯಾವುದಾದರೂ ಸರಿ ಎಂದುಕೊಂಡು ಬಕೆಟ್ನಲ್ಲಿ ಇದ್ದ ನೀರಿಗೆ ಈಜು ಬಾರದ ಚಮಚೆಯನ್ನು ನೂಕಿದಳು. ಚಮಚೆ ನೀರಿನಲ್ಲಿ ಮುಳುಗಿ ವಿಲವಿಲ ಎಂದು ಒದ್ದಾಡುತ್ತಿರುವಾಗ ಬೆಳಿಗ್ಗೆ ಮಗಳ ಜೊತೆ ನಡೆದ ಸಂವಾದದ ನೆನಪಾಯಿತು. ರಕ್ಷಾ, "ಅಮ್ಮಾ.. ಈ ಖಡ್ಗಕ್ಕೆ ಕುಂಕುಮದ ನೀರ್ ಹಾಕಿ ಕೊಡಮ್ಮ.. ರಕ್ತದ ತರಹ ಕಾಣಿಸುತ್ತೆ" ಎಂದು ಬೆಂಬಿಡದ ಬೇತಾಳನಂತೆ ಹಿಂದೆ ಬಿದ್ದಿದ್ದಳು. ಆ ಕುಂಕುಮದ ನೀರು ಕಾಸ್ಟ್ಯೂಮ್ ಗೆ ತಾಗಿದರೆ ಅದಕ್ಕೆ ಕಲೆಯಾಗುವುದೆಂದು ಅದರಿಂದ ತಪ್ಪಿಸಿಕೊಳ್ಳಲು ಅಮ್ಮ ಪ್ರಯತ್ನಿಸಿದಳು. ಅದು ಫಲಕಾರಿಯಾಗದಿದ್ದಾಗ ಕುಂಕುಮಕ್ಕಾಗಿ ಮನೆಯಲ್ಲಿ ಅತ್ತಿತ್ತ ಹುಡುಕಾಡಿದಳು. ಕೊನೆಗೆ ದೇವರ ಕೋಣೆಯಲ್ಲಿರುವ ಕುಂಕುಮದ ಹೊರತಾಗಿ ಬೇರೆ ಸಿಗದಿದ್ದಾಗ, "ಖಡ್ಗಕ್ಕೆ ರಕ್ತ ಬೇಕಾಗಿಲ್ಲಮ್ಮ.. ನೀನು ಚೆನ್ನಾಗಿ ಆಕ್ಟ್ ಮಾಡಿದ್ರೆ ಜನರ ಗಮನ ಏನು ಅದರ ಮೇಲೆ ಹೋಗೋದಿಲ್ಲ.. ಜಾಣಮರಿ ಅಲ್ಲ ನೀನು.." ಎಂದು ಪುಸಲಾಯಿಸಿ ಅವಳನ್ನು ಕಳುಹಿಸಿದ್ದರು.

ರಕ್ಷಾಳ ಶಾಲೆಯ ಸ್ವಲ್ಪ ಮೊದಲು ಒಂದು ದೊಡ್ಡ ಟ್ರಾಫಿಕ್ ಸಿಗ್ನಲ್ ಇದ್ದು, ಪ್ರಯಾಣಿಕರು ಕನಿಷ್ಟ ಪಕ್ಷ ೧೦-೧೫ ನಿಮಿಷವಾದರೂ ಆ ಸಿಗ್ನಲ್ ಗಾಗಿ ಒತ್ತೆ ಇಡಲೇಬೇಕಾಗಿತ್ತು. ಒಮ್ಮೆ ಸಿಗ್ನಲ್ ಕೆಂಬಣ್ಣವ ಹೊತ್ತು ಕೂತರೆ, ತಲೆ ಮೇಲೆ ಆಟಿಕೆಗಳನ್ನು, ಜೋಳವನ್ನು ಇನ್ನಿತರ ಸಾಮಗ್ರಿಗಳನ್ನು ಹೊತ್ತು ಮಾರುವವರು ಪ್ರತ್ಯಕ್ಷವಾಗುತ್ತಾರೆ! ಸಿಗ್ನಲ್ ಯಾವಾಗ ಹಸಿರಾಗುವುದೋ ಅಲ್ಲಿಂದ ಯಾವಾಗ ಕಾಲ್ಕೀಳುವುದೋ ಎಂದು ಕಾಯುವ ಪ್ರಯಾಣಿಕರಲ್ಲಿ ಹಲವರು ಸಮಯ ತಳ್ಳಲು ಕಿವಿಯುಲಿ ಹಾಕಿಕೊಂಡು ಹಾಡು ಕೇಳಿದರೆ, ಕೆಲವರು ಬಸ್ಸಿನಲ್ಲಿ, ಕಾರಿನಲ್ಲಿ ಲ್ಯಾಪ್ಟಾಪ್ ನಲ್ಲಿ ಕೆಲಸ ಮಾಡುತ್ತಾ  ತಮ್ಮ ಕಂಪೆನಿಯನ್ನು ಉದ್ಧಾರ ಮಾಡಲು ಅಣಿಯಾಗುವರು. ರಕ್ಷಾ ಇದಾವುದರ ಗೋಜೇ ಇಲ್ಲದೆ ಖಡ್ಗದಲ್ಲಿ ತನ್ನ ಮುಖಭಂಗಿಯ ಪ್ರತಿಫಲನವನ್ನೇ ನೋಡುತ್ತಾ ವಿಧವಿಧವಾದ ಅಭಿವ್ಯಕ್ತಿಯನ್ನು ನೀಡುತ್ತಾ ಅದನ್ನು ಆನಂದಿಸುತ್ತಿದ್ದಳು.

ಇವರ ಬೈಕು ಜೀಬ್ರಾ ಕ್ರಾಸಿಗೆ ತಾಗಿಕೊಂಡೇ ನಿಂತಿತ್ತು. ಇಂತಹ ಸಿಗ್ನಲ್ ಗಳಲ್ಲಿ ಮುಂದಿನ ಸಾಲಿನಲ್ಲಿ ಇದ್ದರೆ, ಸಿಗ್ನಲ್ ಕೌಂಟ್ ಡೌನ್ ೧೦ಕ್ಕೆ ಬಂದಾಗಲೇ ಬೈಕನ್ನು ಚಾಲು ಮಾಡಿ; ಓಟದ ಸ್ಪರ್ಧೆಯಲ್ಲಿ "ಆನ್ ಯುವರ್ ಮಾರ್ಕ್, ಗೆಟ್ ಸೆಟ್.." ಅನ್ನುವಾಗ ಓಟಗಾರರು ಹೇಗೆ ಸಜ್ಜಾಗಿರುವರೋ, ಅದೇ ಭಂಗಿಯಲ್ಲಿ ತಯಾರಾಗಿ ನಿಂತಿರಬೇಕು. ಸಿಗ್ನಲ್ ಹಸಿರಾಗುತ್ತಿದ್ದಂತೆ ದೇಹದ ಎಲ್ಲ ಬಲವನ್ನೂ ಬಲಗೈಗೆ ಕೇಂದ್ರಿಕರಿಸಿ ಆಕ್ಸಿಲರೇಟರ್ ಅನ್ನು ತಿಪ್ಪಿ, ಎಡಗೈಯಿಂದ ಕ್ಲಚ್ಚನ್ನು ಬಿಟ್ಟು, ೧೦೦ಮೀ ಓಟದ ಪಟುವಿನಂತೆ ರಸ್ತೆ ದಾಟುವುದು ಆ ಕ್ಷಣದ ಪರಮ ಗುರಿಯಾಗಿರಬೇಕು. ಸಿಗ್ನಲ್ ಹಸಿರಾಗಿ ಅರ್ಧ ನ್ಯಾನೋ ಸೆಕೆಂಡ್ ಕೂಡ ತಡ ಮಾಡಿದರೆ, ಪಾಕಿಸ್ತಾನದವರು ನಮ್ಮ ಮೇಲೆ ಬಾಂಬ್ ಹಾಕಿ ಬಿಡುತ್ತಾರೆ ಎಂಬಂತೆ ತರಹ ತರಹದ, ವಿಧವಿಧದ ಧಾಟಿಯಲ್ಲಿ ರಾಗದಲ್ಲಿ ಹಿಂದಿರುವವರು ಹಾರ್ನ್ ಮಾಡುತ್ತಾರೆ. ಆ ರಗಳೆಯೇ ಬೇಡ ಎಂದು ರಕ್ಷಾಳ ತಂದೆ ಬೈಕನ್ನು ಚಾಲು ಮಾಡಿ ಸಿಗ್ನಲ್ ಬಿಟ್ಟ ತಕ್ಷಣ ಹೊರಡಲು ಸನ್ನದ್ಧನಾದ.

"೩.. ೨..೧.." ಸಿಗ್ನಲ್ ಬಿಟ್ಟಿತು! ಈ ಬೆಂಗಳೂರಿಗರಿಗೆ ಮಲೆನಾಡಿನ ಹಸಿರನ್ನು ನೋಡಿದಾಗ ಮನ ಮುದಗೊಳ್ಳುವುದೋ ಇಲ್ಲವೋ ಗೊತ್ತಿಲ್ಲ ಆದರೆ ಸಿಗ್ನಲ್ನಲ್ಲಿ ಕ್ಷಣಮಾತ್ರ ಕಾಣುವ ಹಸಿರಿಗೆ ಜೀವವನ್ನೇ ಮುಡಿಪಾಗಿಟ್ಟವರ ಹಾಗೆ ವರ್ತಿಸುತ್ತ, ಹಸಿರು ಬಂದಾಗ ಲಾಟರಿ ಗೆದ್ದಂತೆ ಸಂತೋಷದಿಂದ ಹೊರಡುವರು! ನಾಲ್ಕು ರಸ್ತೆಗಳನ್ನು ಜೋಡಿಸುವ ದೊಡ್ಡ ಜಂಕ್ಷನ್ ಅದು. ರಕ್ಷಾಳ ತಂದೆ ಬಲಕ್ಕೆ ಇಂಡಿಕೇಟರ್ ಹಾಕಿ ಹೊರಟರು. ಅದೇ ವೇಳೆಗೆ ಸಿಗ್ನಲ್ನಲ್ಲಿ ಕೆಂಬಣ್ಣ ಇದ್ದರೂ, ಅವಸರ ಅವಸರವಾಗಿ ಒಬ್ಬ ವ್ಯಕ್ತಿ ತನ್ನ ಆರ್.ಎಕ್ಸ್.೧೦೦ ನಲ್ಲಿ ಇನ್ನೊಂದು ದಿಕ್ಕಿನಿಂದ ವೇಗವಾಗಿ ಸಿಗ್ನಲ್ ಸ್ಕಿಪ್ ಮಾಡಹತ್ತಿದ. ಆರ್.ಎಕ್ಸ್.೧೦೦ ನಲ್ಲಿ ಹೇಳಿಕೇಳಿ ಪಿಕ್ ಅಪ್ ಜಾಸ್ತಿ. ಆ ಹುಚ್ಚು ಮನಸಿನ ವೇಗಕ್ಕೆ ಅತ್ತ ರಸ್ತೆ ನಿಯಮವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ರಕ್ಷಾಳ ತಂದೆಯ ಬೈಕು ಕಾಣಿಸಲಿಲ್ಲವೋ ಏನೋ, ನಾಗಲೋಟದಲ್ಲಿ ಬಂದು ಅವರ ಬೈಕಿನ ಎಡಪಾರ್ಶ್ವಕ್ಕೆ ಗುದ್ದಿದ. ಆ ಹೊಡೆತದ ರಭಸಕ್ಕೆ ಏನಾಯಿತು ಎಂದು ಯೋಚಿಸುವ ಮೊದಲೇ, ಅವಘಡ ಜರುಗಿತ್ತು!
ಮೇಲ್ಸೇತುವೆ ಕಟ್ಟುವ ಸಲುವಾಗಿ ರಸ್ತೆಯ ಬಲಭಾಗದಲ್ಲಿ ಜಲ್ಲಿ ಕಲ್ಲಿನ ರಾಶಿ ಹಾಕಿದ್ದರು. ಅಪಘಾತದ ಪರಾಕಾಷ್ಟೆ ಎಷ್ಟಿತ್ತೆಂದರೆ, ರಕ್ಷಾಳ ತಂದೆ ಒಂದು ಕಡೆ, ಬೈಕು ಇನ್ನೊಂದೆಡೆ ಬಿದ್ದಿತ್ತು. ಆ ಪುಟ್ಟ ಕಂದಮ್ಮ ಆ ರಭಸಕ್ಕೆ ಒಂದಿಷ್ಟು ಅಡಿ ಆಚೆಗೆ ಹಾರಿ  ಅದೃಷ್ಟವಶಾತ್ ಜಲ್ಲಿ ಕಲ್ಲಿನ ರಾಶಿಯ ಮೇಲೆ ಬಿದ್ದಳು. ಅದಾವ ಬಗೆಯಲ್ಲಿ ಪಾತ್ರದಲ್ಲಿ ತಲ್ಲೀನಳಾಗಿದ್ದಳೋ, ಅಂತಹ ಒಂದು ಸ್ಥಿತಿಯಲ್ಲೂ, ಖಡ್ಗವನ್ನು ಕೈ ಇಂದ ಬೀಳಿಸಿರಲಿಲ್ಲ! ಆ ಕಲ್ಲಿನ ರಾಶಿಯೇ ಯುದ್ಧಭೂಮಿಯಾಯಿತು. ಆದರೆ ಹೋರಾಟ ಇವಳ ಮತ್ತು ವೈರಿಗಳ ನಡುವೆ ಅಲ್ಲ! ಇವಳ ಸಾವು ಮತ್ತು ಬದುಕಿನ ನಡುವೆ!

ಅತ್ತ ಮನೆಯಲ್ಲಿ ತಾಯಿ ಪಾತ್ರೆ ತೊಳೆದು ಜೋಡಿಸುತ್ತಿದ್ದಾಗ ಹಿಂದಿನ ವಾರ ಅಂಗಡಿಯಿಂದ ತಂದಿದ್ದ ಕುಂಕುಮದ ಪೊಟ್ಟಣ ಸಿಕ್ಕಿತು. "ಅಯ್ಯೋ! ಆಗಲೇ ಸಿಕ್ಕಿದ್ದರೆ ಪುಟ್ಟಿಯ ಖಡ್ಗಕ್ಕೆ ಕುಂಕುಮದ ನೀರ್ ಹಾಕಿ ರಕ್ತದಂತೆ ಕಾಣುವ ಹಾಗೆ ಮಾಡಬಹುದಾಗಿತ್ತು.. ಪಾಪ ಕೂಸು ಖುಷಿಯಾಗ್ತಿತ್ತು.. ಛೆ!" ಎಂದು ಪರಿತಪಿಸತೊಡಗಿದಳು. ಇತ್ತ, ಅಮ್ಮನ ಕೊರಗಿಗೆ ಸಮಾಧಾನ ಎಂಬಂತೆ, ಖಡ್ಗಕ್ಕೆ ಕುಂಕುಮದ ನೀರಿನ ಅಗತ್ಯವಿರಲಿಲ್ಲ! ರಕ್ಷಾಳ ಹಣೆಗೆ ಬಿದ್ದ ಬಲವಾದ ಏಟಿನಿಂದ ಚಿಮ್ಮಿದ್ದ ರಕ್ತ, ಖಡ್ಗದ ಮೇಲೆ ಹನಿಹನಿಯಾಗಿ ತೊಟ್ಟಿಕ್ಕುತಿತ್ತು. 


ಕನಸಿನ ಮೀನಿಗೆ

ಗಾಳ ಹಾಕುವ ಮುನ್ನ

ಕನಸು ಎಳೆಯಿತೇ

ಕೊನೆಯುಸಿರನ್ನ?