Tuesday 29 November 2016

ನಾ ಕವಿಯಾದೆ

ಗೆಳತಿ ಹೇಮಾ ಬಿದ್ರೆ ಬಿಡ್ಸಿದ್ದು


                                                                        ಅವಳು ಸಿಕ್ಕಳು
ನಾ ಕವಿತೆ ಬರೆದೆ

ನೋಡಿ ನಕ್ಕಳು
ನಾ ಕವಿತೆ ಬರೆದೆ

ಹೃದಯವ ಕದ್ದಳು
ನಾ ಕವಿತೆ ಬರೆದೆ

ನನಗೆ ದಕ್ಕಳು
ನಾ ಕವಿತೆ ಬರೆದೆ

ನಗುವಿಗೂ ಅಳುವಿಗೂ ಜೊತೆಯಾದಳು
ನಾ ಕವಿತೆ ಬರೆದೆ

ಜಗಳದ ಮೇಲೆ ಜಗಳವಾಡಿದಳು
ನಾ ಕವಿತೆ ಬರೆದೆ

ಇಂದು ನನ್ನ ಬಿಟ್ಟು ಹೋದಳು
ನಾ ಕವಿತೆ ಬರೆದೆ

ನನ್ನ ಮರೆತೇ ಬಿಟ್ಟಳು
ನಾ ಕವಿತೆ ಬರೆದೆ

ನನ್ನಿಂದ ಅವಳು ಕವಿತೆಯಾದಳು
ಅವಳಿಂದ ನಾ ಕವಿಯಾದೆ

Wednesday 24 August 2016

ಬಳಸಿದರೆ; ಕಲಿಸಿದರೆ, ಉಳಿದೀತು; ಬೆಳೆದೀತು - ಕನ್ನಡ

         
ಕೃಪೆ: ಗೂಗಲ್

          'ಚಹಾ' - ಈ ಒಂದ್ ಪದ ಸಾಕು, ನನ್ನ ಎಂತಹ ನಿದ್ದೆ ಇಂದನೂ ಎಬ್ಬಿಸೋಕೆ! ಎಷ್ಟೋ ದಿನ, ಅಮ್ಮ ಬೆಳಿಗ್ಗೆ 5 ಗಂಟೆಗೆ ಚಹಾ ಮಾಡ್ತಾರೆ ಅಂತ ಎದ್ದು, ಚಹಾ ಕುಡ್ದು ಮಲಗಿದ್ದಿದೆ. ಚಹಾ ಅಂದ್ರೆ ಅದೇನೋ ಒಂತರ ಪ್ರೀತಿ, ಒಂತರ ಹುಚ್ಚು. ಬೆಳಿಗ್ಗೆ ತಿಂಡಿ ಇಲ್ಲದಿದ್ರೂ ನಡಿಯತ್ತೆ ಆದ್ರೆ ಚಹಾ ಕುಡಿಲಿಲ್ಲ ಅಂದ್ರೆ, ಜೊಶೇ ಇರಲ್ಲ. ಚಹಾದ ಹುಚ್ಚು ಎಲ್ಲಿವರೆಗೆ ಅಂದ್ರೆ ಒಮ್ಮೆ ರಾತ್ರಿ 2.30 ಸುಮಾರಿಗೆ ಚಹಾ ಕುಡಿಬೇಕು ಅನ್ಸಿ, ಗೆಳೆಯನ ಜೊತೆ ಬೈಕ್ ಅಲ್ಲಿ ಚಹಾ ಹುಡ್ಕೊಂಡು ಕೆಲವ್ ಏರಿಯಾ ಸುತ್ತಿದ್ದೂ ಇದೆ! ನನ್ನ ಒಡನಾಡಿಗಳಿಗೆ ಗೊತ್ತಿರತ್ತೆ, ಏನೇ ಕೆಲಸ ಇರ್ಲಿ, ಶಾರ್ಟ್ ಫಿಲಂ ಶೂಟಿಂಗ್ ಇರ್ಲಿ, ನಾಟಕದ್ ತಾಲೀಮ್ ಇರ್ಲಿ, ನಂದೊಂದ್ ಸಾಮಾನ್ಯ ಮಾತ್ ಇರತ್ತೆ "ಬಾ ಮಗ ಟೀ ಕುಡ್ಕೊಂಡ್ ಶುರು ಮಾಡೋಣ.." ಅಂತ! ಅಮ್ಮ ಯಾವಾಗ್ಲೂ ಉಗಿತಾರೆ, ಯಾರಿಂದ ಬಂತೋ ನಿಂಗೆ ಈ ಚಹಾದ ಹುಚ್ಚು ಅನ್ಕೊಂಡು.

         ನನ್ ಪಿ.ಜಿ ಪಕ್ಕ ಒಂದು ಬೇಕರಿ ಇದೆ. ಅದರ ಮಾಲೀಕ ಕೇರಳದವನು. ಭಾರಿ ರುಚಿಯಾಗಿ ಚಹಾ ಮಾಡ್ತಾನೆ. ಅಲ್ದೆ, ಎಲ್ಲರ ಹತ್ರ ನಗ್ ನಗ್ತಾ ಮಾತಾಡೋ ಮನುಷ್ಯ ಅವನು. ಅದ್ಕೆ ಅಲ್ಲಿ ಚಹಾ ಕುಡಿಯೋದಕ್ಕೆ ಏನೋ ಒಂತರ ಖುಷಿ. ಅವನು ಕೇರಳದವನಾದ್ರಿಂದ ಸುಮಾರು ಜನ ಅವ್ನನ್ನ "ಚೇಟಾ" ಅಂತಾ ಕರೀತಾರೆ. ನನಗೆ ಅವನನ್ನ "ಅಣ್ಣ" ಅಂತಾನೇ ಕರ್ದು ಅಭ್ಯಾಸ.

           ವೈಟ್ ಫೀಲ್ಡ್ ಕಡೆ ತೆಲುಗು ಕನ್ನಡಕ್ಕಿಂತ ಹೆಚ್ಚು ಹಬ್ಬಿರೋದ್ರಿಂದಲೋ ಏನೋ; ಅವನಿಗೆ ತೆಲುಗು, ಬಡಗಣ ಭಾರತದವ್ರು ಜಾಸ್ತಿ ಇರೋದ್ರಿಂದ ಹಿಂದಿ, ಮೂಲತಃ ಕೇರಳದವನಾದ್ದರಿಂದ ಮಲಯಾಳಂ ಬರುತ್ತೆ. ನಾನ್ ಅವನ ಹತ್ರ ಕನ್ನಡದಲ್ಲೇ ಮಾತಾಡೋದು. ಅವನು ಸ್ಪಷ್ಟವಾಗಿ ಕನ್ನಡ ಮಾತಾಡ್ತಾನೆ.

          ಒಂದ್ ದಿನ ನಾ ಚಹಾ ಕುಡಿತಾ ಇರ್ಬೇಕಾದ್ರೆ ಒಬ್ರು ಅವ್ನನ್ನ ಕೇಳಿದ್ರು, "ಚೇಟಾ.. ನೀನು ಕೇರಳದವ್ನಲ್ವಾ.. ಹೇಗ್ ಇಷ್ಟ್ ಚೆನ್ನಾಗ್ ಕನ್ನಡ ಮಾತಾಡ್ತ್ಯಾ" ಅಂತ. ಏನ್ ಉತ್ತರ ಕೊಡ್ತಾನೆ ಅಂತ ನಾನು ಕಾತುರದಿಂದ ಕೇಳ್ತಾ ಇದ್ದೆ. "ಸಾರ್.. ನೀವು ಕೇರಳಕ್ ಬಂದ್ ನೋಡಿ.. ಮಲಯಾಳಂ ಬರಲ್ಲ ಅಂದ್ರೆ ಅಂಗ್ಡಿ ಇಟ್ಕೊಂಡು ವ್ಯಾಪಾರ ಮಾಡೋಕ್ ಆಗಲ್ಲ.. ನಾನು ಕರ್ನಾಟಕದಲ್ ವ್ಯಾಪಾರ ಮಾಡ್ತಾ ಇದೀನಿ.. ಅದ್ಕೆ ಕನ್ನಡ ಕಲ್ತಿದೀನಿ" ಅಂತ ಹೇಳಿ ಮುಗುಳ್ನಕ್ಕು ಮತ್ತೆ ಚಹಾ ಮಾಡೋಕ್ ಹೋದ.

          ಅವ್ನ್ ಮೇಲೆ ಅವತ್ತಿಂದ ಗೌರವ ಜಾಸ್ತಿ ಆಯ್ತು! ಬೇರೆ ದೇಶಕ್ಕೆ ಓದೋಕ್ ಹೋಗ್ಬೇಕಾದ್ರೆ, ಆ ದೇಶದ್ ಭಾಷೆ ಕಲ್ತು, ಅಲ್ಲಿನ್ ಸಂಸ್ಕೃತಿಗೆ ಒಗ್ಗಿಕೊಳ್ಳೋ ನಮ್ಮವ್ರು, ಕರ್ನಾಟಕದಲ್ಲಿ ಕನ್ನಡ ಕಲಿ ಅಂತ ಕೇಳ್ಕೊಂಡ್ರೆ "ನಾವು ಭಾರತೀಯರು" "ಹಿಂದಿ ನಮ್ಮ ರಾಷ್ಟ್ರಭಾಷೆ" "ನಾನ್ ಯಾಕ್ ಕನ್ನಡ ಕಲೀಬೇಕು" ಇತ್ಯಾದಿ ಇತ್ಯಾದಿ ಪೋಳ್ಳುವಾದ ಮಂಡಿಸ್ತಾರೆ. ಕೆಲವ್ರು ಇನ್ನೂ ಒಂದೆರ್ಡ್ ಹೆಜ್ಜೆ ಮುಂದ್ ಹೋಗಿ ಕಲಿ ಅಂದವ್ರಿಗೆ ಯಾವ್ ಯಾವ್ದೋ ಪಟ್ಟಾನೂ ಕಟ್ತಾರೆ! ಹೀಗೆಲ್ಲಾ ಇರ್ಬೇಕಾದ್ರೆ, ನಾವ್ ಸುಮ್ನೆ "ಗಾಂಚಾಲಿ ಬಿಡಿ ಕನ್ನಡ ಮಾತಾಡಿ" ಅಂತ ಹೇಳ್ಕೊಂಡ್ ಓಡಾಡೋದ್ ಬಿಟ್ಟು, ಯಾರಿಗ್ ಕನ್ನಡ ಬರಲ್ವೋ ಅವ್ರಿಗ್ ಕನ್ನಡ ಹೇಳ್ಕೊಡೋದು, ಯಾವ್ಯಾವ್ ಬಳಕಗಳು (apps) ಕನ್ನಡದಲ್ಲಿದ್ಯೋ ಅದನ್ನ ಕನ್ನಡದಲ್ಲೇ ಬಳ್ಸೋದು, ಎಲ್ ಎಲ್ಲಿ ಕನ್ನಡದಲ್ಲಿ ಸೇವೆ ಸಿಗ್ತಾ ಇಲ್ವೋ ಅಲ್ಲಿ ಕನ್ನಡದಲ್ಲಿ ಸೇವೆ ಕೊಡೋಕೆ ಒತ್ತಡ ಹಾಕೋದು, ಹೆಚ್ಚೆಚ್ಚು ಅರಿಮೆ(ವಿಜ್ಞಾನ), ಮನರಂಜನೆ contents ಗಳನ್ನ ಕನ್ನಡದಲ್ಲಿ ತಯಾರ್ ಮಾಡೋದು ಮಾಡ್ಬೇಕು. ಆಗ ಮಾತ್ರ ಕನ್ನಡ ಉಳಿಯುತ್ತೆ ಬೆಳೆಯುತ್ತೆ. ಅಲ್ವಾ?

Tuesday 5 July 2016

ಮಾನವನಾಗಿ ಹುಟ್ಟಿದ್ ಮೇಲೆ : ಕಂತು ೧ : ನಮ್ಮ ಶಾಲೆ

          
ಕೃಪೆ : ಗೂಗಲ್

          
          ನಮಗೆ "ಅ ಆ ಇ ಈ" "A B C D" ಇಂದ ಹಿಡಿದು ದೊಡ್ಡ ವೈಜ್ಞಾನಿಕ ಸಂಗತಿಗಳನ್ನೂ, ಗಣಿತದ ಪ್ರಮೇಯಗಳನ್ನೂ ಕಲಿಸಿ ಕೊಡುವುದು ನಮ್ಮ ಶಾಲೆ. ಒಳ್ಳೆಯ ಭವಿಷ್ಯಕ್ಕಾಗಿ ಭದ್ರ ಬುನಾದಿಯನ್ನು ಹಾಕಿ ಕೊಡುವಲ್ಲಿ ಶಾಲೆಗಳ ಪಾತ್ರ ಮಹತ್ವದ್ದು. ಶಾಲೆಯಲ್ಲಿ ಓದುವಾಗ ಎಷ್ಟೇ ಸಂಭ್ರಮಿಸಿದರೂ, ಬೀಳ್ಕೊಡುಗೆ ಸಮಾರಂಭದಲ್ಲಿ ಗೊಳೋ ಎಂದು ಅತ್ತರೂ, ಕಾಲ ಉರುಳಿದಂತೆ ನಾವು ಕಲಿತ ಶಾಲೆಯನ್ನು ಮರೆತು ಬಿಡುತ್ತೇವೆ. ಅದು ನೆನಪಾಗುವುದು ಗೆಳೆಯರೆಲ್ಲಾ ಸೇರಿ ಶಾಲೆಯ ಯಾವುದೋ ಒಂದು ನೆನಪನ್ನು ಮೆಲುಕು ಹಾಕಿದಾಗ ಮಾತ್ರ!

          ಆದರೆ ನಮ್ಮಲ್ಲಿ ಕೆಲವರು ಎಷ್ಟೇ ವರ್ಷ ಕಳೆದರೂ, ಕಲಿತ ಶಾಲೆಯನ್ನು ಮರೆಯುವುದಿಲ್ಲ. ಅಂತವರಲ್ಲಿ ಒಬ್ಬ ನನ್ನ ಗೆಳೆಯ ಸೂರ್ಯ (ಒತ್ತಾಯದ ಮೇರೆಗೆ ಹೆಸರು ಬದಲಾಯಿಸಿದ್ದೇನೆ). ಅವನು ಕಲಿತಿದ್ದು ಮಹಾಲಕ್ಷ್ಮೀಪುರದ ಬಸವೇಶ್ವರ ಶಾಲೆಯಲ್ಲಿ. ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ, ಇಂದಿಗೂ ತಾನು ಓದಿದ ಶಾಲೆಯೊಂದಿಗೆ ನಂಟು ಹೊಂದಿದ್ದಾನೆ. ಅದರಲ್ಲೂ ವಿಶೇಷ ಎಂದರೆ, ಈ ಆಸಾಮಿ ಕಳೆದೆರಡು ವರ್ಷಗಳಿಂದ, ಶಾಲೆಯ ಪುನರಾರಂಭದ ಹೊತ್ತಿನಲ್ಲಿ ಶಾಲೆಯ ಪ್ರಾಂಶುಪಾಲರನ್ನು ಭೇಟಿ ಮಾಡಿ, ಗೆಳೆಯರ, ಶಾಲೆಯ ಹಳೆ ವಿದ್ಯಾರ್ಥಿಗಳ, ಸಹೋದ್ಯೋಗಿಗಳ ನೆರವಿನಿಂದ, ಶಾಲೆಗೆ ಮೊದಲನೇ; ಎರಡನೇ; ಮೂರನೇ ಸ್ಥಾನ ಬಂದವರಿಗೆ ಬಹುಮಾನ ನೀಡುವುದು, ವಿದ್ಯಾರ್ಥಿಗಳಿಗೆ ಪುಸ್ತಕ ಹಂಚುವುದು ಅಷ್ಟೇ ಅಲ್ಲದೆ ಆ ಮಕ್ಕಳಲ್ಲಿ ಯಾರಿಗೆ ಶಾಲೆಯ ಶುಲ್ಕ ಕಟ್ಟುವುದಕ್ಕೆ ಸಾಧ್ಯವಿಲ್ಲವೊ ಅಂತಹ ಮಕ್ಕಳ ಶಾಲಾ ಶುಲ್ಕ ಕಟ್ಟುವ ಮಾನವೀಯ ಕೆಲಸವನ್ನೂ ಮಾಡುತ್ತಿದ್ದಾನೆ!

          ನಾವಾಯ್ತು ನಮ್ಮ ಕೆಲಸವಾಯ್ತು ಎನ್ನುವವರ, ಚಿಕ್ಕಪುಟ್ಟ ದಾನ ಮಾಡಿ ಬ್ಯಾನರ್ ಕಟ್ ಔಟ್ ಹಾಕಿಸಿಕೊಳ್ಳುವವರ  ನಡುವೆ ಸೂರ್ಯನಂತವರು ಬಹಳ ದೊಡ್ಡ ವ್ಯಕ್ತಿಗಳಾಗಿ ಕಾಣಿಸಿಕೊಳ್ಳುತ್ತಾರೆ! ಸಹಾಯ ಮಾಡಲು ಹೋದಾಗ ಮಕ್ಕಳಿಗೆ ಸೂರ್ಯ ಹೇಳುವ ಕಿವಿಮಾತು ಎರಡು. 

ಒಂದು: "ಕನ್ನಡ ಮೀಡಿಯಂ ಅಲ್ಲಿ ಓದಿದ್ರೆ ಮುಂದೆ ಭವಿಷ್ಯ ಇಲ್ಲ ಅನ್ಕೋಬೇಡಿ, ನಾನು ಕನ್ನಡ ಮೀಡಿಯಂ ಅಲ್ಲೇ ಓದಿದೋನು"

ಎರಡು "ನಾವು ಓದುವಾಗ, ಕಷ್ಟದಲ್ಲಿದ್ದಾಗ, ನಮಗೆ ಯಾರೋ ಬಂದು ಸಹಾಯ ಮಾಡಿದ್ರು.. ನಾವ್ ಈಗ ನಿಮಗ್ ಸಹಾಯ ಮಾಡ್ತಾ ಇದೀವಿ.. ನೀವ್ ಮುಂದೆ ಬೇರೆಯವ್ರಿಗ್ ಸಹಾಯ ಮಾಡಿದ್ರೆ ನಾವ್ ಮಾಡಿದ್ದು ಸಾರ್ಥಕ"

          ಮಾಡಿದ ಸಹಾಯಕ್ಕೆ, ದಾನಕ್ಕೆ ಯಾವುದೇ ಹೆಸರನ್ನು; ಲಾಭವನ್ನು ಆಪೇಕ್ಷಿಸದೇ, ಹಲವು ವಿದ್ಯಾರ್ಥಿಗಳಿಗೆ ನೆರವಾಗುತ್ತಾ, ಅವರಿಗೆ ಮಾದರಿಯಾಗುತ್ತಾ ಇರುವ ಸೂರ್ಯ ತರದವರು ಕಾಣಸಿಗುವುದು ಅಪರೂಪ. ಅವನು ನನ್ನ ಗೆಳೆಯ ಅಂತ ಹೇಳೋಕೆ ಒಳಗೊಳಗೇ ಏನೋ ಒಂತರ ಹೆಮ್ಮೆ! ಮೊನ್ನೆ ಜುಲೈ 3 ಅವನ ಹುಟ್ಟುಹಬ್ಬ. ಆ ದಿನ ಬರೀಬೇಕು ಅನ್ಕೊಂಡಿದ್ದು ಇವಾಗ ಬರೀತಾ ಇದೀನಿ. "ಹುಟ್ಟು ಹಬ್ಬದ ಸಿಹಿ ಹಾರಯ್ಕೆಗಳು ಸೂರ್ಯ. ನೀನ್ ಮಾಡೊ ಈ ಕೆಲಸಗಳು ನಾವ್ ಕಲ್ತಿದ್ ಶಾಲೆನ ನೆನ್ಪ್ ಮಾಡ್ಕೊಳ್ಳೋಕೆ, ನಮ್ ಪರಿಮಿತಿಲಿ ಆಗೋ ಕೆಲ್ಸಗಳ್ನ ಶಾಲೆಗಾಗಿ ಮಾಡೋಕೆ ಪ್ರೇರೇಪಿಸುತ್ವೆ. ನಿನ್ನಂತವರು ನೂರಾರು, ಸಾವಿರಾರು ಜನ ಮುಂದೆ ಬಂದು ಇಂತ ಸ್ಪೂರ್ತಿ ಕೊಡೋ ಕೆಲಸ ಮಾಡ್ಲಿ, ಇಂತಹ ಕೆಲಸಗಳು ಇನ್ನೂ ದೊಡ್ಡ ಮಟ್ಟದಲ್ಲಿ ನೀನು ಮಾಡುವಂತಾಗ್ಲಿ ಅಂತ ಹಾರೈಸ್ತೀನಿ.

Friday 17 June 2016

RIP



Facebook, WhatsAppಗಳಲ್ಲಿ ಯಾವಾಗಲೂ online ಇದ್ದು, ಜನರೊಂದಿಗೆ ಸಂಪರ್ಕದಲ್ಲಿರುವೆ ಎಂಬ ಭ್ರಮೆಯಲ್ಲಿದ್ದ.

ಅವನು ಸತ್ತಾಗ ನೋಡಲು ಯಾರೂ ಬರಲಿಲ್ಲ. ಎಲ್ಲರೂ Facebook, WhatsAppಗಳಲ್ಲಿ 'RIP'ಎಂದು ಸಂದೇಶ ಕಳುಹಿಸಿದ್ದರು ಅಷ್ಟೆ.


25/02/2015                                                              
ನಿರುಪಯೋಗಿ

ನಿದ್ರಾದೇವಿಯ ಮೀರಿ!

          "ಮುಂಗಾರು ಮಳೆಯೆ.. ಏನು ನಿನ್ನ ಹನಿಗಳ ಲೀಲೆ.." ಶನಿವಾರ ರಾತ್ರಿ ಸುಮಾರು ೮ ಗಂಟೆಯ ಸಮಯ, ತುಂತುರು ಮಳೆ ಬರ್ತಾ ಇತ್ತು. ಅದೇ ಮೂಡಲ್ಲಿ ಹಾಡ್ ಕೇಳ್ತಾ, ಬಹುಶಃ ನಾಳೆ 'ಹನೂರಿಗೆ' ಹೋಗುವ ಕಾರ್ಯಕ್ರಮ ರದ್ದಾಗಿದೆ ಎಂದು ಏನನ್ನೋ ಬ್ರೌಸ್ ಮಾಡುತ್ತಾ ಕುಳಿತಿದ್ದಾಗ ಗೆಳೆಯ ವಿನಯನ ಕರೆ ಬಂತು. "ಮಗ ನಾಳೆ ನಾವಿಬ್ರೆ ಹನೂರಿಗೆ ಹೋಗ್ ಬರೋಣ. ಕಾಂತು ಆದ್ರೆ ಅಲ್ಲೇ ಜಾಯ್ನ್ ಆಗ್ತೀನಿ ಅಂದಿದಾನೆ" ಅಂದ. "ಲೋ! ನಾವಿಬ್ರೆ ಹೋಗಿ ಏನೋ ಮಾಡೊದ್ ಅಲ್ಲಿ?" ಎಂದು ಕೇಳಿದೆ. "ಬೇರೆಯವ್ರ್ ಇದ್ದಿದ್ದ್ರೆ ಏನ್ ಮಾಡ್ತಿದ್ವೋ ಅದೇ ಮಾಡೋಣ!" ಎಂದ. ನನಗೂ ಸರಿ ಎನಿಸಿ ಬೆಳಿಗ್ಗೆ ೫ ಕ್ಕೆ ಕರೆ ಮಾಡಿ ಎಬ್ಬಿಸು ಎಂದು ಹೇಳಿ ಮಾತು ಮುಗಿಸಿದೆ.

          ಬಸ್ಸು ಇದ್ದಿದ್ದು ಬೆಳಿಗ್ಗೆ ೬ಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ; ಹಾಗಾಗಿ ಅಲ್ಲೆ ಪಕ್ಕದಲ್ಲಿದ್ದ ಗೆಳೆಯ ದರ್ಶನ್ ಮನೆಯಲ್ಲಿ ಉಳಿಯುವುದು ಲೇಸೆಂದು ಅಲ್ಲಿಗೆ ಹೊರಟೆ. ಮಳೆ ತನ್ನ ಕಣ್ಣಾ ಮುಚ್ಚಾಲೆ ಆಟ ನಿಲ್ಲಿಸಿರಲಿಲ್ಲ. ಮಳೆ ಬಂದಾಗ ಬೈಕ್ ಓಡಿಸುವುದೆಂದರೆ ನನಗೆ ಕೊಂಚ ದಿಗಿಲು! ಎಲ್ಲಿ ಸ್ಕಿಡ್ ಆಗಿ ದಬಾಕೊತಿನೊ ಅನ್ನೊ ಭಯ! ನಿಧಾನವಾಗಿ ಓಡಿಸಿ ಅವನ ಮನೆ ತಲುಪಿದೆ. ಅವರಮ್ಮ ಬಿಸಿಬಿಸಿ ಮುದ್ದೆ ಮತ್ತು ಸಾಂಬರ್ ಮಾಡಿದ್ರು. ಇವತ್ತು ಈ ಹೋಟೆಲು, ನಾಳೆ ಆ ಕ್ಯಾಂಟೀನು ಅಂತ ಊಟಕ್ಕೆ ಓಡಾಡುವ ಅಲೆಮಾರಿ ನಾನು. ಮುದ್ದೆ ನೋಡಿದ್ದು ಮಳೆಯಿಲ್ಲದ ನಾಡಿಗೆ ತುಂತುರು ಮಳೆ ಸುರಿದ ಹಾಗಾಯ್ತು! ಮುದ್ದೆ ತಿಂದು ಮಾಳಿಗೆಯಲ್ಲಿ ಅದು- ಇದು ಹರಟುತ್ತಾ ಕೂತವರಿಗೆ ಸಮಯ ಹೋಗಿದ್ದೆ ತಿಳಿಯಲಿಲ್ಲ. ಗಮನಿಸಿದಾಗ ಆಗಲೇ  ೩.೩೦ ಆಗಿತ್ತು! ಅದನ್ನು ಬೆಳಗಿನ ಜಾವ ಎನ್ನಲೋ ಇಲ್ಲಾ ತಡರಾತ್ರಿ ಎನ್ನಲೋ ಇನ್ನೂ ಅರ್ಥ ಆಗಿಲ್ಲ! ಜೈ ಎಂದು ೫.೩೦ ಕ್ಕೆ ಅಲಾರ್ಮ್ ಇಟ್ಟು ನಿದ್ರಾದೇವಿಯ ಪಾದಕ್ಕೆ ಶರಣಾದೆ.

          ಬೆಳಿಗ್ಗೆ ಎದ್ದು ತಯಾರಾಗಿ ಸ್ಯಾಟಲೈಟ್ ಬಸ್ ನಿಲ್ದಾಣ ತಲುಪಿದ ಐದೇ ನಿಮಿಷಕ್ಕೆ ವಿನಯ ಬಂದ. ನಾಲ್ಕನೇ ನಂಬರ್ ಪ್ಲಾಟ್ ಫಾರ್ಮನಲ್ಲಿ ಹನೂರಿನೆಡೆಗೆ ಹೋಗುವ ಬಸ್ಸು ಇನ್ನೂ ಬಾರದ್ದರಿಂದ, "ಬಾರೊ, ಬಾದಾಮಿ ಹಾಲು ಕುಡಿದು ಹೊರಡೋಣ" ಎಂದೆ. ನಂದಿನಿ ಕೇಂದ್ರದಲ್ಲಿ ಬಿಸ್ಕತ್ತು ಬಾದಾಮಿ ಹಾಲನ್ನು ಸವಿದು ಮುಗಿಸುತ್ತಿದ್ದಂತೆ ಹನೂರಿಗೆ ಹೋಗುವ ಬಸ್ ಬಂದಿತು. ವಿನಯ ಬೇಗ ಬಸ್ ಹತ್ತಿ ಮುಂದಿನ ಸೀಟನ್ನು ಕಾದಿರಿಸಿದ. ನಾನು ಹೋಗಿ ಆಸೀನನಾದೆ! ನಿರ್ವಾಹಕ "ರೈಯ್ಯಾ ರೈಯ್ಯಾ.." ಎನ್ನುತ್ತಿದ್ದಂತೆ ಚಾಲಕ ಪಯಣ ಆರಂಭಿಸಿದ. ಈ ಮೊದಲೇ ಮೂರು ಬಾರಿ ಹನೂರಿಗೆ ಇದೇ ವೇಳೆಯ ಬಸ್ಸಿನಲ್ಲಿ ಹೋಗಿದ್ದರಿಂದ, ಹಿಂದಿನ ಬಾರಿಯ ಪ್ರಯಾಣದ ಬಗ್ಗೆ ವಿನಯ ಅನುಭವವನ್ನು ಹಂಚಿಕೊಳ್ಳುತ್ತಾ ಕೂತಿದ್ದ. ನನಗೋ, ಅವನಾಡುತ್ತಿದ್ದ ವಿಷಯದ ಬಗ್ಗೆ ಆಸಕ್ತಿ; ಆದರೆ ಹಿಂದಿನ ದಿನ ಮಲಗಿದ್ದೆ ಬರಿ ಎರಡು ಗಂಟೆ, ಒಳ್ಳೆ ಬಿಸಿ ತುಪ್ಪದ ಸ್ಥಿತಿ ಆಯಿತು. ಕಾಣದ ನಿದ್ದೆಗೆ ಹಂಬಲಿಸುತ್ತಿದ್ದ ನನ್ನ ಕಣ್ಣುಗಳನ್ನು ನೋಡಿ, "ನೀನ್ ಸ್ವಲ್ಪ ಹೊತ್ತು ಮಲ್ಕೊಳ್ಳೊ, ಅಲ್ಲಿ ಹೋಗಿ ಏನ್ ಮಾಡೋದು ಅಂತ ಎದ್ ಮೇಲೆ ಮಾತಾಡೋಣ" ಎಂದ. ಮಕ್ಕಳಿಗೆ ಬೇಕಿದ್ದದ್ದು ಗೋಳಿಬಜೆ - ಅಮ್ಮ ಮಾಡಿದ್ದು ಗೋಳಿಬಜೆ ಅಂದುಕೊಳ್ಳುತ್ತ ಮಲಗಿದೆ. 

          ಬಸ್ಸು ಮದ್ದೂರು ತಲುಪಿದಾಗ, ವಿನಯ ತಿಂಡಿಗಾಗಿ ಎಬ್ಬಿಸಿದ. ಇಬ್ಬರೂ ದಕ್ಷಿಣ ಭಾರತದ ರಾಷ್ಟ್ರೀಯ ತಿಂಡಿಯಾದ ಇಡ್ಲಿ ವಡೆಯನ್ನು ತಿಂದು, ಮದ್ದೂರಿನಲ್ಲಿ ಮದ್ದೂರು ವಡೆ ತಿನ್ನದೇ ಇದ್ರೆ ಹೇಗೆ ಎನ್ನುತ್ತಾ ನಾಲ್ಕು ವಡೆಯನ್ನು ಕಟ್ಟಿಸಿಕೊಂಡು ಬಸ್ ಹತ್ತಿದೆವು. ಪಯಣ ಮುಂದುವರೆಯಿತು. ನಮ್ಮ ಡ್ರೈವರೊ, ಐದ್ ಐದು ನಿಮಿಷಕ್ಕೊಮ್ಮೆ ಎಂಬಂತೆ "ಪೊಂ ಪೊಂ.. ಪೊಂ ಪೊಂ.." ಎಂದು ಜೋರಾಗಿ ಮುಂದೆ ಹೋಗುತ್ತಿದ್ದ ಗಾಡಿಗಳಿಗೆ ಗದರಿಸುತ್ತಾ ಸಾಗುತ್ತಿದ್ದ. ೬.೩೦ ಗೆ ಹೊರಟ ನಾವು ಸುಮಾರು ೧೦.೩೦ ಕ್ಕೆ ಹನೂರು ತಲುಪಿದೆವು.

          ಹನೂರು ಬಸ್ ನಿಲ್ದಾಣದಲ್ಲಿ, ಮಾರ್ಗದರ್ಶಿ ಸಂಸ್ಥೆಯ ಮಹದೇವ ಪ್ರಸಾದ್ ಅವರು ನಮ್ಮನ್ನು ಬರಮಾಡಿಕೊಳ್ಳಲು ಕಾಯುತ್ತಾ ಕುಳಿತಿದ್ದರು. ಅವರೊಡನೆ ಅಲ್ಲೇ ಪಕ್ಕದಲ್ಲಿದ್ದ ಹೊಟೆಲ್ ನಲ್ಲಿ ಚಹಾ ಆರ್ಡರ್ ಮಾಡಿ ಕುಳಿತೆವು. ನಮಗೆ ನೀರು ತಂದು ಕೊಟ್ಟ ಆ ಪುಣ್ಯಾತ್ಮ, ಒಂದೇ ಬಾರಿ ಮೂರು ಲೋಟವನ್ನು ತರಬೇಕು ಎಂದು ತನ್ನ ಬೆರಳುಗಳನ್ನು ಲೋಟಗಳಲ್ಲಿ ಮುಳುಗಿಸಿ ತಂದ. "ಏನಯ್ಯ, ಕುಡಿಯೋ ನೀರಲ್ಲಿ ಬೆರಳು ಮುಳುಗಿಸಿ ತಂದಿದ್ಯಲ್ಲ?!" ಎಂದು ಪ್ರಸಾದ್ ಅವರು ಕೇಳಿದರೆ ಆ ಮಹಾಶಯ "ಹೇಗೆ ತಂದುಕೊಡಬೇಕು ಅಂತ ನಿಮ್ಮಿಂದ ನಾನು ಕಲಿಬೇಕಾಗಿಲ್ಲ" ಎಂದು ಗೊಣಗುತ್ತ ಚಹಾ ತರಲು ಹೋದ. ಪುಣ್ಯಕ್ಕೆ, ಚಹಾದಲ್ಲಿ ಬೆರಳು ಮುಳುಗಿಸದೆ ಸರಿಯಾಗೆಯೆ ತಂದ! ಹರಹರ ಎಂದು ಹೊರಬರುತ್ತಿದ್ದಂತೆ ನಾಗರಾಜ್ ಅವರು ಬಂದರು. ಇವರೂ ಕೂಡ ಮಾರ್ಗದರ್ಶಿ ಸಂಸ್ಥೆಯ ಉದ್ಯೋಗಿ. ಬಹಳ ಮೃದು ಸ್ವಭಾವದ ಸಜ್ಜನ. ಅವರ ಗಾಡಿಯಲ್ಲಿ ವಿನಯ ಕೂತ. ನಾನು ಪ್ರಸಾದ್ ಅವರ ಗಾಡಿಯಲ್ಲಿ ಕೂತೆ. ಪ್ರಸಾದರದ್ದು ಮಾಜಿ ಸಚಿವರಾದ ಸೋಮಣ್ಣನವರ ಅನುದಾನದಿಂದ ಬಂದ ಗಾಡಿ. ಮೊದಲ ಬಾರಿಗೆ ತ್ರಿಚಕ್ರದ ಹೋಂಡಾ ಆಕ್ಟಿವ (ಅಂಗವಿಕಲರಿಗೆ ನೀಡುವಂಥದ್ದು) ಮೇಲೆ ಕೂತ ಅನುಭವ. ಹೋಗಿ ರಾಜಣ್ಣ ಸರ್  ಮನೆ ತಲುಪಿದೆವು.



          ಅಲ್ಲಿ ರಾಜಣ್ಣ ಸರ್  ಮಕ್ಕಳು ವಿನಯನನ್ನು ನೋಡುತ್ತಿದ್ದಂತೆ ಅವನೊಡನೆ ಆಡಲು ಆರಂಭಿಸಿದ್ದು ನೋಡಿಯೇ ತಿಳಿಯಿತು, ಹಿಂದಿನ ಬಾರಿ ಬಂದಾಗ ಇವನು ಮಾಡಿದ ಮೋಡಿಯ ಪರಿ! ಚಹಾ ಕುಡಿದೇ ಬಂದಿದ್ದೇವೆ ಎಂದರೂ, ರಾಜಣ್ಣ ಸರ್ ಪತ್ನಿ ಬೆಲ್ಲದಲ್ಲಿ ಮಾಡಿದ್ದ ಚಹಾ ಕೊಟ್ಟರು. ರಾಜಣ್ಣ ಸರ್ ದು ಮುಗುಳ್ನಗುವಿನೊಂದಿಗೆ ಅದಕ್ಕೊಂದು ಸಮಜಾಯಿಷಿ ಬೇರೆ! "ಕುಡಿರಿ ಕುಡಿರಿ.. ಫೀಲ್ಡ್ ವಿಸಿಟ್ ಗೆ ಶಕ್ತಿ ಬೇಕಲ್ವ" ಎಂದು. ಮಾರ್ಗದರ್ಶಿಯ ಇನ್ನೋರ್ವ ಉದ್ಯೋಗಿ, ಸೃಜನಶೀಲರಾದ ಕಿರಣ್ ಕೂಡ ನಮ್ಮ ಜೊತೆ ಚಹಾ ಹೀರುತ್ತ ರಾಜಣ್ಣನ ಮಗಳು ಪೂನಮ್ ಳ ಚೇಷ್ಟೆ ನೋಡುತ್ತಾ ಕೂತರು. ರಾಜಣ್ಣ ಸರ್ ಹನೂರಿನ ನೈರ್ಮಲ್ಯದ ಮುಖ್ಯ ಸಮಸ್ಯೆಗಳನ್ನು ವಿವರಿಸುತ್ತಾ ಹೋದರು. ನಾವು ಆಲಿಸುತ್ತಾ ಪಟ್ಟಿ ಮಾಡುತ್ತಾ ಕೂತೆವು. 

          ಈ ಭೇಟಿಯ ಮುಖ್ಯ ಉದ್ದೇಶ, ಹನೂರಿನ ಬೇರೆ ಬೇರೆ ಮನೆಗಳಿಗೆ ಹೋಗಿ ನೈರ್ಮಲ್ಯದ ಬಗ್ಗೆ ಶೌಚಾಲಯದ ಬಗ್ಗೆ ಅವರ ಅರಿವು, ಅಭಿಪ್ರಾಯಗಳನ್ನು ಕಲೆಹಾಕಿ ಅದಕ್ಕೆ ತಕ್ಕನಾಗಿ ಅವಾರ್ನೆಸ್ಸ್ - ಅರಿವು ಮೂಡಿಸುವ ಕಾರ್ಯಕ್ರಮವನ್ನು ಯೋಜಿಸುವುದಾಗಿತ್ತು. ರಾಜಣ್ಣ ಸರ್; ಆರ್ಥಿಕವಾಗಿ ಬೇರೆ ಬೇರೆ ಸ್ಥರದಲ್ಲಿರುವ, ಶೈಕ್ಷಣಿಕವಾಗಿ  ಬೇರೆ ಬೇರೆ ಸ್ಥರದಲ್ಲಿರುವ ವಿಕಲಾಂಗರು ಹಾಗೂ ವಿಶಿಷ್ಟವಾದ ಮಾಂದ್ಯತೆ (ಸ್ಪೆಷಲ್ಲಿ ಚಾಲೆಂಜಡ್)  ಇರುವವರ ಮನೆಗಳಿಗೆ ಭೇಟಿ ನೀಡಿ ವಿವರ ಸಂಗ್ರಹಿಸಿದರೆ, ಸಮಸ್ಯೆಯನ್ನು ಕೂಲಂಕುಷವಾಗಿ ಗಮನಿಸಬಹುದು ಎಂದು ಸಲಹೆಯಿತ್ತರು. ಅವರ ಸಲಹೆಯಂತೆ ಪ್ರಸಾದ್ ಹಾಗೂ ನಾಗರಾಜ್ ಅವರು ಯಾವ ಯಾವ ಮನೆಗಳನ್ನು ಭೇಟಿ ಮಾಡುವುದು ಎಂದು ಪಟ್ಟಿ ಮಾಡಿದರು. ಆ ಪಟ್ಟಿಯಂತೆ ನಾವು ಹೊರಟೆವು.




          ಫೀಲ್ಡ್ ವಿಸಿಟ್ ನ ಭಾಗವಾಗಿ  ನಾವು ಮೊದಲು ಹೋಗಿದ್ದು ಎ.ಜೆ ಕಾಲೋನಿಗೆ. ಅಲ್ಲಿನ ಮನೆಗಳಲ್ಲಿ, ಏಕೆ ಶೌಚಾಲಯವಿಲ್ಲ? ಅದರ ಇರುವಿಕೆಯ ಪ್ರಾಮುಖ್ಯತೆಯ ಅರಿವು ಇದೆಯೇ? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತ, ಅವರ ಉತ್ತರವನ್ನು ಬರೆದುಕೊಳ್ಳುತ್ತಾ ಹೋದೆ. ವಿನಯ ಫೋಟೋ, ವೀಡಿಯೊ ತೆಗೆಯುವುದು; ಅವರಿಗೆ ಪ್ರಶ್ನೆ ಕೇಳುವುದರಲ್ಲಿ ನಿರತನಾದ. ಪ್ರಸಾದ್, ಕಿರಣ್ ಹಾಗೂ ನಾಗರಾಜ್ ಅವರು ಕೂಡ ಪ್ರಶ್ನೆ ಕೇಳುವುದರಲ್ಲಿ, ಉತ್ತರ ಆಲಿಸುವುದರಲ್ಲಿ ತಲ್ಲೀನರಾದರು. ಆ ಕಾಲೋನಿಯವರು ಕೂಡ ಬಂದು ನಿಂತರು. ಶೌಚಾಲಯಕ್ಕಾಗಿ ಅವರು ತಾಲೂಕು ಪಂಚಾಯಿತಿಗೆ, ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಪತ್ರವನ್ನು ತಂದು ತೋರಿಸಿದರು. ಅಲ್ಲಿನ  ಪುಟ್ನಂಜಮ್ಮನಿಗೆ ಕಾಲು ಸ್ವಾಧೀನ ಕಳೆದುಕೊಂಡಿದೆ. ತಾಯಿಯೇ ಪ್ರತಿನಿತ್ಯ ಬಯಲಿನೆಡೆಗೆ ಕರೆದೊಯ್ಯಬೇಕಾದ ಸ್ಥಿತಿ. ನಾವು ಭೇಟಿ ನೀಡಿದ ಬಹಳಷ್ಟು ಮನೆಗಳಲ್ಲಿ ನಮಗೆ ಸಂವಾದಿಸಲು ಸಿಕ್ಕಿದ್ದು ಮನೆಯ ಮಹಿಳೆಯರೇ! 

          ಶೌಚಾಲಯ ಬೇಕು ಎಂದು ಅವರಿಗೆ ಗೊತ್ತಿದ್ದರೂ, ಹಣವಿಲ್ಲದೆ, ಜಾಗವಿಲ್ಲದೆ ಶೌಚಾಲಯ ಕಟ್ಟಿಸಲಾಗುತ್ತಿಲ್ಲ ಎಂದರು. "ಎಷ್ಟು ದಿನಕ್ಕೊಮ್ಮೆ ನೀರು ಬರುತ್ತದೆ? ನೀರಿನ ಸಮಸ್ಯೆ ಇದೆಯೇ?" ಎಂಬಿತ್ಯಾದಿ ಪ್ರಶ್ನೆ ಕೇಳುತ್ತ ಹೋದೆವು.ಸುಮಾರು ಮನೆಗಳ ಭೇಟಿ ಮುಗಿದಾಗ ಗೆಳೆಯ ಕಾಂತು ಬಂದ! ನಮಗೆ ಹೊಳೆಯದ, ನಾವು ಯೋಚಿಸದ ಹಲವು ಪ್ರಶ್ನೆಗಳು ಅವನ ಬತ್ತಳಿಕೆಯಲ್ಲಿದ್ದವು. "ಬನ್ನಿ, ಊಟ ಮಾಡಿ ಆಮೇಲೆ ಮುಂದುವರಿಸೋಣ" ಎಂದು ನಾಗರಾಜ್ ಅವರು ಹೇಳಿದರು. ನಮಗೂ ಹೊಟ್ಟೆ ಹಸಿದಿತ್ತು. ಅಲ್ಲೇ ಒಂದು ಹೋಟೆಲ್ನಲ್ಲಿ ಊಟ ಮಾಡಿ ಮತ್ತೆ ಭೇಟಿ ಮುಂದುವರೆಸಿದೆವು. ಸುಮರು ಹದಿನೈದು ಮನೆಗಳ ಭೇಟಿ ಮಾಡಿ, ಅವಾರ್ನೆಸ್ಸ್ ಕಾರ್ಯಕ್ರಮಕ್ಕೆ ಬೇಕಾದ ಮಾಹಿತಿಗಳೆಲ್ಲ ಸಿಕ್ಕವು ಎಂದು ದೃಢ ಪಟ್ಟ ಮೇಲೆ, ಇಷ್ಟು ಸಾಕು; ರಾಜಣ್ಣ ಸರ್ ಮನೆಗೆ ಹೋಗೋಣ ಎಂದು ನಡೆಯತೊಡಗಿದೆವು.

          ರಾಜಣ್ಣ ಸರ್ ಮನೆಯಲ್ಲಿ ಎಲ್ಲರೂ ಕೂತು, ಸಂಗ್ರಹಿಸಿದ ಅಂಶಗಳ ಬಗ್ಗೆ ಚರ್ಚಿಸಿ ಮುಂದಿನ ಹೆಜ್ಜೆಯ ಬಗ್ಗೆ ಮಾತನಾಡುತ್ತಿದ್ದಂತೆ ಅವರ ಪತ್ನಿ ಮತ್ತೆ ಚಹಾದೊಂದಿಗೆ ಪ್ರತ್ಯಕ್ಷರಾದರು! ಮಾತುಕತೆ ಮುಗಿಯುತ್ತಿದ್ದಂತೆ ನಾಗರಾಜ್ ಅವರು "ನಮ್ಮ ಹನೂರ್ ನ ಮಾದರಿ ಊರಾಗಿ ಮಾಡಬೇಕು ಅಂತಿದೀರ, ದೇವರು ನಿಮಗೆ ಹೆಚ್ಚಿನ ಶಕ್ತಿ ಕೊಡಲಿ" ಎಂದು ಹಾರೈಸಿ ಹೊರಟರು. ಪ್ರಸಾದ್ ಅವರು ಕೂಡ ನಮಗೆ ಶುಭ ವಿದಾಯ ಹೇಳಿ ನಾಗರಾಜ್ ಅವರನ್ನು ಹಿಂಬಾಲಿಸಿದರು. ನಾವು ಮೂವರು ಕೂಡ ಖಾಲಿ ಬಾಟಲಿಯಲ್ಲಿ ನೀರು ತುಂಬಿಸಿಕೊಂಡು ಹೊರಡಲು ಸನ್ನದ್ಧರಾದೆವು. ಕಿರಣ್ ಅವರು ಕೂಡ ನಮ್ಮೊಡನೆ ಹೊರಟರು.

          ತಮ್ಮ ಕಾರಿನಲ್ಲಿ, ರಾಜಣ್ಣ ಸರ್  ನಮ್ಮನ್ನು ಬಸ್ ನಿಲ್ದಾಣದ ತನಕ ಬೀಳ್ಕೊಟ್ಟರು. ಕಾರು ನಮ್ಮ ನೋಟದಿಂದ ಮರೆಯಾಗುವವರೆಗೂ, ಪೂನಮ್ ಮತ್ತು ಭಾನು ನಮ್ಮೆಡೆಗೆ ಕೈ ಬಿಸಿ "ಟಾಟಾ.. ಬೈಬೈ" ಹೇಳುತ್ತಲಿದ್ದರು. ನಾವೂ ಅವರೆಡೆಗೆ ಕೈ ಬೀಸುತ್ತಾ ನಿಂತೆವು. ಹಾಗೆಯೆ ಸ್ವಲ್ಪ ಹೊತ್ತಿನಲ್ಲಿ ಕೊಳ್ಳೆಗಾಲದ ಕಡೆ ಹೋಗುವ ಬಸ್ಸು ಬಂದಿತು. ದರ್ಶನ ಅಭಿನಯದ ಕಲಾಸಿಪಾಳ್ಯ ಚಿತ್ರ ಬೇರೆ ಹಾಕಿದ್ರು ಬಸ್ಸಲ್ಲಿ. ಅಲ್ಲಿ "ಸುಂಟರಗಾಳಿ ಸುಂಟರಗಾಳಿ" ಅಂತ ಹಾಡು ಬರ್ತಾ ಇದ್ರೆ, ಬಸ್ಸಲ್ಲಿ ಒಳ್ಳೆ ತಂಗಾಳಿ ಬೀಸ್ತಾ ಇತ್ತು. ನಮ್ ಬಸ್ಸಿನ ನಿರ್ವಾಹಕ "ಕೊಳ್ಳೆಗಾಲದಲ್ಲಿ ನಮ್ದೆ ಬಸ್ಸಿದೆ. ಅವ್ರಿಗ್ ನಿಲ್ಸಕ್ ಹೇಳಿದೀನಿ, ಅದರಲ್ಲೇ ಹೋಗಿ" ಅಂದ. ಸರಿ ಅಂದ್ಕೊಂಡು ಕೊಳ್ಳೆಗಾಲದಲ್ಲಿ ಈ ಬಸ್ಸಿಂದ ಇಳ್ಕೊಂಡು ಓಡಿ ಹೋಗಿ ಆ ಬಸ್ ಹತ್ತಿದ್ವಿ. ಹತ್ತಿದ ಮೇಲೆ ಗೊತ್ತಾಗಿದ್ದು; ಸೀಟ್ ಇಲ್ಲ ಅಂತ! ನಾನು, ಕಾಂತು ಬಸ್ ಇಂಜಿನ್ ಇರತ್ತಲ್ವಾ ಅದರ್ ಮೇಲೆ ಕೂತ್ವಿ. ಪುಣ್ಯಕ್ಕೆ ಅದಕ್ಕೆ ಕುಶನ್ ಹಾಕ್ಸಿದ್ರು! ವಿನಯ ಫುಟ್ ಬೋರ್ಡ್ ಪಕ್ಕ ಕೂತ. 

          ಈ ಬಸ್ಸು ಕೊಳ್ಳೆಗಾಲ ಟು ಬೆಂಗಳೂರು ತಡೆರಹಿತ! ಕಾಂತು ಕಿವಿಯುಲಿ ಹಾಕ್ಕೊಂಡು ಹಾಡು ಕೇಳ್ತಾ ಕೂತ. ನಾನು ವಾಟ್ಸ್ ಆಪ್ಪ್, ಫೆಸ್ಬೂಕ್ ಅಲ್ಲಿ ಸಮಯ ಕೊಲ್ಲ ಹತ್ತಿದೆ. ಒಳ್ಳೆ ಮಳೆ ಬೇರೆ ಬರೋದಕ್ ಶುರು ಆಯಿತು. ಸೀಟ್ ಸಿಕ್ಕಿದವ್ರ್ ಎಲ್ಲ ಗಡದ್ ಆಗಿ ನಿದ್ದೆ ಮಾಡ್ತಾ ಇದ್ರು. ಮೊಬೈಲ್ನಲ್ಲಿ ಉಳಿದವರು ಕಂಡಂತೆ ಚಿತ್ರದ "ಗಾಟಿಯ ಇಳಿದು" ಹಾಡು ಗುನುಗ್ತಾ ಇತ್ತು. "ಸಮಯ ಸಾಗೊ ಗತಿಯ ತಡೆಯುವ ಪರಿಯ ನಾ ಕಾಣೆನು.." ಅಂತ ಬಂದಾಗ ನನಗಂತೂ ಸಮಯ ಬೇಗ ಸಾಗಿ ಬೆಂಗಳೂರು ಬೇಗ ತಲುಪಿದರೆ ಸಾಕಪ್ಪ! ಇಲ್ಲಾ ಅಂದ್ರೆ ಎರಡ್ ಇದ್ದಿದ್ ನಾಲಕ್ ಆಗ್ ಹೋಗತ್ತೆ ಅನ್ನೋ ಭಯ ಕಾಡ್ತಾ ಇತ್ತು! ಅಂತೂ ಇಂತೂ ಬೆಂಗಳೂರು ತಲುಪಿದ್ವಿ. ವಿನಯ ಆರ್.ವಿ ಕಾಲೇಜ್ ಹತ್ರ ಇಳ್ಕೊಂಡ್ರೆ ನಾನು ಕಾಂತು ಸ್ಯಾಟ್ ಲೈಟ್ ಬಸ್ ನಿಲ್ದಾಣದಲ್ಲಿ ಇಳ್ಕೊಂಡ್ವಿ.

          ನಾನು, ಕಾಂತು ಇಬ್ಬರೂ ಕಾಫಿ ಪ್ರಿಯರು; ಅದರಲ್ಲೂ ಸ್ಟ್ರಾಂಗ್ ಫಿಲ್ಟರ್ ಕಾಫಿ ಸಿಕ್ಕಿತೆಂದರೆ ಸ್ವರ್ಗಕ್ಕೆ ಮೂರೇ ಗೇಣು! ಬೆಳಿಗ್ಗೆ ವಿನಯನ ಜೊತೆ ಬಾದಾಮಿ ಹಾಲು ಕುಡಿದ ನಂದಿನಿ ಕೇಂದ್ರದಲ್ಲೇ ಎರಡು ಕಾಫಿ, ನಾಲ್ಕು ಬಿಸ್ಕತ್ತು ತಗೊಂಡು ಕೂತ್ವಿ. ಅವ್ನೂ ಕೂಡಾ ಹಿಂದಿನ ದಿನ ಬರಿ ಎರಡ್ ಗಂಟೆ ಮಲಗಿದ್ದ. ಬಾಡಿ ಪಾರ್ಟ್ಸ್ ಎಲ್ಲ ನೋಯ್ತಾ ಇತ್ತು. ನಿದ್ರಾದೇವಿ ಕೈ ಬೀಸಿ ಕರಿತಾ ಇದ್ಲು! ಕಾಫಿ ಹೀರ್ತಾ ಹೇಳ್ದೆ.. "ಮಗ.. ಲೈಫ್ ಟೈಮ್ ಎಕ್ಸಪಿರಿಯೆನ್ಸ್ ಲೋ" ಎಂದು. ಇಬ್ಬರೂ ಮುಗುಳ್ನಗುವನ್ನು ವಿನಿಮಯ ಮಾಡಿಕೊಂಡು, ನೆನಪಿನ ಹೊತ್ತಿಗೆಗೆ ಇನ್ನೊಂದು ಪುಟ ಸೇರ್ಪಡೆಯಾಯಿತು ಎಂದು ಯೋಚಿಸುತ್ತಾ, ಉಳಿದರ್ಧ ಕಾಫಿಯ ಹೀರುತ್ತ ಕೂತೆವು.

*ಕಲೈಡೊ ಸ್ಟಾಂಡ್ ಪಾಯಿಂಟ್ ಬ್ಲಾಗ್ ಗೆ ಬರೆದದ್ದು*

Thursday 19 May 2016

ರಾಮನವಮಿಯ ದಿನ ವಿಜಯದಶಮಿ!


          "ರಾಮನವಮಿ ಇನ್ ಟೂ ಡೇಸ್" "ಪಾನಕ ಪಾನಕ ಪಾನಕ".. ರಾಮನವಮಿ ಹತ್ತಿರವಾಗುತ್ತಿದ್ದಂತೆ ಗೆಳೆಯ ಸ್ಕಂದ WhatsApp ಗುಂಪಿನ ಹೆಸರನ್ನು ಹೀಗೆಲ್ಲಾ ಬದಲಾಯಿಸಲು ಶುರು ಮಾಡಿದ್ದ. ನನ್ನೂರು ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ, ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ, ರಾಮನವಮಿ ಬಹಳ ಸಡಗರದಿಂದ ನಡೆವ ಹಬ್ಬ. ಬೆಳಿಗ್ಗೆ ಇಂದ ಮಧ್ಯಾಹ್ನದವರೆಗೆ ನಾವುಗಳೇ ಎಲ್ಲರಿಗೂ ಪಾನಕ ಹಂಚುತ್ತಿದ್ದೆವು. ಮಧ್ಯಾಹ್ನ ಪೂಜೆಯ ಬಳಿಕ ಮಹಾಸಮಾರಾಧನೆ, ಸಂಜೆ ಚಿಕ್ಕ ಪಲ್ಲಕ್ಕಿ ಉತ್ಸವ, ರಾತ್ರಿ ದೊಡ್ಡ ಪಲ್ಲಕ್ಕಿ ಉತ್ಸವ, ಭಜನೆ, ರಾತ್ರಿ ಪೂಜೆ, ಫಲಾಹಾರದೊಂದಿಗೆ ರಾಮನವಮಿ ಮುಕ್ತಾಯ! ಆಹಾ! ಅದೆಂತಹ ಸಂಭ್ರಮ! ಊರು ಬಿಟ್ಟು ಇಂಜಿನಿಯರಿಂಗ್ ಗೆ ಬೆಂಗಳೂರಿಗೆ ಬರುವ ತನಕ ರಾಮನವಮಿಯ ಸಡಗರ ಇದ್ದಿದ್ದು ಹೀಗೆಯೆ!

          ೨೦೦೯ ರಲ್ಲಿ ಬಿ.ಎಂ.ಎಸ್ ಕಾಲೇಜು ಸೇರಿದ ಬಳಿಕ, ರಾಮನವಮಿ ಆಚರಣೆ ಆಗುತ್ತಿದ್ದದ್ದು ನಮ್ಮ ಮೆಕ್ಯಾನಿಕಲ್ ವರ್ಕ್ ಶಾಪ್ನಲ್ಲಿ ವಿತರಿಸುತ್ತಿದ್ದ ಪಾನಕ, ಮಜ್ಜಿಗೆ ಮತ್ತು ಕೋಸಂಬರಿಯನ್ನು ತಿಂದು ಕಾಲೇಜಿನ ಹಿಂಭಾಗದಲ್ಲಿರುವ ಶ್ರೀರಾಮ ಮಂದಿರಕ್ಕೆ ಹೋಗಿ ಅಲ್ಲಿಯೂ ಮಜ್ಜಿಗೆ, ಪಾನಕ ಕುಡಿಯುವುದರ ಮೂಲಕ! ಕಳೆದ ವರ್ಷ ರಾಮನವಮಿ ದಿನ, ನಾವು ಬೀದಿನಾಟಕಕ್ಕಾಗಿ, ಮಲೆ ಮಹಾದೇಶ್ವರ ಬೆಟ್ಟದೆಡೆಗೆ ಸಾಗುವಾಗ ಕನಕಪುರದ ಬಳಿ ಶನಿಮಹಾತ್ಮನ ದೇವಸ್ಥಾನದಲ್ಲಿ ಪಾನಕ ಹಂಚುತ್ತಿದ್ದನ್ನು ನೋಡಿ, ಗಾಡಿ ನಿಲ್ಲಿಸಿ, ಪಾನಕ ಮಜ್ಜಿಗೆ ಕುಡಿದು ಮುಂದೆ ಸಾಗಿದ್ದೆವು. ಆದರೆ ಯಾವತ್ತೂ ರಾಮನವಮಿ ಎಂದರೆ ಕ್ರೇಜ್ ಇದ್ದಿರಲಿಲ್ಲ. ಪಾನಕ ಮಜ್ಜಿಗೆಯ ನೆಪ ಮಾಡಿಕೊಂಡು ರಾಮನವಮಿಗಾಗಿ ವಾರಗಟ್ಟಲೆ ಕಾದ ನೆನಪೂ ಇಲ್ಲ! ಆದರೆ ಈ ಬಾರಿ ಅದು ಬದಲಾಯಿತು.

          ರಾಮನವಮಿಗೆ ಸ್ವಲ್ಪ ದಿನಗಳ ಹಿಂದೆ ಜರ್ಮನಿಯಿಂದ ಹಿಂದಿರುಗಿದ ಗೆಳೆಯ ಸ್ಕಂದ, ಈ ಬಾರಿ ರಾಮನವಮಿಯಂದು ಎಲ್ಲೆಲ್ಲ ಪಾನಕ ಹಂಚುತ್ತಾರೋ ಅಲ್ಲೆಲ್ಲ ಹೋಗಿ ಹೊಟ್ಟೆ ಮತ್ತು ನಾಲಿಗೆ ತಂಪು ಮಾಡಿಕೊಳ್ಳುವ ಪಣತೊಟ್ಟಿದ್ದ. WhatsApp ಗುಂಪಿನ ಹೆಸರನ್ನು "ರಾಮನವಮಿ ಇನ್ ಟೂ ಡೇಸ್" "ರಾಮನವಮಿ ಟುಮಾರೋ" "ಪಾನಕ ಪಾನಕ ಪಾನಕ" ಎಂದು ಬದಲಾಯಿಸುತ್ತಾ, ಎಲ್ಲೆಲ್ಲಾ ಪಾನಕ ಹಂಚುತ್ತಾರೆ ಎಂದು ಎಲ್ಲರ ಬಳಿ ಕೇಳಿ ಪಟ್ಟಿ ಮಾಡುತ್ತಾ, ನನ್ನಲ್ಲೂ ಪಾನಕದ ಆಸೆಯ ಕಿಡಿಯನ್ನು ಹಚ್ಚಿಸಿದ. ಎಲ್ಲಿಯ ತನಕ ಎಂದರೆ, ಆಫೀಸಿಗೆ ರಜೆ ಹಾಕಿ ರಾಮನವಮಿಗೆ ಊರಿಗೆ ಹೋಗಿ ಬಿಡೋಣ ಎನ್ನುವಷ್ಟು ಆಸೆ ಆಗಿ ಬಿಟ್ಟಿತ್ತು! ಆದರೆ ಕಾರಣಾಂತರಗಳಿಂದ ಹೋಗಲಾಗಲಿಲ್ಲ.

          ರಾಮನವಮಿ ಬಂತು. ದಾರಿಯಲ್ಲಿ ಸಿಗುವ ಆಂಜನೇಯನ ದೇವಸ್ಥಾನದಲ್ಲಿ ಪಾನಕ ಕುಡಿಯುವ ಲೆಕ್ಕಾಚಾರ ಮಾಡಿಕೊಂಡು ಆಫೀಸಿಗೆ ಹೊರಟೆ. ನೋಡಿದರೆ ನನ್ನ ರೂಮಿನ ಬಳಿಯ ವೆಂಕಟರಮಣನ ದೇವಸ್ಥಾನದ ಮುಂದೆಯೇ ಪೆಂಡಾಲ್ ಹಾಕಿ ಪಾನಕ ಹಂಚುತ್ತಿದ್ದರು. ಎಲ್ಲಿಲ್ಲದ ಖುಷಿ ನನಗೆ! ಸೈಕಲನ್ನು ಅಲ್ಲಿಯೇ ಪಕ್ಕದಲ್ಲಿ ನಿಲ್ಲಿಸಿ ಪಾನಕದ ಕ್ಯೂನಲ್ಲಿ ನಿಂತೆ. ಅಲ್ಲಿ ಕಾಯಿ ಹೋಳಿಗೆ, ಕೋಸಂಬರಿ, ಬಜ್ಜಿ, ರೈಸ್ ಬಾತ್, ಮಜ್ಜಿಗೆ ಮತ್ತು ಪಾನಕ ಕೊಟ್ಟರು! ಗಾಂಧೀ ಕ್ಲಾಸ್ ಸೀಟ್ ಹುಡ್ಕೊಂಡ್ ಹೋದವನಿಗೆ ಬಾಲ್ಕನಿ ಸೀಟ್ ಸಿಕ್ಕಷ್ಟು ಆನಂದ ಆಯ್ತು. ಹಾಗೇ ತಿನ್ನುತ್ತಾ, ತಿಂದು ಮುಗಿಸಿದ ಮೇಲೆ ತಟ್ಟೆ ಲೋಟವನ್ನು ಎಸೆಯುವುದು ಎಲ್ಲಿ ಎಂದು ಯೋಚಿಸುತ್ತ ಇರಬೇಕಾದರೆ, ರಸ್ತೆ ದಾಟಿದರೆ ಸಿಗುವ ದೇವಸ್ಥಾನದ ಪಕ್ಕದಲ್ಲಿ ಮೂರು ದೊಡ್ಡ ಕಸದ ಬುಟ್ಟಿಗಳು ಕಂಡವು. ಅಯ್ಯೋ! ಅವುಗಳಲ್ಲಿ ಒಂದು ಕಸದ ಬುಟ್ಟಿಯನ್ನು ಇತ್ತ ಕಡೆ ತಂದು ಇಟ್ಟಿದ್ದರೆ ಇಲ್ಲಿ ತಿನ್ನುತ್ತಿದ್ದವರಿಗೆ ಸುಲಭವಾಗುತ್ತಿತ್ತಲ್ಲ ಎಂದು ಯೋಚಿಸುವಷ್ಟರಲ್ಲಿ ಯಾರೋ ಪುಣ್ಯಾತ್ಮ ಅಲ್ಲಿಂದ ಒಂದು ಕಸದ ಬುಟ್ಟಿಯನ್ನು ತಂದು ಪೆಂಡಾಲ್ ಬಳಿ ಇಟ್ಟ.

          ವಿಪರ್ಯಾಸ ಅಂದರೆ ಕೆಲವರು ತಟ್ಟೆ ಲೋಟವನ್ನು ಕಸದ ಬುಟ್ಟಿಗೆ ಹಾಕದೆ ಅದರ ಪಕ್ಕದಲ್ಲಿ ಎಸೆಯಲಾರಂಭಿಸಿದರು. ಹಾಗೇ ನೋಡುತ್ತಿರಬೇಕಾದರೆ ಒಳ್ಳೆಯ ಸೀರೆ ಉಟ್ಟ, ವಿದ್ಯಾವಂತೆಯಂತಿದ್ದ ಓರ್ವ ಹೆಂಗಸು ಕಸದ ಬುಟ್ಟಿಯ ಬಳಿ ತಟ್ಟೆಯನ್ನು ಎಸೆದಳು. ನನಗೇಕೋ ಸ್ವಲ್ಪ ರೇಗಿ, "ಅಲ್ಲೇ ಕಸದ್ ಬುಟ್ಟಿ ಇದ್ಯಲ್ಲ ಮೇಡಮ್" ಅಂದೆ ಸ್ವಲ್ಪ ಖಾರವಾಗಿ. ಇವನ್ಯಾವನೋ ಹುಚ್ ನನ್ ಮಗ ಅನ್ನೋ ತರ ಲುಕ್ ಕೊಟ್ಟು ಹೋದಳು ("ಕನ್ನಡ್ ಗೊತ್ತಿಲ್ಲ" ಪಾರ್ಟಿ ಇದ್ದಿರಲೂ ಬಹುದು!). ಇದಾಗಿ ಸ್ವಲ್ಪ ಹೊತ್ತಿನಲ್ಲೇ ಬಹಳಷ್ಟು ಜನ ಕಸದಬುಟ್ಟಿಯ ಪಕ್ಕದಲ್ಲೇ ತಟ್ಟೆ ಲೋಟ ಎಸೆದು, ದೇವಸ್ಥಾನದ ಪಕ್ಕದಲ್ಲೇ ಕೈ ತೊಳೆಯಲು ನಳ್ಳಿ ಇದ್ದರೂ, ಆ ಕಸದ ರಾಶಿಯಲ್ಲಿ ಕುಡಿಯುವ ನೀರಿಂದ ಕೈ ತೊಳೆಯಲು ಶುರು ಮಾಡಿ, ಅಲ್ಲೊಂದು ಚಿಕ್ಕ ಕಸದ ರಾಶಿ ಮಾಡಿ ಹಾಕಿದರು. ಅಷ್ಟು ದೊಡ್ಡ ಕಸದ ಬುಟ್ಟಿ ಇದ್ದರೂ ಅದನ್ನು ಬಳಸದೆ ಅದರ ಪಕ್ಕ ಕಸದ ರಾಶಿ ಮಾಡಿದ ತಿಟ್ಟ(ಫೊಟೊ) ತೆಗೆದು ಫೇಸ್ಬುಕ್ಕಿನಲ್ಲಿ ಇದರ ಬಗ್ಗೆ ಬರೆಯುವ ಯೋಚನೆಯಾಗಿ ತಿಟ್ಟ ತೆಗೆಯಲು ಮನಸ್ಸು ತುಡಿಯಿತು. ಆದರೆ ಅದರ ಬೆನ್ನಲ್ಲಿಯೇ ಒಂದು ಪ್ರಶ್ನೆ ಮೂಡಿತು. ಇದರ ಬಗ್ಗೆ ಫೇಸ್ಬುಕ್ಕಿನಲ್ಲಿ ಗೋಳಾಡಿಕೊಂಡು ಸಾಧಿಸುವುದಾದರೂ ಏನನ್ನು ಎಂದು! ದೇಶದಲ್ಲಿ ಸಮಸ್ಯೆ ಇರುವುದು ಎಲ್ಲರಿಗೂ ಗೊತ್ತು. ಮತ್ತೆ ಅದರ ಬಗ್ಗೆಯೇ ಮಾತಾಡಿ ನಾನು ಏನು ಕಿಸಿದಂತಾಗುತ್ತದೆ ಎಂದೆನಿಸಿ ಸುಮ್ಮನಾದೆ. ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ಅಪರೂಪಕ್ಕೆ ಯಾಕೋ ಮೆದುಳು ಇಂಗ್ಲಿಷ್ನಲ್ಲಿ ವಾಕ್ಯರಚನೆ ಮಾಡಿತ್ತು! "Either you can crib about it or you can fix it" ಇದು ಸೊಲ್ಲರಿಮೆ (ವ್ಯಾಕರಣ) ಬದ್ಧವಾಗಿದೆಯೇ ಇಲ್ಲವೇ ನನಗೆ ಗೊತ್ತಿಲ್ಲ. ಆದರೆ ಈ ವಾಕ್ಯ ನನ್ನ ತಟ್ಟೆ ಲೋಟವನ್ನು ಕಸದ ಬುಟ್ಟಿಗೆ ಹಾಕುವಾಗ ನನ್ನನ್ನು ಅಪಾರವಾಗಿ ಕಾಡಿತು.

          ಕಸದ ರಾಶಿಯಿಂದ ತಟ್ಟೆ ಲೋಟಗಳನ್ನು ಆರಿಸಿ ಕಸದಬುಟ್ಟಿಗೆ ಹಾಕಿ ಆ ಜಾಗವನ್ನು ಶುಚಿಗೊಳಿಸಿದರೆ ಮುಂದೆ ಕಸ ಎಸೆಯುವವರಾದರೂ ಕಸದ ಬುಟ್ಟಿಗೆ ಎಸೆಯಬಹುದು ಎಂದು ಮನಸ್ಸು ಹೇಳಿದರೂ, ಇನ್ನೊಂದು ಕಡೆ "ನಾನ್ಯಾಕ್ ಮಾಡ್ಬೇಕು" "ಆ ಕಡೆ ಈ ಕಡೆ ಇರೋರು ಏನಾದ್ರೂ ಅನ್ಕೊಂಡ್ರೆ" "ಇದನ್ನ ಶುಚಿ ಮಾಡೊ ಗೋಜಲ್ಲಿ ಬಟ್ಟೆ ಗಲೀಜಾದರೆ?" ಇತ್ಯಾದಿ ಇತ್ಯಾದಿ ಯೋಚನೆಗಳು ಹಿಂದೇಟು ಹಾಕಲು ಪ್ರೇರೇಪಿಸಿತು. ಕೊನೆಗೆ ಆದದ್ದಾಗಲಿ ಎಂದು ಫೇಸ್ಬುಕ್ಕಿನ 'ಅಗ್ಲಿ ಇಂಡಿಯನ್' ಗುಂಪಿನ ಧ್ಯೇಯ ವಾಕ್ಯ "ಬಾಯ್ ಮುಚ್ಕೋ - ಕೆಲಸ ಹಚ್ಕೊ" ನೆನಪಾಗಿ, ಆದದ್ದಾಗಲಿ ಎಂದು ಕಸದ ರಾಶಿಯಿಂದ ತಟ್ಟೆ ಲೋಟಗಳನ್ನೆಲ್ಲಾ ಎತ್ತಿ ಕಸದ ಬುಟ್ಟಿಗೆ ಹಾಕಿಯೇ ತೀರಲು ನಿರ್ಧರಿಸಿ, ರಾಶಿಯಲ್ಲಿದ್ದ ಎಲ್ಲ ತಟ್ಟೆ ಲೋಟಗಳನ್ನು ಕಸದ ಬುಟ್ಟಿಗೆ ಹಾಕತೊಡಗಿದೆ. ಇದನ್ನು ಗಮನಿಸಿಯೋ ಏನೋ, ಅಂದಾಜು ನಲವತ್ತರ ಆಸುಪಾಸಿನ ಇನ್ನೊಬ್ಬರು ಬಂದು ಶುಚಿ ಮಾಡುವ ಕೆಲಸಕ್ಕೆ ಕೈ ಜೋಡಿಸಿದರು. ಇಬ್ಬರೂ ಸೇರಿ ಅಲ್ಲಿ ಬಿದ್ದಿದ್ದ ತಟ್ಟೆ ಲೋಟಗಳನ್ನು ಕಸದ ಬುಟ್ಟಿಗೆ ಹಾಕಿದೆವು. ನಾನು ದೇವಸ್ಥಾನದ ಪಕ್ಕಕ್ಕೆ ಹೋಗಿ ಕೈ ತೊಳೆಯುತ್ತಿದ್ದಾಗ ಆ ವ್ಯಕ್ತಿ ಬಂದು ನನ್ನ ಪರಿಚಯ ಕೇಳಿ ಕೊನೆಗೆ "ಪ್ರೌಡ್ ಟು ಸಿ ಸಮ್ ಒನ್ ಲೈಕ್ ಯು" ಅಂದರು. ಅವರಿಗೆ ನನ್ನಿ (ಧನ್ಯವಾದ)  ಹೇಳಿ ಸೈಕಲ್ ಏರಿ ಆಫೀಸ್ ಕಡೆಗೆ ಹೊರಟೆ.

          ಪ್ರತಿದಿನಕ್ಕಿಂತ ಅಂದು ಸೈಕಲ್ ತುಳಿಯುವಾಗ ಉತ್ಸಾಹ ಜಾಸ್ತಿಯೇ ಇತ್ತು. ಏನೋ ಓಂದು ತೆರನಾದ ಹೇಳಿಕೊಳ್ಳಲಾಗದ, ಹೊಟ್ಟೆ ಒಳಗೆ ಚಿಟ್ಟೆ ಬಿಟ್ಟಂತಹ ಅನುಭವ, ಸಮಾಧಾನ! "Either you can crib about it or you can fix it" ಈ ವಾಕ್ಯ ತಲೆಯಲ್ಲಿ ಗುನುಗುತ್ತಲೇ ಇತ್ತು. ಎಲ್ಲರ ಪಾಲಿಗದು ರಾಮನವಮಿಯೇ ಆದರೂ, ನನ್ನ ಪಾಲಿಗೆ, "ನಾನ್ಯಾಕ್ ಮಾಡ್ಬೇಕು" "ಬೇರೆಯವರು ಏನ್ ಅನ್ಕೊತಾರೆ" ಎಂಬಿತ್ಯಾದಿ ಎಕ್ಸ್ ಕ್ಯೂಸ್ ಗಳ ವಿರುದ್ಧ ನನಗೆ ಗೆಲುವನ್ನು ತಂದುಕೊಟ್ಟ ವಿಜಯ ದಶಮಿ ಆಯಿತು!

Friday 29 April 2016

ಇರುಳಿನ ಕವಿತೆ

http://goodmenproject.com/

ಇರುಳಿನ ಕವಿತೆಯ
 ತಿರುಳನು ಅರಿಯದೆ
ಮರಳಿನ ಶಿಲ್ಪಕೆ
 ಬೆರಳನು ಸೋಕಿಸಿ
ಮರುಳು ಜೀವದ
ಕರುಳಿನ ಕಣದಲಿ
ಕೊಳಲಿನ ನಾದವ
 ಅರಳಿಸಿದ ಮಾಯೆಯ
ಒಡಲಿನ ರಾಗಕೆ
ಸಿಡಿಲಿನ ಸ್ಪರ್ಶದಿ
ದಿಗಿಲನು ಹೊತ್ತಿಸಿ
ಎನ್ ಮಡಿಲಿನ ಕೂಗಿಗೆ
ಕಡಲನು ಸೇರುವ
ನೆರಳಿನ ಮೌನವ
ಎರವಲು ನೀಡದೆ
   ಕೊರಳನು ಬಿಗಿದೆಯೇತಕೆ?

Friday 11 March 2016

ಲವ್ ಫೇಲ್ಯೂರ್ ಆದವ್ರು - ದೇವ್ ದಾಸ್.. ಫ್ರೆಂಡ್ ಝೋನ್ ಆದವ್ರು - ?

"ಏನ್ ಮಗಾ.. ಗಡ್ಡ ಬಿಟ್ಕೊಂಡ್ ದೇವ್ ದಾಸ್ ಆಗಿದ್ಯಾ.. ಹುಡ್ಗಿ ಕೈ ಕೊಟ್ಳಾ?" ಗಡ್ಡ ಬಿಟ್ಕೊಂಡು ಓಡಾಡೊ ಪ್ರತಿಯೊಬ್ಬ ಹುಡುಗನನ್ನ ಕಂಡಾಗ ಜನರ ಮನಸ್ಸಿನಲ್ಲಿ ಮೂಡುವ ಕಟ್ಟ ಕಡೆಯ.. ಅಲ್ಲಲ್ಲ! ಮೊಟ್ಟ ಮೊದಲ ಪ್ರಶ್ನೆ ಇದು! ಲವ್ ಫೇಲ್ಯೂರ್ ಆದ ಹುಡುಗ್ರನ್ನ ದೇವ್ ದಾಸ್ ಅಂತ ಕರೆಯೋ ಸಂಪ್ರದಾಯ, ಬಹುಶಃ ಶಾರುಖ್ ಖಾನ್ ಅಭಿನಯದ 'ದೇವ್ ದಾಸ್' ಚಿತ್ರ ಪ್ರಸಿದ್ಧಿಯಾದ್ ಮೇಲೆ ಶುರುವಾಗಿದ್ದೇನೋ! ಚಿತ್ರದಲ್ಲಿ ಪಾರು ಸಿಗದೆ ದೇವ್ ದಾಸ್ ಕೊರಗಿ ಕೊರಗಿ ಸಾವನ್ನಪ್ಪುವುದ್ರಿಂದ, ಅವನ ಸಾವಿನ ಸ್ಮರಣಾರ್ಥವಾಗಿ, ಯಾರ್ಯಾರಿಗೆ ಹುಡುಗಿ ಕೈ ಕೊಡ್ತಾಳೊ ಅವರಿಗೆ ದೇವ್ ದಾಸ್ ಅಂತ ಅವನ ಹೆಸರು ಇಟ್ಟು, ಆ ಹೆಸರು ಲೋಕದಲ್ಲಿ ಚಿರಸ್ಥಾಯಿಯಾಗಿ ಉಳೀಯೋ ಹಾಗೆ ಮಾಡ್ಬೇಕು ಅನ್ನೋ ಮಹತ್ವಾಕಾಂಕ್ಷೆಯ ಯೋಜನೆಯನ್ನ ಶುರು ಮಾಡಿದ ಹರಿಕಾರ ಯಾರು ಅಂತ ನಂಗ್ ಗೊತ್ತಿಲ್ಲ! ನಿಮಗ್ ಗೊತ್ತಿದ್ರೆ ಹೇಳಿ!

         ಗಡ್ಡ ಬಿಡುವುದಕ್ಕೂ, ಲವ್ ಫೇಲ್ಯೂರ್ ಗೂ ಏನ್ ಸಂಬಂಧ ಅಂತ ಹುಡ್ಕ್ತಾ ಇರ್ಬೇಕಾದ್ರೆ, ಒಂದ್ ಕಡೆ ವಿಚಾರ ಸಿಕ್ತು. ".. ಹಿಂದೂ ಧರ್ಮದಲ್ಲಿ, ಮರಣದ ಸಂತಾಪದ ಸಮಯದಲ್ಲಿ, ಅನೇಕರು ಕೂದಲನ್ನ ಉಗುರನ್ನ ಕತ್ತರಿಸುವುದು, ಗಡ್ಡ ಬೋಳಿಸುವುದು ಮಾಡುವುದಿಲ್ಲ.. ಬಹುಶಃ ಈ ಲವ್ ಫೇಲ್ಯೂರ್ ವಿಷಯದಲ್ಲಿ, ಗಡ್ಡ ಬೋಳಿಸದೆ ಸಂತಾಪ ಸೂಚಿಸುವುದು ಹೊಗೆ ಹಾಕಿಸಿಕೊಂಡ ಪ್ರೀತಿಗಾಗಿ ಇರಬೇಕು!" ಅಲ್ಲ, ಗಡ್ಡ ಬಿಟ್ಟವ್ರೆಲ್ಲಾ ದೇವ್ ದಾಸ್ ? ದೇವ್ ದಾಸ್ ಆದವರೆಲ್ಲ ಗಡ್ಡ ಬಿಡ್ತಾರ? ಎರಡನೇ ಪ್ರಶ್ನೆ ನಿಜಾಂತ ಆದ್ರೆ; ಬಹುಶಃ ಗಡ್ಡ ಬಿಟ್ಟು ಸ್ಟೈಲ್ ಮಾಡ್ ಬೇಕು ಅಂತ ಆಸೆ ಇಟ್ಕೊಂಡು, ಗಡ್ಡ ಬರ್ದೇ ಇರೋ ಸುಮಾರ್ ಜನ ಹೀಗಾದ್ರೂ ಗಡ್ಡ ಬರಲಿ ಅಂತ ದೇವ್ ದಾಸ್ ಆಗಲೂ ಬಹುದು! ನಂಗೆ ಸೈಕಲ್ ಗ್ಯಾಪ್ ಅಲ್ಲಿ ಒಂದ್ ಅನುಮಾನ.. ಹುಡ್ಗೀರು ಕೈ ಕೊಟ್ಟಾಗ ಹುಡುಗ್ರು ಗಡ್ಡ ಬಿಟ್ರೆ, ಹುಡುಗ್ರು ಕೈ ಕೊಟ್ಟಾಗ ಹುಡ್ಗೀರು ಏನ್ ಬಿಡ್ತಾರೆ ಅಂತ!


ನಮ್ಗೆಲ್ಲರ್ಗೂ ಗೊತ್ತಿರೊ ಹಾಗೆ ಕಳೆದ ಕೆಲವರ್ಷಗಳ ತನಕ ಹುಡುಗರನ್ನ (ಬಹುಶಃ ಹುಡ್ಗೀರ್ನೂ ಕೂಡ!) ಅತಿಯಾಗಿ ಭಯಬೀಳಿಸುತ್ತಿದ್ದ ಪೆಡಂಭೂತ - ''ಲವ್ ಫೇಲ್ಯೂರ್''. ಆದರೆ ಈಗ ಅದನ್ನೂ ಮೀರಿಸಿದ ಬ್ರಹ್ಮರಾಕ್ಷಸ ಹುಟ್ಟಿದ್ದಾನೆ, ಅವನೇ "ಫ್ರೆಂಡ್ ಝೋನ್"! ಲವ್ ಫೇಲ್ಯೂರ್ ಒಂದ್ ತರಹ ನೇಣ್ ಹಾಕ್ಕೊಂಡ್ ಸಾಯೋ ಸಾವು. ಟಕ್ ಅಂತ ಮೇಲಿನ್ ಲೋಕದ್ ಟಿಕೆಟು! ಖೇಲ್ ಖತಂ-ದುಖಾನ್ ಬಂದ್. ಮುಗೀತ್! ಆದ್ರೆ ಫ್ರೆಂಡ್ ಝೋನ್ ಇದ್ಯಲ್ಲ, ಇದು ಆರಕ್ ಏರ್ದೇ ಮೂರಕ್ ಇಳಿದೆ, ಹಾರ್ಟನ್ನ ಗರಗಸದಲ್ಲಿ ಪರಪರ ಅಂತ (ಕೆರ್ಕೊಳ್ಳೊದ್ ಅಲ್ಲ!) ಸ್ಲೋ ಮೋಶನ್ ಅಲ್ಲಿ ತುಂಡ್ ಮಾಡೊ ಪ್ರಾಸೆಸ್ಸು

"ನಿನ್ ಹತ್ರ ನಾನ್ ಯಾವ್ದೇ ಸೀಕ್ರೆಟ್ ಮುಚ್ಚಿಡಲ್ಲ ಗೊತ್ತ!"
"ನೀನು ಸಕತ್ ಒಳ್ಳೆ ಹುಡ್ಗ ಕಣೊ"
"ನಿನ್ ಕೈ ಹಿಡಿಯೋ ಹುಡುಗಿ ಲಕ್ಕಿ ಕಣೊ"
"ಮನೇಲಿ ಅಮ್ಮನ್ ಹತ್ರ ನಿನ್ ಬಗ್ಗೆನೇ ಮಾತಾಡ್ತಿದ್ದೆ"
"ನೀನ್ ಅಂದ್ರೆ ನಂಗ್ ತುಂಬಾ ಇಷ್ಟ ಕಣೊ.." 

ಇಷ್ಟ್ ಕೇಳ್ಸ್ಕೊಳ್ತ ಸ್ವರ್ಗ ಇನ್ನೇನ್ ರಪ್ಪಂತ ಪಾಸು ಆಗ್ಬೇಕು, ಅಷ್ಟರಲ್ಲಿ ".. ಆದ್ರೆ as a ಫ್ರೆಂಡ್ ಕಣೊ" ಅಂತ ಬಾಂಬ್ ಹಾಕ್ತಾರೆ! ನಾವುನು ಗೆಳೆತನ ಹಾಳಾಗ್ದೆ ಇರ್ಲಿ ಅನ್ಕೊಂಡು, ಭಾವನೆಗಳಿಗೆ ಕಣ್ಣ ಮುಚ್ಚಾಲೆ ಆಡೋಕ್ ಹೇಳಿ, ಏನು ಆಗಿಲ್ಲ ಅನ್ನೋ ತರಹ ಮ್ಯಾನೇಜ್ ಮಾಡ್ಕೊಂಡು, ಅವ್ಳಿಗ್ ಬಾಯ್ ಫ್ರೆಂಡ್ ಸಿಕ್ಕಿ, ಅವ್ಳು ಕಮಿಟ್ ಆಗಿ, ಅವ್ರು ಯಾವ್ ಮೂವಿಗ್ ಹೋದ್ರು, ಎಲ್ಲಿಗ್ ಶಾಪಿಂಗ್ ಹೋದ್ರು, ವ್ಯಾಲೆಂಟೈನ್ಸ್ ಡೇ ಗೆ ಏನ್ ಪ್ಲಾನ್ ಮಾಡ್ತಿದಾರೆ ಅಂತ ಅವ್ಳ್ ಹೇಳೋದನ್ನ ಕೇಳ್ಸ್ಕೊಂಡು, ಅವ್ಳ್ ಹುಡ್ಗನ್ ಹುಟ್ಟು ಹಬ್ಬಕ್ಕೆ ಏನ್ ಉಡುಗೊರೆ ಕೊಡೋದು ಅಂತ ಸಜೆಸ್ಟ್ ಮಾಡಿ, ಅದ್ರದ್ ಶಾಪಿಂಗ್ ಗೂ ಅವ್ಳ್ ಜೊತೆ ಹೋಗಿಅವ್ನ್ ಶರ್ಟ್ ಸೈಜ್ ಮತ್ತೆ ನಮ್ ಶರ್ಟ್ ಸೈಜ್ ಒಂದೇ ಅಂತ ಸಕ್ಕತ್ತಾಗಿರೋ ಶರ್ಟನ್ನ ಅವ್ಳು ನಮ್ಮ ಬೆನ್ನ ಹಿಂದೆ ಹಿಡ್ದು ಸರಿ ಹೊಂದತ್ತಾ ಅಂತ ಅಳತೆ ಮಾಡಿ, ಅವ್ಳಿಗ್ ಕಾಲ್ ನೋವ್ ಆಗೋದ್ ಯಾಕೆ ಅಂತ ಬಿಲ್ ಪೇ ಮಾಡೋಕ್ ಕ್ಯೂನಲ್ಲಿ ನಾವೇ ನಿಂತು, ಅವ್ನ್ ಹುಟ್ಟುಹಬ್ಬದ್ ದಿನ ಇವ್ಳು ಸರ್ಪ್ರೈಸ್ ವಿಸಿಟ್ ಕೊಡೋಕ್ಕೆ, ಫ್ರೀ ರೈಡ್ ಇಲ್ದೆ ಇದ್ರೂ ಊಬರ್ ಕ್ಯಾಬ್ ಬುಕ್ ಮಾಡಿ ಕಳ್ಸಿ, ಡಿನ್ನರ್ ಡೇಟ್ ಗೆ ಪ್ಲೇಸ್ ಸಜೆಸ್ಟ್ ಮಾಡು ಅಂದಾಗ ನಾವ್ ಅವ್ಳ್ ಜೊತೆ ಫಸ್ಟ್ ಡಿನ್ನರ್ ಡೇಟ್ ಗೆ ಎಲ್ಲಿಗ್ ಹೋಗ್ಬೇಕು ಅಂತ ಪ್ಲಾನ್ ಮಾಡಿದ್ವೋ ಅದೇ ರೋಮ್ಯಾಂಟಿಕ್ ಜಾಗನ ಸಜೆಸ್ಟ್ ಮಾಡಿ, ಅವ್ರ್ ಅಲ್ಲಿ ತೆಕ್ಕೊಳ್ಳೊ ಸೆಲ್ಫಿನ ವಾಟ್ಸ್ ಆಪ್ ನಲ್ಲಿ ನೆಟ್ ಸ್ಲೋ ಇದ್ರೂ ಡೌನ್ಲೋಡ್ ಮಾಡಿ, "ಸೂಪರ್ ಪಿಕ್ ಕಣೆ" ಅಂತ ರಿಪ್ಲೈ ಮಾಡಿ , ಫುಲ್ ಎಗ್ಸೈಟ್ಮೆಂಟಲ್ಲಿ "ಥಾಂಕ್ ಯು ಸೋ ಮಚ್ ಕಣೊ.. ಪ್ಲೇಸ್ ಸೂಪರ್ ಆಗಿತ್ತು" ಅಂತ ಅವ್ಳ್ ಹೇಳೊದ್ನ ಕೇಳ್ಸ್ಕೊಂಡು ಖುಷಿ ಪಡೊದೊ ದುಃಖ ಪಡೊದೊ ಗೊತ್ತಾಗ್ದೆ, ಹರಳೆಣ್ಣೆ ಕುಡ್ದವ್ರ್ ಹಾಗೆ ಸ್ಮೈಲ್ ಕೊಟ್ಕೊಂಡು, "ನನ್ ಹುಡ್ಗಂಗೂ ನೀನ್ ಅಂದ್ರೆ ಇಷ್ಟ ಗೊತ್ತಾ" ಅನ್ನೋ ಡೈಲಾಗ್ ಗೆ ತಲೆ ಅಲ್ಲಾಡ್ಸ್ಕೊಂಡು, ಕೊನೆಗ್ ಒಂದ್ ದಿನ ಅವ್ಳ್ ರಿಲೇಶನ್ ಶಿಪ್ ಬ್ರೇಕ್ ಅಪ್ ಆದಾಗ, ಕಾಫಿ ಡೇ ಲೋ, ಡೊಮಿನೋಸ್ ಅಲ್ಲೋ ಪಕ್ಕದಲ್ ಕೂರ್ಸಿ, ಯಾರ್ಯಾರೋ ದೊಡ್ಡವರು ಹೇಳಿದ್ ನುಡಿಮುತ್ತುಗಳ್ಣ ಉರು ಹೊಡ್ದು, ಸಾಫ್ಟ್ ಟೋನ್ ಅಲ್ ಹೇಳಿ ಸಮಾಧಾನ ಮಾಡಿ, ರಾತ್ರಿ ಮೆಸೇಜ್ ಅಲ್ಲೂ ಕಿತ್ತೋಗಿರೋ ಜೋಕ್ಸ್ ಕಳ್ಸಿ ಅವ್ಳು ನಗೋ ತರಹ ಮಾಡಿ, ಅವ್ಳನ್ನ ಬ್ಯಾಕ್ ಟು ನಾರ್ಮಲ್ ಆಗ್ಸಿ; ಅವ್ಳು ಇನ್ನೊಂದ್ ಹುಡ್ಗನ್ನ ಹುಡ್ಕೋ ತನಕ ಜೊತೆಗಿರೋದು ಅಂದ್ರೆ ತಮಾಷೇನ?! ನನ್ನ ಮಗಂದ್ ಲವ್ ಫೇಲ್ಯೂರ್ ಗಿಂತ ಸಿಕ್ಕಾಪಟ್ಟೆ ಡೇಂಜರಸ್ ಇದು! ಅಲ್ವಾ


ಇದ್ರ್ ಬಗ್ಗೆನೇ ಹಂಗೆ ಯೋಚ್ನೆ ಮಾಡ್ತಾ ಇದ್ದೆ. ಲವ್ ಫೇಲ್ಯೂರ್ ಆದವ್ರಿಗೆನೋ ದೇವ್ ದಾಸ್ ಅಂತ ಬಿರಿದು ಕೊಟ್ ಬಿಡ್ತಿವಿ. ಅದಕ್ಕಿಂತ ದೊಡ್ ತಲೆ ನೋವ್ ಅನುಭವ್ಸೋ; ಫ್ರೆಂಡ್ ಝೋನ್ ಅಲ್ಲಿರೋರ್ಗೆ ಯಾವ್ದೇ ಬಿರುದು ಇಲ್ವಲ್ಲ! ಏನ್ ಕೊಡಬಹುದು ಅಂತ! ಆಗ್ ನಂಗ್ ನೆನಪಾದದ್ದು ಎರ್ಡ್ ಹಾಡ್ಗಳು.

.  ಡೇವಿಡ್ ಚಿತ್ರದ್ದು 'ಕಣವೇ ಕಣವೇ'


. ಇಮ್ರಾನ್ ಹಶ್ಮಿದು 'ಮೇ ರಹೂ ಯಾ ರಹೂ'


ಫ್ರೆಂಡ್ ಝೋನ್ದು  anthem ಅಂತಾನೆ ಅನ್ಸ್ಕೊಂಡಿರೊ ಎರ್ಡ್ ಹಾಡಲ್ಲೂ, ಹುಡ್ಗ; ಹುಡ್ಗೀನ ತುಂಬಾ ಇಷ್ಟ ಪಡ್ತಾನೆ. ಆದ್ರೆ ಹುಡ್ಗಿ ಬೇರೆಯವನನ್ನ ಮದ್ವೆ ಆಗ್ತಾಳೆ. ಬೇರೆ ಆಯ್ಕೆ ಇಲ್ದೆ ಹುಡ್ಗ ಫ್ರೆಂಡ್ ಝೋನ್ ಎಂಟರ್ ಆಗ್ತಾನೆ! ಎರ್ಡ್ ಹಾಡಲ್ಲೂ ಫ್ರೆಂಡ್ ಝೋನ್ ವಿಷ್ಯ ಬಿಟ್ಟು ಇನ್ನೊಂದ್ ಸಾಮ್ಯತೆ ಇದೆ. ಗಮನಿಸಿದ್ರ? ಎರಡರಲ್ಲೂ ಫ್ರೆಂಡ್ ಝೋನ್ ಆಗೋ ಹುಡ್ಗನ್ ಹೆಸ್ರು ಡೇವಿಡ್! ಎರ್ಡ್ ಹಾಡ್ಗಳು ಫ್ರೆಂಡ್ ಝೋನ್ದು anthem, ಎರಡರಲ್ಲೂ ಹುಡ್ಗನ್ ಹೆಸ್ರು ಡೇವಿಡ್.. ಸೊ.. ನನ್ ಕಂಕ್ಲೂಶನ್ ಏನಪ್ಪಾ ಅಂದ್ರೆ.. ಹುಡ್ಗಿ ಕೈ ಕೊಟ್ ಹುಡುಗ್ರು; ದೇವ್ ದಾಸ್ ಆದ್ರೆ.. ಹುಡ್ಗಿರಿಂದ ಫ್ರೆಂಡ್ ಝೋನ್ ಗೆ ತಳ್ಳಲ್ ಪಡುವಂತಹ ಹುಡುಗ್ರು.. "ಡೇವಿಡ್"! ಹೆಂಗೆ? ಓಕೆ ನಾಡೇವಿಡ್ ಡೇವಿಡ್ ಡೇವಿಡ್ ಅಂತ ಕೂಗಿ ನಾಮಕರಣ ಮಾಡಿ ಬಿಡ್ಲಾ? 


Dedicated to all the Davids out there :P