Thursday, 10 August 2017

ಕುಣಿದು ಕುಣಿದು ಬಾರೆ..!


"ಅಳುವೊಂದು ಬೇಕು ನನಗೆ
ಅರೆಘಳಿಗೆ ಹೋಗು ಹೊರಗೆ
ಇಷ್ಟೊಳ್ಳೆ ಸ್ನೇಹಿತನಾಗಿ
ಕಾಡಿದರೆ ಹೇಗೆ?

ಮುಗುಳುನಗೆಯೆ ನೀ ಹೇಳು
ಯಾರಿರದ ವೇಳೆಯಲ್ಲಿ ನೀನೇಕೆ
ಜೊತೆಗಿರುವೆ?"

'ಮುಗುಳುನಗೆ' ಸಿನಿಮಾದ ಟೈಟಲ್ ಹಾಡು ಅದ್ರಲ್ಲೂ ಈ ಪ್ಯಾರ ಎಡೆಬಿಡದೆ ನನ್ನ ಕಾಡ್ತಾ ಇತ್ತು. ಆಫೀಸಿಂದ ಮನೆಗ್ ಬಂದವನೇ ಮತ್ತೊಮ್ಮೆ ಕೇಳೋಣ ಎಂದೆಣಿಸಿ ಯೂಟ್ಯೂಬ್ ‍ಅಲ್ಲಿ ಹಾಡನ್ನ ಹುಡುಕಿ ಮತ್ತೆ ಮತ್ತೆ ಕೇಳತೊಡಗ್ದೆ. ಈಗ ಹಾಡುಗಳನ್ನ ಕೇಳ್ಬೇಕು ಅಂದ್ ಕೂಡ್ಲೇ, ಕೇಳೋಕೆ ಎಷ್ಟೊಂದು ಪ್ಲಾಟ್ ಫಾರ್ಮ್ ಗಳಿವೆ. ವಿಂಕ್, ಗಾನ, ಸಾವನ್, ಯೂಟ್ಯೂಬ್ ಇತ್ಯಾದಿ ಇತ್ಯಾದಿ. ಇಂಟರ್ನೆಟ್ ಮತ್ತೆ ಮೊಬೈಲಲ್ಲಿ ಚಾರ್ಜ್ ಒಂದಿದ್ರೆ ನಮಗ್ ಬೇಕಾದ್ ಹಾಡನ್ನ, ಬೇಕಾದ್ ಕಡೆ ಕೂತ್ಕೊಂಡು, ಬೇಕಾದಷ್ಟು ಬಾರಿ ಕೇಳ್ತಾ ಇರಬಹುದಲ್ವಾ ಅನ್ನೋ ಯೋಚನೆ ಬಂದಾಗ; ಜೇಡ ಕಟ್ಟಿರೊ ಮೂಲೆ ಕಾಣಿಸ್ತು. ಟೈಮು ಹತ್ತು ವರ್ಷ ಹಿಂದಕ್ಕೆ, ಫ್ಲ್ಯಾಶ್ ಬ್ಯಾಕ್ ಗೆ ಹೋಯ್ತು.

ನಾನಾಗ ಹತ್ತನೇ ಕ್ಲಾಸಲ್ ಇದ್ದೆ. 'ಮುಂಗಾರು ಮಳೆ' ಸಿನಿಮಾದ್ ಸಮಯ. 'ಅನಿಸುತಿದೆ ಯಾಕೋ ಇಂದು',  'ಕುಣಿದು ಕುಣಿದು ಬಾರೆ' ಹಾಡ್ಗಳು ಚಿಕ್ ಮಕ್ಳಿಂದ ಹಿಡ್ದು ಮನೆ ಮಂದಿಗೆಲ್ಲ ಚಿರಪರಿಚಿತವಾಗಿ ಎಲ್ರೂ ಗುನುಗೋ ಹಾಗ್ ಆಗಿತ್ತು. ಆಗ ಇದ್ದಿದ್ ಒಂದೇ ಒಂದ್ ಮ್ಯೂಸಿಕ್ ಚಾನೆಲ್ ಅಂದ್ರೆ 'ಉದಯ ಮ್ಯೂಸಿಕ್'. ಹೆಚ್ಚಿನ ಜನ ಕರೆಮಾಡುಗರು ಕರೆ ಮಾಡಿ ಮುಂಗಾರು ಮಳೆಯ ಹಾಡನ್ನೇ ಪ್ರಸಾರ ಮಾಡೋಕೆ ಕೋರಿಕೆ ಇಡ್ತಾ ಇದ್ರು. ‌ಆ ತರ ಕರೆ ಮಾಡಿನೋ, ಇಲ್ಲ ಎಸ್.ಎಮ್.ಎಸ್ ಕಳ್ಸಿಯೋ ಕೋರಿಕೆ ಇಡೋಕೆ ನಮ್ಮನೇನಲ್ಲಿ ಅಲೆಯುಲಿ (ಮೊಬೈಲ್) ಇರ್ಲಿಲ್ಲ. ಯಾರಾದ್ರೂ ಕರೆ ಮಾಡಿ ಮುಂಗಾರು ಮಳೆ ಹಾಡನ್ನ ಹಾಕೋಕ್ ಹೇಳಲಿ ಅಥವಾ ಚಾನೆಲ್ ಅವ್ರೆ ದೊಡ್ ಮನ್ಸ್ ಮಾಡಿ ಆ ಹಾಡ್ಗಳನ್ನ ಹಾಕ್ಲಿ ಅಂತ ಕಾಯ್ತಾ ಇರ್ತಿದ್ದೆ.

ಇದೇ ಸಮಯಕ್ಕೆ ನನ್ ಗೆಳೆಯ ಚೇತನ್ ಅಲೆಯುಲಿ ತೆಗೊಂಡ. ಆಗಿನ್ ಕಾಲದ್ ಜನಪ್ರಿಯ ಹ್ಯಾಂಡ್ಸೆಟ್ಟು, ನೋಕಿಯಾ ೧೧೧೦! ಆ ಪುಣ್ಯಾತ್ಮ ಒಂದ್ ಒಳ್ಳೆ ಕೆಲ್ಸ ಮಾಡಿದ್ದ. ಅದೇನ್ ಅಂದ್ರೆ 'ಕುಣಿದು ಕುಣಿದು ಬಾರೆ' ಹಾಡನ್ನ ಅವ್ನ್ ಕಾಲರ್ ಟ್ಯೂನ್ ಆಗ್ ಮಾಡ್ಕೊಂಡಿದ್ದ. ನಂಗ್ ಎಲ್ಲಿಲ್ಲದ್ ಖುಷಿ. ಅವ್ನಿಗ್ ಕರೆ ಮಾಡಿದ್ರೆ, ಪೂರ್ತಿ ಅಲ್ದೇ ಇದ್ರೂ, ಹಾಡಿನ್ ಪಲ್ಲವಿ ಆದ್ರೂ ಬೇಕಾದಾಗ್ ಕೇಳ್ಬೋದು ಅಂತ! ನಾನ್ ಆಗ ದಿನ ಸಂಜೆ ನಮ್ಮ ಅಂಗಡಿಯಲ್ ಇರ್ತಿದ್ದೆ. ಅದಕ್ಕೆ ಚೇತನನ್ ಅಲೆಯುಲಿಯಲ್ಲಿ ನಮ್ಮಂಗಡಿಯ ಗೆಂಟುಲಿ (ಟೆಲೆಫೋನ್) ಅಂಕೆಯನ್ನ ಉಳ್ಸಿ,

"ನಂಗ್ ಹಾಡ್ ಕೇಣಕ್ ಅನ್ಸ್ದಲ್ ಅಂಗಡಿಯಿಂದ ಕರೆ ಮಾಡ್ತೆ. ಕರೆ ಎತ್ಬೇಡ. ಎತ್ರೆ ಬೋಳ್ ಮೇಲ್ ತಟ್ಟತೆ" ಅಂತ ಅಂಗಡಿಯಿಂದ ನಾ ಕರೆ ಮಾಡಿದ್ರೆ ಎತ್ತುವ ಹಾಗಿಲ್ಲ ಅಂತ ಒಪ್ಪಂದ ಮಾಡ್ಕೊಂಡೆ. ನಂಗೆ ಹಾಡ್ ಕೇಳ್ಬೇಕು ಅನ್ಸಿದಾಗೆಲ್ಲ ಅವ್ನಿಗ್ ಕರೆ ಮಾಡಿ ಹಾಡ್ ಕೇಳೋಕ್ ಶುರು ಮಾಡ್ದೆ. ಎನೋ ದೊಡ್ ಪ್ಲ್ಯಾನ್ ಮಾಡಿದ್ ಸಾರ್ಥಕತೆ ನಂಗೆ! ಇದ್ ಹೀಗೆ ಮುಂದುವರ್ದಿತ್ತು. ಅವ್ನೂ ಪಾಪ ಒಪ್ಪಂದದ್ ಪ್ರಕಾರ ಯಾವತ್ ಕರೆ ಮಾಡಿದ್ರೂ ಎತ್ತತಾ ಇರ್ಲಿಲ್ಲ.

ಹೀಗೆ ಒಂದ್ ದಿನ ನಾ ಅಂಗಡಿಯಲ್ ಇದ್ದಾಗ ಅರ್ಜೆಂಟ್ ಆಗಿ ಅವ್ನ್ ಹತ್ರ ಮಾತಾಡ್ಬೇಕಿತ್ತು. ಕರೆ ಮಾಡ್ದೆ. ಅವ್ನು ನಾ ಹಾಡ್ ಕೇಳೋಕ್ ಕರೆ ಮಾಡಿದಿನಿ ಅಂತ ನಾ ಹತ್ತಾರು ಬಾರಿ ಕರೆ ಮಾಡಿದ್ರೂ ಜಪ್ಪಯ್ಯ ಅಂದ್ರೂ ಎತ್ಲಿಲ್ಲ! ನಂಗೆ ಈ 'ಕುಣಿದು ಕುಣಿದು ಬಾರೆ' ಮತ್ತೆ ಹಾಡ್ ಕೇಳೊಕೆ ಮಾಡಿದ್ ಏರ್ಪಾಡಿನ ಬಗ್ಗೆ ಬೇಜಾರ್ ಆಗೋಕ್ ಶುರು ಆಯ್ತು. ಮತ್ತೆ ಮತ್ತೆ ಕರೆ ಮಾಡ್ದೆ. ಅವ್ನು ಭಾರೀ ನಿಷ್ಠಾವಂತ! ಇದನ್ನ ಅಗ್ನಿಪರೀಕ್ಷೆ ಅಂದ್ಕೊಂಡ್ನೋ ಏನೊ! ಕರೆ ಎತ್ಲೇ ಇಲ್ಲ. ಏನ್ ಮಾಡೋದು ಅಂತ ಗೊತ್ತಾಗ್ದೆ ನಾನು ಪಕ್ಕದ್ ಅಂಗ್ಡಿಗ್ ಹೋಗಿ ಅಲ್ಲಿಂದ ಅವ್ನಿಗೆ ಕರೆ ಮಾಡ್ದೆ. ಮೊದಲ್ನೇ ರಿಂಗಿಗೆ ರಪ್ ಅಂತ ಎತ್ತಿದ! 'ಅಯ್ಯೋ ಪುಣ್ಯಾತ್ಮ' ಅಂತ ಹೇಳಿ, ನಕ್ಕು ಮಾತಾಡೋಕ್ ಇದ್ದಿದ್ ವಿಷ್ಯ ಮಾತಾಡಿ ಮುಗ್ಸಿದೆ!

ಈಗ, ಕೇಳ್ಬೇಕು ಅನ್ಸಿದ್ ಹಾಡ್ಗಳು ಬೆರಳ್ ತುದಿಯಲ್ಲೇ ಸಿಗೋವಾಗ, ಆ ಕಾಲ್ದಲ್ಲಿ ಕ್ಯಾಸೆಟ್ ಬಾಡಿಗೆಗ್ ತಂದು ವಾಕ್ ಮ್ಯಾನ್ ಅಲ್ಲಿ ಹಾಡ್ ಕೇಳ್ತಾ ಇದ್ದಿದ್ದು, ಸೈಬರ್ ಸೆಂಟರ್ಗ್ ಹೋಗಿ ಬೇಕಾಗಿದ್ ಹಾಡ್ಗಳನ್ನ ಪಟ್ಟಿ ಮಾಡಿ ಸಿ.ಡಿ ಯಲ್ಲಿ ಬರ್ನ್ ಮಾಡ್ಸಿ ತರ್ತಾ ಇದ್ದಿದ್ದು, ಈ ಕಾಲರ್ ಟ್ಯೂನ್ ಇದ್ದವ್ರಿಗ್ ಕರೆ ಮಾಡಿ ಸರ್ಕಸ್ ಮಾಡ್ತಾ ಇದ್ದಿದ್ದು.. ಎಲ್ಲ ನೆನ್ಪಿನ್ ಪರದೆ ಮೇಲ್ ಬಂದು, ನಮಗ್ ಗೊತ್ತಿಲ್ದೇ, ಒಂದು ಕಿರುನಗೆಯನ್ನ ಪ್ರತ್ಯಕ್ಷ ಆಗೋ ಹಾಗ್ ಮಾಡತ್ತೆ. ಅಲ್ವಾ? ಅದಕ್ಕೆ ಹೇಳೋದ್ ಅನ್ಸತ್ತೆ:

"What is hard to endure
Is sweet to remember" ಅಂತ :)

8 comments:

  1. ಮುದ್ದಿನ ನೆನಪುಗಳಾಗುವ ಒದ್ದಾಟಗಳು :)

    ReplyDelete
    Replies
    1. ಆಹಾ! ಚಂದ ಹೇಳ್ದೆ ಮಾರೆ <3

      Delete
  2. ಸೂಪರ್ ಭಟ್ಟರೇ.
    ಕಷ್ಟದಲ್ಲಿ ತಾನೇ ಕಥೆ ಇರೋದು. ಎಲ್ಲಾ ಸುಲಭವಾಗಿದ್ರೆ ಅಲ್ಲಿ ಕಥೆನೇ ಇರೋಲ್ಲ.

    ReplyDelete
    Replies
    1. ವಾಹ್! ಎಲ್ಲೋ ಹೋಗ್ಬಿಟ್ಟೆ ಮಗಾ ನೀನು :) ಸತ್ಯ ವಚನ್ :)

      Delete
  3. ha ha ha...really screened those days

    ReplyDelete
  4. ha ha ha...really screened those days

    ReplyDelete
  5. ha ha ha...really screened those days

    ReplyDelete